Sunday, 24th November 2024

ರಿಚ್ಮಂಡ್ ರಸ್ತೆಯ ಪಾಳುಬಿದ್ದ ಮನೆ !

ವೀಕೆಂಡ್ ವಿತ್ ಮೋಹನ್

camohanbn@gmail.com

ಬೆಂಗಳೂರಿನ ರಿಚ್ಮಂಡ್ ರಸ್ತೆ ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತರು ವಾಸಿಸುವ ಜಾಗ. ಅನೇಕ ಕಂಪೆನಿಗಳು,
ಬ್ಯಾಂಕುಗಳು, ಪಬ್, ಪಂಚತಾರಾ ಹೋಟೆಲುಗಳು ಈ ರಸ್ತೆಯಲ್ಲಿವೆ. ಭೂಮಿಯ ಬೆಲೆ ಗಗನಕ್ಕೇರಿರುವ ಪ್ರತಿಷ್ಠಿತರ
ಜಾಗವಿದು. ಇಲ್ಲಿ ಭೂಮಿಯನ್ನು ಕೊಳ್ಳಬೇಕೆಂದರೆ ಕೋಟ್ಯಂತರ ರೂಪಾಯಿ ಹಣ ಬೇಕು.

ಇಂತಹ ಪ್ರದೇಶದಲ್ಲಿ ೧೯೯೪ ರಲ್ಲಿ ನಡೆದ ಘಟನೆಯೊಂದು ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಆ ಘಟನೆ ಅಂದಿನ ಕಾಲದ ದಿನಪತ್ರಿಕೆಗಳ ಪ್ರಮುಖ ಶೀರ್ಷಿಕೆಯಾಗಿತ್ತು. ಈ ರಸ್ತೆಯ ಪಕ್ಕದ ಪ್ರದೇಶದಲ್ಲಿ ಮಹಿಳೆಯ ಕೊಲೆಯೊಂದು ನಡೆದಿತ್ತು. ಸ್ವತಃ ಗಂಡನೇ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದ. ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿ ಬೀಳುವಂತಹ ಕೃತ್ಯವನ್ನು ಆ
ವ್ಯಕ್ತಿ ಮಾಡಿದ್ದ. ತನ್ನ ಹೆಂಡತಿಯನ್ನು ಕೊಂದು ಆಕೆಯ ಶವವನ್ನು ತನ್ನ ಮನೆಯ ಹಿತ್ತಲಲ್ಲಿ ಹೂತು ಹಾಕಿದ್ದ. ಆಕೆಯ ಶವವನ್ನು ಹೂತು ಹಾಕಿದ ನಂತರ ಅದೇ ಮನೆಯಲ್ಲಿ ಎರಡು ವರ್ಷಗಳ ಕಾಲ ವಾಸವಿದ್ದ.

ಮುರಳಿ ಮನೋಹರ್ ಮಿಶ್ರ ಎಂಬ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತನ ಮತ್ತೊಂದು ಹೆಸರು ಶ್ರದ್ಧಾನಂದ. ಆತ ಮದುವೆಯಾಗುವ ಮುನ್ನಾ ದಿನಗಳಿಂದಲೂ ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದ. ಕೊಲೆಯಾಗಿದ್ದ ಮಹಿಳೆಯ ಹೆಸರು ಶಕೀರಾ ಖಲೀಲಿ. ಈಕೆಯದ್ದು ಶ್ರದ್ಧಾನಂದನ ಜೊತೆ ಎರಡನೇ ಮದುವೆಯಾಗಿತ್ತು. ಮೊದಲನೇ ಗಂಡ ವಿದೇಶಾಂಗ ಇಲಾಖೆಯಲ್ಲಿ ಭಾರತೀಯ ರಾಯಭಾರಿಯಾಗಿದ್ದ. ಪ್ರತಿಷ್ಠಿತ ಕುಟುಂಬದಿಂದ ಬಂದಿದ್ದ ಈಕೆ ಮೊದಲ ಗಂಡನ ಜೊತೆ ಒಳ್ಳೆಯ ಜೀವನ ನಡೆಸತ್ತಿದ್ದಳು.

ಈಕೆಗೆ ಮುದ್ದಾದ ನಾಲ್ಕು ಹೆಣ್ಣು ಮಕ್ಕಳಿದ್ದರು. ತನ್ನ ಗಂಡ ಸದಾ ವಿದೇಶದಲ್ಲಿ ಇರುತ್ತಿದ್ದರಿಂದ ಈಕೆಗೆ ಏಕಾಂತತೆ ಕಾಡುತ್ತಿತ್ತು. ಇಂತಹ ಸಮಯದಲ್ಲಿ ಈಕೆಗೆ ಸಿಕ್ಕವನು ಶ್ರದ್ಧಾನಂದ. ಶಕೀರಾ ಖಲೀಲಿಯ ಮುತ್ತಜ್ಜ ಅಲಿ ಅಸ್ಕರ್. ಈ ಹೆಸರನ್ನು ಕೇಳಿರುವ ನೆನಪಿದೆ. ಅಲಿ ಅಸ್ಕರ್ ಅಂದಿನ ಕಾಲದ ದೊಡ್ಡ ಬಿಲ್ಡರ್. ಬೆಂಗಳೂರಿನ ಪ್ರತಿಷ್ಠಿತ ಕಟ್ಟಡಗಳನ್ನು
ಇವರು ನಿರ್ಮಿಸಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿಯಿಂದ ಉತ್ತಮ ಹಣ ಮತ್ತು ಹೆಸರನ್ನು ಮಾಡಿದ್ದರು.

ಬೆಂಗಳೂರಿನ ಹೃದಯ ಭಾಗದ ಹಲವು ಕಟ್ಟಡಗಳ ನಿರ್ಮಾಣದ ರೂವಾರಿಯಾಗಿದ್ದರು. ತನ್ನ ಮುತ್ತಜ್ಜನ ರೀತಿಯಲ್ಲಿ ತಾನೂ
ಸಹ ಬೆಂಗಳೂರಿನ ಪ್ರತಿಷ್ಠಿತ ಬಿಲ್ಡರ್ ಆಗಬೇಕೆಂಬ ಆಸೆ ಶಕೀರಾಳಿಗಿತ್ತು. ಎರಡನೇ ಮದುವೆಯ ನಂತರ ಶ್ರದ್ಧಾನಂದ
ಮತ್ತು ಶಕೀರಾ ಲಾಂಗ್ -ರ್ಡ್ ಟೌನ್‌ನಲ್ಲಿ ಎಸ್‌ಎಸ್ ಮಿಶನ್ ಎಂಬ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದರು. ಈಗಲೂ ಈ ಅಪಾರ್ಟ್ಮೆಂಟ್‌ನಲ್ಲಿ ಜನ ವಾಸವಿದ್ದಾರೆ. ಎರಡನೇ ಮದುವೆಯಾದ ಶಕೀರಾಳಿಗೆ ತನ್ನ ಕುಟುಂಬದವರ ಬೆಂಬಲ ಸಿಗಲಿಲ್ಲ. ಮಕ್ಕಳು ಅಪ್ಪನ ಜೊತೆ ವಿದೇಶದಲ್ಲಿದ್ದರು.

ಒಬ್ಬ ಮಗಳು ಮಾತ್ರ ಅಮ್ಮನನ್ನು ನೋಡಲು ಆಗಾಗ ಬೆಂಗಳೂರಿಗೆ ಬರುತ್ತಿದ್ದಳು. ಆ ಮಗಳು ಒಮ್ಮೆ ಮನೆಗೆ ಬಂದಾಗ ಶಕೀರಾ ಇಲ್ಲದಿರುವುದನ್ನು ಕಂಡು ಶ್ರದ್ಧಾನಂದನನ್ನು ಪ್ರಶ್ನಿಸಿದಾಗ ಆತ ಸುಳ್ಳು ಸಬೂಬುಗಳನ್ನು ನೀಡುತ್ತಿದ್ದ. ಶಕೀರಾಳಿಗೆ ತನಗೊಂದು ಗಂಡು ಮಗುವಿಲ್ಲದುದ್ದರ ಚಿಂತೆಯಿತ್ತು. ಶ್ರದ್ಧಾನಂದನ ಬಳಿ ಹೇಳಿಕೊಂಡಾಗ ಅವರಿಬ್ಬರೂ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದರು. ಶಕೀರಾಳ ಮಗಳು ಮನೆಗೆ ಬಂದಾಗ ಶ್ರದ್ಧಾನಂದ ಇದೇ ವಿಷಯವನ್ನು ಆಕೆಗೆ ಹೇಳಿ ನಿನ್ನ ಅಮ್ಮ ಮಗುವಿನ ಹೆರಿಗೆಗಾಗಿ ಅಮೆರಿಕಕ್ಕೆ ಹೋಗಿದ್ದಾಳೆಂಬ ಸಬೂಬನ್ನು ಹೇಳುತ್ತಿದ್ದ.

ತನ್ನ ಅಮ್ಮನ ಬಗ್ಗೆ ಬಗೆಬಗೆಯಾಗಿ ವಿಚಾರಿಸಿದರು ಶ್ರದ್ಧಾನಂದನಿಂದ ಸರಿಯಾದ ಉತ್ತರ ಬಾರದ ಕಾರಣ ಆಕೆ ಪೊಲೀಸರಿಗೆ ಕಾಣೆ ಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು. ಪೊಲೀಸರಿಗೆ ಶಕೀರಾಳನ್ನು ಹುಡುಕುವುದು ಸುಲಭವಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಶ್ರದ್ಧಾನಂದನ ಪ್ರಕರಣ ಕ್ಲಿಷ್ಟಕರವಾಗಿತ್ತು. ಪೊಲೀಸರು ನಗರ ಅಪರಾಧ ವಿಭಾಗಕ್ಕೆ ಕೇಸನ್ನು ವರ್ಗಾಯಿಸಿದಾಗ ತನಿಖೆ ವೇಗ ಪಡೆಯಿತು. ಈತನ ಮನೆಯಲ್ಲಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬನಿಗೆ ಚೆನ್ನಾಗಿ ಕುಡಿಸಿ ತನಿಖಾಧಿಕಾರಿಗಳು ಕೆಲವು ಮಹತ್ವದ ವಿಷಯಗಳನ್ನು ಹೊರತೆಗೆದಿದ್ದರು.

ಈತ ಶ್ರದ್ಧಾನಂದನಿಗೆ ಮರದ ಪೆಟ್ಟಿಗೆಯೊಂದನ್ನು ಎರಡು ವರ್ಷಗಳ ಹಿಂದೆ ತಂದುಕೊಟ್ಟಿರುವುದಾಗಿ ಪೊಲೀಸರ ಬಳಿ
ಹೇಳಿಬಿಟ್ಟಿದ್ದ. ಪೊಲೀಸರಿಗೆ ಮರದ ಪೆಟ್ಟಿಗೆ ಎಂದೊಡನೆ ದೊಡ್ಡದೊಂದು ಮುನ್ನಡೆ ಕೇಸಿನಲ್ಲಿ ಸಿಕ್ಕಿತ್ತು. ಶ್ರದ್ಧಾನಂದನನ್ನು ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಬಾಯಿ ಬಿಡಿಸಿದರು. ಪೊಲೀಸರು ಶ್ರದ್ಧಾನಂದನಿಗೆ ವಿಶೇಷ ಟ್ರೀಟ್ಮೆಂಟ್ ನೀಡಿದ ನಂತರ ತಾನು ತನ್ನ ಹೆಂಡತಿಯ ಶವವನ್ನು ತನ್ನ ಮನೆಯ ಹಿತ್ತಲಲ್ಲಿ ಹೂತುಹಾಕಿರುವುದಾಗಿ ಬಾಯಿ ಬಿಟ್ಟಿದ್ದ. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಪ್ರತಿಯೊಂದು ಪತ್ರಿಕೆಯ ಬಿಸಿ ಬಿಸಿ ಸುದ್ದಿಯಾಯಿತು.

ಈಗಿನ ಹಲವು ಹಿರಿಯ ಪತ್ರಕರ್ತರಿಗೆ ಈ ಪ್ರಕರಣದ ಇಂಚಿಂಚು ಮಾಹಿತಿ ತಿಳಿದಿದೆ. ಶ್ರದ್ಧಾನಂದನನ್ನು ಪೊಲೀಸ್
ಜೀಪಿನಲ್ಲಿ ಕರೆತಂದಂತಹ ಪೊಲೀಸರು ತಮ್ಮ ತನಿಖೆಯನ್ನು ವಿಡಿಯೋ ಮಾಡಿಸಿದ್ದರು. ಇದರ ಮಧ್ಯೆ ಮತ್ತೊಂದು
ಪ್ರಮುಖ ವಿಷಯವೊಂದನ್ನು ಹೇಳಬೇಕು. ತನ್ನ ಹೆಂಡತಿಯನ್ನು ಹೂತುಹಾಕಿದ್ದ ಜಾಗದ ಮೇಲೆ ತುಳಸಿಗಿಡವೊಂದನ್ನು ನೆಟ್ಟಿದ್ದ ಶ್ರದ್ಧಾನಂದ ಪ್ರತಿನಿತ್ಯ ಆ ಗಿಡಕ್ಕೆ ಹಾಲನ್ನು ಹಾಕುತ್ತಿದ್ದ. ಈತನ ಚಲನವಲನಗಳನ್ನು ಗಮನಿಸುತ್ತಿದ್ದ ಪೊಲೀಸರಿಗೆ ತುಳಸಿ ಗಿಡಕ್ಕೆ ಹಾಲನ್ನುಹಾಕುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿಯ ಸಮಾಽಯ ಮೇಲೆ ಹಾಲು ತುಪ್ಪವನ್ನು ಹಾಕಲಾಗುತ್ತದೆಯೆಂಬ ವಿಷಯ ಪೊಲೀಸರಿಗೆ ಮನವರಿಕೆಯಾಗಿತ್ತು. ಪೊಲೀಸರು ಶ್ರದ್ಧಾನಂದನ್ನು ಮನೆಗೆ ಕರೆ ತಂದ ನಂತರ ಮನೆಯ ಹಿಂದಿನ ಬಾಗಿಲ ಬಳಿ ಆತನನ್ನು ಕರೆದುಕೊಂಡು ಹೋದರು. ಆತ ತೋರಿಸಿದ ಜಾಗದಲ್ಲಿ ಭೂಮಿಯನ್ನು ಅಗೆಯಲು ಸೂಚಿಸಲಾಯಿತು. ಒಂದು ಸೀಮೆಸುಣ್ಣದ
ಮೂಲಕ ಅಚ್ಚುಕಟ್ಟಾಗಿ ಶವ ಹೂತಿಟ್ಟಿರುವ ಜಾಗವನ್ನು ಆತ ಗುರುತಿಸಿದ್ದ. ಆತ ಗುರುತಿಸಿದ ಜಾಗವನ್ನು ಅಗೆದ ಪೊಲೀಸರಿಗೆ ಪೆಟ್ಟಿಗೆ ಮೊದಲು ಸಿಕ್ಕಿತು. ಪೆಟ್ಟಿಗೆಯೊಳಗೆ ಹಾಸಿಗೆಯಿಂದ ಸುತ್ತಿದ ಅಸ್ತಿಪಂಜರವೊಂದು ಸಿಕ್ಕಿತು.

ಸುಮಾರು ಎರಡು ವರ್ಷಗಳ ನಂತರ ಶಕೀರಾಳ ಶವ ಆಕೆಯ ಮನೆಯ ಹಿತ್ತಲಿನಲ್ಲಿ ಸಿಕ್ಕಿತ್ತು. ಪೊಲೀಸರಿಗೆ ದೊಡ್ಡದೊಂದು ಪ್ರಕರಣವನ್ನು ಭೇದಿಸಿದಂತಾಗಿತ್ತು. ಅಂದಿನ ಕಮಿಷನರ್ ಕೋದಂಡರಾಮಯ್ಯನವರು ನಿಟ್ಟುಸಿರುಬಿಟ್ಟಿದ್ದರು. ಆದರೆ ನಿಜವಾದ ಆಟ ಶುರುವಾದದ್ದೇ ಶವ ಸಿಕ್ಕ ನಂತರ. ನ್ಯಾಯಾಲಯದಲ್ಲಿ ಈ ಪ್ರಕರಣ ನಿಲ್ಲಬೇಕಾದರೆ ಸರಿಯಾದ ಸಾಕ್ಷಿಗಳ ಅವಶ್ಯಕತೆಯಿತ್ತು. ಈತನೇ ಆಕೆಯನ್ನು ಕೊಲೆ ಮಾಡಿದ್ದನೆಂದು ಹೇಳಲು ಗಟ್ಟಿಯಾದ ಸಾಕ್ಷಿಯಿರಲಿಲ್ಲ.

ಪೊಲೀಸರ ಮುಂದೆ ಆತ ಬಾಯಿ ಬಿಟ್ಟಿದ್ದರೂ ಸಹ ಅದನ್ನು ಪ್ರಬಲ ಸಾಕ್ಷಿಯೆಂದು ಪರಿಗಣಿಸಲಾಗದು. ಪೊಲೀಸರು ಸಾಕ್ಷಿಗಳನ್ನು ಸೇರಿಸುವುದರಲ್ಲಿ ಹೈರಾಣಾಗಿ ಬಿಟ್ಟಿದ್ದರು. ಈತನ್ಮದ್ಯೆ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂತು. ಶ್ರದ್ಧಾನಂದ ತನ್ನ ಹೆಂಡತಿಗೆ ನಿದ್ದೆ ಮಾತ್ರೆಯನ್ನು ನೀಡಿ ಆಕೆ ಸಂಪೂರ್ಣವಾಗಿ ನಿದ್ರೆಗೆ ಜಾರಿದ ನಂತರ ಆಕೆಯನ್ನು ಹಾಸಿಗೆಯಲ್ಲಿ ಸುತ್ತಿ ಶವ ಪೆಟ್ಟಿಗೆಯೊಳಗೆ ಹಾಕಿ ಮೊಳೆ ಹೊಡೆದಿದ್ದನಂತೆ. ತನ್ನ ಹೆಂಡತಿ ಇನ್ನೂ ಬದುಕಿರುವಾಗಲೇ ಜೀವಂತ ಸಮಾಧಿ ಮಾಡಿದ್ದನೆಂದು ಹೇಳಲಾಗಿದೆ. ಈ ವಿಷಯ ತಿಳಿಯುತ್ತಲೇ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದರು.

೧೯೯೪ ರಲ್ಲಿ ಬೆಂಗಳೂರು ನಗರ ಅಮಾನುಷ್ಯ ಕೃತ್ಯವೊಂದಕ್ಕೆ ಸಾಕ್ಷಿಯಾಗಿತ್ತು. ಖಾಸಗೀ ಮಾಧ್ಯಮದ ವರದಿಗಾರ ರೊಬ್ಬರು ಹೇಳಿರುವ ಪ್ರಕಾರ ಶವ ಪೆಟ್ಟಿಗೆಯ ಒಳಭಾಗದಲ್ಲಿ ಉಗುರಿನಿಂದ ಕೆರೆದಿರುವ ನೂರಾರು ಗುರುತುಗಳಿದ್ದವು. ಜ್ಞಾನ ಬಂದ ನಂತರ ಶಕೀರಾ ಪೆಟ್ಟಿಗೆಯಿಂದ ಹೊರಬರಲು ತನ್ನ ಉಗುರುಗಳಿಂದ ಮೊಳೆಗಳನ್ನು ಕಿತ್ತುಹಾಕಲು ಸಾಕಷ್ಟು ಪ್ರಯತ್ನ ಪಟ್ಟಿರಬಹುದು. ಪೊಲೀಸರು ಶ್ರದ್ಧಾನಂದನನ್ನು ಕರೆತಂದು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆತನ ವರ್ತನೆಯಲ್ಲಿ ಭಯವೇ ಇರಲಿಲ್ಲ.

ಎರಡು ವರ್ಷಗಳ ಕಾಲ ಅದೇ ಮನೆಯಲ್ಲಿ ತನ್ನ ಸ್ನೇಹಿತರ ಜೊತೆಗೆ ರಾಜಾರೋಷವಾಗಿ ಜೀವನ ನಡೆಸುತ್ತಿದ್ದನೆಂದು ಹೇಳಲಾಗುತ್ತದೆ. ಸತತ ೧೧ ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ೨೦೦೫ ರಲ್ಲಿ ಈತನಿಗೆ ಗಲ್ಲು ಶಿಕ್ಷೆ ನೀಡಿತ್ತು. ಈತ ಮಾಡಿದ ಕೃತ್ಯಕ್ಕೆ ಗಲ್ಲು ಶಿಕ್ಷೆ ನೀಡುವುದು ನ್ಯಾಯಾಧೀಶರಿಗೆ ಸುಲಭವಾಗಿರಲಿಲ್ಲ. ಅಪರೂಪದಲ್ಲಿ ಅಪರೂಪದ ಪ್ರಕರಣಕ್ಕೆ ಮಾತ್ರ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಶ್ರದ್ಧಾನಂದನ ಹಿನ್ನೆಲೆಯನ್ನು ಗಮನಿಸಿದರೆ ಆತನೇನು ಸತತವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಉದಾಹರಣೆಯಿರಲಿಲ್ಲ. ಈ ಪ್ರಕರಣ ಆತನ ಜೀವನದ ಮೊಟ್ಟಮೊದಲ ಅಪರಾಧ ಕೃತ್ಯವಾಗಿತ್ತು.

ಈತನ ವಿರುದ್ಧ ವಾದ ಮಾಡಿದ್ದ ಖ್ಯಾತ ವಕೀಲ ಸಿ.ವಿ. ನಾಗೇಶ್ ಈತ ನಡೆಸಿದ್ದ ಕೃತ್ಯ ಅಪರೂಪದ ಪ್ರಕರಣವಾಗಿದ್ದು ಈತನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಕೇಳಿಕೊಂಡಿದ್ದರು. ಶಕೀರಾ ಎರಡನೇ ಮದುವೆಯಾಗಿದ್ದುದರ ಸಲುವಾಗಿ ಆಕೆಗೆ ಸೇರಬೇಕಿದ್ದ ಆಸ್ತಿಯ ಪಾಲನ್ನು ನೀಡಲು ಆಕೆಯ ಕುಟುಂಬದವರಿಗೆ ಇಷ್ಟವಿರಲಿಲ್ಲ. ಈ ವಿಷಯದಲ್ಲಿ ಆಗಾಗ ಆಕೆಯ ಮನೆಯವರ ಜೊತೆ ಮನಸ್ತಾಪಗಳು ನಡೆಯುತ್ತಲೇ ಇದ್ದವು. ತನ್ನ ಆಸ್ತಿಯನ್ನು ಶಕೀರಾ, ಶ್ರದ್ಧಾನಂದನ ಹೆಸರಿನಲ್ಲಿ ಹುಯಿಲ್ ಮಾಡಿದ್ದಳು. ಶ್ರದ್ಧಾನಂದನಿಗೆ ಗಲ್ಲು ಶಿಕ್ಷೆ ವಿಧಿಸಿ ಆತ ಸತ್ತರೆ ಸಂಪೂರ್ಣ ಆಸ್ತಿ ಶಕೀರಾಳ ಕುಟುಂಬದವರ ಪಾಲಾಗುತ್ತಿತ್ತು. ಶಕೀರಾಳಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ.

ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದರೆ ಆತ ಹೊರಬಂದ ನಂತರ ಆಕೆಯ ಆಸ್ತಿ ಸಂಪೂರ್ಣವಾಗಿ ಶ್ರದ್ಧಾನಂದನ ದಾಗುತ್ತದೆ. ಅಷ್ಟು ಹೊತ್ತಿಗಾಗಲೇ ಆತ ಹನ್ನೊಂದು ವರ್ಷಗಳ ಕಾಲ ಜೈಲಿನಲ್ಲಿ ಇದ್ದಾಗಿತ್ತು. ಉಳಿದ ಮೂರು ವರ್ಷಗಳ ಸಜೆಯ ನಂತರ ಆತ ಹೊರಬರುತ್ತಿದ್ದ.  ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣವನ್ನು ಅಪರೂಪದ ಪ್ರಕರಣವೆಂದು ಹೇಳಿ ಶ್ರದ್ಧಾನಂದನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದರು.

ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಯಿತು. ಆತ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ್ದ ಸರ್ವೋಚ್ಚ ನ್ಯಾಯಾಲಯ ೨೦೦೮ ರಲ್ಲಿ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಿತು. ತದನಂತರ ನಡೆದ ಕೆಲವು ಬೆಳವಣಿಗೆಗಳಲ್ಲಿ ಈತನನ್ನು ಗಲ್ಲಿಗೆ ಏರಿಸುವ ಬದಲು ಸಾಯುವವರೆಗೂ ಒಂದೇ ಒಂದು ದಿನ ಪರೋಲ್ ನೀಡದೆ ಜೈಲಿನಲ್ಲೇ ಇರುವಂತೆ ನ್ಯಾಯಾಲಯ ಆದೇಶಿಸಿತು. ಅತ್ತ ಸಾಯಲೂ ಆಗದೆ ಇತ್ತ ಹೊರಬರಲೂ ಆಗದೆ ಶ್ರದ್ಧಾನಂದ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಈತನ ಪರವಾಗಿ ವಾದ ಮಾಡುತ್ತಿರುವ ವಕೀಲರು ಕೆಲವು ಆಶ್ಚರ್ಯಕರ ಸಂಗತಿಗಳನ್ನು ನ್ಯಾಯಾಲಯದ ಮುಂದೆ ವಾದಿಸಿದ್ದರು.

ಶ್ರದ್ಧಾನಂದನನ್ನು ಪೊಲೀಸರು ಕರೆತಂದಾಗ ಆತನ ಜೇಬಿನಿಂದಲೇ ಮನೆಯ ಕೀಯನ್ನು ಹೊರತೆಗೆದು ಬಾಗಿಲು ತೆಗೆಯುತ್ತಾನೆ. ಹಾಗಾದರೆ ಪೊಲೀಸರು ಮನೆ ಕೀಯನ್ನು ಯಾಕೆ ವಶಪಡಿಸಿಕೊಂಡಿರಲಿಲ್ಲ? ಶ್ರದ್ಧಾನಂದ ಮನೆಯೊಳಗೇ ಬಂದ ನಂತರ ಶಕೀರಾಳಿಗೆ ನೀಡಿದ್ದ ನಿದ್ರೆ ಮಾತ್ರೆಗಳನ್ನು ತೋರಿಸುತ್ತಾನೆ. ಹಾಗಾದರೆ ಆಕೆ ಸತ್ತ ಮೂರು ವರ್ಷಗಳ ನಂತರವೂ ಆಕೆಗೆ ನೀಡಿದ್ದ ಮಾತ್ರೆಗಳನ್ನು ಬಿಸಾಡದೆ ಮನೆಯಲ್ಲಿ ಯಾಕೆ ಇಟ್ಟು ಕೊಂಡಿದ್ದ? ಖಾಸಗೀ ಮಾಧ್ಯಮವೊಂದಕ್ಕೆ ಜೈಲಿನಿಂದಲೇ ನೀಡಿರುವ ಸಂದರ್ಶನದಲ್ಲಿ ಶ್ರದ್ಧಾನಂದ ತಾನು ಶಕೀರಾಳ ಕೊಲೆ ಮಾಡಲಿಲ್ಲವೆಂದು ಹೇಳಿದ್ದಾನೆ.

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಿದ ರೀತಿಯಲ್ಲಿ ತನ್ನನ್ನೂ ಬಿಡುಗಡೆ ಮಾಡಿಯೆಂದು ನ್ಯಾಯಾಲಯಕ್ಕೆ ಕಳೆದ ವರ್ಷ ಕೇಳಿಕೊಂಡಿದ್ದ. ತಾನು ಈಗಾಗಲೇ ೨೯ ವರ್ಷಗಳ ಜೈಲುವಾಸ ಅನುಭವಿಸಿದ್ದು ತನಗೆ ಬಿಡುಗಡೆಯ ಭಾಗ್ಯ ಕಲ್ಪಿಸಿಯೆಂದು ೮೦ ವರ್ಷ ವಯಸ್ಸಿನ ಶ್ರದ್ಧಾನಂದ ಕೇಳಿಕೊಂಡಿದ್ದಾನೆ. ಈತನ ವಕೀಲರು ಹೇಳುವ ಕಥೆಯೇ ಬೇರೆಯಿದೆ. ಆ ಕಥೆಯನ್ನು ಮುಂದೊಂದು ದಿನ ಹೇಳುವ ಪ್ರಯತ್ನ ಮಾಡುತ್ತೇನೆ.

ಇಂದಿಗೂ ಈ ಜಾಗ ವ್ಯಾಜ್ಯದಲ್ಲಿದ್ದು ಪಾಳುಬಿದ್ದ ಶಕೀರಾ ಮತ್ತು ಶ್ರದ್ಧಾನಂದನ ಮನೆಯನ್ನು ರಿಚ್ಮಂಡ್ ರಸ್ತೆಯ ಬಳಿ
ಕಾಣಬಹುದು. ಅಂದಹಾಗೆ ಕೊಲೆಯಾದ ಶಕೀರಾ ಖಲೀಲಿ ಮೈಸೂರು ಸಂಸ್ಥಾನದಲ್ಲಿ ದೀವಾನರಾಗಿದ್ದ ಸರ್ ಮಿರ್ಜಾ
ಇಸ್ಮಾಯಿಲ್ ಮೊಮ್ಮೊಗಳು!