ಸಾವಿರಾರು ಕಾರ್ಯುಕರ್ತರು ಹಾಗೂ ಬಿಜೆಪಿ ನಾಯಕರ ಸಮ್ಮುಖ ದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಪರ ಚಿತ್ರದುರ್ಗದಲ್ಲಿ ಪ್ರಚಾರ ನಡೆಸಿದರು.
ಮತಪ್ರಚಾರದಲ್ಲಿ ಪಾಲ್ಗೊಂಡಿದ್ದ ಸುದೀಪ್ ಅವರನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ರಸ್ತೆ ಉದ್ದಕ್ಕೂ ನಿಂತಿದ್ದ ಅಭಿಮಾನಿಗಳ ಕೇಕೆ ಹಾಗೂ ಜೈಕಾರದ ಪ್ರತಿ ಯಾಗಿ ಅವರತ್ತ ಕೈಬೀಸುತ್ತಾ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ನಟ ಸುದೀಪ್ ಮನವಿ ಮಾಡಿಕೊಂಡರು.
ಮೊಳಕಾಲ್ಮೂರು ಬಳಿಕ ಜಗಳೂರು, ಮಾಯಕೊಂಡ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಸೇರಿದಂತೆ ಒಟ್ಟು ಐದು ಕಡೆ ರೋಡ್ ಶೋ ಮೂಲಕ ಕ್ಯಾಂಪೇನ್ ಮಾಡಲಿದ್ದಾರೆ. ಜಗಳೂರಿಗೆ ತೆರಳಲಿರುವ ಅವರು ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಮಾಯಕೊಂಡ ಕ್ಷೇತ್ರಕ್ಕೆ ತೆರಳಲಿರುವ ಸುದೀಪ್ ಮಾಯಕೊಂಡ ಸರ್ಕಾರಿ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ್ ಪರ ಪ್ರಚಾರ ನಡೆಸಲಿದ್ದಾರೆ.
ಬಳಿಕ ದಾವಣಗೆರೆಗೆ ತೆರಳ ಸಂಜೆ ರೋಡ್ ಶೋ ನಡೆಸಲಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿಜಿ ಅಜಯ್ ಕುಮಾರ್ ಪರ ಮತ ಯಾಚಿಸಲಿದ್ದಾರೆ. ದಾವಣಗೆರೆ ಪ್ರಚಾರ ಮುಗಿಸಿ ವಿಜಯನಗರ ಜಿಲ್ಲೆಗೆ ತೆರಳಲಿರುವ ಸುದೀಪ್, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಶಿಲ್ಪ ರಾಘವೇಂದ್ರ ಪರ ಮತಬೇಟೆ ನಡೆಸ ಲಿದ್ದಾರೆ.
ಖಾಸಗಿ ಹೆಲಿಕಾಪ್ಟರ್ ಬುಕ್ ಮಾಡಿರುವ ಬಿಜೆಪಿ, ಇಡೀ ದಿನ ಸುದೀಪ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.
ಇತ್ತೀಚೆಗೆ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಸಾಂಕೇತಿಕವಾಗಿ ಭಾಗಿಯಾಗಿ ಬೆಂಬಲ ಸೂಚಿಸಿ ಪ್ರಚಾರ ನಡೆಸಿದ್ದರು. ಇಂದಿನಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ.