Sunday, 24th November 2024

ಐಪಿಎಲ್‌ ಕ್ರಿಕೆಟನ್ನೇ ನಾಚಿಸುತ್ತಿದೆ ಚುನಾವಣೆ ಆಟ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಐಪಿಎಲ್‌ನಲ್ಲಿ ಯಾವ ರಾಜ್ಯದ ಆಟಗಾರ ಯಾವ ತಂಡದಲ್ಲಿದ್ದಾನೆ, ಯಾವ ದೇಶದ ಆಟಗಾರ ಯಾವ ತಂಡದಲ್ಲಿದ್ದಾನೆ ಎಂಬ ಗೊಂದಲದಂತೆ ಚುನಾವಣಾ ದೊಂಬರಾಟದಲ್ಲಿಯೂ ಯಾವ ಪಕ್ಷದ ನಿಷ್ಠಾವಂತ ಅಭ್ಯರ್ಥಿ ನಾಳೆ ಇನ್ನಾವ ಪಕ್ಷದಲ್ಲಿದ್ದಾನೆಂಬ ಕನ್ ಫ್ಯೂಸನ್ ಸೃಷ್ಟಿಯಾಗುತ್ತಿದೆ.

ಜಗದೀಶ್‌ ಶೆಟ್ಟರ್ ಅವರಿಗೆ ಈ ಚುನಾವಣೆ ನಿಮಗೆ ಏತಕ್ಕೆ ಬೇಕು ಎಂದು ಕೇಳಿನೋಡಿ ಇದು ನನ್ನ ಸ್ವಾಭಿಮಾನಕ್ಕಾಗಿ ಬೇಕು ಎನ್ನುತ್ತಾರೆ. ಇದೇ ಪ್ರಶ್ನೆ ಡಿ.ಕೆ.ಶಿವಕುಮಾರ್‌ಗೆ ಕೇಳಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದು ಸೋನಿಯಾ ಗಾಂಧಿಗೆ ಉಡುಗೊರೆ ಕೊಟ್ಟು ಶಹಭಾಸ್ ಎನಿಸಿಕೊಂಡು ಮುಖ್ಯಮಂತ್ರಿಯಾಗಲೇ ಬೇಕು ಎನ್ನುತ್ತಾರೆ.

ಸಿದ್ದರಾಮಯ್ಯನವರಿಗೆ ಕೇಳಿ ಇದು ನನ್ನ ಕೊನೇ ಚುನಾವಣೆ ಮತ್ತು ಮುಸ ಲ್ಮಾನರ ಉದ್ಧಾರಕ್ಕಾಗಿ ನಾನು ಮುಖ್ಯಮಂತ್ರಿ ಯಾಗಲೇಬೇಕು ಎನ್ನಬಹುದು. ಎಚ್.ಡಿ. ಕುಮಾರಸ್ವಾಮಿಯನ್ನು ಕೇಳಿನೋಡಿ ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಲೇ ಬೇಕು, ನನ್ನ ಪರಿವಾರದವರೆಲ್ಲಾ ಗೆಲ್ಲಲೇಬೇಕು, ಆ ಮೂಲಕ ತಂದೆ ದೇವೇಗೌಡರ ಆರೋಗ್ಯ ಆಯಸ್ಸು ಹೆಚ್ಚಬೇಕು ಎಂದೆನ್ನುತ್ತಾರೆ.

ಜನಾರ್ದನರೆಡ್ಡಿಯನ್ನು ಕೇಳಿ, ಕಳೆದು ಹೋಗಿರುವ ಮರ್ಯಾದೆಯನ್ನು ಮತ್ತೆ ಗಳಿಸಿಕೊಳ್ಳಲು ಬೇಕೇಬೇಕು ಎನ್ನದೆ ಇನ್ನೇನಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಳುವುದೇ ಬೇಡ. ಅವರು ಎಲ್ಲಾ ಆಸೆಗಳನ್ನು ಬಿಟ್ಟು ಸೋನಿಯಾಗಾಂಧಿಗೆ ಕಟ್ಟಪ್ಪನಂತೆ ನಿಂತುಬಿಟ್ಟಿದ್ದಾರೆ. ಇನ್ನು ಬಿಜೆಪಿಯಲ್ಲಿ ಸಂಘಪರಿವಾರ- ಮೋದಿ ಯವರ ಸಿದ್ಧಾಂತ ಇರುವುದರರಿಂದ ದೇಶ-ರಾಷ್ಟ್ರೀಯತೆ-ಹಿಂದುತ್ವ ಎನ್ನುತ್ತಿದ್ದಾರಷ್ಟೆ, ಇಲ್ಲದಿದ್ದರೆ ಬಿಜೆಪಿಗೂ ಅನ್ಯಪಕ್ಷ ಗಳಿಗೂ ವ್ಯತ್ಯಾಸವೇನಿಲ್ಲ.

ಇನ್ನು ಇಂಥವರ ಸುತ್ತ ಹೆಣಹೊರುವ ಕೆಲಸಕ್ಕಿಳಿದಿರುವಂತೆ ಮುತ್ತಿರುವ ಮತದಾರರನ್ನು ಕೇಳಿನೋಡಿ, ಅವರಿಗೆ ನಮ್ಮ ಜಾತಿಯವನು ಗೆಲ್ಲಬೇಕು, ನಮಗೆ ಕೈಗೆ ಬಾಯಿಗೆ ಕೊಟ್ಟವನು ಗೆಲ್ಲಬೇಕು ಎನ್ನುತ್ತಾರೆ. ಕೋಳಿ ಮತ್ತು ಮಧ್ಯದ ಬಾಟಲಿ ಗಳನ್ನು ಸಾಗಿಸುವ ಲಾರಿಯೊಂದು ಅಪಘಾತಕ್ಕೀಡಾದರೆ ಅದರಿಂದ ಕೋಳಿ ಮತ್ತು ಬಾಟಲಿಗಳನ್ನು ಕೂಡಲೇ ಎತ್ತಿಕೊಂಡು ಓಡಿಹೋಗುವ ದರಿದ್ರ ಸ್ಥಿತಿಯಲ್ಲಿರುವ ಅನಾಗರಿಕರಂತೆ ಸಾಮಾಜಿಕ ಪ್ರಜ್ಞೆಯಿಲ್ಲದ ಮತದಾರರೇ ಹೆಚ್ಚಾಗಿದ್ದಾರೆ.

ಇನ್ನು ಸಮಾಜವನ್ನು ತಿದ್ದಬೇಕಾದ ಮಠಾಽಶರನ್ನು ಕೇಳಿನೋಡಿ, ಮೇಲ್ನೋಟಕ್ಕೆ ಜಾತ್ಯತೀತ ನಾಯಕರು ಗೆಲ್ಲಬೇಕು ಎನ್ನುತ್ತಾರಷ್ಟೇ? ಆದರೆ ನಮ್ಮ ಜಾತಿಯವನೇ ಗೆಲ್ಲಬೇಕು, ನಾವುಗಳು ಹೇಳಿದಂತೆ ಕೇಳಿಕೊಂಡು ಹೋಗುವಂಥ ನಮ್ಮವನೇ ಗೆಲ್ಲಬೇಕು, ಉಳಿದದ್ದು ಹೇಗಾದರೂ ಬೆಂಕಿ ಬೀಳಲಿ’ ಎಂಬ ಧಾವಂತ ಮನದೊಳಗಿರುತ್ತದಷ್ಟೇ? ಕೊನೆಯದಾಗಿ ಇಂಥ
ಅನೈತಿಕ ಬೆಳವಣಿಗೆಗಳನ್ನು ಪ್ರಶ್ನಿಸಿ ಚಾಟಿಬೀಸಿ ಅವರನ್ನು ಬೆತ್ತಲು ಮಾಡಬೇಕಾದ ಟಿವಿ ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ರಮಗಳನ್ನು ಬಿಟ್ಟು ಬೇಗಾನಿ ಶಾದಿಮೆ ಅಬ್ದುಲ್ಲಾ ದಿವಾನ ಎಂಬಂತೆ ಅಂಥ ಸುದ್ದಿಗಳ ರೋಚಕತೆ
ಯಲ್ಲೇ ಸಮ್ಮೋಹನಗೊಂಡಿವೆ.

ಮೊನ್ನೆ ಸಿದ್ದರಾಮಯ್ಯ ಜತೆ ಮೊಮ್ಮಗ ಕಾಣಿಸಿಕೊಂಡದ್ದನ್ನೇ ಎಂಟನೇ ಅದ್ಭುತವೆಂಬಂತೆ ನಾಗವಲ್ಲಿಯ ದಾಟಿಯಲ್ಲಿ ಅತಿರಂಜಿತವಾಗಿ ಅರ್ಧರ್ಧಗಂಟೆ ತೋರಿಸುತ್ತಾರೆ. ಇನ್ನು ರಾಜಕೀಯಕ್ಕೆ ಕಾಲಿಡುತ್ತಿರುವವರು ಪತ್ರಿಕೋದ್ಯಮ-ಸುದ್ದಿ ವಾಹಿನಿಗಳಿಗೆ ಹೆದರುವುದು ಯಾವಾಗ? ಹೀಗೆ ಇಂದಿನ ಚುನಾವಣೆ ಏತಕ್ಕಾಗಿ ನಡೆಯು ತ್ತಿದೆ ಯಾವ ಪುರಷಾರ್ಥಕ್ಕಾಗಿ ನಡೆಯುತ್ತಿದೆ ಎಂಬ ಕನಿಷ್ಠ ಜ್ಞಾನ ಯಾರಿಗೂ ಇದ್ದಂತಿಲ್ಲ.

ಅಸಲಿಗೆ ಇವರಿಗೆ ಚುನಾವಣೆ ನಂತರ ಸಂವಿಧಾನಾತ್ಮಕವಾಗಿ ರಾಜ್ಯವನ್ನು ಮುನ್ನಡೆಸಬೇಕೆಂಬ ಮೂಲೋದ್ದೇಶದ ಜವಾಬ್ದಾರಿ ಇದೆ ಎಂಬ ಪರಿಕಲ್ಪನೆಯೇ ತಲೆಯಲ್ಲಿಲ್ಲ. ವೈದ್ಯ ಐಎಎಸ್, ಐಪಿಎಸ್ ಓದುವವನಿಗೆ ತಾನು ಆ ಪದವಿ ಪಡೆದ ಮೇಲೆ ಸಮಾಜದಲ್ಲಿ ಏನೆಲ್ಲಾ ಹೊಣೆಗಾರಿಕೆಗಳು ಕರ್ತವ್ಯಗಳಿರುತ್ತವೆಂಬ ಸ್ಪಷ್ಟತೆ ಇರುತ್ತದೆ.

ಇಲ್ಲದಿದ್ದರೆ ಅಂಥ ಓದನ್ನು ಆತ ಆರಿಸಿಕೊಳ್ಳುವುದೇ ಇಲ್ಲ. ಬಿಬಿಎಂಪಿಯ ಪೌರಕಾರ್ಮಿಕರಿಗೆ ನಾಳೆ ಬೀದಿಯನ್ನು ಹೇಗೆಲ್ಲಾ ಸ್ವಚ್ಛವಾಗಿಡಲು ಶ್ರಮಿಸಬೇಕೆಂಬ ಹೊಣೆಗಾರಿಕೆ ಇರುತ್ತದೆ. ಆದರೆ ಕಳೆದ ಇಪ್ಪತ್ತು ದಿನಗಳಿಂದ ಈ ಚುನಾವಣೆಯಲ್ಲಿ
ಸ್ಪರ್ಧಿಸಲೇಬೇಕೆಂದು ನಡೆಯುತ್ತಿರುವವರ ಅಸಹ್ಯಗಳನ್ನು ಗಮನಿಸಿದರೆ ಮುಂದೆ ತಾನು ಗೆದ್ದು ಎಂಥ ಪ್ರಜಾಪ್ರಭುತ್ವವನ್ನು ಆಳಬೇಕೆಂಬ ಗಂಭೀರ ಆಲೋಚನೆ ಚಿಂತನೆ ಯಾವನಿಗೂ ಬೇಕಿಲ್ಲ. ಇನ್ನು ಇಂಥವರು ಗೆದ್ದು ಅದರಲ್ಲೂ ಯಾವ ಪಕ್ಷಕ್ಕೂ
ಬಹುಮತ ಸಿಗದಿದ್ದಾಗ ಇವರುಗಳು ನಡೆದುಕೊಳ್ಳುವ ರೀತಿ, ಕತ್ತೆ ವ್ಯಾಪಾರ, ಹೋಟೆಲ್, ರೆಸಾರ್ಟುಗಳ ರಾಜಕೀಯ, ಆನಂತರ ಅನೈತಿಕ ಅಸಂಬದ್ಧ ಒಪ್ಪಂದ, ಅನಂತರ ಸರಕಾರ ಸ್ಥಾಪನೆ, ಮಂತ್ರಿಮಂಡಲದ ಯಮರಚನೆ, ಆನಂತರ
ಖಾತೆಗಳ ಬೇಡಿಕೆ-ಹಂಚಿಕೆ, ಆನಂತರ ಇಲಾಖೆಗಳು ಚುರುಕುಗೊಂಡು ಕಾರ್ಯಾಂಗದ ವೇಗ ಹೆಚ್ಚಿ ಸರಕಾರ ಟೇಕಾ- ಆಗುವುದು ಅಷ್ಟು ಸುಲಭ ಸಾಧ್ಯವಲ್ಲ.

ಚುನಾವಣೆಗೆ ಟಿಕೆಟ್ ಪಡೆಯುವುದಕ್ಕೇ ಈ ಪಾಟಿ ಕರ್ಮಕಾಂಡಗಳು ನಡೆಯುತ್ತಿರುವುದನ್ನು ನೋಡುತ್ತಿದ್ದರೆ ಇನ್ನು ಇಂಥವರಿಂದ ಅದೆಂಥಾ ಸರಕಾರ ನೆಟ್ಟಗೆ ನಿಲ್ಲುತ್ತದೆ ಎಂಬುದೇ ಶೋಚನೀಯ. ಕಳೆದ ೨೦ ದಿನಗಳ ಟಿಕೆಟ್ ಘೋಷಣೆಯ
ದಿನಗಳ ಜತೆಯಲ್ಲೇ ಐಪಿಲ್ ಎಂಬ ಕುದುರೆ ವ್ಯಾಪಾರದ ಕ್ರಿಕೆಟ್ ಕೂಡ ನಡೆಯುತ್ತಿದೆ. ಈ ಪಂದ್ಯಾವಳಿಯ ತಂಡಗಳಿಗಾಗಿ ಬಲಿಷ್ಠ ಮತ್ತು ದುಬಾರಿ ಆಟಗಾರರು ಹಾರಾಜಾಗಿ ಕೋಟ್ಯಂತರ ರುಪಾಯಿಗೆ ಮಾರಾಟವಾಗಿದ್ದಾರೆ.

ಒಂದು ತಂಡದಲ್ಲಿ ಸಿಗದಿದ್ದರೆ ಇನ್ನೊಂದು ತಂಡಕ್ಕೆ ಮಾರಾಟವಾಗಿದ್ದಾರೆ. ಆಟಗಾರರನ್ನು ಬೆಲೆವೆಣ್ಣಿನಂತೆ ಖರೀದಿಸುವ ತಂಡದ ಮಾಲಿಕರು ನಂತರ ಮೈದಾನಕ್ಕಿಳಿಸಿ ಬೇಜವಾಬ್ದಾರಿ ಮಜಾ ಅನುಭವಿಸಿ ಅದಕ್ಕಿಂತ ಹೆಚ್ಚಾಗಿ ಹಣ ಮಾಡಿಕೊಳ್ಳುತ್ತಾರೆ. ದೇಶಗಳ ನಡುವೆ ನಡೆಯುವ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸ್ವಾಭಿಮಾನ ದೇಶಾಭಿಮಾನ ವಿರುತ್ತದೆ. ಆದರೆ ಐಪಿಎಲ್‌ನಂಥ ಪಂದ್ಯಾವಳಿಗಳು ನೋಡುಗರಿಗಷ್ಟು ಮನರಂಜನೆ ಸಿಗಬಹುದು.

ಆದರೆ ಇದರ ಹಿಂದಿನ ಉದ್ದೇಶ ಕಂಪನಿಗಳು ಉದ್ಧಾರವಾಗುವುದು, ಮ್ಯಾಚ್ ಫಿಕ್ಸಿಂಗು, ಬೆಟ್ಟಿಂಗ್‌ಗಳಂಥ ಉದ್ದೇಶವೇ ಆಗಿರುತ್ತದೆ. ಈ ಕುರಿತು ಆಸ್ಟ್ರೇಲಿಯಾದ ಖ್ಯಾತ ಆಟಗಾರ ಆಡಂ ಗಿಲ್‌ಕ್ರಸ್ಟ್ ಐಪಿಎಲ್ ಪಂದ್ಯಗಳು ಶೇ. ೮೦ ರಷ್ಟು
ಪೂರ್ವಯೋಜಿತ. ಇದರಲ್ಲಿ ಸೋಲು ಗೆಲುವು ಪೂರ್ವ ನಿರ್ಧಾರಿತ ಎಂದಿರುವುದು ಗಮನಾರ್ಹ. ಥೇಟು ಐಪಿಎಲ್ ಅನ್ನು ನಾಚಿಸುವಂತೆ ಇಂದಿನ ಚುನಾವಣೆಯ ಪ್ರಕ್ರಿಯೆಗಳು ನಡೆಯುತ್ತಿರುವುದು ದುರದೃಷ್ಟಕರ.

ಐಪಿಎಲ್‌ನಲ್ಲಿ ಯಾವ ರಾಜ್ಯದ ಆಟಗಾರ ಯಾವ ತಂಡದಲ್ಲಿದ್ದಾನೆ, ಯಾವ ದೇಶದ ಆಟಗಾರ ಯಾವ ತಂಡದಲ್ಲಿದ್ದಾನೆ ಎಂಬ ಗೊಂದಲದಂತೆ ಚುನಾವಣಾ ದೊಂಬರಾಟದಲ್ಲಿಯೂ ಯಾವ ಪಕ್ಷದ ನಿಷ್ಠಾವಂತ ಅಭ್ಯರ್ಥಿ ನಾಳೆ ಇನ್ನಾವ ಪಕ್ಷದಲ್ಲಿದ್ದಾನೆಂಬ ಕನ್ ಫ್ಯೂಸನ್ ಸೃಷ್ಟಿಯಾಗುತ್ತಿದೆ. ಇಂಥ ಗೊಂದಲಗಳ ಆದಿಪುರುಷನಂತೆ ಸಾಕ್ಷಾತ್ ಜಗದೀಶ್‌ ಶೆಟ್ಟರ್ ಅವರಂಥ ಮುತ್ಸದ್ದಿಗಳೇ ಕಂಗೊಳಿಸುತ್ತಿದ್ದಾರೆಂದರೆ ಇನ್ನು ಚಿಲ್ಲರೆಗಳು ಯಾವ ಲೆಕ್ಕಾ? ಅರಸೀಕೆರೆಯ ಎನ್.ಆರ್. ರಮೇಶ್ ಎಂಬ ವ್ಯಕ್ತಿ ಯಡಿಯೂರಪ್ಪನವರ ಸಂಬಂಽಯೆಂದು ಹೇಳಲಾಗುತ್ತಿದೆ.

ಆದರೆ ಈಗ ಆತ ಜೆಡಿಎಸ್ ಸೇರಿದ್ದಾನೆ. ಬಿಜೆಪಿಯ ಹಿರಿಯ ಎನಿಸಿದ್ದ ಆಯನೂರು ಮಂಜುನಾಥ್ ಸಂಸದನಾಗಿ ಮೇಲ್ಮನೆಯ ಸದಸ್ಯನಾಗಿ ಈಗ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ. ಬಿಜೆಪಿ-ಕಾಂಗ್ರೆಸ್‌ನಲ್ಲಿದ್ದ ಅನಿಲ್‌ಲಾಡ್ ಇಂದು ಜೆಡಿಎಸ್ ಅಭ್ಯರ್ಥಿ. ಸಜ್ಜನ ರಾಜಕಾರಣಿ ಎನಿಸಿದ್ದ ವೈಎಸ್‌ವಿ ದತ್ತ ಅವರ ಮೂರು ದಿನದ ಬಾಳು ಅವರ ಮೇಲಿನ ಕನಿಕರಕ್ಕಿಂತ ಅಸಹ್ಯವನ್ನು ಹುಟ್ಟುಹಾಕಿದೆ. ಹೀಗೆ ಯಾವನಿಗೂ ಯಾವ ಪಕ್ಷವೂ ಶಾಶ್ವತವಲ್ಲ. ಇದೆಲ್ಲಕ್ಕಿಂತ ವಿಚಿತ್ರವೆಂದರೆ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯದ್ದು.

ದಾಖಲೆ ಮತಗಳಿಂದ ಗೆದ್ದಿದ್ದರೂ, ತನ್ನ ಮನೆಗೆ ಬೆಂಕಿಬಿದ್ದು ಅದಕ್ಕೆ ನ್ಯಾಯ ದೊರಕದಿದ್ದರೂ ಪಕ್ಷತೊರೆಯದೆ ಟಿಕೆಟ್ ಕೇಳಿದ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವುದು. ಇದಕ್ಕಿಂತಲೂ ವಿಚಿತ್ರವೆಂದರೆ ಇದೇ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒಂದೊಮ್ಮೆ ಬಿಜೆಪಿಯಲ್ಲಿದ್ದು ಆಗ ಟಿಕೆಟ್ ನಿರಾಕರಿಸಿದ್ದರೆ ಏನಾಗುತ್ತಿತ್ತು ಹೇಳಿ? ಅಖಂಡ ದಲಿತ ಸಂಘಟನೆಗಳಿಂದ ಹಿಡಿದು ಅಮಿನಮಟ್ಟುವರೆಗೂ ಬಿಜೆಪಿಯನ್ನು ದಲಿತ ವಿರೋಧಿ ಎಂದು ದೂಷಿಸುತ್ತಿದ್ದರು.

ಅಖಂಡ ದಲಿತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಸರಿಯಾದ ಹೊಡೆತ ನೀಡುವಂಥ ಬ್ಯಾಟಿಂಗ್-ಬೌಲಿಂಗ್ ಮಾಡುತ್ತಿದ್ದರು. ಅಖಂಡ ಅವರ ದುರಾದೃಷ್ಟವೆಂದರೆ ಕಾಂಗ್ರೆಸ್ ಕೊನೆಯ ದಿನದವರೆಗೂ ಟಿಕೆಟ್ ನೀಡದಿದ್ದರೂ ಅಖಂಡ ದಲಿತ ಸಂಘಟನೆ ಗಳು ಮುಖಂಡರು ಬೀದಿಗೆ ಬಂದು ಕಾಂಗ್ರೆಸ್ ಅನ್ನು ವಿಚಾರಿಸಿಕೊಳ್ಳಲಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೆಟ್ಟರ್
ಮತ್ತು ಶಿರಸಿಯ ವಿಶ್ವೇಶ್ವರ ಕಾಗೇರಿಯವರ ಫೋಟೋ ಹಾಕಿ ಇಬ್ಬರಿಗೂ ವಯಸ್ಸು ೬೭ ಲಿಂಗಾಯಿತ ಶೆಟ್ಟರ್‌ಗೆ ಟಿಕೆಟ್ ಇಲ್ಲ, ಬ್ರಾಹ್ಮಣ ಕಾಗೇರಿಗೆ ಟಿಕೆಟ್ ಇದು ಲಿಂಗಾಯಿತ ವಿರೋಧಿ ಬಿಜೆಪಿ ಎಂದು ಸಮಯಸಾಧಕ ಅವಿವೇಕಿಗಳು
ರೋದಿಸುತ್ತಿದ್ದಾರೆ.

ಇನ್ನು ಮತ್ತೊಂದು ಅನೀತಿ ಯೆಂದರೆ ತನ್ನ ಯೋಗ್ಯತೆ ಅರ್ಹತೆ ಸಾಧನೆ ಮೂಲಕ ಗೆಲ್ಲುವುದಕ್ಕಿಂತ ಮತ್ತೊಬ್ಬನನ್ನು
ಸೋಲಿಸುವ ಉದ್ದೇಶಪೂರ್ವಕ ಪ್ರಯತ್ನಗಳು ಈ ಚುನಾವಣೆಯಲ್ಲಿ ನಡೆಯುತ್ತಿದೆ. ಮುಸಲ್ಮಾನರ ಹಿತರಕ್ಷಣೆಗಾಗಿ ತುಡಿಯುತ್ತಿರುವ ಸಿದ್ದರಾಮಯ್ಯರನ್ನು ಸೋಲಿಸಲು ಸೋಮಣ್ಣ, ಡಿ.ಕೆ. ಶಿವಕುಮರ್‌ರನ್ನು ಸೋಲಿಸುವುದಕ್ಕೆ ಆರ್. ಅಶೋಕ್ ಹೀಗೆ ಮತ್ಸರಕ್ಕೂ ಚುನಾವಣೆ ವೇದಿಕೆಯಾಗಿದೆ.

ಇದರ ಜತೆಗೇ ಒಳಒಪ್ಪಂದಗಳ ಮಾತೂ ಕೇಳಿಬರುತ್ತಿದೆ. ಯಡಿಯೂರಪ್ಪನವರು ಮತ್ತು ವಿಜಯೇಂದ್ರ ಸೇರಿಕೊಂಡು ಸೋಮಣ್ಣರನ್ನು ಎರಡೂ ಕ್ಷೇತ್ರಗಳಲ್ಲಿ ಸೋಲಿಸುವ ತಂತ್ರವಿದೆ ಎಂದೂ, ಹಾಗೆಯೇ ಚಾಮರಾಜನಗರದಲ್ಲಿ ಸೋಮಣ್ಣ ಗೆಲ್ಲಲು ಸಿದ್ದರಾಮಯ್ಯ ಸಹಕರಿಸುವುದು, ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುವುದಕ್ಕೆ ಸೋಮಣ್ಣ ಸಹಕರಿಸುವುದು ಹೀಗೆ ಅನೇಕ ಕ್ಷೇತ್ರಗಳಲ್ಲಿ ಒಳಒಪ್ಪಂದಗಳು ನಡೆಯುವ ಮಾತು ಕೇಳಿಬರುತ್ತಿದೆ.

ಇಂಥವುಗಳಿಗೆಲ್ಲಾ ಬಲಿಯಾಗವುದಕ್ಕೆ ಮತದಾರರೇನು ದಡ್ಡರೇ. ಇಂಥ ಅನೈತಿಕ ಒಪ್ಪಂದಗಳ ಮೇಲೆ ಪವಿತ್ರವಾದ ಚುನಾವಣೆ ನಡೆಯುವುದು ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನವಲ್ಲವೇ? ಮೊದಲಿಗೆ ನಮ್ಮ ಮತದಾರರಲ್ಲಿ ಚುನಾವಣೆಯ ಮೇಲಿರುವ ಅಭಿಪ್ರಾಯ ಬದಲಾಗಬೇಕು. ಎಲ್ಲಿಯವರೆಗೂ ಜಾತಿ-ಆಮಿಷಗಳಿಗೆ ತನ್ನ ಮತವನ್ನು ಮಾರಿಕೊಳ್ಳುತ್ತಾನೆಯೋ ಅಲ್ಲಿಯವರೆಗೂ ರಾಜಕೀಯದ ಐಪಿಎಲ್ ಪಂದ್ಯಾವಳಿಗಳನ್ನು ವ್ಯರ್ಥವಾಗಿ ನೋಡಿಕೊಂಡು ಬರಬೇಕಾಗುತ್ತದೆ.

ಆದ್ದರಿಂದ ಜಾಗೃತಿಯನ್ನು ಪ್ರಜ್ಞಾವಂತ ಮತದಾರರೊಂದಿಗೆ ಪತ್ರಿಕೋದ್ಯಮವೂ ಅಭ್ಯರ್ಥಿಯ ಎದುರಾಳಿಯಂತೆ ಕಾರ್ಯ
ನಿರ್ವಹಿಸಬೇಕಿದೆ. ಅಭ್ಯರ್ಥಿ ಯಾವ ಜಾತಿಯವನಾಗಲಿ, ಹಣ ಹಂಚಲಾಗದ ಬಡವನಾಗಿರಲಿ ಆತನಲ್ಲಿ ಪ್ರಾಮಾಣಿಕತೆ ನಿಯತ್ತು, ಶಾಸಕನಾಗಿ ತೋರಬಹುದಾದ ಪ್ರಜ್ಞೆ ಪ್ರಬುದ್ಧತೆ ಇದ್ದರೆ ಸಾಕು. ಅಂಥವನಿಗೆ ಪ್ರಾಮಾಣಿಕವಾದ ಮತದಾನ
ಮಾಡಿದರೆ ಆ ಕ್ಷೇತ್ರದಲ್ಲಿ ಶಾಸೀಜಿ, ಸರದಾರ್ ವಲ್ಲಭಬಾಯಿ ಪಟೇಲ್, ಅಂಬೇಡ್ಕರ್, ವಾಜಪೇಯಿ, ಅಬ್ದುಲ್‌ಕಲಾಂ ಅವರ ಆತ್ಮ ಸುಳಿದಾಡಿದಂತೆ.