Saturday, 23rd November 2024

ಕೋಪ ಎಂಬುದು ಕೀಳು ಅನರ್ಥ ಸಾಧನ !

ಹಿಂದಿರುಗಿ ನೋಡಿದಾಗ

ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸುತ್ತಿರುವುದು ಸಂಜಯನಿಗೆ ಕಾಣುತ್ತಿದೆ. ಅದನ್ನು
ಸಂಜಯನು ಅಂಧ ಅರಸ ಧೃತರಾಷ್ಟ್ರನಿಗೆ ವರ್ಣಿಸುತ್ತಿದ್ದಾನೆ. ಸಂಜಯನು ಅರ್ಜುನನ ದೇಹ-ಮನಸ್ಥಿತಿಯನ್ನು ವಿವರಿಸುವ ಪರಿಯನ್ನು ಗಮನಿಸೋಣ. ಸಂಜಯನು ಹೇಳಿದ. ರಣಭೂಮಿಯಲ್ಲಿ ಅರ್ಜುನನು ಹೀಗೆ ಹೇಳಿ ತನ್ನ ಬಿಲ್ಲು ಬಾಣಗಳನ್ನು ಬದಿಗಿಟ್ಟು ದುಃಖ ಪರವಶನಾಗಿ ರಥದಲ್ಲಿ ಕುಳಿತುಕೊಂಡ (೧-೪೬) ಅವನ ಹೃದಯದಲ್ಲಿ ಕರುಣೆಯಿತ್ತು.

ಅವನು ವಿಷಣ್ಣ ಮನಸ್ಕನಾಗಿದ್ದ (೨-೦೧) ಅಯ್ಯೋ! ನಾವೆಲ್ಲರೂ ಸೇರಿ ಎಂತಹ ಪಾಪ ಕಾರ್ಯಗಳನ್ನು ಮಾಡಲು ಸಿದ್ಧತೆಗಳನ್ನು ನಡೆಸಿದ್ದೇವೆ ಎನ್ನುವುದು ನನಗೆ ಆಶ್ಚರ್ಯವನ್ನು ಉಂಟು ಮಾಡುತ್ತಿದೆ. ರಾಜ್ಯ ಸುಖದ ಲೋಭದಿಂದ ನಾವು ನಮ್ಮ ಸ್ವಜನರನ್ನೇ ಕೊಲ್ಲಲು ಮನಸ್ಸು ಮಾಡಿದ್ದೇವೆ (೧-೪೪) ಮಾಧವ! ಇಂತಹ ಆತತಾಯಿಗಳನ್ನು ಕೊಲ್ಲುವುದರಿಂದ ನಮಗೆ ಪಾಪವೇ ಅಂಟಿಕೊಳ್ಳುತ್ತದೆ. ಆದುದರಿಂದ ಧೃತರಾಷ್ಟ್ರನ ಮಕ್ಕಳನ್ನು ಹಾಗೂ ಗೆಳೆಯರನ್ನು ನಾನು ಕೊಲ್ಲುವುದು ಸರಿಯಲ್ಲ.

ನಮ್ಮ ಬಂಧು ಗಳನ್ನೇ ಕೊಲ್ಲುವುದರ ಮೂಲಕ ನಾವು ಏನನ್ನು ತಾನೆ ಪಡೆಯಲು ಸಾಧ್ಯ? ನಾವು ಹೇಗೆ ತಾನೆ
ಸುಖವಾಗಿರಲು ಸಾಧ್ಯ? (೧-೩೬) ಯುದ್ಧದಲ್ಲಿ ನನ್ನ ಬಂಧುಗಳನ್ನೇ ಕೊಲ್ಲುವುದರಿಂದ ನನಗೆ ಯಾವ ಶ್ರೇಯಸ್ಸೂ ದೊರೆಯುವುದಿಲ್ಲ. ಯುದ್ಧವಾದ ಮೇಲೆ ನನಗೆ ದೊರೆಯುವ ವಿಜಯವು, ಸುಖವೂ ನನಗೆ ಬೇಡವಾಗಿದೆ (೧-೩೧) ಯುದ್ಧ ಮಾಡಲು ಉತ್ಸಾಹವಿಲ್ಲದ ನನ್ನನ್ನು, ಶಸ್ತ್ರವಿಲ್ಲದ ನನ್ನನ್ನು, ಶಸ್ತ್ರ ಸಜ್ಜಿತರಾದ ಧೃತರಾಷ್ಟ್ರಪುತ್ರರು ಕೊಂದರೂ ಪರವಾಗಿಲ್ಲ!

ಅದರಿಂದ ನನಗೆ ಒಳ್ಳೆಯದೇ ಆಗುತ್ತದೆ (೧-೪೫) ಹೀಗೆ ಹೇಳಿದ ಅರ್ಜುನನು ಯುದ್ಧಭೂಮಿಯಲ್ಲಿ ತನ್ನ
ಬಿಲ್ಲು ಬಾಣಗಳನ್ನು ಪಕ್ಕಕ್ಕಿಟ್ಟು ದುಃಖಪರವಶನಾಗಿ, ರಥದಲ್ಲಿ ಕುಳಿತುಕೊಂಡು ಬಿಟ್ಟನು (೧-೪೬) ಎಂದು ಸಂಜಯನು ವಿವರಿಸಿದ. ಅರ್ಜುನನು ಸಮಸ್ತ ಕುರುವಂಶವನ್ನು ಹಾಗೂ ೧೧ ಅಕ್ಷೌಹಿಣಿ ಸೈನ್ಯವನ್ನು ನಾಶಮಾಡಿ ರಾಜ್ಯವನ್ನು ಗೆಲ್ಲಬೇಕಾಗಿದೆ ಎನ್ನುವ ವಾಸ್ತವತೆಯನ್ನು ಅರ್ಥ ಮಾಡಿಕೊಂಡಿದ್ದಾನೆ. ಈ ಎಲ್ಲ ಜನರ ಸಮಾಧಿಯ ಮೇಲೆ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸುವ ವಿಚಾರವು ಅವನಲ್ಲಿ ಅತೀವ ವಿಷಾದ ವನ್ನು ಉಂಟು ಮಾಡಿದೆ.

ಅವನ ಮನಸ್ಸಿನಲ್ಲಿ ಕೇವಲ ಋಣಾತ್ಮಕ ಭಾವನೆಗಳು ತುಂಬಿವೆ. ಮಧುಮೇಹ ಬಂದಿದೆ ಎಂಬ ಸುದ್ದಿಯನ್ನು ಕೇಳುತ್ತಿರುವಂತೆಯೇ, ಅರ್ಜುನನು ತನ್ನ ಬಿಲ್ಲುಬಾಣಗಳನ್ನು ಬದಿಗಿಟ್ಟನೋ, ಹಾಗೆಯೇ ನಾವು ನಮ್ಮ ಪುರುಷ ಪ್ರಯತ್ನವನ್ನು ಬದಿಗಿಟ್ಟುಬಿಡುತ್ತೇವೆ. ನಮ್ಮ ಇಡೀ ಮನಸ್ಸೂ ವಿಷಾದದಿಂದ ತುಂಬಿಹೋಗುತ್ತದೆ. ಅರ್ಜುನನ ಮನಸ್ಸಿನಲ್ಲಿ ಮೂಡಿದ ಋಣಾತ್ಮಕ ಭಾವನೆಗಳ ಸಾರಾಂಶವು ನಮಗೆ ಮನವರಿಕೆಯಾಗುತ್ತದೆ.

ಹೆಚ್ಚೂ ಕಡಿಮೆ ಇಂತಹುದೇ ಋಣಾತ್ಮಕ ಭಾವನೆಗಳು ಮಧುಮೇಹ ಬಂದಿದೆ ಎಂಬ ಸುದ್ದಿಯನ್ನು ಕೇಳುತ್ತಲೇ ನಮ್ಮ ಮನಸ್ಸಿನಲ್ಲೂ ಮೂಡಬಹುದು. ನಮಗೆ ಬದುಕೇ ಬೇಡವೆನಿಸಬಹುದು. ಮನುಷ್ಯನಾಗಿ ಹುಟ್ಟಿದ್ದೇನೆ. ಕಷ್ಟಪಟ್ಟು ದುಡಿದಿದ್ದೇನೆ. ಹಣವನ್ನು ಸಂಪಾದಿಸಿದ್ದೇನೆ. ಆ ಹಣದಿಂದ ನನಗಿಷ್ಟವಾದದ್ದನ್ನು ನಾನು ತಿನ್ನಬೇಕು, ನನಗಿಷ್ಟವಾದದ್ದನ್ನು ನಾನು ಕುಡಿಯಬೇಕು, ನನಗೆ ಖುಷಿ ಕೊಡುವ ರೀತಿಯಲ್ಲಿ ಬದುಕನ್ನು ನಡೆಸಬೇಕು, ಸ್ವಚ್ಛಂದವಾಗಿ ಎಲ್ಲ ಸುಖವನ್ನು ಪಡೆಯಬೇಕು ಎಂದು ಅತೀವ ಆಸೆಯಾಗುತ್ತಿದೆ.

ನಾನು ದುಡಿದ ಹಣವನ್ನು ನನಗಿಷ್ಟ ಬಂದ ಹಾಗೆ ಖರ್ಚು ಮಾಡಿ, ನನಗೆ ಬೇಕಾದ ಹಾಗೆ ಸುಖದ ಬದುಕನ್ನು
ನಡೆಸುವ ಹಕ್ಕು ನನಗಿದೆ. ಆದರೆ ಈ ಮಧುಮೇಹವು ಎಲ್ಲಕ್ಕೂ ಬೇಲಿಯನ್ನು ಹಾಕಿಬಿಟ್ಟಿದೆ. ನಾನು ಬದುಕಿ ದ್ದೂ ಏನು ಪ್ರಯೋಜನ! ಕೈಯಲ್ಲಿರುವ ಸಿಹಿಯನ್ನು ಬಾಯಿಗಿಟ್ಟುಕೊಳ್ಳಲಾರೆ! ಎಂತಹ ಬಾಳು ನನ್ನದು. ಛೇ! ನಾನು ಬದುಕಿದ್ದೂ ಸತ್ತಂತೆ! ಇತ್ಯಾದಿ ನಕಾರಾತ್ಮಕ ಭಾವನೆಗಳು ನಮ್ಮ ಮನಸ್ಸಿನಲ್ಲಿ ಸುಳಿಯುತ್ತವೆ.

ಅರ್ಜುನನು ತಾನು ೧೧ ಅಕ್ಷೌಹಿಣಿ ಸೇನೆಯೊಡನೆ ಸಮಸ್ತ ಕೌರವವಂಶವನ್ನು ನಿರ್ಮೂಲನ ಮಾಡ ಬೇಕಾಗಿದೆ ಎಂದು ವಿಚಾರವು ಮನದಟ್ಟಾದ ಕೂಡಲೇ, ಅವನ ಮನಸ್ಸಿನಲ್ಲಿ ದುಃಖ, ಭಯ, ನಿರಾಸೆ ಹಾಗೂ ವಿಷಾದಗಳು ಮೂಡಿದವು. ನಮಗೆ ಮಧುಮೇಹವು ಬಂದಿದೆ ಎಂಬ ಸತ್ಯವು ಮನವರಿಕೆಯಾಗುತ್ತಿರು ವಂತೆಯೇ, ನಮ್ಮ ಮನಸ್ಸಿನಲ್ಲೂ ಸಹ ಅರ್ಜುನನ ಭಾವನೆಗಳೇ ಮೂಡಿದರೆ ಆಶ್ಚರ್ಯವನ್ನು
ಪಡ ಬೇಕಾಗಿಲ್ಲ. ನಮಗೆ ಮಧುಮೇಹವು ಬಂದಿದೆ ಎಂದು ಗೊತ್ತಾಗುತ್ತಿರುವಂತೆಯೇ ನಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರತಿಕ್ರಿಯೆಯೆಂದರೆ – ನಿರಾಕರಣೆ.

ನನಗೆ ಮಧುಮೇಹವು ಬರಲು ಸಾಧ್ಯವೇ ಇಲ್ಲ. ಏಕೆಂದರೆ ನಮ್ಮ ವಂಶದಲ್ಲಿ ಯಾರಿಗೂ ಮಧುಮೇಹವಿಲ್ಲ. ಸಿಹಿ ಪದಾರ್ಥಗಳನ್ನು ಸ್ವಲ್ಪ ಹೆಚ್ಚಿಗೆ ತಿನ್ನುತ್ತೇನೆ ಎನ್ನುವುದು ನಿಜ. ಕೆಲಸದ ಒತ್ತಡದಲ್ಲಿ ನಿತ್ಯ ವ್ಯಾಯಾ ಮಕ್ಕೆ ಅವಕಾಶವಿಲ್ಲ ಎನ್ನುವುದೂ ನಿಜ. ಅಷ್ಟು ಮಾತ್ರಕ್ಕೆ ನನಗೆ ಮಧುಮೇಹವು ಬರಬೇಕೆ? ನನ್ನ ಅಣ್ಣ ನನಗಿಂತಲೂ ಹೆಚ್ಚಿ ತಿನ್ನುತ್ತಾನೆ. ಹೆಚ್ಚು ಒತ್ತಡದ ಕೆಲಸದಲ್ಲಿ ತೊಡಗಿದ್ದಾನೆ. ಅವನು ಚೆನ್ನಾಗೇ ಇದ್ದಾ ನಲ್ಲ!

ಆದರೆ ನನಗೆ ಮಾತ್ರ ಮಧುಮೇಹವು ಹೇಗೆ ಬರಲು ಸಾಧ್ಯ? ಒಂದು ನ್ಯಾಯ ಬೇಡವೆ? ಎಂದು ನಿರಾ ಕರಿಸುತ್ತೇವೆ. ಹೀಗೆಯೇ ಒಂದಷ್ಟು ಕಾಲ ನಿರಾಕರಿಸುತ್ತಾ, ನಮಗೆ ನಾವೇ ಮೋಸವನ್ನು ಮಾಡಿ ಕೊಳ್ಳುತ್ತೇವೆ. ಕೋಪ: ನಮಗೆ ವಾಸ್ತವದಲ್ಲಿ ಮಧುಮೇಹವು ಬಂದಿರುವುದು ಸತ್ಯ ಎಂಬ ತಿಳಿವು ಬರಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ನಿರಾಕರಣೆಯ ಹಂತವು ಮುಗಿದು, ವಾಸ್ತವತೆಯ ಕಠೋರತೆಯು ಎದುರು ನಿಂತಾಗ ನಮ್ಮಲ್ಲಿ ಅತೀವ ಕೋಪವು ಕಾಣಿಸಿಕೊಳ್ಳುತ್ತದೆ.

ಕೋಪವನ್ನು ಮಾಡಿಕೊಳ್ಳುವುದು ದೊಡ್ಡ ವಿಷಯ ಅಲ್ಲವೇ ಅಲ್ಲ. ಯಾರ ಜೊತೆಯಲ್ಲಿ ಕೋಪವನ್ನು ಮಾಡಿಕೊಳ್ಳಬೇಕು, ಏಕೆ ಕೋಪವನ್ನು ಮಾಡಿಕೊಳ್ಳಬೇಕು, ಯಾವ ಪ್ರಮಾಣದಲ್ಲಿ ಆ ಕೋಪವನ್ನು ವ್ಯಕ್ತಪಡಿಸಬೇಕು, ಹೇಗೆ ಕೋಪವನ್ನು ವ್ಯಕ್ತಪಡಿಸಬೇಕು, ಯಾವಾಗ ಕೋಪವನ್ನು ತೋರಬೇಕು, ಯಾವ ಉದ್ದೇಶಕ್ಕಾಗಿ ಕೋಪವನ್ನು ತೋರಬೇಕು, ಕೋಪದಿಂದ ಏನನ್ನು ತಾನೆ ಸಾಧಿಸಲು ಹೊರಟಿದ್ದೇವೆ ಇತ್ಯಾದಿ ಪ್ರಶ್ನೆಗಳು ನಮ್ಮ ವಿವೇಚನೆಗೆ ಹೊಳೆಯುವುದೆ ಇಲ್ಲ.

ಆದರೆ ಕೋಪವು, ಪ್ರೆಶರ್ ಕುಕರಿನಲ್ಲಿರುವ ಹೆಚ್ಚುತ್ತಿರುವ ಆವಿಯಂತೆ, ನಮ್ಮ ಮನಸ್ಸಿನಲ್ಲಿ ಕುದಿಯುತ್ತಲೇ ಏರುತ್ತದೆ. ನಿರಂತರವಾಗಿ ಏರುವ ಕೋಪವು ಒಳಗೊಳಗೇ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ರಕ್ತಸಕ್ಕರೆಯು ಏರುತ್ತಲೇ ಹೋಗುತ್ತದೆ. ನಮ್ಮ ಆರೋಗ್ಯವು ಮತ್ತಷ್ಟು ಬಿಗಡಾಯಿಸುತ್ತದೆ. ಕೋಪದಲ್ಲಿ ಕೊಯ್ದಕೊಂಡ ಮೂಗು ಶಾಂತವಾದ ಮೇಲೆ ಬರುವುದಿಲ್ಲ. ಕೋಪಕ್ಕೆ ತುತ್ತಾಗಿ ವಿವೇಚನೆಯನ್ನು ಕಳೆದು ಕೊಂಡಾಗ, ಯಾವ ಅನಾಹುತ ಬೇಕಾದರೂ ಸಂಭವಿಸಬಹುದು. ಈ ಅಪಾಯ ಸಂಭವ  ಧ್ಯತೆಯನ್ನು ಭಗವದ್ಗೀತೆಯು ಬಹಳ ಸೊಗಸಾಗಿ ಬಿಡಿಸಿ ಬಿಡಿಸಿ ಹೇಳುತ್ತದೆ.

ಕ್ರೋಧದಿಂದ ಸಂಮೋಹವುಂಟಾಗುತ್ತದೆ. ಸಂಮೋಹದಿಂದ ಸ್ಮೃತಿ ವಿಭ್ರಮೆಯಾಗುತ್ತದೆ. ಸ್ಮೃತಿ ಭ್ರಮೆ ಯಿಂದ ಬುದ್ಧಿ ನಾಶವಾಗುತ್ತದೆ. ಬುದ್ಧಿನಾಶವಾದಾಗ ಮನುಷ್ಯನು ಪತನ ಹೊಂದುತ್ತಾನೆ (೨-೬೩). ಮಧುಮೇಹವು ನಮಗೆ ಬಂದಿದೆ ಎಂದಕೂಡಲೇ ಇದು ನನಗೆ ಯಾಕೆ ಬಂತು? ನಾನೇನು ಅಂತಹ ತಪ್ಪನ್ನು ಮಾಡಿದ್ದೇನೆ? ಎಂದು ಉದ್ವೇಗಕ್ಕೆ ಒಳಗಾಗುತ್ತೇವೆ. ಜಿಡ್ಡು ಪದಾರ್ಥ ತಿನ್ನಬೇಡ, ಮಸಾಲೆ ಪದಾರ್ಥ
ತಿನ್ನಬೇಡ ಎಂದು ಅಮ್ಮ ಹೇಳಿದರೆ, ಎಲ್ಲಿಲ್ಲದ ಕೋಪವು ಆವರಿಸುತ್ತದೆ. ಬೆಳಗ್ಗೆ ಎದ್ದು ಒಂದು ನಾಲ್ಕು ಕಿಲೋಮೀಟರ್ ನಡಿ ಎಂದು ಹೆಂಡತಿ ಏಳಿಸಿದರೆ ಬೆಚ್ಚಗೆ ಮಲಗಿರುವ ತನ್ನ ಮೇಲೆ ಎಲ್ಲಿಲ್ಲದ ಹೊಟ್ಟೆಕಿಚ್ಚು ನಿನಗೆ.

ನೆಮ್ಮದಿಯಿಂದ ಮಲಗೋಕೂ ಬಿಡೋದಿಲ್ಲ ನೀನು ಎಂದು ಮೂಗಿನ ಮೇಲಿನ ಕೋಪವನ್ನು ಹೆಂಡತಿಯ ಮೇಲೆ ಹರಿಹಾಯಬಹುದು. ಊಟಕ್ಕೆ ೨೦ ನಿಮಿಷಗಳ ಮೊದಲೇ ಇನ್ಸುಲಿನ್ ಇಂಜೆಕ್ಷನ್ ತಗೋ ಎಂದರೆ ಓಹೋ… ಯಮಧರ್ಮನ ಮೊಮ್ಮೊಗಳು ಬಂದು ಬಿಟ್ಟಳು ನನಗೆ ಶಿಕ್ಷೆ ಕೊಡೋಕೆ… ಬೇಕಾದರೆ ನೀನೇ
ಚುಚ್ಕೋ ಎಂದು ಹೆಂಡತಿಯ ಮೇಲೆ ಗಂಡನು ಕೋಪಾಗ್ನಿ ಪರ್ವತವನ್ನೇ ಸೋಟಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.

ತನಗೆ ಮಧುಮೇಹ ಬಂದಿದೆ ಎನ್ನುವ ವಾಸ್ತವತೆಯನ್ನು ಒಪ್ಪಿಕೊಳ್ಳಲಾಗದೇ ಎಲ್ಲರ ಮೇಲೂ ಕೋಪವನ್ನು ತೋರುತ್ತಿದ್ದಾನೆ. ದೇವರು ತನಗೆ ಮೋಸ ಮಾಡಿದ ಎಂದು ಕಾಣದ ಆ ದೈವದ ಮೇಲೂ ಸಿಡಿದು ಬೀಳುತ್ತಾನೆ.
ಪ್ರತಿಸಲ ಕೋಪಗೊಂಡಾಗಲೂ ನಮ್ಮ ದೇಹದಲ್ಲಿ ನಕಾರಾತ್ಮಕ ರಾಸಾಯನಿಕ ಕ್ರಿಯೆಗಳು ತಮ್ಮ ದುಷ್ಪರಿ ಣಾಮಗಳನ್ನು ಬೀರುತ್ತಲೇ ಹೋಗುತ್ತಿರುತ್ತವೆ. ವಿಪರೀತ ಕೋಪ ಗೊಂಡಾಗಮಿದುಳು, ಜಠರ ಮತ್ತು ಕರುಳಿಗೆ ಪೂರೈಕೆ ಯಾಗುತ್ತಿರುವ ರಕ್ತಪ್ರವಾಹವು ಕಡಿಮೆಯಾಗುತ್ತದೆ. ಆ ರಕ್ತವೆಲ್ಲ ಮಾಂಸಖಂಡಗಳ ಕಡೆಗೆ ಹರಿಯುತ್ತದೆ. ಹೃದಯದ ಮಿಡಿತವು ಅಽಕವಾಗುತ್ತದೆ. ರಕ್ತದೊತ್ತಡವು ಏರುತ್ತದೆ.

ಕೈಗಳು ಮುಷ್ಟಿಗಟ್ಟುತ್ತವೆ. ಹಲ್ಲುಗಳು ಕಟಕಟನೆ ಕಡಿಯುತ್ತವೆ. ಉಸಿರಾಟವು ತೀವ್ರವಾಗುತ್ತದೆ. ದೇಹದ ಉಷ್ಣತೆಯು ಏರುತ್ತದೆ. ಚರ್ಮ ವು ಬೆವರುತ್ತದೆ… ಹೆಂಡತಿಯು ಇನ್ನೊಂದು ಮಾತನ್ನು ಆಡಿದರೆ, ಅವಳ ದವಡೆಯ ಹಲ್ಲನ್ನು ಉದುರಿಸಲು ಗಂಡ ಎನ್ನುವ ಮಹಾಶಯ ಸಿದ್ಧವಾಗಿದ್ದಾನೆ. ಕೋಪಗೊಂಡ ಮನಸ್ಸು ಶರೀರವನ್ನು ಹೊಡೆದಾಟಕ್ಕೆ ಸಿದ್ಧ ಮಾಡುತ್ತಿದೆ. ಅದಕ್ಕೇ ಕೋಪಗೊಂಡವನ ದೇಹ-ಮನಸ್ಸಿನಲ್ಲಿ ಇಷ್ಟೆಲ್ಲ ಬದಲಾವಣೆಗಳಾಗುತ್ತಿವೆ. ಈ ಎಲ್ಲವೂ ಕೌಟುಂಬಿಕ ಸಾಮರಸ್ಯಕ್ಕೆ ಮಾರಕ ವಾಗುತ್ತದೆ.

ಹೆಂಡತಿಯು ಒಂದೂ ಮಾತನ್ನಾಡದೆ ತಲೆ ಬಗ್ಗಿಸಿಕೊಂಡು ಹೋದಳೆಂದು ಭಾವಿಸೋಣ. ಗಂಡನಿಗೆ ಕೋಪವು ಕ್ರಮೇಣ ಕಡಿಮೆಯಾಗುತ್ತಿದೆ. ಹೆಂಡತಿಯ ಕೆನ್ನೆಗೆ ನಾಲ್ಕು ಬಾರಿಸಿದ್ದರೆ, ಬಿಗಿಗೊಂಡಿದ್ದ ಸ್ನಾಯು ಗಳು ಸಡಿಲವಾಗುತ್ತಿದ್ದವು. ಆದರೆ ಅವನು ಹೊಡೆಯಲಿಲ್ಲ. ಹಾಗಾಗಿ ಸ್ನಾಯುಗಳು ಸೆಡೆತುಕೊಂಡು ಸಣ್ಣಗೆ
ತಲೆನೋಯಲು ಆರಂಭಿಸಿದೆ. ಆ ರಾತ್ರಿ ನೆಮ್ಮದಿಯ ನಿದ್ರೆಯೇ ಬರುವುದಿಲ್ಲ.

ಕೋಪಗೊಂಡಿರುವ ಮನುಷ್ಯನ ವ್ಯಕ್ತಿತ್ವವು ಕ್ರಮೇಣ ಅವನತಿಯತ್ತ ಸಾಗುತ್ತದೆ. ಇದನ್ನು ಕೃಷ್ಣನು ಒಂದೇ ಒಂದು ಶ್ಲೋಕದಲ್ಲಿ ಪರಿಣಾಮಕಾರಿಯಾಗಿ ವಿವರಿಸಿದ್ದಾನೆ. ತನಗೆ ಮಧುಮೇಹ ಬಂದಿದೆ ಎಂಬ ಸುದ್ದಿ ಯನ್ನು ಒಪ್ಪಿಕೊಳ್ಳಲಾಗದ ವ್ಯಕ್ತಿಯು, ತನ್ನ ಮನಸ್ಸಿನ ಜೊತೆಯಲ್ಲಿ ತಾನೇ ಹೋರಾಡುತ್ತಿದ್ದಾನೆ. ಈ ಆಂತರಿಕ ಹೋರಾಟವನ್ನು ಮನೆಮಂದಿಯು ಅರ್ಥ ಮಾಡಿಕೊಳ್ಳಬೇಕು. ಸ್ವಲ್ಪ ತಾಳ್ಮೆ ವಹಿಸಿಕೊಳ್ಳಬೇಕು. ಒಂದಷ್ಟು ದಿನಗಳು ಕಳೆದ ಮೇಲೆ, ವ್ಯಕ್ತಿಯು ವಾಸ್ತವತೆಯನ್ನು ತಿಳಿದುಕೊಳ್ಳಲೇ ಬೇಕಾಗುತ್ತದೆ. ಕಾಲ ಕ್ರಮೇಣ, ಕೋಪ ಮಾಡಿಕೊಳ್ಳುವ ಮನೋಭಾವವನ್ನು ಕಡಿಮೆ ಮಾಡೀಕೊಳ್ಳುತ್ತಾ ಹೋಗುತ್ತಾನೆ.

ಅಸಹಾಯಕತೆ: ನಮಗೆ ಮಧುಮೇಹವು ಬಂದಿದೆ ಎಂಬ ಸುದ್ದಿಯನ್ನು ಕೇಳುತ್ತಲೇ ಅದನ್ನು ನಾವು ನಿರಾಕರಿಸಿದೆವು. ವೈದ್ಯರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದಕ್ಕೆ ಋಜುವಾತನ್ನು ಸಂಪಾದಿಸಲು ನಾಲ್ಕಾರು ಪ್ರಯೋಗಾಲಯಗಳಲ್ಲಿ ರಕ್ತ ಪರೀಕ್ಷೆಯನ್ನು ಪದೇ ಪದೆ ಮಾಡಿಸಿಕೊಂಡೆವು. ಎಲ್ಲ ಪರೀಕ್ಷೆಗಳು ನಿಮಗೆ ಮಧುಮೇಹ ಬಂದಿರುವುದು ನಿಜ ಎಂದು ಘಂಟಾಘೋಷವಾಗಿ ಹೇಳಿದ ಮೇಲೆ, ಅನಿವಾರ್ಯವಾಗಿ
ತಾನು ಮಧುಮೇಹಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಆಗ ವಿಪರೀತ ಕೋಪ ಬರುತ್ತದೆ. ಯಾರ ಮೇಲೆಂದು ತಾನೇ ಕೋಪವನ್ನು ತೋರಿಸುವುದು? ಕೊನೆಗೆ
ಸಿಕ್ಕ ಸಿಕ್ಕವರ ಮೇಲೆ ಕೋಪವನ್ನು ತೋರಿಸಲು ಆರಂಭಿಸುತ್ತದೆ. ಈ ಎಲ್ಲ ನಕಾರಾತ್ಮಕ ವರ್ತನೆಗಳು ಮಧುಮೇಹವನ್ನು ಬಿಗಡಾಯಿಸುತ್ತಲೇ ಹೋಗುವುದನ್ನು ಕಂಡು ಹೌಹಾರುತ್ತೇವೆ. ಗೊಂದಲದಲ್ಲಿ ಮುಳುಗುತ್ತೇವೆ. ಮುಂದೇನು ಮಾಡಬೇಕೆಂದು ಹೊಳೆಯುತ್ತಿಲ್ಲ. ಮಿದುಳೆಲ್ಲ ಜೋಮುಗಟ್ಟಿ ಯೋಚಿಸು ವುದೇ ಅಸಾಧ್ಯವಾಗಿ ಬಿಟ್ಟಿದೆ. ಅರ್ಜುನ ನಿಗೂ ಹೀಗೇ ಆಗಿದೆ. ಮುಂದೇನು ಮಾಡಬೇಕೆಂದು ತಿಳಿಯದೆ ಅರ್ಜುನನು ಕೇಳುತ್ತಾನೆ!

ಇಷುಭಿಃ ಪ್ರತಿಯೋತ್ಯ್ಸಾಮಿ ಪೂಜಾರ್ಹಾ ಮಧುಸೂದನ (೨.೦೪) ನಾನು ಹೇಗೆ ಯುದ್ಧವನ್ನು ಮಾಡಲಿ?
ಕೃಷ್ಣಾ! ಈಗ ನಾನೇನು ಮಾಡಬೇಕೆಂದು ತಿಳಿಯದೆ ನನಗೆ ಗೊಂದಲವಾಗಿದೆ. ಚಿತ್ತಸ್ವಾಸ್ಥ್ಯವನ್ನು ಸಂಪೂರ್ಣ ವಾಗಿ ಕಳೆದುಕೊಂಡಿದ್ದೇನೆ. ಇಂತಹ ಸ್ಥಿತಿಯಲ್ಲಿ ನಾನು ಏನು ಮಾಡಿದರೆ, ಎಲ್ಲರಿಗೂ ಶ್ರೇಯಸ್ಕರವಾಗುತ್ತದೆ? ಅದನ್ನು ನಿಶ್ಚಯವಾಗಿ ನೀನು ಹೇಳು. ನಾನು ನಿನ್ನ ಶಿಷ್ಯ. ನಿನಗೆ ಶರಣಾಗಿರುವ ಆತ್ಮ. ದಯವಿಟ್ಟು ನನಗೆ ಮಾರ್ಗದರ್ಶನವನ್ನು ನೀಡು (೨-೦೭) ಅರ್ಜುನನು ಸಂಪೂರ್ಣವಾಗಿ ಗೊಂದಲ ದಲ್ಲಿದ್ದಾನೆ.

ತನ್ನ ಮಾನಸಿಕ ಸಮತೋಲನೆಯನ್ನು ಕಳೆದುಕೊಂಡಿದ್ದಾನೆ. ಮುಂದೆ ತಾನೇನು ಮಾಡಬೇಕು ಎನ್ನುವುದೇ ಅವನಿಗೆ ತಿಳಿಯುತ್ತಿಲ್ಲ. ಹಾಗಾಗಿ ಅವನು ಕೃಷ್ಣನಿಗೆ ಪರಿಪೂರ್ಣವಾಗಿ ಶರಣು ಹೋಗಿದ್ದಾನೆ. ಇಂತಹ ಸ್ಥಿತಿಯನ್ನು ನಾನೇನು ಮಾಡಬೇಕು, ನಾನೇನು ಮಾಡಿದರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ಕೃಷ್ಣನನ್ನು ಕೇಳುತ್ತಿದ್ದಾನೆ.

ಮಧುಮೇಹ ಬಂದಿರುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಆದರೆ ಈ ಮಧುಮೇಹವನ್ನು ಹೇಗೆ ನಿಭಾಯಿಸಬೇಕೆಂದು ನಮಗೆ ತಿಳಿಯುತ್ತಿಲ್ಲ. ಪೂರ್ಣ ಗೊಂದಲಮಯವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಎದುರಿಸಬೇಕಾದ ಸವಾಲುಗಳನ್ನು ನಮಗೆ ಅರ್ಥವಾಗುವಂತೆ ತಿಳಿ ಹೇಳಬಲ್ಲ ಯೋಗ್ಯ ವೈದ್ಯರ ನೆರವು-ಮಾರ್ಗದರ್ಶನವು ಬೇಕಾಗಿದೆ.

ಮಾಹಿತಿ-ಸಂಗ್ರಹ, ಮಧುಮೇಹ ನಿಯಂತ್ರಣದಲ್ಲಿ ನಾವು ತೆಗೆದುಕೊಳ್ಳಲೇಬೇಕಾದ ಅತಿಮುಖ್ಯವಾದ ಕ್ರಮ.
ಅರ್ಹ ಮಧುಮೇಹ ತಜ್ಞರ ನೆರವನ್ನು ಪಡೆಯುವುದು. ನಮ್ಮ ಹಲವು ಪ್ರಶ್ನೆಗಳಿಗೆ ನಿಖರ ಉತ್ತರವು ತಿಳಿಯದೇ
ಹೋದಾಗ, ಆ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದವರ ಬಳಿ ಕೇಳಿ ತಿಳಿದುಕೊಳ್ಳುವುದು ಬುದ್ಧಿವಂತರ ಲಕ್ಷಣ. ಹಾಗಾಗಿ ಅರ್ಜುನನು ಕೃಷ್ಣನಿಗೆ ಶರಣು ಹೋಗಿದ್ದಾನೆ. ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್ (೨-೦೮) ನನ್ನ ಇಂದ್ರಿಯಗಳನ್ನು ಸೊರಗಿಸುತ್ತಿರುವ ಈ ದುಃಖವನ್ನು ನಿವಾರಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ  ಅರ್ಜುನನು ತುಂಬಾ ಯೋಚಿಸುತ್ತಿದ್ದಾನೆ.

ಅವನು ಯೋಚಿಸಿದಷ್ಟೂ ಗೊಂದಲಗಳು ಹೆಚ್ಚಾಗುತ್ತಿವೆ. ಆತಂಕವು ಮತ್ತಷ್ಟು ತೀವ್ರವಾಗುತ್ತಿದೆ. ವಿಪರೀತ ಖಿನ್ನತೆಯು ಅವನನ್ನು ಆವರಿಸಿದೆ. ಮತ್ತೆ ಅವನು ಹತಾಶನಾಗಿ ಸೋಲನ್ನು ಒಪ್ಪಿಕೊಳ್ಳಲು ಸಿದ್ಧನಾಗಿದ್ದಾನೆ.
ನ ಯೋತ್ಸ್ಯಾ ಇತಿ ಗೋವಿಂದ ಮುಕ್ತ್ವಾ (೨-೦೯) ಗೋವಿಂದ!.. ನಾನು ಯುದ್ಧವನ್ನು ಮಾಡುವುದಿಲ್ಲ ಎಂದು ಸಂಪೂರ್ಣವಾಗಿ ಮೌನಕ್ಕೆ ಶರಣಾಗುತ್ತಾನೆ.