ದಾಸ್ ಕ್ಯಾಪಿಟಲ್
dascapital1205@gmail.com
ಬದುಕಿನುದ್ದಕ್ಕೂ ನಮ್ಮ ಆಂತರ್ಯದಲ್ಲಿ ಸುಪ್ತವಾಗಿರುವ ಎರಡು ಭಾವಗಳೆಂದರೆ ಒಂದು; ತಾಯೀ ಭಾವ. ಇನ್ನೊಂದು; ಮಗುವಿನಂಥ ಮುಗ್ಧತೆ.
ಜೀವನವೆಂಬುದು ಅಸಂಖ್ಯ ಸಂಗತಿಗಳ ಪ್ರಬುದ್ಧ ಸಂಕಲನ. ಇದರಲ್ಲೇನಿದೆ ಏನಿಲ್ಲವೆಂಬುದನ್ನು ಅನುಭವಿಸಿಯೇ ನೋಡಬೇಕು. ಅನುಭವವನ್ನೂ ಮೀರಿದ್ದು ದಕ್ಕದ್ದು ಇಲ್ಲಿದೆ.
ಕಾಲಗತಿಯಲ್ಲಿ ಅವೂ ಅನುಭವವಾಗುತ್ತದೆ. ಪ್ರತಿಕ್ಷಣವೂ ಹೊಸ ಮುದವನ್ನು ಅನುಭವವನ್ನು ಕೊಟ್ಟೇ ಕೊಡುತ್ತದೆ. Basically you are thought ಅನ್ನುತ್ತಾರೆ ಓಶೋ ರಜನೀಶ್. ಜೀವನ ಎಂದರೇನು? ಹುಟ್ಟಿನಿಂದ ಸಾಯುವವರೆಗೆ ನಮ್ಮನ್ನಾಳುವ ಭಾವ ಯಾವ ಯಾವುದು? ನಮ್ಮ ನಮ್ಮ ಭಾವಗಳು ನಮ್ಮನ್ನು ಬಂಧಿಸುತ್ತವೆಯೇ? ಅಥವಾ ನಾವೇ ಬಂಧಿಗಳಾಗುತ್ತೇವೆಯೇ? ಹಾಗಾದರೆ ಯಾವ ಭಾವಕ್ಕೆ ನಾವು ಬಂಧಿ? ಪ್ರೀತಿಯೇ, ಸುಖವೇ, ಆಸೆಯೇ, ದುಃಖವೇ, ಕೀರ್ತಿಯೇ, ಪ್ರತಿಷ್ಠೆಯೇ, ಛಲವೇ, ಹಠವೇ, ಮದವೇ, ಸೌಜನ್ಯವೇ, ಕಾರುಣ್ಯವೇ? ಅನುಕಂಪವೇ? ಅಥವಾ ಎಲ್ಲವನ್ನೂ ಕಳಚಿಕೊಳ್ಳುವ ವೈರಾಗ್ಯವೇ? ಅಥವಾ ಎಲ್ಲವನ್ನೂ ಒಳಗೊಳ್ಳುವ ಪರಿಪೂರ್ಣತೆಯ ಹಂಬಲವೇ? ಸೂಕ್ಷ್ಮವಾಗಿ ಅವಲೋಕಿಸಿದರೆ ಇದೊಂದು ನಿರಂತರ ಸಂಶೋಧನೆ ಅಥವಾ ಕಾಯುವಿಕೆಯೇ ಎಂದೂ ಬದುಕಿನ ಎಲ್ಲ ಸಂಗತ-ಅಸಂಗತಗಳಿಗೂ ಸುಪ್ತವಾಗಿ ಆಂತರ್ಯದಲ್ಲಿರುವ ತಾಯೀ ಭಾವಕ್ಕೂ, ಮುಗ್ಧತೆಗೂ ಸಂಬಂಧವಿದೆ.
ಯಾವ ಭಾವವೂ ಅವ್ಯಾಹತ ವಾಗಿ ಬದುಕನ್ನು ಕಾಡುವುದಿಲ್ಲ. ವಿಷಾದವೊಂದನ್ನು ಹೊರತು ಪಡಿಸಿದರೆ ಎಲ್ಲವೂ ಸಂಚಾರೀ ಭಾವಗಳೇ. ವಿಷಾದ ವೊಂದೇ ಸ್ಥಾಯೀಭಾವ. ನಮ್ಮ ಅನುಭವಕ್ಕೆ ಬಾರದ ಯಾವುದೂ ನಿಜವೆನಿಸುವುದಿಲ್ಲವೆಂದು ಜಾನ್ ಕೀಟ್ಸ್ ಹೇಳುತ್ತಾನೆ. ಮನುಷ್ಯನ ವಿಕಾಸವೆಂದರೆ ಭಾವನಾತ್ಮಕವಾಗಿ ಮಗುವಿನ ಮುಗ್ಧತೆಯನ್ನು ಹೊಂದುವುದು; ಮಗುವಾಗುವುದು: ನಡೆನುಡಿಗಳಲ್ಲಿ. ಮತ್ತು ಎಲ್ಲದರಲ್ಲೂ. ಬಾಲ್ಯವನ್ನು
ಮತ್ತೆ ಮತ್ತೆ ಅರಸುತ್ತಾ ನಮ್ಮೊಳಗೇ ಕಂಡುಕೊಳ್ಳುವುದು.
ಬನ್ನಿ, ದೊಡ್ಡವರು ಜೀವನವನ್ನು ಹೇಗೆ ಅರ್ಥೈಸಿದ್ದಾರೆ ನೋಡೋಣ. ಜೀವನದ ಅಸ್ತಿತ್ವವನ್ನು ಒಂದು ವಾಸ್ತವವೆಂದು ಭಾವಿಸಿದವರು ಸರ್ ಸಿ.ವಿ. ರಾಮನ್. ಸಹಜ ಪ್ರವೃತ್ತಿ ಅಥವಾ ಭಾವನಾತ್ಮಕತೆ, ಆರ್ಥಿಕ, ಬೌದ್ಧಿಕ ಮತ್ತು ನೈತಿಕ ಹಾಗೂ ಅಧ್ಯಾತ್ಮಿಕ- ಎಂದು ಬದುಕಿಗೆ ನಾಕು ಮೂಲೆಗಳೆಂದು ಡಾ. ರಾಧಾಕೃಷ್ಣನ್ ಹೇಳುತ್ತಾರೆ. ಜೀವನ ಒಂದು ನಿರಂತರ ಶೋಧ. ಇದರಲ್ಲಿ ನಮಗೆದುರಾಗುವ ಸವಾಲುಗಳಿಗೆ ಪರಿಹಾರ ಹುಡುಕುವುದೇ ಬದುಕು ಎನ್ನುತ್ತಾರೆ ಡಾ. ಟಿಎಂಎ ಪೈ. ಹುಟ್ಟು ಸಾವುಗಳ ಮಧ್ಯೆ ಕಾಲ ಬದುಕು ಮಾತ್ರ.
ಇದೊಂದು ಎಚ್ಚರ. ನಾವಾಗಿ ಹುಟ್ಟಿಬಂದಿಲ್ಲ, ನಾವಾಗಿ ಸಾಯಬೇಕಿಲ್ಲ. ಬದುಕು ಬಾಳಾಗಬೇಕೆನ್ನುತ್ತಾರೆ ವರಕವಿ ಬೇಂದ್ರೆ. ಜೀವನವೊಂದು ಸಮರ. ಸಾಧನೆಯ ಮಾತು ಹಾಗಿರಲಿ, ಅದೊಡ್ಡುವ ಸವಾಲುಗಳೇ ಅತ್ಯಂತ ರೋಚಕ. ಬದುಕು ಅದಕ್ಕೆ ಸ್ಪಂದಿಸುವ ರೀತಿ ಮಹತ್ತರವಾದುದೆನ್ನುತ್ತಾರೆ
ವಿಕೆಆರ್ವಿ ರಾವ್. ಪಂ. ಸುಧಾಕರ ಚತುರ್ವೇದಿಯವರು ಜೀವನಕ್ಕೆ ಮೂರು ಅರ್ಥಗಳನ್ನು ಕಾಣುತ್ತಾರೆ: ಒಂದು; ಜೀವತಿ ಪ್ರಾಣತಿ ಇತಿ=ಜೀವನಂ. ಅಂದರೆ ಉಸಿರಾಡುತ್ತಾ ಇರತಕ್ಕವನು ಜೀವ. ಎರಡು; ಜೀವ ಅಂದರೆ ಪ್ರಾಣ. ಉಸಿರಾಡಲು ಆರಂಭಿಸಿದ ಕಾಲದಿಂದ ಅಂತ್ಯದವರೆಗಿನ ಅವಧಿಯೇ ಜೀವನ. ಮೂರು; ಯಾವುದರಲ್ಲಿ ಚೇತನರಾದ ಆತ್ಮನಿರುತ್ತಾನೋ ಅದು ಶರೀರ. ಅದನ್ನು ಬಳಸುವವನು ಜೀವಾತ್ಮ.
ಯಾವನು ತನ್ನ ಕಷ್ಟಸುಖಗಳಲ್ಲಿ ನನ್ನ ಸುಖ-ದುಃಖಗಳನ್ನು ಕಾಣುತ್ತಾನೋ ಅವನೇ ಮಹಾತ್ಮ. ಜೀವನವು ಒಂದು ರಹಸ್ಯ. ಇಲ್ಲಿಗೆ ಬಂದದ್ದೇಕೆ? ಹೋಗುವುದೆಲ್ಲಿಗೆ? ನಾನು ಕೊಚ್ಚಿಹೋಗುತ್ತಿದ್ದೇನೆ. ಈವರೆಗೂ ನನ್ನನ್ನು ನಡೆಸಬಲ್ಲ, ತೃಪ್ತಿ ನೀಡಬಲ್ಲ ಗುರು ನನಗೆ ದೊರೆತಿಲ್ಲ. ನನ್ನ ವಿದ್ಯೆ ತೃಪ್ತಿ ಕೊಟ್ಟಿಲ್ಲವೆಂದವರು ಡಾ. ಎ.ಆರ್. ಕೃಷ್ಣಾಶಾಸೀ. ಜೀವವೆಂಬುದು ದೇಹವೆಂಬ ಕ್ರಿಯಾಶೀಲ ಘಟಕದಲ್ಲಿ ಒಂದಷ್ಟು ಕಾಲ ಕಂಡುಬರುವ ಚಟುವಟಿಕೆ ಮೊದಲಾದವುಗಳನ್ನೇ ನಡೆಯಿಸುವ ಶಕ್ತಿ. ಜೀವಗಳನ್ನು ನಲಿಸುತ್ತಲೇ ಎಂದ ಶಿವರಾಮ ಕಾರಂತರು ನಿಸರ್ಗದ ಇಚ್ಛೆಯ ಅಂಗ ನಾನು.
ಅದನ್ನು ಎಷ್ಟರಮಟ್ಟಿಗೆ ಪೂರೈಸಿದೆನೆಂದು ನಿಸರ್ಗವೇ ಹೇಳಬೇಕು ಹೇಳುತ್ತಾರೆ. ಜೀವನ ಶೂನ್ಯತೆ ಮತ್ತು ಏಕತಾನತೆಯಿಂದ ಕೂಡಿದೆಯೆನ್ನುತ್ತಾರೆ ಜೆಕೆ. ಜೀವನದಲ್ಲಿ ನಾವು ಅಸಂತುಷ್ಟರು. ಜೀವನವನ್ನು ಆಂತರಿಕವಾಗಿ ಶ್ರೀಮಂತಗೊಳಿಸಿಕೊಳ್ಳಬೇಕು. ಸತ್ಯವನ್ನು ಜೀವನದಲ್ಲಿ ಕಾಣಬೇಕೇ ಹೊರತು ಪಲಾಯನವಾದವಲ್ಲ. ಜೀವನವೆಂಬುದು ಒಂದು ಸಂಬಂಧವೆಂದ ಅವರು ಪ್ರೀತಿಯನ್ನು ಆ ಸಂಬಂಧದಲ್ಲಿ ಆಚರಿಸಬೇಕೆನ್ನುತ್ತಾರೆ.
ಹುಟ್ಟಿನೊಂದಿಗೆ ಜೀವನ ಆರಂಭವಾಗಿ, ಆಮೇಲೆ ಅದು ನಮ್ಮ ನಿಯಂತ್ರಣದಲ್ಲಿರುವುದಿಲ್ಲ ಎಂದು ಡಾ. ಎ.ಎನ್. ಉಪಾಧ್ಯೆ ಹೇಳುತ್ತಾರೆ. ಅರ್ಥಪೂರ್ಣವಾಗಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಅಭಿಲಾಷೆ ಅವರದ್ದು. ತಿಳಿದೋ, ತಿಳಿಯದೆಯೋ ನಾವು ಮಾಡಿದ ಕರ್ಮಗಳೇ ಜೀವನ.
ಭಗವಂತನಿಂದ ದೂರನಾದ ವ್ಯಕ್ತಿ ಅಸ್ವಾಭಾವಿಕವಾಗಿ ಸಾಯುತ್ತಾನೆ ಎಂದು ಹೇಳಿದವರು ಟಿ.ಜಿ. ಸಿದ್ಧಪ್ಪಾರಾಧ್ಯ. ಜೀವನದಲ್ಲಿ ಅಗಾಧ ಅರ್ಥವಿದೆ- ಆರ್.ಆರ್. ದಿವಾಕರ್. ಹುಟ್ಟು ಸಾವಿನ ನಡುವೆ ಮನಸ್ಸಿನ ಎಚ್ಚರದ ಅವಧಿಯೇ ಜೀವನ- ಆದ್ಯ ರಂಗಾಚಾರ್ಯ. ಮನುಷ್ಯ ಜೀವನವು ಕತ್ತಲನ್ನು ಸೀಳಿ ಹೊರಬರುವ ಕೋಲ್ಮಿಂಚಿನಂತೆ. ಈ ಕತ್ತಲು ಹುಟ್ಟಿನ ಪೂರ್ವದ್ದು ಹಾಗೂ ಸಾವಿನ ನಂತರದ್ದು- ಸ್ವಾಮಿ ಆದಿದೇವಾನಂದ.
ಜೀವನಕ್ಕೆ ನಿರ್ದಿಷ್ಟ ಉದ್ದೇಶವಿದೆ. ಸಂತೋಷವೆನ್ನುವುದು ಪ್ರೀತಿಯಿಂದ ಮಾತ್ರ ದೊರಕುವಂಥದ್ದು ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಸ್ವಂತ ಅನುಭವದಿಂದ ಮನವರಿಕೆಯಾಗಬೇಕು- ಜಗದ್ಗುರು ಶ್ರೀಶಂಕರಾಚಾರ್ಯ, ಮಧುರೈ. ಜೀವನವು ಜೀವನವಾಗಿದೆ ಮತ್ತು ಜೀವನವೆಂದರೆ, ಜೀವವಿಲ್ಲದ್ದು ಜೀವನವನ್ನು ತುಂಬುವುದೆಂದರ್ಥ- ವಿದ್ವಾನ್ ವಿದೇಹ. ಜೀವನ ಸತತವಾಗಿ ಬದಲಾಗುವ ಮನಸ್ಥಿತಿಯಂತೆ- ಬಿ.ಎಚ್. ಶ್ರೀಧರ್. ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯವಿರದ ಹುಟ್ಟು ಹಾಗೂ ಸಾವುಗಳ ಕಾಲಾವಧಿಯ ಬದುಕೇ ಜೀವನ- ವ್ಯಾಸರಾಯ ಬಲ್ಲಾಳ.
ಜೀವನವೆಂದರೆ ದೈವೀ ಸಾಧನೆಯ ಒಂದು ಗರುಡಿ-ಎನ್ಕೆ. ನಮ್ಮ ಇಚ್ಛೆ ಆಸಕ್ತಿಗಳಿಗನುಗುಣವಾಗಿ ನಾವು ಕೊಡುವ ರೂಪವೇ ಜೀವನ- ಶ್ರೀ ಪ್ರಕಾಶ. ಪಾಂಚಭೌತಿಕವಾದ ಶರೀರದಲ್ಲಿದ್ದುಕೊಂಡು ಆ ಶರೀರಕ್ಕೆ ನಾಶ ಒದಗಿದಾಗಲೂ ತಾನು ತಿಳಿಯದೆ ನೂತನ ಶರೀರವನ್ನು ಆಗಾಗ್ಗೆ ಆಶ್ರಯಿಸುತ್ತ ಗತಕಾಲದ ಕರ್ಮಜನ್ಯವಾದ ಸಂಸ್ಕಾರವನ್ನು ವರ್ತಮಾನ ಕಾಲದಲ್ಲೂ ವೃದ್ಧಿಗೊಳಿಸಿಕೊಳ್ಳುತ್ತ ಬಾಳ್ವೆ ನಡೆಸಿ ಆ ಅನುಭವವನ್ನು ಭವಿಷ್ಯತ್ತಿಗೂ ಒಯ್ಯುವ ಅಗೋಚರವಾದ ಸತ್ವವೇ ಜೀವನವೆಂಬುದು- ಎನ್. ಚನ್ನಕೇಶವಯ್ಯ. ಜೀವನವೆಂಬುದು ನಿಸರ್ಗದ ಕಣ್ಣುಮುಚ್ಚಾಲೆಯಾಟ- ಎಂ.ಕೆ. ಇಂದಿರಾ. ಜೀವನವೆಂದರೆ, ಭಗವಂತನು ನಿರೂಪಿಸಿದ ಆಧ್ಯಾತ್ಮಿಕ ಕ್ರಮವಾಗಿದ್ದು, ಜೀವನದ ಪರಮೋಚ್ಚ ಆಶಯಗಳನ್ನೂ, ಗುರಿಗಳನ್ನೂ ಸಾಕ್ಷಾತ್ಕರಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ- ಪಿ.ಬಿ.ದೇಸಾಯಿ. ಮನುಷ್ಯನ ಜೀವನವೊಂದು ದಿವ್ಯಜೀವನ.
ವೈದಿಕ ಧರ್ಮಾಸಕ್ತಾನುಸಾರವಾಗಿ ತನ್ನ ಜೀವನವನ್ನು ನಡೆಸಿದ್ದಾದರೆ ಮಾನವನ ಉನ್ನತಿಯಾಗುವುದರಲ್ಲಿ ಸಂದೇಹವಿಲ್ಲ- ಶ್ರೀಪಾದ ದಾಮೋದರ್ ಸಾತವಳೇಕರ. ಜೀವನವು ದೇವರು ನೀಡಿರುವ ವರ. ಅವನನ್ನು ಸಂಪೂರ್ಣವಾಗಿ ಕಂಡುಕೊಳ್ಳಬೇಕೆಂಬುದೇ ಈ ವರದ ಉದ್ದೇಶ- ಹನುಮಾನ್ ಪ್ರಸಾದ ಪೋದ್ದಾರ್. ದೈವಿಕ ಪ್ರeಯು ಪ್ರಾಪಂಚಿಕ ವಸ್ತುಗಳಲ್ಲಿ ಪ್ರಕಟವಾಗುವುದೇ ಜೀವನ- ಆನಂದ ಸ್ವರೂಪ ಗುಪ್ತ. ಜೀವನವೆಂಬುದು ನಿರಂತರವಾದ ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳು- ರಸಿಕಲಾಲ್ ಪಾರೇಖ್.
ಹರಿಯುವ ತೊರೆಯಲ್ಲಿ ತೇಲಿಬಿಟ್ಟ ಬುರುಡೆಯಂತೆ ನಾನು. ಸೋರೆಯ ಬುರುಡೆಗೆ ನೀರಿನ ಆಳ-ಅಗಲ, ಉಗಮ-ಅವಸಾನಗಳೇನು ತಿಳಿದೀತು? ಇನ್ನು ನೀರಿನ ಅಡಿಯಲ್ಲಿ, ನೀರಿನಾಚೆ, ಇರುವ ನೆಲದ ಅರಿವಾದರೂ ಇರುವುದು ಹೇಗೆ? ತಾನು ತೇಲುತ್ತಿರುವುದಷ್ಟೇ ಅದರ ತಿಳಿವಳಿಕೆ. ತೇಲಲು ಸಾಧ್ಯವಾದರೆ ಸಾಕು; ಮುಳುಗದಿದ್ದರೆ ಅದರ ಪುಣ್ಯ! ನನ್ನ ವಿಚಾರವೂ ಅಷ್ಟೆ- ಸಾ.ಕೃ. ರಾಮಚಂದ್ರರಾವ್. ನಾನೇ ರೂಪಿಸಿಕೊಂಡ ತತ್ವದಿಂದಾಗಲೀ ಅಥವಾ ಮತ್ತ್ಯಾರೋ ನನಗಾಗಿ ರೂಪಿಸಿದ ತತ್ವವನ್ನಾಧರಿಸಿ ಜೀವನವನ್ನು ಆಗಲೀ ಪ್ರಾರಂಭಿಸಲಿಲ್ಲ. ಅರವಿಂದರ ಪ್ರೇರಣೆಯಿಂದಾಗಿ ರೂಪುಗೊಂಡ ಮೌಲ್ಯಗಳು ನನ್ನ ಜೀವನವನ್ನು ವ್ಯಕ್ತಿ ಹಾಗೂ ವಸ್ತುವಿನ ಮೇಲಿನ ನನ್ನ ದೃಷ್ಟಿಕೋನವನ್ನು ರೂಪಿಸಿದೆ- ಎಂ.ಪಿ. ಪಂಡಿತ್.
ಜೀವನ ಗೆಯ್ಮೆ ಎಂದೇ ನನ್ನ ಅಭಿಮತ- ವೆಂಕಟೇಶ ಪ್ರಭು. ಜೀವನ ಅಮೂಲ್ಯ. ಅದೊಂದು ಅದ್ಭುತ ಓಟ- ಸ್ವಾಮಿ ರಾಜೇಶ್ವರಾನಂದ. ಜೀವನ ಎಂದರೆ
ಜಡತೆಯಲ್ಲಿ ಚಟುವಟಿಕೆ. ಮನುಷ್ಯ ಜೀವನ ಎಂದರೆ ಪ್ರಜ್ಞಾಪೂರ್ವಕ ಚಟುವಟಿಕೆ- ಎಲ್.ಎಸ್. ಶೇಷಗಿರಿರಾವ್. ಜೀವನ ಎಂಬುದೊಂದು ಶಿಕ್ಷಣ ಶಾಲೆ. ಅಲ್ಲಿ ನಮ್ಮನ್ನು ನಾವು ಓದಬಹುದು- ಸಾ.ಶಿ. ಮರುಳಯ್ಯ. ಜೀವನವು ವಿಶ್ವಪ್ರಣವ ಶಕ್ತಿ ಹಾಗೂ ವಿಶ್ವಜ್ಞಾನ ಶಕ್ತಿಯ ನಿರಂತರವಾಗಿ ಹರಿಯುವ ತೊರೆ- ಬಿಕೆಎಸ್ ಅಯ್ಯಂಗಾರ್. ಬಿಳಿಯ ಹಾಳೆಯಲ್ಲೊಂದು ಚುಕ್ಕಿ ಇಟ್ಟರೆ ಹುಟ್ಟು. ಆ ಚುಕ್ಕಿಯಿಂದ ಬಳಸಿ ಆ ಚುಕ್ಕಿಗೇ ಬಂದು ನಿಂತರೆ ಸಾವು. ಅದರ ನಡುವೆ ಸುತ್ತುವ ಸುತ್ತಿದೆಯಲ್ಲ ಅದೇ ಜೀವನ- ಜಿ.ವಿ. ಅಯ್ಯರ್. ಹುಟ್ಟು- ಸಾವಿನ ಮಧ್ಯದ ಅನಿಶ್ಚಿತ- ನಿಗೂಢ ಪಯಣವೇ ಜೀವನ- ಮಾ. ಹಿರಣ್ಣಯ್ಯ.
ಸರಳ ಭಾಷೆಯಲ್ಲಿ ಹೇಳಬೇಕಾದರೆ, ಜೀವನ ಎಂಬುದು ಒಂದು ಪರಿಶುದ್ಧವಾದ ಬದುಕು- ಜಿ. ನಾರಾಯಣ. ಜೀವನವೆಂದರೆ ದ್ವಂದ್ವಗಳ ಸಂಮಿಲನ. ಅದು ವೈರುದ್ಧ್ಯಗಳಿಂದ ಕೂಡಿದೆ. ನಮ್ಮ ಗ್ರಹಿಕೆಗೆ, ಯೋಚನಾ ಶಕ್ತಿ ಸಾಮರ್ಥ್ಯಕ್ಕೆ ಮೀರಿದ ಸಂಗತಿಗಳಿವೆ. ಇವೆಲ್ಲವುಗಳ ಒಟ್ಟು ಮೊತ್ತವೇ ಅಥವಾ ಸಂಮಿಲನವೇ ನನ್ನ ಪ್ರಕಾರ ಜೀವನ- ರಮೇಶ ಅರವಿಂದ.
ನಮ್ಮ ನಡುವೆ ಈಗ ಇಲ್ಲದ ಅನೇಕ ಹಿರಿಯರು, ಮಹನೀಯರು, ಹಾಗೂ ನಮ್ಮ ನಡುವೆ ಇರುವ ಜನಪ್ರಸಿದ್ಧಿಯನ್ನು ಪಡೆದ ಅನೇಕ ಹಿರಿಯರು, ಮಹನೀಯರು ಜೀವನದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದಕೊಂಡ ಪುಸ್ತಕವೊಂದಿದೆ. ಅದರ ಹೆಸರೇ ಜೀವನದಿ. ಅದರಲ್ಲಿಯೇ ಈ ವಿವರಗಳೆಲ್ಲ ಇದೆ. ಆ ಪುಸ್ತಕದ ಬಗ್ಗೆ ಮುಂದಿನ ವಾರ ಬರೆಯುತ್ತೇನೆ.