Thursday, 19th September 2024

ದೊಡ್ಡ ಹಬ್ಬ ಬರುತ್ತಿದೆ; ಸಿದ್ದರಾಗಿ !

ವಿದೇಶವಾಸಿ

dhyapaa@gmail.com

ದೇವರ ದರ್ಶನಕ್ಕೆ, ಪ್ರಸಾದಕ್ಕೆ, ಸಿನಿಮಾ ಟಿಕೆಟ್ಟಿಗೆ, ವಿಮಾನ ಯಾನದ ಬೋರ್ಡಿಂಗ್ ಪಾಸ್‌ಗೆ ಕಿಂಚಿತ್ತೂ ಬೇಸರ ವಿಲ್ಲದೇ ಸರತಿಯ ಸಾಲಿನಲ್ಲಿ ನಿಲ್ಲುವವರಿಗೆ ಮತ ಚಲಾಯಿಸಲು ಸಾಲಿನಲ್ಲಿ ನಿಲ್ಲಲು ನಾಚಿಕೆಯೇ? ಸರಕಾರ ಮತ್ತು ಅದರ ನೀತಿ ನಮ್ಮ ಜೀವನದಲ್ಲಿ ಅವಿಭಾಜ್ಯವಾಗಿದೆ.

ಇದೇ ಬರುವ ಮೇ ಹತ್ತನೆಯ ತಾರೀಖಿಗೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ. ಬೇರೆ ಯಾವುದೇ ಹಬ್ಬಗಳಿಗಿಂತ ಈ ಹಬ್ಬ ವಿಭಿನ್ನವಾದದ್ದರಿಂದ ಈ ಹಬ್ಬವನ್ನು ಬಿಡುವುದಕ್ಕೆ ಮನಸ್ಸಾಗುವುದಿಲ್ಲ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವ ಹೊಂದಿ ರುವ ಎಲ್ಲ ದೇಶಗಳಲ್ಲಿಯೂ ಎಲ್ಲ ಜಾತಿ, ಮತ-ಧರ್ಮವನ್ನೂ ಮರೆತು ಆಚರಿಸುವ ಹಬ್ಬ ಇದು. ಕಳೆದ ಎರಡೂವರೆ ದಶಕ ದಲ್ಲಿ ಎರಡು ಸಲ ಮಾತ್ರ ಅನಿವಾರ್ಯ ಕಾರಣಗಳಿಂದ ಈ ಹಬ್ಬದಿಂದ ನಾನು ವಂಚಿತನಾಗಿದ್ದೇನೆ.

ಲೋಕಸಭೆ ಚುನಾವಣೆ ಯಾಗಲಿ, ವಿಧಾನಸಭೆ ಚುನಾವಣೆಯಾಗಲಿ, ನಾನಂತೂ ಮತ ಚಲಾಯಿಸಲು ಹಾಜರ್. ಮತ ಚಲಾಯಿಸಲು ಬಂದಿದ್ದೇನೆ ಎಂದು ತಿಳಿದರೆ ಸಾಕು, ಕೆಲವರು ಆಶ್ಚರ್ಯಪಡುತ್ತಾರೆ. ಒಂದು ಓಟು ಹಾಕಲೆಂದು ಅಷ್ಟು ದೂರದಿಂದ ಬಂದಿರಾ? ಅಷ್ಟೆಲ್ಲ ಖರ್ಚು ಮಾಡಿ ಬಂದು ಓಟು ಹಾಕಬೇಕಾ? ಇದಕ್ಕೆಲ್ಲ ನಿಮಗೆ ರಜೆ ಸಿಗತ್ತಾ? ನೀವು ವಿದೇಶವಾಸಿ, ನಮ್ಮ ದೇಶದಲ್ಲಿ ಯಾರು ಚುನಾಯಿತರಾದರೇನು? ಯಾರು ಸರಕಾರ ರಚಿಸಿದರೇನು? ಇಲ್ಲಿಯ ರಾಜಕೀಯ ದಿಂದ ನಿಮಗೇನು ಲಾಭ? ಇವೆಲ್ಲ ಪ್ರತಿ ಬಾರಿಯೂ ಅಪ್ಪಳಿಸುವ ಪ್ರಶ್ನೆಗಳು.

ನಾನು ಬರುತ್ತಿರುವುದು ನನ್ನ ಕರ್ತವ್ಯ ನಿರ್ವಹಿಸಲು, ನನ್ನ ಅಮೂಲ್ಯವಾದ ಮತದ ಹಕ್ಕು ಚಲಾಯಿಸಲು, ಪ್ರಜಾಪ್ರಭುತ್ವದ ಮಹೋನ್ನತ ಉತ್ಸವ ಆಚರಿಸಲು. ಅಷ್ಟಕ್ಕೂ ಮತದಾನ ಎನ್ನುವ ಪದವನ್ನು ನಾನು ಒಪ್ಪುವುದಿಲ್ಲ. ಅದು ನಮ್ಮ ಹಕ್ಕು, ನಮ್ಮ ಕರ್ತವ್ಯ. ನಾವು ನಮ್ಮ ಹಕ್ಕನ್ನು ಚಲಾಯಿಸಿದರೆ ಅಥವಾ ಕರ್ತವ್ಯವನ್ನು ನಿಭಾಯಿಸಿದರೆ ಅದು ದಾನವಾಗುವುದು ಹೇಗೆ? ದಾನ ಮಾಡುವುದರ ಹಿಂದೆ ಒಂದು ಕನಿಕರ ಇರಬೇಕು, ಕರುಣಾಭಾವ ಇರಬೇಕು.

ನಾವು ಯಾರದ್ದೋ ಮೇಲಿನ ಕನಿಕರದಿಂದ ಓಟು ನೀಡುವುದಿಲ್ಲ. ಆಯಿತು, ಒಂದು ವೇಳೆ ದಾನ ಮಾಡುತ್ತೇವೆ ಎಂದೇ ಇಟ್ಟುಕೊಂಡರೆ ಇದು ನಿಜಕ್ಕೂ ಶ್ರೇಷ್ಠವಾದ ದಾನ. ಅನ್ನದಾನ, ರಕ್ತದಾನ, ವಿದ್ಯಾದಾನ, ಆಯಾ ಸಂದರ್ಭಕ್ಕೆ ತಕ್ಕಂತೆ ಶ್ರೇಷ್ಠದಾನ ಎಂದು ಹೇಳುತ್ತೇವೆ. ಆದರೆ, ಅನ್ನ ದಾನ ಮಾಡಿದರೆ ಅದು ಆ ಹೊತ್ತಿಗೆ, ರಕ್ತದಾನ ಮಾಡಿದರೆ ಅದು ಆ ವ್ಯಕ್ತಿಗೆ, ಕೆರೆ-ಕಟ್ಟೆ ಕಟ್ಟಿಸಿದರೆ ಅದು ಆ ಊರಿಗೆ, ವಿದ್ಯಾದಾನ ಒಬ್ಬನ ಭವಿಷ್ಯಕ್ಕೆ, ಮತದಾನ ಮಾಡಿದರೆ ಅದು ದೇಶದ ಭವಿಷ್ಯಕ್ಕೆ.
ಒಂದು ವಿಷಯ ಸ್ಪಷ್ಟಪಡಿಸಿಯೇ ಮುಂದುವರಿಯುತ್ತೇನೆ.

ನಮಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ, ರಾಜಕೀಯದಿಂದ ನಾವು ದೂರ, ಇತ್ಯಾದಿ ಹೇಳುವವರು ನಮ್ಮಲ್ಲಿ ಬೇಕಾದಷ್ಟಿ ದ್ದಾರೆ. ಒಂದು ವಿಷಯ ತಿಳಿದಿರಲಿ, ನಾವು ರಾಜಕೀಯದಿಂದ ಎಷ್ಟೇ ದೂರ ಉಳಿದರೂ, ರಾಜಕೀಯ ನಮ್ಮಿಂದ ದೂರವಿರಲು ಸಾಧ್ಯವೇ ಇಲ್ಲ. ಬೇರೆ ರಾಜ್ಯದ್ದು ಬಿಡಿ, ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ದೇಶದ ಪ್ರಧಾನಿ, ರಾಷ್ಟ್ರಪತಿ ಯಾರು ಎಂಬ
ಸಾಮಾನ್ಯ ವಿಷಯವನ್ನೂ ತಿಳಿಯದವರು ಕೆಲವರಿದ್ದಾರೆ.

ಆದರೆ, ಇವರು ತಿಳಿಯದ ಅದೇ ಮುಖ್ಯಮಂತ್ರಿಯೋ, ಪ್ರಧಾನಿಯೋ ತೆಗೆದುಕೊಳ್ಳುವ ನಿರ್ಣಯದ ಪ್ರಭಾವ ಅವರ ಮೇಲೆ ಆಗದಿರಲು ಸಾಧ್ಯವೇ? ಒಂದು ದೇಶ ಅಥವಾ ರಾಜ್ಯ ತೆಗೆದುಕೊಳ್ಳುವ ನಿರ್ಣಯ, ಕಾನೂನು ಅಥವಾ ನೀತಿಯ ಬದಲಾವಣೆ, ಡೀಸೆಲ್-ಪೆಟ್ರೋಲ್-ವಿದ್ಯುತ್ ಬೆಲೆ, ಧಾನ್ಯಗಳ ಬೆಲೆ, ಆಮದು ಸುಂಕದಲ್ಲಿ, ತೆರಿಗೆಯಲ್ಲಿ ಬದಲಾವಣೆ, ಯಾವುದೇ ಆದರೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಅನುಭವಿಸಲೇ ಬೇಕಾಗುತ್ತದೆ. ಸಾಮಾನ್ಯ ಪ್ರಜೆಯ ಮೇಲಷ್ಟೇ ಅಲ್ಲ, ಹೊಸ್ತಿಲು ದಾಟದೆ ಮನೆಯಲ್ಲಿ ಕುಳಿತವನ ಮೇಲೂ ಇದರ ಪ್ರಭಾವ ಇದ್ದೇ ಇರುತ್ತದೆ.

ವಿದೇಶದಲ್ಲಿರುವವರೂ ಇದಕ್ಕೆ ಹೊರತಲ್ಲ. ನಾವು ದೇಶದಿಂದ ಹೊರಗಿದ್ದಿರಬಹುದು, ಆದರೆ ನಮ್ಮನ್ನು ಹಡೆದವರು, ಒಡಹುಟ್ಟಿದವರು ಸಂಬಂಧಿಗಳು ಅಲ್ಲೇ ಇರುತ್ತಾರಲ್ಲ. ದೇಶದಲ್ಲಿ ವಾಸಿಸುವವರು ವಿದೇಶದಲ್ಲಿ ಇರುವವರನ್ನು ಅವಲಂಬಿಸಿ
ಕೊಂಡಿದ್ದರೆ ಅದರ ಪರಿಣಾಮವನ್ನು ವಿದೇಶ ದಲ್ಲಿದ್ದವರೂ ಅನುಭವಿಸಬೇಕಾಗುತ್ತದೆ. ಅಷ್ಟೆಲ್ಲ ಯಾಕೆ? ಒಮ್ಮೆ ಭಾರತಕ್ಕೆ ಹೋಗಿ ಬರುವ ವಿಚಾರ ಮಾಡಿದರೂ ಸಾಕು, ಟಿಕೆಟ್ ದರ, ಏರ್‌ಪೋರ್ಟ್ ತೆರಿಗೆ, ಹೀಗೆ ಅನೇಕ ವಿಷಯಗಳು ನಮ್ಮ ಮೇಲೂ ಪ್ರಭಾವ ಬೀರುತ್ತವೆ.

ನಾವು ಬಿಡುತ್ತೇವೆ ಎಂದರೂ ನಮ್ಮನ್ನು ಬಿಡದ ಮಾಯೆ ಎಂದು ಏನಾದರೂ ಇದ್ದರೆ, ಅದರಲ್ಲಿ ರಾಜಕೀಯವೂ ಒಂದು. ಹಾಗಿರುವಾಗ ಅದರಲ್ಲಿ ಸಕ್ರಿಯವಾಗಿ ಭಾಗವಹಿಸದಿದ್ದರೂ, ನಮ್ಮ ಕ್ಷೇತ್ರದ ಅಭ್ಯರ್ಥಿ ಯಾರು, ನಮ್ಮ ಸಮಸ್ಯೆಗಳೇನು ಇತ್ಯಾದಿ ವಿಷಯಗಳ ಕುರಿತು ಕಿಂಚಿತ್ತಾದರೂ ತಿಳಿದಿರುವುದು ಒಳಿತು. ಅದಕ್ಕಾಗಿ ನಾನು ಕೇವಲ ಮತ ಚಲಾಯಿಸಲು ಮಾತ್ರ ಹೋಗುವುದಿಲ್ಲ, ಪುರುಸೊತ್ತಿದ್ದರೆ ಜನರನ್ನು ಸಂಪರ್ಕಿಸಿ ಮತ ಚಲಾಯಿಸುವಂತೆ ಹುರುದುಂಬಿಸುತ್ತೇನೆ.

ಯಾವ ಪಕ್ಷಕ್ಕೇ ಆಗಲಿ, ಯಾವುದೇ ಅಭ್ಯರ್ಥಿಗೇ ಆಗಲಿ, ಮತ ಚಲಾಯಿಸಿ ಎಂದು ಕೇಳಿಕೊಳ್ಳುತ್ತೇನೆ. ಅದು ಭಾರತದ ಪ್ರಜಾತಂತ್ರಕ್ಕೆ ನನ್ನದೊದು ಸಣ್ಣ ಕೊಡುಗೆ ಎಂದು ಭಾವಿಸುತ್ತೇನೆ. ಕಳೆದ ಬಾರಿ ಬೆಂಗಳೂರಿನಲ್ಲಿ ಕೇವಲ ಐವತ್ತೆರಡು
ಪ್ರತಿಶತ ಜನ ಮಾತ್ರ ಮತ ಚಲಾಯಿಸಿದ್ದರು. ಅದಕ್ಕೂ ಹಿಂದಿನ ಬಾರಿ ಶೇಕಡಾ ನಲವತ್ತೇಳರಷ್ಟಾಗಿತ್ತು. ಐದು ಪ್ರತಿಶತ ಹೆಚ್ಚಾಗಿದ್ದಕ್ಕೆ ನಗಬೇಕೋ, ಸುಮಾರು ಐವತ್ತು ಪ್ರತಿಶತ ಮತದಾನ ಆಗದೇ ಇದ್ದಿದ್ದಕ್ಕೆ ಅಳಬೇಕೋ ಗೊತ್ತಿಲ್ಲ. ಇದನ್ನು ನೋಡಿದಾಗ ನಮ್ಮಲ್ಲಿ ಮೂಡುವ ಕಟ್ಟಕಡೆಯ ಪ್ರಶ್ನೆ; ನಮ್ಮವರು ಮತದಾನವನ್ನು ಯಾಕೆ ಗಂಭೀರವಾಗಿ ಪರಿಗಣಿಸು ವುದಿಲ್ಲ? ನಮ್ಮಲ್ಲಿ ಎಷ್ಟೋ ಜನರಿಗೆ ಚುನಾವಣೆಯ ದಿನವೆಂದರೆ ರಜಾದಿನ ಅಷ್ಟೇ.

ನಮ್ಮ ಸರಕಾರ ಪ್ರತಿಯೊಬ್ಬ ಮತದಾರನ ಮೇಲೆ ಸುಮಾರು ನಲವತ್ತೈದು ರೂಪಾಯಿ ಖರ್ಚು ಮಾಡುತ್ತದೆ. ಕಳೆದ ಐದು ವರ್ಷ ಬೇಕಾ ಬಿಟ್ಟಿ ಸರಕಾರವನ್ನೋ, ರಾಜಕಾರಣಿಗಳನ್ನೋ, ಪಕ್ಷವನ್ನೋ ದೂರುವ, ಮುಂದಿನ ಐದು ವರ್ಷವೂ ಅದನ್ನೇ ಮಾಡುವ ಕೆಲವರು ಚುನಾವಣೆಯ ದಿನ ಮಾತ್ರ ಕುಂಭಕರ್ಣನ ನಿದ್ರೆಯಲ್ಲಿರುತ್ತಾರೆ. ತಮ್ಮ  ಕನಿಷ್ಠ ಕರ್ತವ್ಯಪ್ರಜ್ಞೆಯನ್ನೂ ಹೊಂದಿರದ ಇವರು ರಾಜಕೀಯದ ಬಗ್ಗೆ ಮಾತನಾಡಲು ಎಷ್ಟು ಅರ್ಹರು ಎಂಬ ಪ್ರಶ್ನೆ ಮೂಡುವುದು ಸಹಜ.

ಹೇಗೆ ಟಿಕೆಟ್ ಪಡೆಯದೆ ಬಸ್ಸಿನಲ್ಲಾಗಲೀ ಟ್ರೇನಿನಲ್ಲಾಗಲೀ ಪ್ರಯಾಣಿಸಲು ಸಾಧ್ಯವಿಲ್ಲವೋ ಹಾಗೆಯೇ ಮತ ಚಲಾಯಿಸ ದವನಿಗೆ ಸರಕಾರದ ಬಗ್ಗೆ, ಶಾಸಕ-ಸಂಸದರ ಬಗ್ಗೆ ಮಾತನಾಡುವ ಯಾವ ಅಧಿಕಾರವೂ ಇಲ್ಲ ಎನ್ನುವುದು ನನ್ನ
ಅಭಿಪ್ರಾಯ. ಒಂದು ರೀತಿಯಲ್ಲಿ ಅದು ಬ್ಯಾಂಕಿನಲ್ಲಿ ಖಾತೆ ತೆರೆಯದೇ ಸಾಲ ಕೇಳಿದಂತೆ. ಒಂದು ವರ್ಷದಲ್ಲಿ ತಮ್ಮ ಆಪ್ತರ ಮದುವೆ, ಮುಂಜಿ, ಶಷ್ಠ್ಯಬ್ದಿ, ವಿವಾಹದ ರಜತಮಹೋತ್ಸವಕ್ಕೆಂದು ನೂರಾರು ಮೈಲಿ ಓಡಾಡಿ, ಸಾವಿರಾರು ರುಪಾಯಿ ಖರ್ಚು ಮಾಡುವವರು ಮತದಾನದ ದಿನ ಲಕ್ವ ಹೊಡೆದವರಂತೆ ಬಿದ್ದಿರುತ್ತಾರೆ.

ನೂರು ಮೀಟರ್ ದೂರದಲ್ಲಿರುವ ಮತಗಟ್ಟೆಗೆ ಹೋಗದೆ ಮನೆಯಲ್ಲೇ ಬಿದ್ದಿರುತ್ತಾರೆಂದರೆ ಅಂಥವರಿಗೆ ಏನು ಹೇಳೋಣ? ಚುನಾವಣೆಯಲ್ಲಿ ಸರಿಯಾದ ಜನರು ಸರಿಯಾಗಿ ಮತ ಚಲಾಯಿಸದೇ ಇದ್ದಲ್ಲಿ ಸರಿಯಾದ ವ್ಯಕ್ತಿ ಆರಿಸಿಬರುವುದಾದರೂ ಹೇಗೆ? ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಹೀರೋಗಳು. ಬೆಳಗ್ಗೆ ಎದ್ದು ಮುಖ ತೊಳೆ ಯುವುದಕ್ಕೂ ಮೊದಲು ಇವರ ಚಟುವಟಿಕೆ ಆರಂಭವಾದರೆ, ರಾತ್ರಿ ಮಲಗುವಾಗ ಮೊಬೈಲ್ ತಾನಾಗಿಯೇ ಕೈಯಿಂದ ಜಾರಿ ಮುಖದ ಮೇಲೆ ಬೀಳುವವರೆಗೂ ಇವರ ಸಂಭಾಷಣೆಗಳು, ಪೋಸಟ್‌ಗಳು, ಫಾರ್ವರ್ಡೆಡ್ ಮೆಸೇಜ್‌ಗಳು ನಿರಂತರ ಸಾಗುತ್ತಿರುತ್ತವೆ.

ಎಲ್ಲೆಲ್ಲೋ ಬಿದ್ದಿದ್ದ, ಬೇಕು-ಬೇಡದ ಕಸದಂಥ ಸಂದೇಶವನ್ನೆಲ್ಲ ಸುರುಗುತ್ತಾರೆ. ಚುನಾವಣೆಯ ದಿನ ಮತ ಚಲಾಯಿಸು ವಂತೆ ಬೇರೆಯವರನ್ನು ಹುರಿದುಂಬಿಸಿದರೆ ಅದೇ ತಾವು ಮಾಡುವ ದೊಡ್ಡ ಸಮಾಜಸೇವೆ ಎಂಬ ಭ್ರಮೆಯಲ್ಲಿರುವ ಇಂಥವರು
ಓಟು ಹಾಕಲು ಮಾತ್ರ ಹೋಗುವುದಿಲ್ಲ. ಓಟು ಹಾಕುವುದು ಬಿಡಿ, ಮತದಾನದ ಬಗ್ಗೆ ಭಾಷಣ ಬಿಗಿಯುವ ಇವರ ಬಳಿ ವೋಟರ್ ಐಡಿಯೂ ಇರುವುದಿಲ್ಲ.

ನಾನೊಬ್ಬ ಮತ ಹಾಕದಿದ್ದರೇನು? ನೂರಾರು ಜನರನ್ನು ಮತ ಹಾಕುವಂತೆ ಹುರಿದುಂಬಿಸುತ್ತೇನಲ್ಲ ಎಂಬ ಭ್ರಮಾ ಲೋಕ ದಲ್ಲಿಯೇ ಇವರು ಸಂತುಷ್ಟರಾಗಿರುತ್ತಾರೆ. ಒಂದು ಸಣ್ಣ ಕಥೆಯಿದೆ. ಒಂದು ಊರಿನಲ್ಲಿ ಒಬ್ಬ ರಾಜ ಒಂದು ಕೊಪ್ಪರಿಗೆ ಯನ್ನಿಟ್ಟು, ಹಸು ಸಾಕಿದವರೆಲ್ಲ ಆ ಕೊಪ್ಪರಿಗೆಯಲ್ಲಿ ಒಂದು ಸೇರು ಹಾಲು ಹಾಕುವಂತೆ ಹೇಳಿದನಂತೆ. ಬೇರೆಯವರೆಲ್ಲ ಹಾಲು ಹಾಕುತ್ತಾರಲ್ಲ, ನಾನೊಬ್ಬ ಹಾಲು ಹಾಕದಿದ್ದರೆ ಯಾರಿಗೆ ಅರ್ಥವಾಗುತ್ತದೆ ಎಂದು ಭಾವಿಸಿದ ಒಬ್ಬ, ಹಾಲಿನ ಬದಲು ಒಂದು ಸೇರು ನೀರು ಹಾಕಿದನಂತೆ. ಸಾಯಂಕಾಲ ರಾಜ ಬಂದು ಕೊಪ್ಪರಿಗೆಯನ್ನು ನೋಡಿದಾಗ ಅದರಲ್ಲಿ ನೀರು ಮಾತ್ರ ತುಂಬಿ ಕೊಂಡಿತ್ತಂತೆ. ಹಾಗಾಗಿದೆ ನಮ್ಮ ಪರಿಸ್ಥಿತಿ!

ಅಷ್ಟಕ್ಕೂ ಅಂಥವರಿಗೆ ಯಾವ ತೊಂದರೆ ಎಂದೇ ಅರ್ಥವಾಗುವುದಿಲ್ಲ. ದೇವರ ದರ್ಶನಕ್ಕೆ, ಪ್ರಸಾದಕ್ಕೆ, ಸಿನಿಮಾ ಟಿಕೆಟ್ಟಿಗೆ, ವಿಮಾನ ಯಾನದ ಬೋರ್ಡಿಂಗ್ ಪಾಸ್‌ಗೆ ಕಿಂಚಿತ್ತೂ ಬೇಸರವಿಲ್ಲದೇ ಸರತಿಯ ಸಾಲಿನಲ್ಲಿ ನಿಲ್ಲುವವರಿಗೆ ಮತ ಚಲಾಯಿಸಲು ಸಾಲಿನಲ್ಲಿ ನಿಲ್ಲಲು ನಾಚಿಕೆಯೇ? ಅವರ ಗಮನಕ್ಕಿರಲಿ, ಸರಕಾರ ಮತ್ತು ಅದರ ನೀತಿ ನಮ್ಮ ಜೀವನದಲ್ಲಿ ಅವಿಭಾಜ್ಯವಾಗಿದೆ.

ನಾವು ಪ್ರತಿನಿತ್ಯ ಕುಡಿಯುವ ನೀರಿನಿಂದ ಹಿಡಿದು ತೊಡುವ ಬಟ್ಟೆಯವರೆಗೆ, ಓಡಾಡಲು ಬೇಕಾಗುವ ರಸ್ತೆಯಿಂದ ಹಿಡಿದು ಪೆಟ್ರೋಲಿನವರೆಗೆ, ಪಡೆಯುವ ಶಿಕ್ಷಣ, ಬಳಸುವ ವಿದ್ಯುತ್ತು, ತರಕಾರಿ ಪ್ರತಿಯೊಂದರಲ್ಲಿಯೂ ಸರಕಾರದ ನೀತಿ ನಿಯಮ ಗಳಿರುತ್ತವೆ. ಈಗ ನೂರಕ್ಕೆ ಅರವತ್ತು- ಅರವತ್ತೈದರಷ್ಟು ಮತದಾನವಾಯಿತು ಎಂದಿಟ್ಟು ಕೊಳ್ಳೋಣ. ಅದರಲ್ಲಿ ನೋಟಾ, ಮಾನ್ಯತೆ ಇಲ್ಲದ ಮತಗಳ ಸಂಖ್ಯೆಯನ್ನು ಪರಿಗಣಿಸದೇ ಇದ್ದರೂ, ಅಧಿಕಾರಕ್ಕೆ ಬಂದ ಪಕ್ಷ ನೂರಕ್ಕೆ ಐವತ್ತು ಪ್ರತಿಶತ ಮತ ಪಡೆದರೂ ಒಟ್ಟೂ ಮತಗಳಿಕೆಯಲ್ಲಿ ಮೂವತ್ತೈದಕ್ಕಿಂತ ಕಡಿಮೆಯಾಯಿತಲ್ಲ? ಪ್ರಾಥಮಿಕ ಶಿಕ್ಷಣದ ಕಲಿಕೆಯಲ್ಲೂ ಉತ್ತೀರ್ಣರಾಗಲು ಶೇಕಡಾ ಮೂವತ್ತೈದು ಬೇಕು, ಸರಕಾರದ ನೀತಿ-ನಿಯಮಗಳನ್ನು ನಿರ್ಮಿಸುವವರಿಗೆ ನಾವು ಕೊಡುವುದು ಅದಕ್ಕಿಂತ ಕಡಿಮೆ ಎಂದರೆ ಎಷ್ಟು ಸರಿ? ಜತೆಗೆ, ಮತದಾನ ಮಾಡಿದವನಿಗೂ, ಮಾಡದವನಿಗೂ ಒಂದೇ ರೀತಿಯ ಸೌಲಭ್ಯ ಏಕೆ? ಮತದಾನ ಮಾಡದವರ ರೇಶನ್ ಕಾರ್ಡನ್ನೋ, ಆಧಾರ್ ಕಾರ್ಡನ್ನೋ, ಡ್ರೈವಿಂಗ್ ಲೈಸೆನ್ಸನ್ನೋ ಯಾಕೆ ರದ್ದುಗೊಳಿಸಬಾರದು? ವೋಟರ್ ಐಡಿಯನ್ನು ಆಧಾರ ಕಾಡ್ ನೊಂದಿಗೆ ಲಿಂಕ್ ಮಾಡಿ, ಅವರಿಗೆ ಸಿಗುವ ಸಬ್ಸಿಡಿ ಯನ್ನು ಯಾಕೆ ಕಡಿತಗೊಳಿಸ ಬಾರದು? ಸಂಬಳ, ಬಡ್ತಿಯಲ್ಲಿ ಯಾಕೆ ಕಡಿತಗೊಳಿಸಬಾರದು? ಬೆಲ್ಜಿಯಮ್, ಆಸ್ಟ್ರೇಲಿಯಾ, ಅರ್ಜೆಂಟೈನಾ ಸೇರಿದಂತೆ ಪ್ರಪಂಚದ ಸುಮಾರು ಹತ್ತು ದೇಶಗಳಲ್ಲಿ ಮತದಾನ ಕಡ್ಡಾಯವಾಗಿದೆ.

ಭಾರತದಲ್ಲಿಯೂ ಮತದಾನವನ್ನು ಯಾಕೆ ಕಡ್ಡಾಯ ಮಾಡಬಾರದು ಎನ್ನುವ ಪ್ರಶ್ನೆ ಮೂಡುವುದು ಸಹಜ. ಕೊನೆಯ ಮಾತು; ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರಲ್ಲಿ ಭ್ರಷ್ಟರೇ ಆದರೂ, ದುಷ್ಟರೇ ಆದರೂ, ಸೋಮಾರಿಯೇ ಆದರೂ, ನೀವು ಮಾತ್ರ ಯಾರು ಹಿತವರು ನಿಮಗೆ ಈ ಮೂವರೊಳಗೆ ಎಂದು ನಿರ್ಧರಿಸಿ, ಒಂದು ಮತ ಚಲಾಯಿಸಿ ನಿಮ್ಮದೇ ಉತ್ಸವದಲ್ಲಿ ಭಾಗಿಯಾಗಿ.

ಬರುತ್ತಿರುವ ದೊಡ್ಡ ಹಬ್ಬಕ್ಕೆ ಸಿದ್ಧರಾಗಿ. ಒಮ್ಮೆ ತಪ್ಪಿಸಿಕೊಂಡರೆ ಮತ್ತೆ ಆ ಅವಕಾಶಕ್ಕಾಗಿ ನೀವು ಐದು ವರ್ಷ ಕಾಯ ಬೇಕಾಗುತ್ತದೆ ಎಂಬುದು ನೆನಪಿರಲಿ.