Friday, 22nd November 2024

ಹರಿಯಾಣದಲ್ಲಿ ಮಾತ್ರ ಕಚೇರಿಯಲ್ಲಿ ಬಿಯರ್, ವೈನ್ ಕುಡಿಯಬಹುದು..!

ಚಂಡೀಗಢ: ಹರಿಯಾಣದಲ್ಲಿರುವ ಕಾರ್ಪೊರೇಟ್ ಕಂಪನಿಗಳು ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಅತಿಥಿಗಳಿಗೆ ಜೂನ್ 12ರಿಂದ ಬಿಯರ್ ಮತ್ತು ವೈನ್‌ನಂತಹ ಕಡಿಮೆ ಕಂಟೆಂಟ್ ಆಲ್ಕೋಹಾಲ್ ಪಾನೀಯಗಳನ್ನು ನೀಡಬಹುದು.

ಹರಿಯಾಣ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಇಂಥದೊಂದು ಅವಕಾಶ ನೀಡ ಲಾಗಿದೆ.

ಈ ಹೊಸ ಅಬಕಾರಿ ನೀತಿಯ ಪ್ರಕಾರ, ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಮತ್ತು ಒಂದೇ ಆವರಣದಲ್ಲಿ ಸ್ವಯಂ ಒಡೆತನದ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆದ ಕನಿಷ್ಠ ಒಂದು ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕಾರ್ಪೊರೇಟ್ ಕಚೇರಿ ಯಲ್ಲಿ ಉದ್ಯೋಗಿಗಳು ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಇಟ್ಟುಕೊಳ್ಳಬಹುದು ಮತ್ತು ಕುಡಿಯ ಬಹುದು.

ಬಿಜೆಪಿ ನೇತೃತ್ವದ ಸರ್ಕಾರ ತನ್ನ ಹೊಸ ನೀತಿಯಡಿ ಪರಿಸರ ಮತ್ತು ಪ್ರಾಣಿ ಕಲ್ಯಾಣಕ್ಕಾಗಿ 400 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಹೊಸ ಅಬಕಾರಿ ನೀತಿಯಡಿ ಮದ್ಯ ಮಾರಾಟಕ್ಕಾಗಿ ಪೆಟ್ ಬಾಟಲಿಗಳ ಬಳಕೆ ನಿಷೇಧಿಸಲಾಗಿದೆ.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಕ್ಯಾಬಿನೆಟ್ ಈ ವಾರ ಹೊಸ ಅಬಕಾರಿ ನೀತಿಯನ್ನು ಅನುಮೋದಿಸಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ. ಹೊಸ ಅಬಕಾರಿ ನೀತಿಯಲ್ಲಿ ರಿಟೇಲ್ ಪರವಾನಗಿ ಶುಲ್ಕವನ್ನು ವಿಧಿಸಲಾಗಿದ್ದು, ಇದರಿಂದ 400 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.