Sunday, 15th December 2024

ಭಾರತ ಮತ್ತು ಪಾಕಿಸ್ತಾನದ ಸ್ವತಂತ್ರ ಪಯಣದ ಪಕ್ಷಿನೋಟ

ವಿಶ್ವ ವಿಹಾರ

ಶಿವಪ್ರಸಾದ್

ಪಾಕಿಸ್ತಾನವು ಸಾಗುತ್ತಿರುವ ರೀತಿಯ ಬಗ್ಗೆ ಭಾರತೀಯ ಟಿವಿ ಚಾನೆಲ್‌ಗಳು ಪಾಕಿಸ್ತಾನವನ್ನು ಗೇಲಿ ಮಾಡುತ್ತಿವೆ. ಆ ದೇಶವು ಹೇಗೆ ವಿನಾಶದತ್ತ ಸಾಗುತ್ತಿದೆ ಎಂಬುದನ್ನು ಸಂತೋಷದಿಂದ ಪ್ರಕಟಿಸುತ್ತಿವೆ. ಹೀಗೆಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಕಾನೂನಿನ ನಿಯಮವಿಲ್ಲ, ಆ ದೇಶ ನಡೆಯುತ್ತಿರುವ ದಾರಿಯಲ್ಲಿ ಪಾಕಿಸ್ತಾನದ ಮಕ್ಕಳಿಗೆ ಭವಿಷ್ಯವಿಲ್ಲ ಎಂದು ಭಾರತದ ಮಾಧ್ಯಮಗಳು ಸಾರುತ್ತಿವೆ ಎಂಬುದು ಅವರ ಮಾತು.

ಸ್ವಾತಂತ್ರ್ಯದ ಸಮಯದಲ್ಲಿ ಭಾರತೀಯರು ಪಾಕಿಸ್ತಾನವನ್ನು ಅಣಕಿಸಿ, ಆ ದೇಶವು ಉಳಿಯಲು ಸಾಧ್ಯವಿಲ್ಲ, ಶೀಘ್ರದಲ್ಲೇ ಮತ್ತೆ ಭಾರತದಲ್ಲಿ ವಿಲೀನಗೊಳ್ಳುತ್ತದೆ ಎಂದು ಹೀಯಾಳಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಇಮ್ರಾನ್‌ಖಾನ್ – ನಾವು ಸ್ವತಂತ್ರ ರಾಷ್ಟ್ರವಾಗಲು ಬಯಸಿದ್ದರಿಂದ ಪಾಕಿಸ್ತಾನವನ್ನು ರಚಿಸಲಾಗಿದೆ. ನಾವು ಕಾನೂನಿನ ನಿಯಮವನ್ನು ಪಾಲಿಸುವ ರಾಷ್ಟ್ರವಾಗಲು ಬಯಸಿದ್ದೇವೆ. ಆದರೆ ನಾವೀಗ ಕಾನೂನಿನ ನಿಯಮ ಪಾಲಿಸುವುದನ್ನು ಹೊರತುಪಡಿಸಿ ಎಲ್ಲವನ್ನೂ ಮಾಡುತ್ತಿದ್ದೇವೆ.

ಇಮ್ರಾನ್‌ಖಾನ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಅದರ ನಾಯಕನಾಗಿ ಹಲವು ಕಾಲ ಯಶಸ್ವಿಯಾಗಿ ಮುನ್ನಡೆಸಿ ಹೆಸರು ಮಾಡಿದರು. ಅನಂತರ ಪಾಕಿಸ್ತಾನದ ಸರ್ಕಾರದ ನಾಯಕನಾಗಿ (ಪ್ರಧಾನಿ) ಅಷ್ಟೇ ಯಶಸ್ಸಿನೊಂದಿಗೆ ನಡೆಸಲು ವಿಫಲರಾದರು.

ಫೆಡರಲ್ ಕ್ಯಾಪಿಟಲ್‌ನ ನ್ಯಾಯಾಲಯಕ್ಕೆ ಸೇರಿದ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾ ಬಾದ್‌ನ ಎರಡು ನ್ಯಾಯಾಲಯಗಳು ಪ್ರತ್ಯೇಕ ಪ್ರಕರಣ ಗಳಲ್ಲಿ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದವು. ಆದರೆ, ಅವರು ಪದೇ ಪದೆ ನ್ಯಾಯಾಲಯದ ಮುಂದೆ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಲಾಹೋರ್‌ನಲ್ಲಿ ರ‍್ಯಾಲಿಯನ್ನು ನಡೆಸಿದ್ದರು.

ಭಾರತ ಮತ್ತು ಪಾಕಿಸ್ತಾನ ೧೯೪೭ ರಲ್ಲಿ ಒಟ್ಟಿಗೆ ತಮ್ಮ ಸ್ವತಂತ್ರ ಪ್ರಯಾಣವನ್ನು ಪ್ರಾರಂಭಿಸಿದವು. ಇತಿಹಾಸ, ನಾಗರಿಕತೆಯ ಕಾರಣದಿಂದಾಗಿ ಎರಡು ದೇಶಗಳ ನಡುವೆ, ಯಾವಾಗಲೂ ಕ್ರಿಕೆಟ್ ಪಿಚ್‌ನ ಆಚೆಗೂ ಪೈಪೋಟಿಯ ಭಾವ ವಿಸ್ತರಿಸಿದೆ. ಸ್ವತಂತ್ರ ಅಸ್ತಿತ್ವದ ೭೫ ವರ್ಷಗಳಲ್ಲಿ, ಭಾರತ – ಪಾಕಿಸ್ತಾನಗಳು ಅನೇಕ ಏರಿಳಿತಗಳನ್ನು ಕಂಡಿವೆ. ವಿಭಿನ್ನ ಸಾಮಾಜಿಕ, ಆರ್ಥಿಕ ನಿಯತಾಂಕಗಳ ಮೇಲೆ ಎರಡೂ ರಾಷ್ಟ್ರಗಳು ಹೇಗೆ ಕಾರ್ಯನಿರ್ವಹಿಸಿವೆ? ಸ್ವಾತಂತ್ರ್ಯದ ನಂತರ ಭಾರತ – ಪಾಕಿಸ್ತಾನದ ಪಥ ಮತ್ತು ಅಭಿವೃದ್ಧಿಯ ಮೇಲೆ ರಾಜಕೀಯವು ಹೇಗೆ ಪರಿಣಾಮ ಬೀರಿದೆ? ಕಳೆದ ೭೫ ವರ್ಷಗಳಲ್ಲಿ ಭಾರತ – ಪಾಕಿಸ್ತಾನದ
ಸ್ವತಂತ್ರ ಪಯಣದ ಪಕ್ಷಿನೋಟ ಇಲ್ಲಿದೆ.

ಆಳವಾದ ಜನಾಂಗೀಯ ವಿಭಜನೆಗಳು, ಅಧಿಕಾರಶಾಹಿ ಗಣ್ಯರ ನಡುವೆ ಹಗ್ಗಜಗ್ಗಾಟಗಳು, ಭಯೋತ್ಪಾದಕ ಗುಂಪುಗಳನ್ನು ಉತ್ತೇ ಜಿಸುವ ಅಲಿಖಿತ ರಾಷ್ಟ್ರ ನೀತಿಯಿಂದಾಗಿ ಮೂಲಕ ಪಾಕಿಸ್ತಾನದ ಪ್ರಗತಿ ಕುಂಠಿತವಾಗಿದೆ. ರಾಜಕೀಯ, ಆಡಳಿತದ ಸ್ವರೂಪವೂ ಬಹುಶಃ ಈ ಎರಡು ರಾಷ್ಟ್ರಗಳ ನಡುವಿನ ಪ್ರಮುಖ ವ್ಯತ್ಯಾಸವೆನ್ನಬಹುದು. ಸ್ವಾತಂತ್ರ್ಯದ ನಂತರ, ಭಾರತವು ನಿರಂತರವಾಗಿ ಪ್ರಜಾಪ್ರಭುತ್ವದ ಆಳ್ವಿಕೆ ಕಂಡಿದೆ, ತುರ್ತು ಪರಿಸ್ಥಿತಿಯ ೨೧ ತಿಂಗಳುಗಳನ್ನು ಹೊರತು ಪಡಿಸಿ. ಗಣತಂತ್ರ ದಿನದಂದು ದೆಹಲಿಯ ಕೆಂಪು ಕೋಟೆಯಿಂದ ೯ನೇ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತವು ಪ್ರಜಾ ಪ್ರಭುತ್ವದ ತಾಯಿ ಮತ್ತು ವೈವಿಧ್ಯತೆಯು ಅದರ ದೊಡ್ಡ ಶಕ್ತಿ ಎಂದು ಹೇಳಿದ್ದರು, ಇದರಲ್ಲಿ ಆಶ್ಚರ್ಯದ ವಿಷಯವೇನಿಲ್ಲ.

೨೦೪೭ ರಲ್ಲಿ ಭಾರತದ ಆರ್ಥಿಕತೆ ಹೇಗಿರುತ್ತದೆ ಎಂದು ಮುನ್ಸೂಚಿಸುವುದು ಒಂದು ಕ್ಲಿಷ್ಟ ವ್ಯಾಯಾಮವಾಗಬಹುದು. ಆದರೆ ಇಲ್ಲಿಯವರೆಗೆ ಚೀನಾದ ಪ್ರಗತಿಯು ಮಾರ್ಗಸೂಚಿಯಾಗುವುದಾದರೆ, ಭಾರತವು ತನ್ನ ನೆರೆ ರಾಷ್ಟ್ರದೊಂದಿಗಿನ ಅಂತರವನ್ನು ಬಹುಪಾಲು ತಗ್ಗಿಸಿಕೊಳ್ಳುವಲ್ಲಿ ಸಫಲವಾಗುತ್ತದೆ ಎನ್ನುವುದು ಮಾತ್ರ ನಿಸ್ಸಂಶಯ. ೧೯೪೭ ರಿಂದ ಭಾರತದಲ್ಲಿ ಪ್ರಜಾ ಪ್ರಭುತ್ವವು ಪ್ರವರ್ಧಮಾನಕ್ಕೆ ಬಂದರೆ, ಸ್ವಾತಂತ್ರ್ಯದ ನಂತರ ಪಾಕಿಸ್ತಾನವು ನಾಗರಿಕ ಮತ್ತು ಮಿಲಿಟರಿ, ಪ್ರಜಾಪ್ರಭುತ್ವ ಮತ್ತು ನಿರಂಕುಶ, ತುಲನಾತ್ಮಕವಾಗಿ ಜಾತ್ಯತೀತ ಮತ್ತು ಇಸ್ಲಾಮಿಸ್ಟ್ ಆಡಳಿತಗಳ ನಡುವಿನ ಪರ್ಯಾಯ ವ್ಯವಸ್ಥೆಗಳ ದೇಶವಾಗಿದೆ.
ಇದರ ಪರಿಣಾಮವಾಗಿ, ಪಾಕಿಸ್ತಾನದಲ್ಲಿ ಯಾವುದೇ ಪ್ರಧಾನಿಗೂ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಲು ಸಾಧ್ಯ ವಾಗಲಿಲ್ಲ.

ನಾಗರಿಕ ಸರ್ಕಾರಗಳನ್ನು ಮೂರು ಬಾರಿ ಸೇನೆಯು ಕೆಡವಿತ್ತು ಮತ್ತು ನಾಲ್ಕು ಬಾರಿ ಸೇನಾ ಮುಖ್ಯಸ್ಥರು ಆ ದೇಶದ ಅಧ್ಯಕ್ಷ ರಾಗಿದ್ದರು. ಹೀಗಾಗಿ ಪಾಕಿಸ್ತಾನವು ೭೫ ವರ್ಷಗಳ ತನ್ನ ಸ್ವತಂತ್ರ ಪ್ರಯಾಣದಲ್ಲಿ, ಅರ್ಧದಷ್ಟು ಸಮಯ ಮಿಲಿಟರಿ ಆಡಳಿತ ದಲ್ಲೇ ಕಳೆದಿದೆ. ಆರ್ಥಿಕ ಪ್ರಯಾಣ – ಸ್ಥಿರ ಸರ್ಕಾರಗಳ ದೆಸೆಯಿಂದಾಗಿ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ಕೊಟ್ಟು, ಭಾರತವು ವಸಾಹತುಶಾಹಿ ಗತಕಾಲದ ಭಾರವನ್ನು ತನ್ನ ಸ್ವಂತ ಬಲದಿಂದ ಇಳಿಸಿಕೊಂಡು ವಿಶ್ವ ದರ್ಜೆಯ ಶಕ್ತಿಯಾಗಿ ಹೊರಹೊಮ್ಮ ತೊಡಗಿದೆ.

ಭಾರತವು ಸ್ವಾತಂತ್ರ್ಯದ ನಂತರ ಬೃಹತ್ ಸವಾಲುಗಳನ್ನು ಎದುರಿಸಿ ಇಂದು ವಿಶ್ವದ ೫ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ೩.೧೭ ಟ್ರಿಲಿಯನ್ ಡಾಲರ್‌ಗಳೊಂದಿಗೆ, ಭಾರತೀಯ ಆರ್ಥಿಕತೆಯು ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿಯ ನಂತರದ ಸ್ಥಾನದಲ್ಲಿದೆ. ಈ ಕಾಲಘಟ್ಟದಲ್ಲಿ ಭಾರತವು ತನ್ನ ಜರ್ಜರಿತ ಸ್ಥಿತಿಯಿಂದ ಬಹಳ ದೂರ ಸಾಗಿದೆ.
ಕಳೆದ ೭೫ ವರ್ಷಗಳಲ್ಲಿ ಎರಡೂ ರಾಷ್ಟ್ರಗಳು ಹಲವು ಸವಾಲುಗಳನ್ನು ಎದುರಿಸಿವೆ. ಆದಾಗ್ಯೂ, ಎರಡೂ ಆರ್ಥ ವ್ಯವಸ್ಥೆಗಳು ತೀವ್ರವಾಗಿ ಬದಲಾಗಿ, ಉದ್ಯಮ ಮತ್ತು ಸೇವಾ ಕ್ಷೇತ್ರಗಳ ಮೇಲೆ ಈಗ ಹೆಚ್ಚಾಗಿ ಅವಲಂಬಿತವಾಗಿವೆ.

೧೯೬೦ರ ದಶಕದಲ್ಲಿ ಪಾಕಿಸ್ತಾನದ ತಲಾವಾರು ಜಿಡಿಪಿಯು ಭಾರತಕ್ಕಿಂತ ಹೆಚ್ಚಾಗಿತ್ತು ಎಂಬುದು ಅನೇಕರಿಗೆ ತಿಳಿದಿಲ್ಲ.
ಆದಾಗ್ಯೂ, ಕಳೆದ ಆರು ದಶಕಗಳಲ್ಲಿ, ಭಾರತವು ಪಾಕಿಸ್ತಾನದ ತಲಾವಾರು ಜಿಡಿಪಿಯನ್ನು ಮೀರಿಸಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಆರ್ಥಿಕ ರಂಗದಲ್ಲಿಯೂ ಗಣನೀಯ ಮುನ್ನಡೆ ಸಾಽಸಿದೆ. ಕಳೆದ ೨ ವರ್ಷಗಳಲ್ಲಿ ಕೋವಿಡ್ -೧೯ ನಂಥ ಮಹಾ ಮಾರಿ ತಂದೊದಗಿಸಿದ ನಿರಂತರ ಆರ್ಥಿಕ ಸವಾಲುಗಳು ಮತ್ತು ರಷ್ಯಾದ ಉಕ್ರೇನ್ ಆಕ್ರಮಣದಿಂದಾಗಿ ಏರ್ಪಟ್ಟ ಅನಿಶ್ಚಿತ ಭೌಗೋಳಿಕ ರಾಜಕೀಯ ಸನ್ನಿವೇಶದ ಹೊರತಾಗಿಯೂ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿದೆ.

ಏತನ್ಮಧ್ಯೆ, ಪಾಕಿಸ್ತಾನವು ತನ್ನ ರಾಜಕೀಯ ಸನ್ನಿವೇಶದ ಒತ್ತಡದಲ್ಲಿ ತತ್ತರಿಸುತ್ತಿದೆ ಮತ್ತು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಅಂಚಿಗೆ ತಲುಪಿದೆ. ಪಾಕಿಸ್ತಾನದ ವಿದೇಶೀ ವಿನಿಮಯ ಮೀಸಲುಗಳು ಕೇವಲ ಒಂದೇ ಅಂಕಿಗೆ ಇಳಿಯುವಷ್ಟರ ಮಟ್ಟಿಗೆ ಖಾಲಿಯಾಗಿದೆ. ಆದರೆ ಭಾರತದ ವಿದೇಶೀ ವಿನಿಮಯ ಭಂಡಾರವು ಪ್ರಬಲವಾಗಿದೆ ಮತ್ತು ಪ್ರಸ್ತುತ ವಿಶ್ವದ ೫ನೇ ಅತಿ ದೊಡ್ಡ ದ್ದಾಗಿದೆ. ವಾಸ್ತವವಾಗಿ, ಭಾರತದ ವಿದೇಶೀ ವಿನಿಮಯದ ಮೀಸಲು, ಪಾಕಿಸ್ತಾನದ ಸಂಪೂರ್ಣ ಜಿಡಿಪಿಯ ೧.೭ ರಷ್ಟು ಅನುಪಾತದಲ್ಲಿ ಅಧಿಕವಾಗಿದೆ.

ಎರಡೂ ದೇಶಗಳ ಆರ್ಥಿಕ ಬೆಳವಣಿಗೆಯ ಕಥೆಯನ್ನು ಇದೊಂದೇ ವಿಷಯವು ನಿಖರವಾಗಿ ತೋರ್ಪಡಿಸುತ್ತದೆ. ಉಭಯ ದೇಶಗಳ ನಡುವಿನ ಈ ವ್ಯತ್ಯಾಸಗಳು ಈ ಎರಡು ದೇಶಗಳು ಇಲ್ಲಿಯವರೆಗೂ ನಡೆದು ಬಂದ ಹಾದಿ ಮತ್ತು ಪಡೆದ ನಾಯಕತ್ವದ ಗುಣಲಕ್ಷಣಗಳನ್ನು ಎತ್ತಿ ತೋರಿಸಿವಂತಿವೆ. ಪಾಕಿಸ್ತಾನವು ತನ್ನ ದುರ್ಬಲ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ನೊಂದಿಗೆ ಆರ್ಥಿಕ ಸಹಾಯದ ಕುರಿತು ಮಾತುಕತೆ ನಡೆಸುತ್ತಿರುವಾಗ, ಭಾರತವು ಶ್ರೀಲಂಕದಂಥ ಬಿಕ್ಕಟ್ಟು ಪೀಡಿತ ರಾಷ್ಟ್ರಗಳಿಗೆ ಶತಕೋಟಿ ಡಾಲರ್‌ಗಳ ಸಹಾಯವನ್ನು ನೀಡುವಷ್ಟು ಬಲಿಷ್ಠವಾಗಿದೆ.

ಹೀಗೆ ಪಾಕಿಸ್ತಾನದ ಆರ್ಥಿಕತೆಯ ಪರಿಸ್ಥಿತಿ ಒಂದೆಡೆಯಾದರೆ, ಅಲ್ಲಿನ ನಾಗರಿಕ ಸಮಾಜದ ಪರಿಸ್ಥಿತಿ ಮತ್ತೊಂದು ವಿಚಿತ್ರ
ದಿಕ್ಕಿನೆಡೆಗೆ ಸಾಗಿದೆ. ಆ ರಾಷ್ಟ್ರದ ಸರ್ಕಾರಿ ಸಂಸ್ಥೆಗಳು ಪ್ರಚಾರ ಮಾಡುತ್ತಿರುವ ಅತಿ ಧಾರ್ಮಿಕತೆಯ ನಿಲುವು ಮತ್ತು ಶಾಲೆ
ಕಾಲೇಜುಗಳಗಳಲ್ಲಿ ಬೋಧಿಸಲಾಗುತ್ತಿರುವ ವಿಷಕಾರಿ ಶಿಕ್ಷಣವು, ಅನಿಯಂತ್ರಿತ ಪಶುಸದೃಶ ಜನಸಮೂಹವನ್ನು ತಯಾರಿಸು ತ್ತಿದೆ.

ಚೀನೀಯರೂ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಮತ್ತಾರು ಸುರಕ್ಷಿತರಾಗಿರುತ್ತಾರೆ? ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮತ್ತು ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಯಿಂದಾಗಿ, ಚೀನೀಯರು ಪಾಕಿಸ್ತಾನದಲ್ಲಿ ಬೇರೆಲ್ಲ ವಿದೇಶೀ ಯರಿಗಿಂತ ಹೆಚ್ಚಿನ ಸವಲತ್ತುಗಳನ್ನು ಹೊಂದಿದ್ದಾರೆ ಮತ್ತು ರಕ್ಷಣೆ ಪಡೆದಿದ್ದಾರೆ. ವಿಶೇಷವಾಗಿ ರಚಿಸಲಾದ ಪೋಲೀಸರ ಬಹುಸ್ತರಗಳ ಸೇನಾ ತುಕಡಿಗಳು ಚೀನೀಯರನ್ನು ಹಾನಿಯಿಂದ ದೂರವಿಡುತ್ತವೆ. ಅಲ್ಲದೆ ಇಸ್ಲಾಮಾಬಾದ್, ಕರಾಚಿ,
ಬಲೂಚಿಸ್ತಾನಗಳಲ್ಲಿ ಸ್ಥಳೀಯರೊಂದಿಗೆ ಸಂಪರ್ಕವನ್ನು ಅತಿ ಕಡಿಮೆ ಮಟ್ಟದಲ್ಲಿಟ್ಟುಕೊಳ್ಳುವಂತೆ ಚೀನೀಯರಿಗೆ ಸಲಹೆ
ನೀಡಲಾಗಿದೆ.

ಆದರೆ, ಕಳೆದ ವಾರದ ಘಟನೆಗಳನ್ನು ಅವಲೋಕಿಸಿದರೆ, ಇಂಥ ಮುನ್ನೆಚ್ಚರಿಕೆಗಳ ಹೊರತಾಗಿಯೂ ಚೀನಿಯರನ್ನು ಹುಚ್ಚು ಧಾರ್ಮಿಕ ಆವೇಶಕ್ಕೊಳಗಾದ ಜನಸಮೂಹದಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ದಾಸು ಜಲವಿದ್ಯುತ್ ಯೋಜನೆಯಲ್ಲಿ ಕಾರ್ಮಿಕರು ತೆಗೆದುಕೊಂಡ ದೀರ್ಘ ಪ್ರಾರ್ಥನಾ ವಿರಾಮಗಳನ್ನು ಅವರ ಚೀನಿ ಮೇಲ್ವಿಚಾರಕರು ವಿರೋಧಿಸಿದ ಪರಿಣಾಮ ವಾಗಿ ಅಲ್ಲಿ ಕೆಲಸ ಸ್ಥಗಿತಗೊಳಿಸಲಾಯಿತು.

ಸ್ಥಳೀಯರಿಗೆ ಇದು ಧರ್ಮ ನಿಂದನೆಯ ವಿಷಯವಾಗಿತ್ತು. ಸಿಪಿಇಸಿ ಯೋಜನೆಗಾಗಿ ಕೆಲಸ ಮಾಡುತ್ತಿದ್ದ ಆ ಚೀನಾದ ಪ್ರಜೆ ಯನ್ನು ಧರ್ಮನಿಂದೆಯ ಆರೋಪದ ಮೇಲೆ ಬಂಧಿಸಲಾಯಿತು. ಅಬೋಟಾಬಾದ್‌ನ ಲಾಕಪ್‌ಗೆ ಹೆಲಿಕಾಪ್ಟರ್‌ನಲ್ಲಿ ಸುರಕ್ಷಿತವಾಗಿ ತಲುಪಿದ ಈ ಚೀನಿ ವ್ಯಕ್ತಿ, ಸಿಯಾಲ್‌ಕೋಟ್ ಕಾರ್ಖಾನೆಯ ಶ್ರೀಲಂಕಾ ಮೂಲದ ಮ್ಯಾನೇಜರ್ ಪ್ರಿಯಂತ ಕುಮಾರ ಅವರಿಗಿಂತ ಅದೃಷ್ಟಶಾಲಿ.

ಈ ಹಿಂದೆ ಧರ್ಮನಿಂದೆಯ ಆರೋಪ ಹೊರಿಸಿ, ಚಿತ್ರಹಿಂಸೆ ನೀಡಿ ಪಾಕಿಸ್ತಾನಿ ಜನರು ಆತನನ್ನು ಕೊಂದಿದ್ದರು ಮತ್ತು
ಶವವನ್ನು ಆ ಕೆಲಸಗಾರರು ಸುಟ್ಟು ಹಾಕಿದ್ದರು. ಅಫ್ಘಾನಿಸ್ತಾನವನ್ನು ಹೊರತುಪಡಿಸಿ, ಇತರ ಮುಸ್ಲಿಂ -ಬಹುಸಂಖ್ಯಾತ ದೇಶಗಳಲ್ಲಿ ಇಂಥ ಮಧ್ಯಯುಗದ ಭಯಾನಕ ವರ್ತನೆಗಳು ನೋಡಸಿಗುವುದಿಲ್ಲ. ಧರ್ಮನಿಂದನೆಯ ಆರೋಪಗಳು ಆ ದೇಶಗಳ ಧಾರ್ಮಿಕ ಕಾಳಜಿಯ ರೇಖೆಗಳನ್ನು ಮೀರುವುದಿಲ್ಲ. ಹಲವು ಮುಸ್ಲಿಂ- ಬಹುಸಂಖ್ಯಾತ ದೇಶಗಳಲ್ಲಿ ಎಲ್ಲಾ ರಾಷ್ಟ್ರಗಳ ಮತ್ತು
ಧರ್ಮಗಳ ಪ್ರವಾಸಿಗರನ್ನು ಉತ್ಸಾಹದಿಂದ ಸ್ವಾಗತಿಸುತ್ತಾರೆ.

ಮೊರಾಕೊ ಮತ್ತು ಈಜಿಪ್ಟ್‌ನ ಮಾರುಕಟ್ಟೆಗಳು ಅಮೆರಿಕ, ಯುರೋಪ್, ರಷ್ಯಾ ಮತ್ತು ಇಸ್ರೇಲ್‌ನ್ ಪ್ರಜೆಗಳನ್ನು ಸಡಗರದಿಂದ ಆಹ್ವಾನಿಸಿದರೆ, ಇಂಡೋನೇಷ್ಯಾ ಮತ್ತು ಮಲೇಷ್ಯಾ ರಾಷ್ಟ್ರಗಳು ಆಸ್ಟ್ರೇಲಿಯಾದ ಪ್ರಜೆಗಳಿಗೆ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಯುಎಇ ಔಪಚಾರಿಕವಾಗಿ ಷರಿಯಾ ಕಾನೂನಿನ ಅಡಿಯಲ್ಲಿದ್ದರೂ, ಆ ದೇಶದ ಶಾಂತ ಸಾಮಾಜಿಕ ನೀತಿಗಳು ದುಬೈನ
ಅದ್ಭುತ ಗಳನ್ನುಆನಂದಿಸಲು ಎಲ್ಲೆಡೆಯಿಂದ ಜನರನ್ನು ಆಹ್ವಾನಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾ
ರಾಷ್ಟ್ರವೂ ಕೂಡ ವೀಸಾ ನಿಯಮಗಳನ್ನು ಸಡಿಲಿಸಿ ಮುಸ್ಲಿಂ ಧರ್ಮದ ಅನುಯಾಯಿಗಳಲ್ಲದೆ ಬೇರೆ ಧರ್ಮೀಯರನ್ನೂ
ಕೈ ಬೀಸಿ ಕರೆದು ಪ್ರವಾಸಿಗರಾಗಿ ಆ ದೇಶದ್ ವಿಸ್ಮಯಗಳನ್ನು ಆಸ್ವಾದಿಸುವಂತೆ ಆಹ್ವಾನಿಸುತ್ತಿದೆ.

ಆದರೆ ಪಾಕಿಸ್ತಾನದ ಕಥೆಯೇ ಬೇರೆ. ಯಾವುದೇ ವಿದೇಶಿ ಬಿಳಿಯರು, ಚೀನಾ ಅಥವಾ ಆಫ್ರಿಕಾದ ಪ್ರಜೆಗಳು ಅಲ್ಲಿನ ಬೀದಿಗಳಲ್ಲಿ ಅಥವಾ ಮಾರುಕಟ್ಟೆಗಳಲ್ಲಿ ಗೋಚರಿಸುವುದಿಲ್ಲ. ಪಾಕಿಸ್ತಾನದ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆ ಶೂನ್ಯಕ್ಕೆ ಅತ್ಯಂತ ಸಮೀಪದಲ್ಲಿದೆ. ಅಗಾಧ ವೆಚ್ಚದಲ್ಲಿ ನಿರ್ಮಿಸಲಾದ ಅಲ್ಲಿನ ಪ್ರಮುಖ ವಿಮಾನ ನಿಲ್ದಾಣಗಳು ಜನಸಂದಣಿಯ ಕೊರತೆಯಿಂದಾಗಿ ಆರ್ಥಿಕವಾಗಿ ದೊಡ್ಡ ಮಟ್ಟದ ನಷ್ಟದಲ್ಲಿವೆ. ಪ್ರತಿದಿನ ಬೆರಳೆಣಿಕೆಯಷ್ಟು ಅಂತಾ ರಾಷ್ಟ್ರೀಯ ವಿಮಾನಗಳು ಆ ನಿಲ್ದಾಣಗಳಲ್ಲಿ ಬಂದಿಳಿಯುತ್ತವೆ, ಬರುವಂಥ ಬಹುಪಾಲು ಪ್ರಯಾಣಿಕರು ಹೊರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಕೆಲಸಗಾರರು ಅಥವಾ ವಲಸಿಗರು.

ಪಾಕಿಸ್ತಾನವನ್ನು ಅಪಾಯಕಾರಿ ಸ್ಥಳವೆಂದು ಗ್ರಹಿಸಿ ಕಳೆದ ವಾರದ ಆರಂಭದಲ್ಲಿ ಸ್ವೀಡನ್ ದೇಶವು ತನ್ನ ರಾಯಭಾರ ಕಚೇರಿ
ಯನ್ನು ಅನಿರ್ದಿಷ್ಟ ಅವಽಯವರೆಗೂ ಮುಚ್ಚುವುದಾಗಿ ಘೋಷಿಸಿದೆ. ಪಾಕಿಸ್ತಾನದಲ್ಲಿ ೨೦೦೮ ರಲ್ಲಿ ಡೆನ್ಮಾರ್ಕ್‌ನ ರಾಯಭಾರ ಕಚೇರಿಯು ಕಾರ್ ಬಾಂಬ್ ದಾಳಿಗೆ ತುತ್ತಾಗಿತ್ತು. ಯುರೋಪ್‌ನ ಇತರ ಎರಡು ದೇಶಗಳ ರಾಯಭಾರ ಕಚೇರಿಗಳು ತಮ್ಮ ಕಾರ್ಯಾಚರಣೆಗಳನ್ನು ಸದ್ದಿಲ್ಲದೆ ಕೊನೆಗೊಳಿಸಿವೆ ಅಥವಾ ನಿರ್ಬಂಧಿಸಿವೆ ಎಂದು ತಿಳಿದುಬಂದಿದೆ. ಇತರ ರೀತಿಗಳಲ್ಲೂ ಪಾಕಿಸ್ತಾನಿ ಪ್ರಜೆಗಳು ಅಸಾಧಾರಣರು. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಆಶ್ರಯವನ್ನು ಕಂಡುಕೊಂಡಿದ್ದಲ್ಲದೆ, ಅವನು ಬಹಳ ಜನಪ್ರಿಯನಾಗಿದ್ದನು ಎಂಬುದನ್ನು ಮರೆಯಲಾಗುವುದಿಲ್ಲ.