Sunday, 24th November 2024

ಕಿಡ್ನಿಸ್ಟೋನ್‌ ಆಗಲು ಕಾರಣವೇನು? ಇದಕ್ಕೆ ಪರಿಹಾರವೇನು?

ಡಾ ಮೋಹನ್ ಕೇಶವಮೂರ್ತಿ, ನಿರ್ದೇಶಕರು ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ, ಫೋರ್ಟಿಸ್‌ ಆಸ್ಪತ್ರೆ.

೧. ಕಿಡ್ನಿ ಸ್ಟೋನ್‌ ಆಗಲು ಕಾರಣವೇನು?
ಕಿಡ್ನಿ ಸ್ಟೋನ್‌ ಆಗಲು ಎರಡು ಕಾರಣಗಳಿವೆ, ಮೊದಲನೆಯದಾಗಿ, ಹೆಚ್ಚು ಕ್ಯಾಲ್ಸಿಯಂ, ಫಾಸ್ಟೇಟ್‌ ಹಾಗೂ ಯೂರೇಟ್‌ ಇರುವ ಆಹಾರಗಳನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಸ್ಟೋನ್‌ ಆಗುವ ಸಾಧ್ಯತೆ ಇದೆ. ಈ ಆಹಾರಗಳು ಅಜೀರ್ಣವನ್ನುಂಟು ಮಾಡುತ್ತವೆ. ಈ ಅಜೀರ್ಣವೂ ಕ್ರಮೇಣ ಕಿಡ್ನಿಯಲ್ಲಿ ಕಲ್ಲಾಗಿ ಉತ್ಪತ್ತಿಯಾಗುತ್ತವೆ. ಜೊತೆಗೆ, ಕಡಿಮೆ ನೀರು ಕುಡಿಯುವುದರಿಂದ ಈ ಆಹಾರದ ಅಜೀರ್ಣತೆ ಇನ್ನಷ್ಟು ಹೆಚ್ಚಿಸಲಿದೆ. ಮತ್ತೊಂದು ಕಾರಣವೆಂದರೆ, ಕಿಡ್ನಿ ನ್ಯೂನತೆ. ಕೆಲವರಿಗೆ ಅನುವಂಶಿಕವಾಗಿ ಅಥವಾ ಹುಟ್ಟುತ್ತಲೇ ಕಿಡ್ನಿ ನ್ಯೂನತೆ ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಮೂತ್ರ ಪಿಂಡದ ಫಿಲ್ಟರ್‌ ಭಾಗವೂ ಸರಿಯಾಗಿ ಕೆಲಸ ನಿರ್ವಹಿಸದೇ ಅಲ್ಲಿಯೇ ಹೆಚ್ಚು ಸಂಗ್ರಹವಾಗುತ್ತದೆ. ಇದು ಕ್ರಮೇಣ ಕಲ್ಲಾಗಿ ಮಾರ್ಪಡಲಿದೆ. ಈ ಎರಡು ಪ್ರಮುಖ ಕಾರಣದಿಂದ ಕಿಡ್ನಿಸ್ಟೋನ್‌ ಆಗಲಿದೆ.

೨. ಇದು ಯಾವ ವಯಸ್ಸಿನವರಲ್ಲಿ ಹೆಚ್ಚು?

ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆಯೇ? ಪುರುಷರಾ ಅಥವಾ ಮಹಿಳೆಯರಲ್ಲಾ? ಕಿಡ್ನಿಸ್ಟೋನ್‌ಗೆ ಯಾವುದೇ ವಯಸ್ಸಿನ ಹಂಗಿಲ್ಲ. ಮಾಲ್‌ನ್ಯೂಟ್ರೀಷಿಯನ್‌ ಸಮಸ್ಯೆ ಇರುವ ಮಕ್ಕಳಲ್ಲಿ ಕಿಡ್ನಿಸ್ಟೋನ್‌ ಆಗುವ ಸಾಧ್ಯತೆ ಇರುತ್ತದೆ. ಇನ್ನು ದೊಡ್ಡವರಲ್ಲಿ ಅವೈಜ್ಞಾನಿಕ ಡಯೆಟ್‌ ಹಾಗೂ ಸೂಕ್ತ ಪೌಷ್ಠಿಕಯುಕ್ತ ಆಹಾರ ಸೇವಿಸದೇ ಇರುವುದು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದರಿಂದ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗಲಿದೆ. ಇದಕ್ಕೆ ಪುರುಷ ಹಾಗೂ ಮಹಿಳೆ ಎನ್ನುವ ಭೇದವಿಲ್ಲ.

೩. ಕಿಡ್ನಿಸ್ಟೋನ್‌ನ ಲಕ್ಷಣಗಳು ಏನು?
ಕಿಡ್ನಿಸ್ಟೋನ್‌ ಸಾಮಾನ್ಯವಾಗಿ ಸಹಿಸಲಸಾಧ್ಯವಾದ ಪಕ್ಕೆ ನೋವನ್ನು ಹೊಂದಿರುತ್ತದೆ. ೧೨೦ ಡಿಗ್ರಿಂತ ಹೆಚ್ಚಿನ ಜ್ವರ, ವಾಂತಿ, ವಾಕರಿಕೆ, ಮೂತ್ರದಲ್ಲಿ ಸೋಂಕು, ಮೂತ್ರ ಮಾಡುವ ವೇಳೆ ಉರಿ ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳು. ಕೆಲವರು ಈ ಪಕ್ಕೆ ನೋವನ್ನು ಗ್ಯಾಸ್ಟ್ರಿಕ್‌ ಎಂದು ಅಪಾರ್ಥ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಮಾತ್ರೆ ತೆಗೆದುಕೊಳ್ಳುತ್ತಿರುತ್ತಾರೆ. ಇದು ಕಲ್ಲಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಕ್ಕೆ ನೋವು ಕಾಣಿಸಿಕೊಂಡು, ಅತಿಯಾದ ಜ್ವರವಿದ್ದರೆ, ಅನುಮಾನವಿಲ್ಲದೇ ಕಿಡ್ನಿಸ್ಟೋನ್‌ ಪರೀಕ್ಷೆ ಮಾಡಿಸಿಕೊಳ್ಳಿ.

೪. ಕಿಡ್ನಿಸ್ಟೋನ್‌ನ ಅಪಾಯದ ಘಟ್ಟ ಯಾವುದು?
ಸಾಮಾನ್ಯವಾಗಿ ೫ ಮಿಲಿಮೀಟರ್‌ಗಾತ್ರದಲ್ಲಿ ಕಿಡ್ನಿ ಸ್ಟೋನ್‌ ಇದ್ದರೆ, ಇದು ಅಷ್ಟೇನು ಅಪಾಯವಲ್ಲದಿದ್ದರೂ, ಈ ಹಂತ ದಲ್ಲಿಯೇ ಕಲ್ಲನ್ನು ಕರುಗಿಸುವ ಆಥವಾ ಅವನ್ನು ಮೂತ್ರದ ಮೂಲಕ ಹೋಗಿಸುವ ಪ್ರಯತ್ನ ಮಾಡಲೇಬೇಕು. ಕೆಲವರಿಗೆ ಈ ಸ್ಟೋನ್‌ ೧ ಸೆ.ಮೀವರೆಗೂ ಬೆಳೆಯಲಿದೆ. ಈ ಹಂತಕ್ಕೆ ತಲುಪಿದಾಗಿ ಇದಕ್ಕೆ ಶಸ್ತ್ರಚಿಕಿತ್ಸೆ ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಟೆಕ್ನಾಲಜಿ ಬಂದಿದ್ದು, ಆ ಮೂಲಕವೂ ಕಿಡ್ನಿ ಸ್ಟೋನ್‌ನನ್ನು ಹೋಗಲಾಡಿಸಬಹುದು. ಸಣ್ಣ ಗಾತ್ರದಲ್ಲಿ ಸ್ಟೋನ್‌ ಇದ್ದರೆ ಪಕ್ಕೆ ನೋವು ಅತಿಯಾಗಿ ಕಾಣಿಸಿಕೊಳ್ಳುತ್ತದೆ. ಕಲ್ಲಿನ ಗಾತ್ರ ಬೆಳೆದಂತೆ ನೋವು ಇರುವುದಿಲ್ಲ. ಇದು ಅತ್ಯಂತ ಅಪಾಯಕಾರಿ, ಕೆಲವೊಮ್ಮೆ ಇದು ಕಿಡ್ನೀ ವೈಫಲ್ಯಕ್ಕೂ ಕಾರಣವಾಗಬಹುದು. ಹೀಗಾಗಿ ಪಕ್ಕೆ ನೋವು ಕಾಣಿಸಿಕೊಂಡ ಕೂಡಲೇ ಕಿಡ್ನಿಸ್ಟೋನ್‌ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕ.

೫.ಇದಕ್ಕೆ ಚಿಕಿತ್ಸೆ ಏನು?
ಅತ್ಯಂತ ಸಾಮಾನ್ಯ ಚಿಕಿತ್ಸೆ ಎಂದರೆ, ಪ್ರತಿನಿತ್ಯ ನಾಲ್ಕರಿಂದ ಐದು ಲೀಟರ್‌ ನೀರು ಕುಡಿಯುವುದು. ಹೌದು, ನೀರು ಕುಡಿಯು ವುದರಿಂದ ಕಿಡ್ನಿ ಸಂಪೂರ್ಣ ಶುದ್ಧವಾಗಲಿದೆ. ಒಂದು ವೇಳೆ ಕಿಡ್ನಿನ್ಯೂನತೆ ಇರುವವರಿಗೂ ಸ್ಟೋನ್‌ ಉಂಟಾಗುವುದು ಅತ್ಯಂತ ಕಡಿಮೆ. ನೀರು ಅಥವಾ ಜ್ಯೂಸ್‌ಗಳನ್ನು ಸೇವಿಸಬಹುದು. ಇದು ಆರೋಗ್ಯಕ್ಕೂ ಹೆಚ್ಚು ಉಪಯುಕ್ತ. ಇದರ ಜೊತೆಗೆ, ಆಹಾರ ಕ್ರಮದಲ್ಲಿ ಕ್ಯಾಲ್ಸಿಯಂ, ಫಾಸ್ಟೇಟ್‌ ಹಾಗೂ ಯೂರೇಟ್‌ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಕಿಡ್ನಿ ಸ್ಟೋನ್‌ ಕಾಣಿಸಿಕೊಳ್ಳುವುದಿಲ್ಲ. ಈಗಾಗಲೇ ಕಿಡ್ನಿಸ್ಟೋನ್‌ ಆಗಿದ್ದಲ್ಲಿ, ವೈದ್ಯರ ಬಳಿತೆರಳಿ, ಸ್ಕ್ಯಾನ್‌ ಮಾಡಿಸಿ, ಕಲ್ಲಿನ ಗಾತ್ರದ ಬಗ್ಗೆ ತಿಳಿದುಕೊಳ್ಳಿ, ಗಾತ್ರವನ್ನು ಆಧಾರಿಸಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಮತ್ತೊಮ್ಮೆ ಕಿಡ್ನಿ ಸ್ಟೋನ್‌ ಆಗದಂತೆ ಕಾಪಾಡಿಕೊಳ್ಳಲು, ಈ ಮೊದಲು ಕಿಡ್ನಿಸ್ಟೋನ್‌ ಆಗಲು ಕಾರಣವೇನೆಂಬುದನ್ನು ತಿಳಿದುಕೊಂಡು ಮತ್ತೊಮ್ಮೆ ಆ ತಪ್ಪು ಆಗದಂತೆ ಆರೋಗ್ಯದ ಮೇಲೆ ಎಚ್ಚರಿಕೆ ವಹಿಸುವುದು ಒಳಿತು. ಪದೇ ಪದೇ ಸ್ಟೋನ್‌ ಆಗುವುದರಿಂದ ಕಿಡ್ನಿ ವೈಫಲ್ಯದ ಅಪಾಯ ಎದುರಾಗಬಹುದು ಅಥವಾ ಕಿಡ್ನಿಯು ಕಳಪೆಯಾಗಿ ಕೆಲಸ ನಿರ್ವಹಿಸಬಹುದು.