Sunday, 24th November 2024

ಅಮರ್ತ್ಯ ಸೇನ್ ಮನೆ ನೆಲಸಮಕ್ಕೆ ಮುಂದಾದರೆ ಧರಣಿ: ಮಮತಾ ಎಚ್ಚರಿಕೆ

ಕೊಲ್ಕತ್ತಾ: ವಿಶ್ವಭಾರತಿ ವಿಶ್ವವಿದ್ಯಾಲಯದ ಅಧಿಕಾರಿಗಳು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರ ಮನೆ ‘ಪ್ರತೀಚಿ’ಯನ್ನು ನೆಲಸಮ ಮಾಡಲು ಮುಂದಾದರೆ ಬೋಲ್‌ಪುರದಲ್ಲಿ ಧರಣಿ ನಡೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

ಸೇನ್ ಅವರ ಪಿತ್ರಾರ್ಜಿತ ಆಸ್ತಿ ವಿಶ್ವಭಾರತಿ ಕ್ಯಾಂಪಸ್‌ನಲ್ಲಿದ್ದು, ಅವರಿಗೆ ಲೀಸ್ ಆಧಾರ ದಲ್ಲಿ ನೀಡಲಾದ ಭೂಮಿಗಿಂತ ಹೆಚ್ಚು ಭೂಮಿಯನ್ನು ಅವರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.

ವಿಶ್ವವಿದ್ಯಾನಿಲಯ ಈ ಜಮೀನನ್ನು ಮೇ 6ರ ಒಳಗಾಗಿ ಅಥವಾ ಕೊನೆಯ ಆದೇಶ ಪ್ರಕಟಿಸಿದ 15 ದಿನಗಳ ಒಳಗಾಗಿ ತೆರವುಗೊಳಿಸುವಂತೆ ಅಮರ್ತ್ಯಸೇನ್ ಅವರಿಗೆ ಸೂಚಿಸಿದೆ. ವಿಶ್ವವಿದ್ಯಾನಿಲಯದಿಂದ ಲೀಸ್ ಆಧಾರದಲ್ಲಿ ನೀಡಲಾದ 1.38 ಎಕರೆ ಪೈಕಿ ನೊಬೆಲ್ ಪುರಸ್ಕೃತರಾದ ಸೇನ್ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನಲಾದ 0.13 ಎಕರೆ (5500 ಚದರ ಅಡಿ) ಜಾಗವನ್ನು ತೆರವುಗೊಳಿಸುವಂತೆ ವಿವಿ ಆದೇಶ ನೀಡಿತ್ತು.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಮತಾ ಬ್ಯಾನರ್ಜಿ, “ಅಮರ್ತ್ಯ ಸೇನ್ ಮೇಲೆ ಪ್ರತಿದಿನ ದಾಳಿ ಮಾಡಲಾಗುತ್ತಿದೆ. ಅವರ ದರ್ಪವನ್ನು ನಾನು ನೋಡಿದ್ದೇನೆ. ಸೇನ್ ಅವರ ಮನೆಯನ್ನು ನೆಲಸಮ ಮಾಡಲು ವಿವಿ ಮುಂದಾದರೆ ಬೋಲ್‌ಪುರಕ್ಕೆ ತೆರಳಿ ಆ ಸ್ಥಳದಲ್ಲಿ ಧರಣಿ ನಡೆಸುವ ಮೊದಲ ವ್ಯಕ್ತಿ ನಾನು” ಎಂದು ಸ್ಪಷ್ಟಪಡಿಸಿದರು. ಬುಲ್ಡೋಜರ್ ಅಥವಾ ಮಾನವೀಯತೆ ಎರಡರಲ್ಲಿ ಯಾವುದು ಹೆಚ್ಚು ಶಕ್ತಿಶಾಲಿ ಎಂದು ನೋಡಲು ಬಯಸುತ್ತೇನೆ ಎಂದು ಹೇಳಿದರು.

2006ರಲ್ಲಿ ನೀಡಲಾದ ಮ್ಯುಟೇಶನ್ ಅನ್ವಯ ಇಡೀ 1.38 ಎಕರೆ ಭೂಮಿ ಅಮರ್ತ್ಯಸೇನ್ ಅವರಿಗೆ ಸೇರಿದ್ದು ಎಂದು ಕಂದಾಯ ಇಲಾಖೆ ಹೇಳಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜನವರಿ 30ರಂದು ಮಮತಾ ಬ್ಯಾನರ್ಜಿ, ಅಮರ್ತ್ಯಸೇನ್ ಅವರಿಗೆ ಹಸ್ತಾಂತರಿಸಿದ್ದರು. ಈ ದಾಖಲೆಗಳನ್ನು ವಿವಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.