Saturday, 23rd November 2024

ಸೌದಿ ಅರೇಬಿಯಾಕ್ಕೆ ಹಜ್ ಕೋಟಾ ಬಿಟ್ಟುಕೊಟ್ಟ ಪಾಕಿಸ್ತಾನ

ಇಸ್ಲಾಮಾಬಾದ್: ಬೆಲೆ ಏರಿಕೆ, ಸಾಲಬಾಧಗಳಿಂದ ಜರ್ಝರಿತವಾಗಿರುವ ಪಾಕಿಸ್ತಾನ ಇದೀಗ ಹಜ್ ಯಾತ್ರೆಗೆ ತನಗಿರುವ ಮೀಸಲು ಸ್ಥಾನಗಳ ಪೈಕಿ ಕೆಲವನ್ನು ಬಿಟ್ಟುಕೊಟ್ಟಿದೆ.

ಪಾಕಿಸ್ತಾನ ತನ್ನ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ನಿರ್ಧಾರ ಕೈಗೊಂಡಿದ್ದು. ಪಾಕಿಸ್ತಾನ ತನ್ನ ಹಜ್ ಕೋಟಾವನ್ನು ಸೌದಿ ಅರೇಬಿಯಾಗೆ ಬಿಟ್ಟುಕೊಟ್ಟಿದೆ. ಬಳಕೆ ಆಗದೇ ಉಳಿದಿರುವ 8,000ದಷ್ಟು ಮಂದಿಯ ಕೋಟಾ ವನ್ನು ಪಾಕಿಸ್ತಾನ ಹಿಂದಿರುಗಿಸಿದೆ.

ಹಜ್ ಯಾತ್ರೆಗೆ ಹೋಗುವ ಸಂಖ್ಯೆಗೆ ಮಿತಿ ಇರುತ್ತದೆ. ಒಂದೊಂದು ದೇಶದಿಂದ ಇಂತಿಷ್ಟು ಹಜ್ ಯಾತ್ರಿಕರಿಗೆ ಪ್ರತೀ ವರ್ಷ ಅವಕಾಶ ಇರುತ್ತದೆ. ಈ ಬಾರಿ ಪಾಕಿಸ್ತಾನ ಜಗಳ ಮಾಡಿ ಕೋಟಾ ಹೆಚ್ಚಿಸಿಕೊಂಡಿತ್ತು. ಭಾರತಕ್ಕೆ ಹಜ್ ಯಾತ್ರೆಗೆ ಸಿಕ್ಕಿರುವ ಮೀಸಲು 1.75 ಲಕ್ಷ. ಪಾಕಿಸ್ತಾನದಿಂದ 2023ರ ಹಜ್ ಯಾತ್ರೆಗೆ 1,79,210 ಮಂದಿಗೆ ಮೀಸಲು ಹೆಚ್ಚಿಸಲಾಗಿದೆ. ಆದರೆ, ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಜನರು ಲಕ್ಷಾಂತರ ರೂ ಖರ್ಚಾಗುವ ಹಜ್ ಯಾತ್ರೆ ಕೈಗೊಳ್ಳಲು ಅಸಾಧ್ಯದ ಪರಿಸ್ಥಿತಿಯಲ್ಲಿದ್ದಾರೆ. ಪಾಕಿಸ್ತಾನಕ್ಕೂ ಸಬ್ಸಿಡಿ ದರದಲ್ಲಿ ಹಜ್ ಯಾತ್ರಿಕರನ್ನು ಕಳುಹಿಸಲು ಕಷ್ಟವಾಗುತ್ತಿದೆ.

ಈಗ ಹಜ್ ಯಾತ್ರಿಕರ ಕೋಟಾವನ್ನು ಹಿಂಪಡೆಯುವುದರಿಂದ ಪಾಕಿಸ್ತಾನದ ಬೊಕ್ಕಸಕ್ಕೆ 24 ಮಿಲಿಯನ್ ಡಾಲರ್ (ಪಾಕಿಸ್ತಾನ ರುಪಾಯಿಯಲ್ಲಿ 676 ಕೋಟಿ, ಭಾರತೀಯ ರುಪಾಯಿಯಲ್ಲಿ ಸುಮಾರು 200 ಕೋಟಿ) ಉಳಿತಾಯವಾಗಲಿದೆ.

ಪಾಕಿಸ್ತಾನದಲ್ಲಿ ಹಜ್ ಯಾತ್ರೆಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಸರ್ಕಾರಿ ಸಬ್ಸಿಡಿಯಲ್ಲಿ ಜನರು ಹಜ್ ಯಾತ್ರೆಗೆ ಹೋದರೆ ಒಬ್ಬರಿಗೆ 11.75 ಲಕ್ಷ ವೆಚ್ಚವಾಗುತ್ತದೆ. ಭಾರತೀಯ ರುಪಾಯಿಯಲ್ಲಿ ಇದು 3.42 ಲಕ್ಷ ರೂ ಆಗುತ್ತದೆ. ಭಾರತಕ್ಕೆ ಹಜ್ ಯಾತ್ರೆಗೆ ಈ ವರ್ಷ 1.75 ಲಕ್ಷ ಸೀಟುಗಳ ಕೋಟಾ ಸಿಕ್ಕಿದೆ.