Saturday, 23rd November 2024

ಗಾಂಜಾ ಕಳ್ಳ ಸಾಗಣೆ: ಭಾರತ ಮೂಲದ ವ್ಯಕ್ತಿಗೆ ಗಲ್ಲು ಶಿಕ್ಷೆ

ಸಿಂಗಾಪುರ​​: ಒಂದು ಕೆಜಿಯಷ್ಟು ಗಾಂಜಾವನ್ನು ಕಳ್ಳ ಸಾಗಣೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ 46 ವರ್ಷದ ಭಾರತ ಮೂಲದ ವ್ಯಕ್ತಿಯನ್ನು ಸಿಂಗಾಪುರ​​ನಲ್ಲಿ ಗಲ್ಲಿಗೇರಿಸಲಾಗಿದೆ.

ಇಲ್ಲಿನ ಚಾಂಗಿ ಜೈಲು ಸೇರಿದ್ದ ತಂಗರಾಜು ಸುಪ್ಪಯ್ಯ ಎಂಬಾತನನ್ನು ನೇಣುಗಂಬಕ್ಕೆ ಏರಿಸಲಾಗಿದೆ. ‘ಇವನ ವಿರುದ್ಧ ಮಾದಕ ವಸ್ತುಗಳ ಸಾಗಣೆಯ ಸಂಚಿನ ಆರೋಪ ಸಾಬೀತಾಗಿದೆ. ಹೀಗಾಗಿ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಮುನ್ನ ಇನ್ನೊಮ್ಮೆ ಪರಿಶೀಲನೆ ಮಾಡಬೇಕು, ನೇಣಿಗೇರಿಸುವುದು ಸೂಕ್ತವಾ ಎಂದು ಮತ್ತೊಂದು ಸಲ ವಿಮರ್ಶೆ ಮಾಡಬೇಕು ಎಂದು ಸಿಂಗಾಪುರ್ ಸರ್ಕಾರಕ್ಕೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿ ಹಲವು ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಸುಪ್ಪಯ್ಯನನ್ನು ಗಲ್ಲಿಗೇರಿಸಲಾಗಿದೆ.

2017ನೇ ಇಸ್ವಿಯಲ್ಲಿ, 1,017.9 ಗ್ರಾಂ.​ಗಳಷ್ಟು ಗಾಂಜಾವನ್ನು ಕಳ್ಳಸಾಗಣೆ ಮಾಡಲು ಕುಮ್ಮಕ್ಕು ನೀಡಿದ ಆರೋಪದಡಿ ತಂಗ ರಾಜು ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಸಿಂಗಾಪುರ್​​ನಲ್ಲಿ ಮರಣ ದಂಡನೆಗೆ ಪರಿಗಣಿತವಾಗುವ ಕನಿಷ್ಠ ಅಪರಾಧ ಕ್ಕಿಂತಲೂ ತಂಗರಾಜು ದ್ವಿಗುಣ ಅಪರಾಧ ಮಾಡಿದ್ದರಿಂದ 2018ರಲ್ಲಿ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ಇನ್ನು ತಂಗರಾಜುನನ್ನು ನೇಣಿಗೆ ಏರಿಸಿದ್ದನ್ನು ಬ್ರಿಟಿಷ್​ ಉದ್ಯಮಿ ರಿಚರ್ಡ್​ ಬ್ರಾನ್ಸನ್​ ಅವರು ಖಂಡಿಸಿದ್ದಾರೆ.

ಆದರೆ ತಂಗರಾಜುವನ್ನು ನೇಣಿಗೆ ಏರಿಸಿದ್ದನ್ನು ಸಿಂಗಾಪುರ ಗೃಹ ಇಲಾಖೆ ಸಮರ್ಥನೆ ಮಾಡಿಕೊಂಡಿದೆ. ಕಿಂಚಿತ್ತೂ ಅನುಮಾನವಿಲ್ಲದೆ ತಂಗರಾಜು ಅಪರಾಧ ಸಾಬೀತಾಗಿದ್ದರಿಂದಲೇ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.