ವರ್ತಮಾನ
maapala@gmail.com
ಬದಲಾವಣೆ ಜಗದ ನಿಯಮವಾದರೂ ರಾಜಕಾರಣಕ್ಕೆ ಮಾತ್ರ ಅದು ಅನ್ವಯವಾಗುತ್ತಿರಲಿಲ್ಲ. ಅದರ ಮಧ್ಯೆಯೂ ಬಿಜೆಪಿ ಬದಲಾವಣೆಯ ಪ್ರಯತ್ನ ಮಾಡಿದೆಯಾದರೂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್ ನಿರಾಕರಿಸಿದ ಕಾರಣ ಆ ಪ್ರಯತ್ನ ಬೆಳಕಿಗೆ ಬರಲೇ ಇಲ್ಲ.
ಸಿನಿಮಾರಂಗದಲ್ಲಿ ಅದೊಂದು ಕಾಲವಿತ್ತು. ಮೂರು ಫೈಟ್, ನಾಲ್ಕು ಹಾಡು ಗಳು, ಒಂದೆರಡು ಮರ ಸುತ್ತುವ ದೃಶ್ಯ, ಒಂದಷ್ಟು ಸೆಂಟಿಮೆಂಟ್ ಇದ್ದರೆ ಸಿನಿಮಾ ಮುಗಿಯಿತು. ಜನರು ಅದಕ್ಕೆ ಹೊಂದಿಕೊಂಡಿದ್ದರು. ಕಾಲಕ್ರಮೇಣ ಹೊಸ ಪರಿಕಲ್ಪನೆಗಳ ಚಿತ್ರಗಳು ಬಂದವು. ಆರಂಭದಲ್ಲಿ ಜನ ಅದನ್ನು ಒಪ್ಪಿಕೊಳ್ಳದಿದ್ದರೂ ನಂತರದಲ್ಲಿ ಪ್ರೀತಿಯಿಂದ ಅಪ್ಪಿಕೊಂಡರು. ನಂತರದಲ್ಲಿ ಹೊಸ ಪರಿಕಲ್ಪನೆಯ ಚಿತ್ರಗಳು ಸೂಪರ್ ಹಿಟ್ ಆಗಲಾರಂಭಿಸಿದವು.
ಜನಪ್ರಿಯ ನಟ, ನಟಿಯರು ಇಲ್ಲದೇ ಇದ್ದರೂ ವಿಭಿನ್ನ ಮಾದರಿಯ ಕಥೆ, ಹೊಸ ರೀತಿಯ ನಿರೂಪಣೆಗಳಿಂದ ಸಿನಿಮಾ ಗೆದ್ದು ನಿರ್ಮಾಪಕರ ಜೇಬು ತುಂಬಿಸಿದವು. ಈ ರೀತಿಯ ಚಿತ್ರಗಳಿಂದಲೇ ಸ್ಯಾಂಡಲ್ವುಡ್ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವಂತಾಯಿತು.
ಇದೇ ರೀತಿಯ ಬದಲಾವಣೆಗಳು ರಾಜಕೀಯ ರಂಗದಲ್ಲೂ ಆಗಬೇಕು. ಅದೇ ಕುಟುಂಬ, ಅದೇ ಹಳೇ ಅಭ್ಯರ್ಥಿಗಳು, ಅಪ್ಪ ಇಲ್ಲದಿದ್ದರೆ ಮಗ… ಹೀಗೆ ಒಂದೇ ರೀತಿಯಲ್ಲಿ ಮುಂದುವರಿಯುತ್ತಿರುವ ‘ಸಿದ್ಧ ಸೂತ್ರ’ದ ರಾಜಕೀಯ ವನ್ನು ಬದಲಿಸಬೇಕು ಎಂಬ ಅಭಿಪ್ರಾಯ ಕೇಳಿಬರಲಾ ರಂಭಿಸಿತು.
ಆದರೆ, ಚುನಾವಣೆಗಳೆಂದರೆ ಅದು ಅಧಿಕಾರದ ಹೋರಾಟ. ಈ ರೀತಿಯ ಬದಲಾವಣೆಗಳನ್ನು ತಂದರೆ ತಕ್ಷಣಕ್ಕೆ ಜನ
ಒಪ್ಪಿಕೊಳ್ಳುವುದಿಲ್ಲ. ಜನಮನ್ನಣೆ ಸಿಗದೆ ಸೋಲಾದರೆ ಮತ್ತೆ 5 ವರ್ಷ ಅಧಿಕಾರದಿಂದ ದೂರ ಉಳಿಯಬೇಕಾಗುತ್ತದೆ ಎಂಬ
ಕಾರಣಕ್ಕೆ ಯಾವುದೇ ರಾಜಕೀಯ ಪಕ್ಷವೂ ಸಿದ್ಧಸೂತ್ರವನ್ನು ಬಿಟ್ಟು ಅದರಾಚೆಗೆ ಯೋಚನೆ ಮಾಡಲೇ ಇಲ್ಲ. ಹೀಗಾಗಿ
ಇಂದಿಗೂ ನಾವು ವಂಶಪಾರಂಪರ್ಯ ರಾಜಕಾರಣವನ್ನೇ ಒಪ್ಪಿ ಅಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಬಿಜೆಪಿ ಈ ವಿಧಾನಸಭೆ ಚುನಾವಣೆಗೆ ಘೋಷಿಸಿದ ಅಭ್ಯರ್ಥಿಗಳ ಪಟ್ಟಿ ಗಮನಿಸಿದಾಗ ಎಲ್ಲೋ ಒಂದು ಕಡೆ ಸಿದ್ಧ
ಸೂತ್ರವನ್ನು ಬಿಟ್ಟು ಅದರಾಚೆಗೆ ರಾಜಕಾರಣವನ್ನು ಕೊಂಡೊಯ್ಯುವ ಪ್ರಯತ್ನ ಮಾಡಿದಂತೆ ಕಾಣಿಸುತ್ತಿದೆ. ಚುನಾವಣೆಗೆ
ಸ್ಪಽಸಬೇಡಿ ಎಂದು ಹೇಳಿದರೂ ಟಿಕೆಟ್ಗಾಗಿ ಪಟ್ಟು ಹಿಡಿದು, ನೀವು ಅವಕಾಶ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ಅವರು ಪ್ರಬಲ ಸಮುದಾಯಕ್ಕೆ ಸೇರಿದರೂ ಮಾಜಿ
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿರುವುದು,
224 ಕ್ಷೇತ್ರಗಳ ಪೈಕಿ 75 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿರುವುದು, ಕುಟುಂಬ ರಾಜಕಾರಣಕ್ಕೆ
ಅವಕಾಶವಿಲ್ಲ ಎಂದು ಹೇಳಿ ಅಪ್ಪ-ಮಕ್ಕಳಿಗೆ ಟಿಕೆಟ್ ನಿರಾಕರಿಸಿ ಯಾರಿಗಾದರೂ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿರು ವುದು, ಆ ಕುಟುಂಬ ಇಲ್ಲದೇ ಇದ್ದರೂ ಪಕ್ಷ ಗೆಲ್ಲುತ್ತದೆ ಎಂಬ ಖಾತರಿ ಮೇಲೆ ಕೆಲವರಿಗೆ ಟಿಕೆಟ್ ನಿರಾಕರಿಸಿರುವು ದನ್ನು ಗಮನಿಸಿದರೆ ಚುನಾವಣಾ ರಾಜಕಾರಣದಲ್ಲಿ ಏನೋ ಬದಲಾವಣೆ ತರಲು ಹೊರಟಂತೆ ಕಾಣಿಸುತ್ತಿದೆ.
ಈ ಬಾರಿ ಬಿಜೆಪಿ 75 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಅದರಲ್ಲಿ ಮೂರ್ನಾಲ್ಕು ಮಂದಿ ಪಕ್ಷದಲ್ಲೂ ಯಾವುದೇ ಸ್ಥಾನಮಾನ ಹೊಂದದೆ ಕಾರ್ಯಕರ್ತರಾಗಿ ದುಡಿದವರು. ಹೊಸ ಮುಖಗಳ ಪೈಕಿ ಕೆಲವು ಕಡೆ ಜಾತಿ, ಸಮುದಾಯ ಮೀರಿ ಅವಕಾಶ ನೀಡಲಾಗಿದೆ. ಇದು ಪಕ್ಷಕ್ಕೆ ಎಷ್ಟರ ಮಟ್ಟಿಗೆ ಪೂರಕ ಫಲಿತಾಂಶ ತಂದುಕೊಡುತ್ತದೆ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಬೇಕಷ್ಟೆ.
ಪಕ್ಷದ ಈ ನಿರ್ಧಾರದಿಂದ ಚುನಾವಣೆಯಲ್ಲಿ ನಷ್ಟವೂ ಆಗಬಹುದು, ಲಾಭವೂ ಸಿಗಬಹುದು. ಹೊಸ ಮುಖಗಳು ದಿಗ್ಗಜರ ಮಧ್ಯೆ ಪೈಪೋಟಿ ನೀಡಲು ಸಾಧ್ಯವಾಗದೇ ಸೋಲಲೂ ಬಹುದು. ಯಾವುದೋ ಹೊಸ ಮುಖ. ಈತನಿಂದ ಏನಾದರೂ ಬದಲಾವಣೆ ಸಾಧ್ಯವೇ ಎಂದು ಜನ ಬೆಂಬಲಿಸಬಹುದು. ಫಲಿತಾಂಶ ಏನೇ ಇರಲಿ, ಬದಲಾವಣೆಯ ಪರ್ವವೊಂದು ಆರಂಭ ವಾಗಿದೆ ಎಂಬ ಸೂಚನೆಯಂತೂ ಇದರಿಂದ ಸಿಗುವುದು ಸ್ಪಷ್ಟ.
ಹೊಸ ಅಭ್ಯರ್ಥಿಗಳು ಈ ಹಾರಿಯ ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ ಭವಿಷ್ಯದ ರಾಜಕೀಯದಲ್ಲಿ ಹೊಸ ತಲೆಮಾರಿಗೆ
ಅವಕಾಶ ಮಾಡಿಕೊಟ್ಟಂತಾಗುವುದಂತೂ ಸ್ಪಷ್ಟ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ಪ್ರಯೋಗ ಮಾಡಿ ಯಶಸ್ವಿ ಯಾದ ಬಿಜೆಪಿ ಅದನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ಮುಂದಾಗಿದೆ. ಅಲ್ಲಿ ವಿರೋಧ ಕಂಡುಬಂದಂತೆ ಇಲ್ಲಿಯೂ ವಿರೋಧದ ಎಲೆ ಎದ್ದಿದೆ. ಆದರೆ, ಉತ್ತರ ಭಾರತದಲ್ಲಿ ಯಶಸ್ವಿಯಾದಂತೆ ಕರ್ನಾಟಕದಲ್ಲೂ ಯಶಸ್ವಿಯಾಗುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಇಲ್ಲಿನ ರಾಜಕಾರಣ ನಡೆಯುವುದೇ ಜಾತಿ ಮತ್ತು ವ್ಯಕ್ತಿಯ ಮೇಲೆ.
ಸ್ವಾತಂತ್ರ್ಯಾನಂತರ ನಡೆದುಬಂದ ರಾಜಕೀಯ ವ್ಯವಸ್ಥೆಯೇ ಇದಕ್ಕೆ ಕಾರಣ. ಸ್ವಾತಂತ್ರ್ಯ ಸಿಕ್ಕಿದ ಆರಂಭದಲ್ಲಿ ಕಾಂಗ್ರೆಸ್ ಮಾತ್ರ ಇತ್ತು. ಕ್ರಮೇಣ ಅಧಿಕಾರದ ರುಚಿ ಸಿಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಅವಕಾಶ ಸಿಗದೇ ಇದ್ದವರು ಬೇರೆ ಪಕ್ಷಗಳನ್ನು ಕಟ್ಟಿದರು. ಅಲ್ಲಿ ಅವಕಾಶ ಸಿಗದವರು ಹೊಸ ಪಕ್ಷಕ್ಕೆ ಸೇರಿ ಅದನ್ನು ಬೆಳೆಸಿ ಅಧಿಕಾರಕ್ಕೆ ಬರುವಂತೆ ಮಾಡಿದರು. ಇತರೆ ಪಕ್ಷಗಳಂತೆ ಬಿಜೆಪಿ ಕೂಡ ಬೆಳೆದಿದ್ದೇ ಆ ರೀತಿ. ಹೀಗಾಗಿ ಆರಂಭದಿಂದಲೂ ರಾಜಕೀಯ ಅಧಿಕಾರ ಸಿಕ್ಕಿದವರು ಮತ್ತು ಅವರ ಕುಟುಂಬದವರಷ್ಟೇ ಬೆಳೆದರೇ ಹೊರತು ಹೊಸಬರಿಗೆ ಅವಕಾಶ ಸಿಕ್ಕಿದ್ದೇ ಕಡಿಮೆ.
ಸಿಕ್ಕಿದರೂ ಅದನ್ನು ಬಳಸಿಕೊಂಡು ಮೇಲೇರುವಲ್ಲಿ ವಿಫಲರಾದರು. ಇದಕ್ಕೆ ಅಪವಾದ ಎಚ್.ಡಿ.ದೇವೇಗೌಡ, ನರೇಂದ್ರ
ಮೋದಿ, ಅಮಿತ್ ಶಾ, ಮಮತಾ ಬ್ಯಾನರ್ಜಿ ಹೀಗೆ ಬೆರಳೆಣಿಕೆಯವರು ಮಾತ್ರ. ಹಾಗೆಂದು ಹಿರಿಯರು ಹಾಕಿಕೊಟ್ಟ ದಾರಿ ಎಂದು ಅದರಲ್ಲೇ ಮುಂದುವರಿದರೆ ಉಳಿದವರಿಗೆ ಅವಕಾಶ ಸಿಗುವುದು ಯಾವಾಗ? ಆ ರೀತಿ ಕುಟುಂಬ ಅಥವಾ
ಪರಂಪರೆಯ ಬೆಂಬಲವಿಲ್ಲದೆ ರಾಜಕಾರಣಕ್ಕೆ ಬಂದು ಏನೋ ಬದಲಾವಣೆ ಮಾಡಬೇಕು ಎಂದು ಸಾಕಷ್ಟು ಮಂದಿ
ಕಾಯುತ್ತಿರುತ್ತಾರೆ. ಆಮ್ ಆದ್ಮಿ ಪಾರ್ಟಿಯಿಂದ ಇದು ಸಾಬೀತಾಗಿದೆ.
ಭ್ರಷ್ಟಾಚಾರ ನಿಗ್ರಹಕ್ಕೆ ಕೇಂದ್ರದಲ್ಲಿ ಲೋಕ್ ಪಾಲ್ ಸಂಸ್ಥೆ ಬೇಕು ಎಂಬ ಕಾರಣಕ್ಕೆ ಹುಟ್ಟಿಕೊಂಡ ಹೋರಾಟದ ಒಂದು ಭಾಗ ರಾಜಕೀಯ ಪಕ್ಷವಾಗಿ ಬದಲಾಗಿ ಅಧಿಕಾರಕ್ಕೇರುವ ಮಟ್ಟಕ್ಕೆ ಬಂದಿದೆ ಎಂದಾದರೆ ಜನ ಬದಲಾವಣೆಯನ್ನು ತಡವಾಗಿ ಯಾದರೂ ಸ್ವೀಕರಿಸುತ್ತಾರೆ ಎಂಬುದು ಸಾಬೀತಾಗಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಮಾಡಹೊರಟಿದ್ದೂ ಇಂಥದ್ದೇ ಬದಲಾವಣೆ ಯನ್ನು.
ಇದುವರೆಗೆ ರಾಜಕೀಯ ಅವಕಾಶಗಳನ್ನು ಪಡೆದವರು ಮತ್ತು ಅವರ ಕುಟುಂಬದವರನ್ನು ಹೊರತುಪಡಿಸಿ ಹೊಸಬರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ. ಅದಕ್ಕಾಗಿಯೇ ರಾಜ್ಯದಲ್ಲೂ ಕುಟುಂಬ ರಾಜಕೀಯ ಹಿನ್ನೆಲೆ ಇಲ್ಲದ 75 ಹೊಸ ಮುಖ ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹಾಗೆಂದು ಬಿಜೆಪಿ ಏಕಾಏಕಿ ದೊಡ್ಡ ಮಟ್ಟದಲ್ಲಿ ಇದನ್ನು ಮಾಡಿದೆ ಎಂದು ಹೇಳಲಾಗದು. ಏಕೆಂದರೆ, ರಾಜಕಾರಣ ಮಾಡುವುದೇ ಅಧಿಕಾರಕ್ಕಾಗಿ. ಅದಕ್ಕಾಗಿಯೇ ಕೆಲವೆಡೆ ಅನಿವಾರ್ಯವಾಗಿ ಅಪ್ಪ ಇಲ್ಲವೇ ಮಗನಿಗೆ ಟಿಕೆಟ್ ನೀಡಿದೆ.
ಹಲವೆಡೆ ಅದೇ ಹಳೇ ಮುಖಗಳಿಗೆ ಮಣೆ ಹಾಕಿದೆ. ಆ ರೀತಿ ಮಾಡದೇ ಎಲ್ಲರನ್ನೂ ಒಂದೇ ಬಾರಿ ಬದಲಿಸುತ್ತೇವೆ ಎಂದು
ಹೊರಟರೆ ಮೂಲೆಗುಂಪಾಗಬೇಕಾಗುತ್ತದೆ ಎಂಬುದು ವರಿಷ್ಠರಿಗೂ ಗೊತ್ತಿದೆ. ಅದಕ್ಕಾಗಿಯೇ 120 ಶಾಸಕರ ಪೈಕಿ ಸುಮಾರು 90 ಶಾಸಕರಿಗೆ ಟಿಕೆಟ್ ನೀಡಿದೆ. ಚುನಾವಣಾ ರಾಜಕೀಯದಲ್ಲಿ ಗೆಲ್ಲಲು ಜಾತಿಯೇ ಪ್ರಮುಖ ಎಂಬ ಕಾರಣಕ್ಕೆ ಸಹಜವಾಗಿಯೇ ಲಿಂಗಾಯತರು, ಒಕ್ಕಲಿಗರಿಗೆ ಹೆಚ್ಚು ಮಣೆ ಹಾಕಿದೆ. ಪ್ರಬಲ ಜಾತಿ, ಸಮುದಾಯಗಳಿಗೆ ಮನ್ನಣೆ ನೀಡಿದೆ. ಕೆಲವೊಂದು ಹಳೆಯ ಮುಖಗಳಿಗೂ ಮತ್ತೆ ಅವಕಾಶ ಮಾಡಿಕೊಟ್ಟಿದೆ. ಜತೆಗೆ, ಬದಲಾವಣೆಯ ಮುನ್ಸೂಚನೆ ನೀಡುವು ದಕ್ಕಾಗಿ 75 ಹೊಸ ಮುಖಗಳನ್ನು ಆಯ್ಕೆ ಮಾಡಿದೆ.
ಆದರೆ, ರಾಜಕೀಯವಾಗಿ ಪ್ರಬಲ ಸಮುದಾಯಕ್ಕೆ ಸೇರಿದ ಒಬ್ಬ ಜಗದೀಶ್ ಶೆಟ್ಟರ್, ಒಬ್ಬ ಲಕ್ಷ್ಮಣ ಸವದಿಗೆ ಟಿಕೆಟ್ ನಿರಾ ಕರಿಸಿದ್ದೇ ದೊಡ್ಡ ವಿಷಯವಾಯಿತು. ವರಿಷ್ಠರ ಸೂಚನೆಯಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದು, ಅವರ ಪುತ್ರನಿಗೆ ಟಿಕೆಟ್ ಸಿಗದೆ ಬೇರೆಯವರ ಪಾಲಾದರೂ ಪ್ರಾಮುಖ್ಯತೆ ಪಡೆಯಲೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟು ಅಭ್ಯರ್ಥಿಗಳ ಪೈಕಿ ಮೂರನೇ ಒಂದು ಭಾಗದಷ್ಟು ಹೊಸ ಮುಖಗಳಿಗೆ ಅವಕಾಶ ಒದಗಿಸಿದರೂ ಅದು ಚರ್ಚೆಯ ವಿಷಯವಾಗಲೇ ಇಲ್ಲ. ಆದರೆ, ಸಿದ್ಧ ಸೂತ್ರ ಬಿಟ್ಟು ಸ್ವಲ್ಪ ಮಟ್ಟಿಗಾದರೂ ಹೊರಬಂದ ಬಿಜೆಪಿಯ ನಿಲುವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದಕ್ಕೆ ಚುನಾವಣಾ ಫಲಿತಾಂಶದವರೆಗೆ ಕಾಯಬೇಕು ಅಷ್ಟೆ.
ಲಾಸ್ಟ್ ಸಿಪ್: ಅಪ್ಪ ಹಾಕಿದ ಆಲದ ಮರ ಇದೆ ಎಂದು ಬೇರೆ ಮರ ಬೆಳೆಸದೇ ಇದ್ದರೆ ಮುಂದೆ ಆಲದ ಮರದ ಕೆಳಗೆ
ಹುಲ್ಲೂ ಚಿಗುರುವುದಿಲ್ಲ.