Saturday, 23rd November 2024

ಮೂರನೇ ಗೆಲುವು ಕಂಡ ಆರ್‌.ಸಿ.ಬಿ

ಮೊಹಾಲಿ: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ಮತ್ತೊಮ್ಮೆ ಮಿಂಚಿದ್ದು ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಟೂರ್ನಿ ಈವರೆಗಿನ ಎಲ್ಲಾ ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿರುವ ಸಿರಾಜ್ ಈ ಪಂದ್ಯದಲ್ಲಿ 4 ವಿಕೆಟ್ ಕಿತ್ತು ಅಬ್ಬರಿಸಿದರು.

ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಬೌಲರ್‌ಗಳ ಪಟ್ಟಿಯಲ್ಲಿ ಸಿರಾಜ್ ಅಗ್ರಸ್ಥಾನವನ್ನು ಪಡೆದು ಕೊಂಡಿದ್ದು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಯಶಸ್ಸಿಗಾಗಿ ನಡೆಸಿದ ಪರಿಶ್ರಮದ ಬಗ್ಗೆ ಬೆಳಕು ಚೆಲ್ಲಿದ್ದು ಲಾಕ್‌ಡೌನ್‌ನಲ್ಲಿ ನಡೆಸಿದ ಅಭ್ಯಾಸ ಈಗ ಕೆಲಸಕ್ಕೆ ಬಂದಿದೆ ಎಂದಿದ್ದಾರೆ.

“ಲಾಕ್‌ಡೌನ್ ನನಗೆ ಬಹಳ ಮುಖ್ಯವಾಗಿತ್ತು. ಯಾಕೆಂದರೆ ಅದಕ್ಕೂ ಮುನ್ನ ನಾನು ಸಾಕಷ್ಟು ಬೌಂಡರಿಗಳನ್ನು ಬಾರಿಸಿಕೊಳ್ಳುತ್ತಿದ್ದೆ. ಆ ಅವಧಿಯಲ್ಲಿ ನಾನು ನನ್ನ ಯೋಜನೆಗಳ ಮೇಲೆ, ಫಿಟ್‌ನೆಸ್ ಮೇಲೆ ಹಾಗೂ ಬೌಲಿಂಗ್ ಮೇಲೆ ಪರಿಶ್ರಮವನ್ನು ಹಾಕಿದ್ದೆ. ಅಂದಿನ ಪರಿಶ್ರಮ ಈಗ ನನಗೆ ನೆರವಾಗು ತ್ತಿದೆ” ಎಂದಿದ್ದಾರೆ ವೇಗಿ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಪಡೆಯುವುದರ ಜೊತೆಗೆ ಫೀಲ್ಡಿಂಗ್‌ ನಲ್ಲಿಯೂ ಸಿರಾಜ್ ಗಮನ ಸೆಳೆದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಹರ್‌ಪ್ರೀತ್ ಸಿಂಗ್ ಅವರನ್ನು ನೇರವಾಗಿ ವಿಕೆಟ್‌ಗೆ ಚೆಂಡೆಸೆಯುವ ಮೂಲಕ ರನೌಟ್ ಮಾಡಿದ್ದರು.

ಪಂಜಾಬ್ ಕಿಂಗ್ಸ್ ವಿರುದ್ಧ ಸಾಧಿಸಿದ ಈ ಗೆಲುವು ಆರ್‌ಸಿಬಿ ತಂಡವನ್ನು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಕ್ಕೇರಿಸಿದೆ. 8ನೇ ಸ್ಥಾನದಲ್ಲಿದ್ದ ಆರ್‌ಸಿಬಿ ತಂಡ ಈ ಗೆಲುವಿನ ಬಳಿಕ ಮೂರು ಗೆಲುವು ಹಾಗೂ ಮೂರು ಸೋಲಿನೊಂದಿಗೆ 6 ಅಂಕಗಳನ್ನು ಪಡೆದುಕೊಂಡಿದೆ. ಹೀಗಾಗಿ 5ನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಆರ್‌ಸಿಬಿ ತಂಡದ ಪ್ರಮುಖ ಬಲವೆಂದರೆ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಈ ಬಾರಿಯ ಐಪಿಎಲ್‌ನ ಬಹುತೇಕ ಎಲ್ಲಾ ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡಿದ್ದಾರೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಂಗಳೂರಿನಲ್ಲಿಯೇ ಆಡಲಿದೆ.