Saturday, 23rd November 2024

ನಮ್ಮ ಬದುಕಿನ ಚುಕ್ಕಾಣಿಯ ಹಿತಮಿತ ಸೂತ್ರ

ಹಿಂದಿರುಗಿ ನೋಡಿದಾಗ

ನಮ್ಮ ಪೂರ್ವಜರು ಅಲೆಮಾರಿ ಜೀವನವನ್ನು ನಡೆಸುತ್ತಿದ್ದಾಗ, ದಿನಕ್ಕೆ ೧೫-೧೮ ಕಿಮೀ ದೂರ ನಡೆಯುತ್ತಿದ್ದರು. ಅವರು ಕಾಲಕ್ರಮೇಣ ಅಲೆಮಾರಿ ಬದುಕನ್ನು ತೊರೆದರು. ಒಂದು ಕಡೆ ಸ್ಥಿರವಾಗಿ ನಿಂತರು. ಹಾಗೆ ನಿಂತರೂ ಸಹ, ಅವರು ನಿತ್ಯ ದೈಹಿಕ ಶ್ರಮದಲ್ಲಿ ತೊಡಗುತ್ತಿದ್ದರು. ಕೃಷಿ, ಪಶುಪಾಲನೆ, ಗೃಹಕೃತ್ಯ ಗಳನ್ನು ನಡೆಸಲು ಶಾರೀರಿಕ ಶ್ರಮವು ಅಗತ್ಯವಿತ್ತು. ಅನಿವಾರ್ಯವಾಗಿತ್ತು.

ನಮ್ಮ ಪೂರ್ವಜರು ಜ್ಞಾನ-ವಿಜ್ಞಾನದ ನೆರವಿನಿಂದ ಹಲವು ಕೆಲಸಗಳನ್ನು ಯಾಂತ್ರಿಕಗೊಳಿಸಿ ದೈಹಿಕ ಶ್ರಮವನ್ನು ತಗ್ಗಿಸಿ ಕೊಂಡರು. ಅವರು ಎಷ್ಟು ಬೇಗ ಯಾಂತ್ರೀಕರಣಕ್ಕೆ ಒಗ್ಗಿಕೊಂಡರೋ, ಅಷ್ಟು ಬೇಗ ಅವರ ವಂಶವಾಹಿಗಳು ಯಾಂತ್ರೀ ಕರಣದ ಅಗತ್ಯಗಳಿಗೆ ಒಗ್ಗಿಕೊಳ್ಳಲಿಲ್ಲ. ನಮ್ಮ ವಂಶವಾಹಿಗಳು ಈಗಲೂ ನಾವು ಶಾರೀರಿಕ ಶ್ರಮದಲ್ಲಿ ತೊಡಗಬೇಕು ಎಂದು ನಿರೀಕ್ಷಿಸುತ್ತವೆ. ಹಾಗಾಗಿ ಶಾರೀರಿಕ ಶ್ರಮವಿಲ್ಲದ ಬದುಕು, ನಾನಾ ರೋಗಜನನಕ್ಕೆ ಆಹ್ವಾನವನ್ನು ನೀಡುತ್ತದೆ.

ಇಂದ್ರಿಯ ನಿಗ್ರಹ: ಭಗವದ್ಗೀತೆಯಲ್ಲಿ ಕೃಷ್ಣನು ಶಾರೀರಿಕ ಕೆಲಸ ಕಾರ್ಯ ಗಳ ಮಹತ್ವದ ಬಗ್ಗೆ ಸ್ಪಷ್ಟವಾಗಿ ಹೇಳಿರುವುದುಂಟು. ನಾವು ಇಂದು ನಮ್ಮ ಜ್ಞಾನ-ವಿಜ್ಞಾನದ ನೆರವಿನಿಂದ ಜಗತ್ತನ್ನು ಕುಗ್ರಾಮವಾಗಿಸಿದ್ದೇವೆ. ಅದರ ಫಲವಾಗಿ ದಿನ ಪೂರ್ತಿ ಕುಳಿತ ಕಡೆಯೇ ಕುಳಿತಿರುತ್ತೇವೆ. ಕುಳಿತು ಕುಳಿತು, ಕುಳಿತೆಡೆಯಲ್ಲಿ ಜಂಕ್ ಆಹಾರವನ್ನು ತಿಂದು ಬೊಜ್ಜನ್ನು ತರಿಸಿಕೊಳ್ಳುತ್ತಿದ್ದೇವೆ. ಬೊಜ್ಜು ರೋಗಗಳ ರಾಜ. ಹಾಗಾಗಿ ಜೀವನಶೈಲಿಯ ರೋಗಗಳಲ್ಲಿ ಬಹಳ ಮುಖ್ಯವಾದ ಮಧು ಮೇಹವು ನಮ್ಮನ್ನು ತಾನಾಗಿಯೇ ಹುಡುಕಿಕೊಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಮಧುಮೇಹ ನಿಯಂತ್ರಣ ಯೋಜನೆಯಲ್ಲಿ ಶಾರೀರಿಕ ಚಟುವಟಿಕೆಗಳ ಮಹತ್ವವನ್ನು ಅರ್ಥ ಮಾಡಿ ಕೊಂಡಿದ್ದೇವೆ. ಕೊನೆಯ ಪಕ್ಷ ನಿತ್ಯ ನಡಿಗೆಯಲ್ಲಾದರೂ ತೊಡಗಿಕೊಳ್ಳಲೇಬೇಕಾಗಿದೆ. ಪ್ರತಿಯೊಬ್ಬ ಮನುಷ್ಯನ ಸಮಗ್ರ ಆರೋಗ್ಯಕ್ಕೆ ಶಾರೀರಿಕ ಶ್ರಮ ತೀರಾ ಅಗತ್ಯ. ನೀನು ಕೆಲಸವನ್ನು ಮಾಡದಿದ್ದರೆ, ನಿನ್ನ ದೇಹವನ್ನೂ ಸ್ವಸ್ಥ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾರೆ (೩-೮). ನಮ್ಮಲ್ಲಿ ಪಂಚೇಂದ್ರಿಯಗಳು ಇವೆ. ಇವು ಇಂದ್ರನ ವಜ್ರಾಯುಧದಂತೆ ಸರ್ವ ಶಕ್ತಿಶಾಲಿ ಯಾಗಿರುವಂತಹವು. ಇವುಗಳ ಹೊಡೆತದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಳಿದಷ್ಟು ಸುಲುಭವಾದ ಕೆಲಸವಲ್ಲ.

ನಮ್ಮ ಮನಸ್ಸು ಯಾವಾಗಲು ಇಂದ್ರಿಯ ಸುಖಕ್ಕೆ ಹಾತೊರೆಯುತ್ತಿರುತ್ತದೆ. ಇಂದ್ರಿಯಗಳನ್ನು ತೃಪ್ತಿಪಡಿಸುವುದು ಅಸಾಧ್ಯ ಎನ್ನುವ ಸತ್ಯವು ನಮ್ಮ ಮನಸ್ಸಿಗೆ ಹೊಳೆಯುವುದಿಲ್ಲ. ಯಜ್ಞ ಕುಂಡದಲ್ಲಿ ಪ್ರಜ್ವಲಿಸುತ್ತಿರುವ ಬೆಂಕಿಯನ್ನು ತುಪ್ಪದಿಂದ ಆರಿಸಲು ಸಾಧ್ಯವಿಲ್ಲ. ಬುದ್ಧಿ ಎಷ್ಟು ಹೇಳಿದರೂ ಮನಸ್ಸು ಕೇಳುವುದಿಲ್ಲ. ಹಾಗಾಗಿ ಇಂದ್ರಿಯಗಳ ಸೆಳೆತಕ್ಕೆ ಸಿಕ್ಕ ನಾವು, ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮರೆಯುವುದು ಸಹಜ. ನಮ್ಮ ಬದುಕಿನ ಸಾರ್ಥ ಕತೆಯು ತ್ಯಾಗದಲ್ಲಿಯೇ ಹೊರತು ಭೋಗ ದಲ್ಲಿಲ್ಲ.

ಈ ಸತ್ಯವನ್ನು ಅರಿತುಕೊಳ್ಳದೇ ಬೊಜ್ಜನ್ನು ಬೆಳೆಸಿಕೊಂಡರೆ, ಮಧುಮೇಹವು ಕ್ರಮೇಣ ನಮ್ಮ ದೇಹವನ್ನು ಮಾತ್ರವಲ್ಲ
ನಮ್ಮ ಮನಸ್ಸು ಹಾಗೂ ಆತ್ಮವನ್ನು ತಿನ್ನತೊಡಗುತ್ತದೆ. ಇಂದ್ರಿಯಗಳ ತೃಪ್ತಿಗಾಗಿಯೇ ಬದುಕುವ ಮನುಷ್ಯನ ಬದುಕು ವ್ಯರ್ಥ (೩-೧೬). ನೀನು ಮಾಡುವ ಶಾರೀರಿಕ ಕೆಲಸ ಕಾರ್ಯಗಳ ಫಲದ ಬಗ್ಗೆ ಚಿಂತಿಸದೆ, ಶಾರೀರಿಕ ಕೆಲಸ ಕಾರ್ಯಗಳಲ್ಲಿ ತೊಡಗುವುದು ನಿನ್ನ ಕರ್ತವ್ಯ ಎಂದು ಭಾವಿಸಿ ತೊಡಗು (೩-೧೯).

ವೈದ್ಯನು ಹೊರತಲ್ಲ: ಕೃಷ್ಣನು ಕೇವಲ ಮಧುಮೇಹಿಗಳಿಗೆ ಮಾತ್ರ ಕಿವಿಮಾತನ್ನು ಹೇಳುತ್ತಿಲ್ಲ. ಮಧುಮೇಹಿಗಳಿಗೆ ಚಿಕಿತ್ಸೆ ಯನ್ನು ನೀಡುವ ವೈದ್ಯರಿಗೂ ಹೇಳುತ್ತಿದ್ದಾನೆ. ವೈದ್ಯನಾದವನು ತನ್ನ ಆರೋಗ್ಯವನ್ನು ಸಕ್ಷಮವಾಗಿಟ್ಟುಕೊಂಡಿದ್ದರೆ ಮಾತ್ರ, ಆತನು ರೋಗಿಗೆ ಮಾದರಿಯಾಗಬಲ್ಲ. ಆಗ ಮಾತ್ರ ಅವನಿಗೆ ಹೀಗೆ ಮಾಡು-ಹೀಗೆ ಮಾಡಬೇಡ ಎನ್ನುವ ಅಧಿಕಾರವು ದೊರೆಯುತ್ತದೆ. ಇದನ್ನು ಸೂಚ್ಯವಾಗಿ ಕೆಳಗಿನ ಶ್ಲೋಕದಲ್ಲಿ ಹೇಳಿದ್ದಾನೆ.

ಜನಕನಂತಹ ರಾಜರು ತಮಗೆ ನಿಯಮಿತವಾದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡುದುದರಿಂದಲೇ ಅವರು ಪರಿ ಪೂರ್ಣತೆಯನ್ನು ಪಡೆದರು (೩-೨೦). ಒಂದು ರಾಜ್ಯದ ಅರಸನು ಇಡೀ ಪ್ರಜೆಗಳಿಗೆ ಮಾದರಿ. ರಾಜನಾದವನು ತನ್ನ
ಪಾಲಿಗೆ ಬಂದ ಕೆಲಸ ಕಾರ್ಯ ಗಳನ್ನು ನಿತ್ಯ ಮಾಡುತ್ತಿದ್ದರೆ ಮಾತ್ರ ಅವನು ತನ್ನ ಪ್ರಜೆಗಳಿಗೆ ಮಾದರಿಯಾಗಬಲ್ಲ.
ವೈದ್ಯನೂ ಸಹ ರಾಜ ಹಾಗೆ! ಅವನು ತನ್ನ ಶರೀರವನ್ನು ನಿತ್ಯ ವ್ಯಾಯಾಮದಲ್ಲಿ ತೊಡಗಿಸಿ, ಸದೃಢವಾಗಿ ಇಟ್ಟುಕೊಂಡರೆ
ಮಾತ್ರ, ಅವನು ತನ್ನ ರೋಗಿಗೆ ಹೀಗೆಯೇ ಮಾಡು ಎಂದು ಅಧಿಕಾರಯುತವಾಗಿ ಹೇಳಬಲ್ಲ. ವೈದ್ಯನೇ ದೊಡ್ಡ ರೋಗಿ ಯಾಗಿದ್ದರೆ, ಅವನು ಆಪ್ತಸಲಹೆಯನ್ನು ನೀಡುವ ಅಧಿಕಾರವನ್ನು ಕಳೆದುಕೊಳ್ಳುತ್ತಾನೆ.

ಹಿತ-ಮಿತ : ನಮ್ಮ ಬದುಕಿನಲ್ಲಿ ನಾವು ಏನನ್ನು ಕಲಿತರೂ, ಏನನ್ನೂ ಕಲಿಯದಿದ್ದರೂ ಚಿಂತೆಯಿಲ್ಲ. ನಾವು ಮಾಡುವ
ಪ್ರತಿ ಯೊಂದು ಕೆಲಸ ಕಾರ್ಯಗಳಲ್ಲಿ ಹಿತ-ಮಿತ ಎನ್ನುವ ಸೂತ್ರವನ್ನು ಅಳವಡಿಸಿಕೊಂಡರೆ ಸಾಕಾಗುತ್ತದೆ. ಇದು ನಮ್ಮ
ಬದುಕನ್ನು ನಡೆಸುವ ಚುಕ್ಕಾಣಿ. ಮಧುಮೇಹ ಪೀಡಿತರಾದ ಕೆಲವರು ವಿಪರೀತ ಭಯದಿಂದ ಅಪಾಯಕಾರೀ ಪಥ್ಯವನ್ನು
ಮಾಡಬಹುದು. ಆಹಾರವನ್ನು ಅಳೆದು, ತೂಕ ಮಾಡಿಯೇ ತಿನ್ನಬಹುದು. ಉಳಿದವರು ವಿಪರೀತವಾಗಿ ದೈಹಿಕ ದಂಡನೆ
ಯಲ್ಲಿ ತೊಡಗಬಹುದು. ಸೇವಿಸುವ ಆಹಾರ ಮತ್ತು ಮಾಡುವ ಕೆಲಸಗಳ ನಡುವೆ ಹೊಂದಾಣಿಕೆಯಿರದಿದ್ದಲ್ಲಿ, ವ್ಯಕ್ತಿಯ ರಕ್ತಸಕ್ಕರೆಯ ಪ್ರಮಾಣವು ಏರುಪೇರಾಗಿ ತಲೆ ಸುತ್ತಿ ಬೀಳಬಹುದು. ಗಂಭೀರ ಅಪಘಾತಗಳಾಗಬಹುದು.

ಹಾಗಾಗಿ ಮಧುಮೇಹಿಗಳ ಪಾಲಿಗೆ ಅತಿ ಸರ್ವತ್ರಂ ವರ್ಜಯೇತ್. ಮನೆಯಲ್ಲಿ ಹಬ್ಬ ಹರಿದಿನಗಳು ಬಂದಾಗ, ಮನೆಯಲ್ಲಿ
ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವಗಳು ನಡೆದಾಗ, ಎಲ್ಲರೂ ನಾನಾ ರೀತಿಯ ಸಿಹಿಯನ್ನು ತಿನ್ನುತ್ತಾ ಆನಂದಿಸು
ತ್ತಿದ್ದರೆ, ಮಧುಮೇಹಿಗಳು ಮಾತ್ರ ವಿಷಾದ ಭಾವದಿಂದ ಒಂದೇ ಒಂದು ತುಂಡು ಕೇಕ್ ತಿನ್ನಲಾಗಲಿಲ್ಲವಲ್ಲ, ಒಂದೇ
ಒಂದು ಚಮಚ ಐಸ್ ಕ್ರೀಮ್ ಸವಿಯುವ ಭಾಗ್ಯವಿಲ್ಲವಲ್ಲ ಎಂದು ಕೊರಗಬಹುದು. ಆದರೆ ವಾಸ್ತವಿಕತೆ ಭಿನ್ನ!

ಮಧುಮೇಹಿಗಳು ಒಂದು ತುಂಡು ಕೇಕ್ ಅನ್ನು ಖಂಡಿತ ತಿನ್ನಬಹುದು. ಅರ್ಧ ಕಪ್ ಐಸ್ ಕ್ರೀಮ್‌ನ್ನು ಅನುಮಾನವಿಲ್ಲದೆ ಸವಿಯ ಬಹುದು. ಹೌದೆ? ಹಾಗೆ ತಿಂದಾಗ ಖಂಡಿತ ರಕ್ತಸಕ್ಕರೆಯು ರಾಕೆಟ್ ವೇಗದಲ್ಲಿ ಏರುತ್ತದೆಯಲ್ಲವೆ? ನಿಜ. ರಕ್ತ ಸಕ್ಕರೆಯು ಥಟ್ಟನೆ ಏರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆ ಏರಿ ಅಪಾಯವಾಗದಂತೆ ನಿಯಂತ್ರಿಸಲು ಒಂದು ಉಪಾಯವಿದೆ. ಸಿಹಿಯನ್ನು ಸವಿದ ಕೂಡಲೇ ಸಾವಕಾಶವಾಗಿ ಒಂದೆರಡು ಕಿಮೀ ನಡೆದುಬಿಡಿ! ಏರಿರುವ
ಸಕ್ಕರೆಯಂಶವೆಲ್ಲ ಪೂರ್ತಿ ಖರ್ಚಾಗುವವರಿಗೂ ನಡೆದುಬಿಡಿ. ಮಧುಮೇಹಿಗಳು ಹಿತ-ಮಿತ ಸೂತ್ರವನ್ನು ಕರಾರುವಾಕ್ಕಾಗಿ ಪರಿಪಾಲಿಸಬೇಕು.

ಅರ್ಜುನನೆ! ಯಾರು ಅತಿಯಾಗಿ ತಿನ್ನುವರೋ, ಯಾರು ಕಟ್ಟುಪವಾಸವನ್ನು ಮಾಡುವರೋ, ಮನುಷ್ಯನು ಅತಿ ಹೆಚ್ಚಾಗಿ ತಿನ್ನುತ್ತಾರೋ, ಅತಿ ಕಡಿಮೆ ತಿನ್ನುತ್ತಾರೋ, ಯಾರು ಅಗತ್ಯಕ್ಕಿಂತ ಅತಿ ಹೆಚ್ಚಾಗಿ ನಿದ್ರೆಯನ್ನು ಮಾಡುತ್ತಾರೋ, ಯಾರು ನಿದ್ರೆಯನ್ನೇ ಮಾಡದೇ ಇರುತ್ತಾರೋ, ಅವರು ಯೋಗಿಯಾಗಲು ಸಾಧ್ಯವಿಲ್ಲ (೬-೧೬). ಯಾರು ಮಿತ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತಾರೋ, ಯಾರು ತನಗೆ ಸೂಕ್ತವಾದ ಕೆಲಸದಲ್ಲಿ ನಿಯಮಿತ ಅವಧಿಯವರೆಗೆ ತೊಡಗುತ್ತಾರೋ, ಯಾರು ಉಲ್ಲಾಸವನ್ನು ನೀಡುವ ಮನರಂಜನೆಯಲ್ಲಿ ತೊಡಗುತ್ತಾರೋ, ಯಾರು ಅಗತ್ಯವಿದ್ದಷ್ಟೇ ಕಾಲವನ್ನು ನಿದ್ರೆ-ಎಚ್ಚರದಲ್ಲಿ ಕಳೆಯುತ್ತಾರೋ, ಅವರಿಗೆ ಯೋಗವು ಸಹಜವಾಗಿ ಒಲಿದು, ಅವರ ಎಲ್ಲ ರೀತಿಯ ದುಃಖಗಳನ್ನು ಕಡಿಮೆ ಮಾಡುತ್ತದೆ (೬-೧೭).

ಈ ಸೂತ್ರವು ಮಧುಮೇಹಿಗಳಿಗೆ ಹೇಳಿಮಾಡಿಸಿದಂತೆ ಇದೆ. ಮಧುಮೇಹಿಗಳು ಎಂದ ಮಾತ್ರಕ್ಕೆ ಬದುಕಿನ ಎಲ್ಲ
ಸುಖ-ಸಂತೋಷಗಳನ್ನು ನೂರಕ್ಕೆ ನೂರರಷ್ಟು ತ್ಯಾಗ ಮಾಡಬೇಕೆಂದೇನೂ ನಿಯಮವಿಲ್ಲ. ಅವರು ಮಾಡಬೇಕಾದ
ಮೊದಲ ಕೆಲಸವೆಂದರೆ, ಮಧುಮೇಹದ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವುದು. ಅರ್ಹ ವೈದ್ಯರು ಮಾತ್ರ
ಸೂಕ್ತ ಮಾರ್ಗದರ್ಶನವನ್ನು ನೀಡಬಲ್ಲರು. ಆದರೆ ಅವರು ನೀಡುವ ಮಾರ್ಗದರ್ಶನವನ್ನು ಕಾರ್ಯರೂಪಕ್ಕೆ ತರ ಬೇಕಾದವರು ನಾವು. ಮಧುಮೇಹವನ್ನು ಪೂರ್ಣ ಸ್ವರೂಪದಲ್ಲಿ ಅರಿತವರು ಕೊರಗುವುದಿಲ್ಲ.

ಕೃಷ್ಣನು ಹೇಳುವ ಹಾಗೆ, ತಮ್ಮ ಬದುಕಿನಲ್ಲಿ ಮಧ್ಯಮ ಮಾರ್ಗವನ್ನು ಅನುಸರಿಸುವರು. ಮಧ್ಯಮ ಮಾರ್ಗವು ಸ್ವ-ನಿಯಂತ್ರಣ ಮತ್ತು ಸ್ವ- ಶಿಸ್ತಿಗೆ ದಾರಿ ಮಾಡಿಕೊಡುತ್ತದೆ. ಈ ಮಧ್ಯಮ ಮಾರ್ಗವು ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಎಲ್ಲ ಮನುಷ್ಯರ ಸರ್ವತೋಮುಖ ಪ್ರಗತಿಗೆ ಕಾರಣವಾಗಬಲ್ಲ ದಿವ್ಯಸೂತ್ರವಾಗಿದೆ.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವ ಈ ಮಧ್ಯಮ ಮಾರ್ಗ ಅಥವಾ ಹಿತ-ಮಿತ ಮಾರ್ಗವನ್ನು ನಾವು ಅನುಭವಿಸಬಹುದಾದ ಎಲ್ಲ ರೀತಿಯ ಭೋಗ ಭಾಗ್ಯಾದಿಗಳಿಗೂ ಅನ್ವಯಿಸುತ್ತಾನೆ. ನಮ್ಮ ಇಂದ್ರಿಯಗಳಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಅತೀವ ಆಸಕ್ತಿಯನ್ನು ತೋರಬಹುದು ಇಲ್ಲವೇ ಸಂಪೂರ್ಣ ನಿರಾಸಕ್ತಿಯನ್ನು ತೋರಬಹುದು. ಅವು ನಮ್ಮನ್ನು ನಿಯಂತ್ರಿಸುವ ಹಾಗಿರಬಾರದು. ಏಕೆಂದರೆ ಅವು ಸಾಧನಾ ಮಾರ್ಗದ ದೊಡ್ಡ ಅಡತಡೆಗಳು ಹಾಗೂ ಶತ್ರುಗಳು (೩-೩೪).

ಕಾಮವು ಕೆಟ್ಟದಲ್ಲ. ಒಬ್ಬರು ಮದುವೆಯಾಗಿ ಆ ಚೌಕಟ್ಟಿನೊಳಗೆ ಎಲ್ಲ ರೀತಿಯ ಕಾಮದ ಆಯಾಮಗಳನ್ನು ಅನುಭವಿಸ ಬಹುದು. ಅದು ನ್ಯಾಯ ಹಾಗೂ ಉಚಿತ. ಆದರೆ ಹಲವು ಹೆಣ್ಣುಗಳ ಅಥವಾ ಹಲವು ಗಂಡುಗಳ ಬೆನ್ನು ಹತ್ತಿ ಕಾಮವಾಂಛೆ ಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿದರೆ, ಆಗ ಕಾಮವು ಘೋರ ಪಾಪವಾಗಿ ಪರಿಣಮಿಸುತ್ತದೆ. ನಮ್ಮ ಅವನತಿಗೆ ಕಾರಣವಾಗುತ್ತದೆ. ನಾವು ನಮ್ಮ ಎಲ್ಲ ಇಂದ್ರಿಯಗಳನ್ನು ಅಽನದಲ್ಲಿ ಇಟ್ಟುಕೊಳ್ಳಬೇಕು. ನಾವು ಹೇಳಿದಂತೆ ಅವು ಕೇಳಬೇಕೇ ಹೊರತು, ಅವು ಹೇಳಿದಂತೆ ನಾವು ಕೇಳಬಾರದು.

ಕರ್ಮದ ಜಟಿಲತೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಆದುದರಿಂದ ಮನುಷ್ಯನು ಯಾವುದು ಸುಕರ್ಮ, ಯಾವುದು ವಿಕರ್ಮ ಮತ್ತು ಯಾವುದು ಅಕರ್ಮ ಎನ್ನುವುದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು (೪-೧೭). ಕರ್ಮ ಅಂದರೆ ಕೆಲಸವು ಸುಲಭವಾದುದಲ್ಲ. ಕೆಲಸದಲ್ಲಿ ಮೂರು ವಿಧಗಳು. ಸುಕರ್ಮ, ವಿಕರ್ಮ ಮತ್ತು ಅಕರ್ಮ. ಸುಕರ್ಮ ಎಂದರೆ ಒಳ್ಳೆಯ ಕೆಲಸ ಕಾರ್ಯಗಳು. ವಿಕರ್ಮ ಎಂದರೆ ಕೆಟ್ಟ ಕೆಲಸ ಕಾರ್ಯಗಳು ಹಾಗೂ ಅಕರ್ಮವೆಂದರೆ ಕೆಲಸವನ್ನೇ ಮಾಡದೆ ಸುಮ್ಮನಿದ್ದುಬಿಡುವುದು. ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ನಾವು ಒಳ್ಳೆಯದನ್ನು ಮಾಡಿದರೆ, ಅದಕ್ಕೆ ಪ್ರತಿಫಲವಾಗಿ ಒಳ್ಳೆಯದೇ ದೊರೆಯುತ್ತದೆ. ನಾವು ಕೆಟ್ಟದ್ದನ್ನು ಮಾಡಿದರೆ ಕೆಟ್ಟ
ಫಲಿತಾಂಶವನ್ನೇ ಅನುಭವಿಸಬೇಕಾಗುತ್ತದೆ. ಸರಿಯಾದ ಕೆಲಸವನ್ನು, ಸರಿಯಾದ ಕಾಲದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಮಾಡುವುದು ಬಹಳ ಮುಖ್ಯ. ನಾವು ನಮ್ಮ ಬದುಕಿನಲ್ಲಿ ಮಾಡುವ ಎಲ್ಲ ಕೆಲಸಗಳೂ ಕರ್ಮ ಎಂದೇ ಅನಿಸಿಕೊಳ್ಳುತ್ತವೆ. ನಮ್ಮ ಆಹಾರ ಕರ್ಮವನ್ನು ಕುರಿತು ವಿಚಾರ ಮಾಡೋಣ. ನಾವು ಸಾತ್ವಿಕ ಆಹಾರವನ್ನು ಹಿತ- ಮಿತ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ, ಸಹಜವಾಗಿ ನಮಗೆ ಅತ್ಯುತ್ತಮವಾದ ಆರೋಗ್ಯವು ದೊರೆಯು ತ್ತದೆ.

ನಮ್ಮ ದೇಹ-ಮನಸ್ಸು-ಆತ್ಮ ಪ್ರಸನ್ನವಾಗಿರುತ್ತವೆ. ಸಹಜವಾಗಿ ನಮಗೆ ಸ್ವಾಸ್ಥ್ಯವು ದೊರೆಯುತ್ತದೆ. ಅದೇ ನಾವು ರಾಜಸಿಕ
ಆಹಾರವನ್ನು (ಜಂಕ್ ಆಹಾರವನ್ನು) ಮನಬಂದಹಾಗೆ ತಿನ್ನುತ್ತಾ ಹೋದರೆ ಸಹಜವಾಗಿ ಬೊಜ್ಜು ಬರುತ್ತದೆ, ಮನವು
ಮಲೆಯುತ್ತದೆ ಆತ್ಮವು ಅಹಂನಿಂದ ಬೀಗುತ್ತದೆ. ಅಕರ್ಮ ಎಂದರೆ ಕೆಲಸವನ್ನು ಮಾಡದೇ ಇರುವುದು. ತಿನ್ನದೇ ಇರುವುದು. ಉಪವಾಸವನ್ನು ಮಾಡುವುದು. ಉಪವಾಸವೂ ಸಹ ಹಿತ-ಮಿತ ವ್ಯಾಪ್ತಿಯಲ್ಲಿರಬೇಕೇ ಹೊರತು, ಮಿತಿ ಮೀರಿದರೆ ಅದು ಹಾನಿಯನ್ನೇ ಉಂಟು ಮಾಡುತ್ತದೆ.