Thursday, 21st November 2024

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವ್ಯಯಿಸಿ ನಡೆಸುವ ಸಂವಿಧಾನದ ಹಬ್ಬ ಚುನಾವಣೆಯೇ ಸೂತಕದ ಮನೆಯಂತ್ತಾದರೆ ಪ್ರಜಾಪ್ರಭುತ್ವದ ಗತಿಯೇನು? ಒಂದೆಡೆ ಮುಸಲ್ಮಾನರು ತಮ್ಮ ಧರ್ಮ ರಕ್ಷಣೆಯ ಮೂಲೋದ್ದೇಶದಲ್ಲಿ ನೂರಕ್ಕೆ ನೂರುಮಂದಿ ಮತಚಲಾಯಿಸುತ್ತಾರೆಂಬ ಘನತೆ ಹೊಂದಿದ್ದಾರೆ.

ಕಾಡುಗಳ್ಳ ವೀರಪ್ಪನ್ ವರನಟ ಡಾ.ರಾಜಣ್ಣನವರನ್ನು ಅಪಹರಿಸಿದಾಗ ರಾಜಕೀಯದ ಜಂಟಲ್‌ಮ್ಯಾನ್ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದರು. ರಾಜಣ್ಣನವರು ಕಾಡಿನಿಂದ ಸುರಕ್ಷಿತರಾಗಿ ಹಿಂತಿರುಗಿದ್ದು ನಾಡಿನ ದೊಡ್ಡ ಪುಣ್ಯ. ಅದು ಬೇರೆ ವಿಚಾರ. ಆದರೆ ಅಪಹರಣವಾದ ಮೊದಲ ದಿನದಿಂದಲೂ ಎಸ್.ಎಂ. ಕೃಷ್ಣ ಅವರೂ ಅವರ ಸಚಿವ ಸಂಪುಟ, ವಿರೋಧ ಪಕ್ಷ ಬಿಜೆಪಿಯ ಯಡಿಯೂರಪ್ಪನವರೂ ಸೇರಿದಂತೆ ಇಡೀ ಶಾಸಕಾಂಗ ನಡೆದುಕೊಂಡ ರೀತಿ, ಪರಸ್ಪರ ಸ್ಪಂದಿಸಿ ತೋರಿದ ಕಾಳಜಿ ರಾಜ್ಯ ರಾಜಕೀಯವನ್ನು ಒಂದು ಕುಟುಂಬದಂತೆ ಮಾಡಿತ್ತು.

ರಾಜಣ್ಣನವರ ಹಿತರಕ್ಷಣೆಯ ಒಂದೇ ಒಂದು ಗುರಿಯೇ ಕರ್ನಾಟದ ರಾಜ ಕೀಯವಾಗಿತ್ತು. ಅಂದು ಎಲ್ಲಾ ಪಕ್ಷಗಳೂ ನಾಯಕರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದ್ದು ರಾಜಕೀಯ ಇತಿಹಾಸದಲ್ಲಿ ಒಂದು ಅಮೃತಘಳಿಗೆ. ಆದರೆ ಆ ನಂತರ ಬಂದ ಅನೈತಿಕ ಸಮ್ಮಿಶ್ರ ಸರಕಾರಗಳ ರಾಜಕೀಯ ಎಷ್ಟು ಹೊಲಸೆದ್ದು ಹೋಯಿತೆಂದರೆ ಅಂದು ಎಚ್.ಡಿ. ಕುಮಾರಸ್ವಾಮಿ ‘ರಾಜಕೀಯ ದಲ್ಲಿ ಏನುಬೇಕಾದರೂ ಆಗಬಹುದು’ ಎಂಬ ಒಂದು ಮಾತು ಆಡಿದರಲಲ, ಅದು ಬದಲಾದ ಮತ್ತು ಹಾಳಾದ ರಾಜಕೀಯ ಮೌಲ್ಯಗಳ ದಿಕ್ಸೂಚಿಯಾಗಿತ್ತು.

ಇಂಥ ಅಸಹ್ಯಕರ ರಾಜಕೀಯ ಅಂದು ರಾಜಣ್ಣನವರ ಅಪಹರಣದ ಸಮಯದಲ್ಲೇನಾದರೂ ಇದ್ದಿದ್ದರೆ ಬಹುಶಃ ರಾಜಕೀಯ ತಂತ್ರಕುತಂತ್ರಗಳಿಗೆ ‘ಏನು ಬೇಕಾದರೂ ಆಗಬಹುದೆಂಬ’ ಅನುಕೂಲ ಸಿಂಧು ರಾಜಕಾರಣಕ್ಕೆ ವೀರಪ್ಪನ್ ಜತೆಗೆ ಸಂಧಾನ ಕಾರರಾದ ನಕ್ಕಿರನ್ ಗೋಪಾಲನ್-ನಡುಮಾರನ್‌ರನ್ನೇ ಬಳಸಿಕೊಂಡು ರಾಜಣ್ಣನವರನ್ನು ಕಾಡಿನಲ್ಲೇ ಇನ್ನೊಂದೊಷ್ಟು ತಿಂಗಳು ಇರುವಂತೆ ಮಾಡಿ ಅಥವಾ ಸುರಕ್ಷಿತವಾಗಿ ನಾಡಿಗೆ ಹಿಂತಿರುಗದಂಥ ಪಾಪದ ರಾಜಕಾರಣ ಮಾಡಿಬಿಡುತ್ತಿದ್ದ ರೇನೋ? ಇಂಥ ನೀಚ ರಾಜಕೀಯದಲ್ಲಿ ಮೊನ್ನೆಯಷ್ಟೇ ನಡೆದ ಚುನಾವಣಾ ಫಲಿತಾಂಶ ಇಂದು ಹೊರ ಬೀಳುತ್ತಿದೆ.

ಇಂಥ ಸಮಯದಲ್ಲಿ ಹೇಗೆಲ್ಲಾ ‘ಏನೇನು ಬೇಕಾದರೂ ಆಗಬಹುದು’ ಎಂಬುದನ್ನು ಪರಾಮರ್ಶಿಸೋಣ. ಏನುಬೇಕಾದರೂ ಆಗಬಹುದು-ಸೂತ್ರ ೧: ಪ್ರಧಾನಿ ನರೇಂದ್ರಮೋದಿಯವರ ನಾಮಬಲದಲ್ಲಿನ ದಷ್ಟಪುಷ್ಟ ಪೋಷ್ಟಿಕಾಂಶಗಳಿಂದ ಮತ್ತು
ಕಾಂಗ್ರೆಸ್ ನೀಡಿದ ‘ವಿಷಸರ್ಪ’ ‘ನಾಲಾಯಕ್ಕು ಮಗ’ ಮತ್ತು ಬಜರಂಗದಳ ನಿಷೇಧವೆಂಬ ಬೂಸ್ಟರ್‌ಡೋಸ್‌ನ ಪರಿಣಾಮವಾಗಿ ಬಿಜೆಪಿ ೧೨೦ ಸ್ಥಾನಗಳನ್ನು ದಾಟಿದರೆ ಅಲ್ಲಿಗೆ ಬಿಜೆಪಿಗೆ ನಾರ್ಮಲ್ ಡಿಲಿವರಿಯಾಗಿ ಸರಕಾರವೆಂಬ ಆರೋಗ್ಯವಂತ ಕೂಸು ಹುಟ್ಟುತ್ತದೆ. ಇಷ್ಟಾದರೂ ನಾಳೆ ಸಚಿವ ಸಂಪುಟ ರಚನೆಯಲ್ಲಿ ಸ್ವಪಕ್ಷದಲ್ಲೇ ಕೆಮ್ಮು ನೆಗಡಿ ಜ್ವರ ಎಂಬಂತೆ ಬಂಡಾಯಗಳೇನಾದರೂ ಎದ್ದರೆ ಜೆಡಿಎಸ್‌ನಿಂದ ಒಂದತ್ತು ಶಾಸಕರನ್ನು ಒಲಿಸಿಕೊಂಡು ‘ಬ್ಯಾಕ್‌ಅಪ್’ ಮಾದರಿ
ಯಲ್ಲಿ ಸರಕಾರದ ಸುರಕ್ಷತೆಗೆ ಇಟ್ಟುಕೊಳ್ಳ ಬೇಕಾಗಬಹುದು.

ಒಂದೊಮ್ಮೆ ಬಿಜೆಪಿ ೯೦ ರಿಂದ ೧೧೦ಕ್ಕೆ ಬಂದು ನಿಂತರೆ ಆಗ ಪಕ್ಷದಿಂದ ಹೊಸಿಲು ಮೆಟ್ಟಿದ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಎನ್.ಆರ್. ಸಂತೋಷ್, ಎಂ.ಪಿ. ಕುಮಾರಸ್ವಾಮಿ, ಮಾಡಾಳ್ ಮಲ್ಲಿಕಾರ್ಜುನ, ಜನಾರ್ಧನರೆಡ್ಡಿ, ಅಖಂಡ ಶ್ರೀನಿವಾಸಮೂರ್ತಿ ಅಂಥವರು ಗೆಲುವು ಸಾಽಸಿದ್ದರೆ ಅಂಥವರನ್ನು ‘ಕನ್ಸಲ್ಟ್’ ಮಾಡಿ ಬಿಜೆಪಿ ತನ್ನ ಸುರಕ್ಷಿತ ಸಂಖ್ಯೆಯನ್ನು ಏರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇನ್ನು ಜೆಡಿಎಸ್‌ನಲ್ಲಿ ಗೆದ್ದರೂ ಶಾಸಕರಾಗಿ ಐದುವರ್ಷ ಇನ್ನಾವ ಗೆಣಸು ಕೀಳಬೇಕೆಂದು ಹೆಗಲ ಮೇಲಿನ ಟವಲ್ ಕೊಡವಿ ಅಲ್ಲಿಂದಲೇ ಒಂದದಿನೈದು ಮಂದಿ ಶಾಸಕರು ‘ಕೊಟ್ಟರೆ ಮಂತ್ರಿಯೂ ಆಗಬಹುದು’ ಎಂದು
ಬಿಜೆಪಿಗೆ ಬೆಂಬಲಿಸಲೂಬಹುದು? ಇತ್ತ ಇದೇ ಸೂತ್ರದಲ್ಲೇ ಜಗದೀಶ್‌ಶೆಟ್ಟರ್ ಲಕ್ಷ್ಮಣಸವದಿಯೇ ತಮ್ಮೊಂದಿಗೆ ಇನ್ನೂ ಒಂದೈದು ಶಾಸಕರೊಡನೆ ಮರಳಿ (ಆಗ ಅದು ಆಪರೇಷನ್ ಕಮಲವಲ್ಲ) ಮಾತೃಪಕ್ಷಕ್ಕೆ ಬಂದರೂ ಆಶ್ಚರ್ಯವಿಲ್ಲ.

ಇನ್ನು ಇದ್ಯಾವುದೂ ಆಗದೆ ಬಿಜೆಪಿ ೮೦ ಸ್ಥಾನಗಳಿಗೇ ಉಳಿದರೆ ವಿರೋಧಪಕ್ಷದ ಸ್ಥಾನದಲ್ಲಿ ಕೂತು ತಪ್ಪುಗಳನ್ನು ತಿದ್ದುಕೊಂಡು ಅನ್ಯೋನ್ಯತೆಯಿಂದ ‘ಸಂಸಾರ’ ಮಾಡಿ ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಾದರೂ ‘ಗುಡ್‌ನ್ಯೂಸ್’ ನೀಡಲು ಶ್ರಮಿಸಬಹುದು. ಇದಕ್ಕೂ ಮೀರಿ ಇಲ್ಲಾ, ಮಗುವೆಂಬ ಸರಕಾರವನ್ನು ಉಳಿಸಿಕೊಳ್ಳಲೇ ಬೇಕೆಂದರೆ ‘ಸಿಝೇರಿಯನ್’ ಮಾಡಿಯೇ ‘ಆಪರೇಷನ್ ಕಮಲ’ ಕೈಗೊಂಡರೂ ಅಚ್ಚರಿಯಿಲ್ಲ.

ಏನುಬೇಕಾದರೂ ಆಗಬಹುದು!
ಏನುಬೇಕಾದರೂ ಆಗಬಹುದು-ಸೂತ್ರ ೨: ಕಾಂಗ್ರೆಸ್ ೧೨೦ ಸ್ಥಾನಗಳನ್ನು ದಾಟಿದರೆ ಯಾವ ನೋವೂ ಇಲ್ಲದೆ ’ಸಹಜ ಹೆರಿಗೆ’ ಆಗಿ ಸರಕಾರವೆಂಬ ಕೂಸನ್ನು ಹಡೆದರೂ ಅಲ್ಲಿ ಅಪ್ಪಂದಿರ ಸಮಸ್ಯೆ ಹೆಚ್ಚಾಗಿದೆ. ಆದರೆ, ಕಾಂಗ್ರೆಸ್ ನೂರರ ಗಡಿಗೆ ಬಂದು ನಿಂತರೆ ಆಗಲೂ ಏನಾಬೇಕಾದರೂ ಆಗಬಹುದೆಂಬಂತೆ ಕಳೆದಬಾರಿ ಸಿಝೇರಿಯನ್ ಡಿಲಿವರಿಯಲ್ಲಿ ಹುಟ್ಟಿದ ೧೫ ಮಂದಿ ಶಾಸಕರು ಈಗೇನು ಬಿಜೆಪಿಯಲ್ಲಿದ್ದಾರೆ ಅವರೆಲ್ಲರೂ ಮತ್ತೊಮ್ಮೆ ರಾಜಕೀಯ ‘ಲಿಂಗ ಪರಿವರ್ತನೆ’ ಗೊಳಗಾಗಿ ಮತ್ತೆ ಕಾಂಗ್ರೆಸ್ ಸೇರಿಕೊಂಡು ಅದಕ್ಕೆ ಬೇಕಾದ ಬಹುಮತದ ಸಂಖ್ಯೆಯನ್ನು ಏರಿಸಿದರೂ ಆಶ್ಚರ್ಯವಿಲ್ಲ.

ಸಂಘದ ಕಾರ್ಯಕರ್ತನಾಗಿ ನಾಲ್ಕು ದಶಕಗಳ ಕಾಲ ಬಿಜೆಪಿಯಲ್ಲಿ ಸಂಸಾರ ಮಾಡಿ ೬೭ರ ವಯಸ್ಸಿನಲ್ಲೂ ಬಿಜೆಪಿಗೆ ಡಿವೋರ್ಸ್ ನೀಡಿ ಸೋನಿಯಾಗಾಂಧಿ ಪಕ್ಕದಲ್ಲಿ ನಿಂತ ಜಗದೀಶ್ ಶೆಟ್ಟರ್ ಫಳಫಳಿಸುತ್ತಿರುವಾಗ ಕೇವಲ ನಾಲ್ಕು ವರ್ಷದ ಹಿಂದೆಯಷ್ಟೇ ಬಿಜೆಪಿ ಸೇರಿದ ೧೫ ಮಂದಿಗೆ ಮತ್ತು ಮೂಲ ಬಿಜೆಪಿ ಶಾಸಕರಿಗೆ ಹೊಸಿಲು ಮೆಟ್ಟುವುದಕ್ಕೆ ಯಾವ ದೊಣ್ಣೆನಾಯಕ ಅಪ್ಪಣೆ ಬೇಕು? ಇಷ್ಟಾದರೂ ಕಾಂಗ್ರೆಸ್ ಸರಕಾರ ರಚಿಸಿ ಐದುವರ್ಷ ಸರಕಾರ ನಡೆಸುವುದು ಅಷ್ಟು
ಸುಲಭವಲ್ಲ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೂ ಪಕ್ಷದೊಳಗಿನ ಅವರ ದುಷ್ಮನ್‌ಗಳು ಒಂದದಿನೈದು ಶಾಸಕರನ್ನು ಕೂರಿಸಿಕೊಂಡು ‘ನಡೀರ್ಲ, ಇಂಥ ಕರ್ಮ ನಮಗೇನು, ಬಿಜೆಪಿಯವರೊಂದಿಗೆ ನಾನು ಮಾತಾಡ್ತೀನಿ, ನೀವು ಅಲ್ಲಿಗೆ
ಎಗರಿಹೋಗಿ’ ಎಂದು ಗುಪ್ತಬೋಧನೆ ನೀಡುವಂಥ ಬಾಂಬರ್‌ಗಳು ಕಾಂಗ್ರೆಸ್‌ನಲ್ಲೇ ಇದ್ದರೆ ಆಶ್ಚರ್ಯವಿಲ್ಲ. ಇಂಥ ಕುತಂತ್ರಗಳಲ್ಲಿ ಅಪಾರ ಅನುಭವ ಕಂಡಿರುವ ಡಿ.ಕೆ. ಶಿವಕುಮಾರ್ ಎಚ್ಚೆತ್ತುಕೊಂಡು ಸ್ವಪಕ್ಷದ ಬಾಂಬರ್‌ಗಳನ್ನು ಸ್ಕ್ಯಾನ್ ಮಾಡಿ ಜತೆಗೆ ಒಕ್ಕಲಿಗರ ಅನುಕಂಪದಲ್ಲಿ ಒಂದತ್ತು ಜೆಡಿಎಸ್ ಒಕ್ಕಲಿಗ ಶಾಸಕರನ್ನು ‘ಇಂಪೋರ್ಟ್’ ಮಾಡಿಕೊಂಡು ಬ್ಯಾಕ್‌ಅಪ್ ಆಗಿ ಇಟ್ಟುಕೊಳ್ಳುವಷ್ಟು ಸಾಮರ್ಥ್ಯ ಡಿಕೆಶಿಗಿದೆ.

ಏನುಬೇಕಾದರೂ ಆಗಬಹುದು-ಸೂತ್ರ ೩: ಇಂಥ ಸಾಧ್ಯತೆಗಳಿಲ್ಲದೆ ಬಿಜೆಪಿ ೯೦ ಕಾಂಗ್ರೆಸ್ ೯೦ ಜೆಡಿಎಸ್ ೪೪ ಸ್ಥಾನಗಳಿಗೆ ಸೀಮಿತವಾದರೆ ಆಗ ಸೃಷ್ಟಿಯಾಗುವ ರಾಜಕೀಯ ‘ಬೀಗರು’ ಯಾರೆಂದರೆ ಸೋನಿಯಾಗಾಂಧಿ-ಮಲ್ಲಿಕಾರ್ಜುನ ಖರ್ಗೆ-ಸುರ್ಜಿವಾಲ ಮತ್ತು ಎಚ್.ಡಿ. ದೇವೇಗೌಡರು-ಸಿ.ಎಂ. ಇಬ್ರಾಹಿಂ ಕೂತು’ ಆಗಿದ್ದು ಆಯ್ತು, ನಮ್ಮ ಕಡೆಯಿಂದಲೂ ತಪ್ಪಾಗಿದೆ,
ನಿಮ್ಮ ಕಡೆಯಿಂದಲೂ ತಪ್ಪಾಗಿದೆ. ದೊಡ್ಡವರಾಗಿ ನಾವುಗಳು ಇಬ್ಬರನೂ ಒಟ್ಟಿಗೆ ಸಂಸಾರ ಮಾಡುವಂತೆ ನೋಡಿಕೊಳ್ಳೋಣ.

ಕೋಮುವಾದಿಗಳನ್ನು ದೂರವಿಡೋಣ ಅದರಿಂದ ಇಬ್ಬರಿಗೂ ಲಾಭ ಎಂಬ ‘ಅಡ್ಜಸ್ಟ್‌ಮೆಂಟ್’ ರಾಜಕೀಯ ರಂಗೇರುತ್ತದೆ. ಆಗ ನಾಗರಹಾವಿನ ರಾಮಾಚಾರಿಯಂತೆ ಕೆರಳಿ ನಿಲ್ಲುವ ಎಚ್.ಡಿ. ಕುಮಾರಸ್ವಾಮಿ ಇಂಥ ಒಪ್ಪಂದಕ್ಕೆ ಮೇಲ್ನೋಟಕ್ಕೆ ಒಪ್ಪದಿದ್ದರೂ ಒಟ್ಟಾರೆ ಒಪ್ಪಿಕೊಳ್ಳಲೇಬೇಕಾಗುತ್ತದೆ. ಒಂದೊಮ್ಮೆ ಒಪ್ಪಿಕೊಳ್ಳದಂತೆ ಬಾಸವಾದರೆ ಆಗ ದೊಡ್ಡಗೌಡರು
‘ನೋಡಪ್ಪ ಖರ್ಗೆ, ನನ್ನ ಮಗ ರೇವಣನನ್ನು ಸಿಎಂ ಮಾಡ್ತಿರೋ ಡಿಸಿಎಂ ಮಾಡ್ತಿರೋ ನಿಮಗೆ ಬಿಟ್ಟಿದ್ದು. ‘ಸರಿಯಾಗಿರೋ’ ಒಂದತ್ತು ಖಾತೆ ನಮಗೆ ಕೊಡಿ ಉಳಿದದ್ದು ನೀವೇ ಇಟ್ಟುಕೊಳ್ಳಿ, ಹಾಗೇ ಮೇಲ್ಮನೆಯಲ್ಲಿ ಸೂರಜ್ ಇದ್ದಾನೆ, ಇಲ್ಲಿ ನಿಖಿಲ್ ಇದ್ದಾನೆ ಮರೀಬೇಡಿ ಎಂಬ ಗಂಭೀರ ಒಪ್ಪಂದವಾಗಿ ತಾಂಬೂಲ ಬದಲಿಸಿಕೊಂಡು ಕಾಂಗ್ರೆಸ್-ಜೆಡಿಎಸ್ ಗಟ್ಟಿಮೇಳ ಬಾರಿಸಬಹುದಾದರೂ ಸರಕಾರಕ್ಕೆ ಮಾತ್ರ ನಾಗರಹಾವಿನ ‘ಅಲಮೇಲು’ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಈ ಸ್ಕೀಂನಲ್ಲಿ ಡಿಕೆಶಿ ಸಿಎಂ ಆದರೂ ಕಾಂಗ್ರೆಸ್‌ನೊಳಗಿರುವ ಡಿಕೆಶಿ ‘ಬೀಗರು’ ಮತ್ತು ಹಣೆಗೆ ಬಾಸಿಂಗ ಕಟ್ಟಿಕೊಂಡಿರುವ ಗಂಡುಗಳು
ಸ್ವಪಕ್ಷಕ್ಕೇ ‘ಸಿಡಿಗುಂಡು’ ಆಗಲೂಬಹುದು!

ಏನುಬೇಕಾದರೂ ಆಗಬಹುದು-ಸೂತ್ರ ೪: ಇಲ್ಲಿ ಒಂದು ಕಡೆಯ ಬೀಗರು ಬದಲಾಗಿ, ಕೇಂದ್ರದಿಂದ ವೀಳ್ಯೆ ಪಡೆದ ಯಡಿ
ಯೂರಪ್ಪ-ಬೊಮ್ಮಾಯಿ-ವಿ. ಸೋಮಣ್ಣ ಅವರು ದೊಡ್ಡಗೌಡರೊಂದಿಗೆ ಬೀಗತನಕ್ಕೆ ರಂಗ ಪ್ರವೇಶಿಸಲೂಬಹುದು. ಆಗ ದೊಡ್ಡಗೌಡರು ಪ್ರಧಾನಿ ನರೇಂದ್ರಮೋದಿಯವರ ವಿನಂತಿಯನ್ನು ಖಂಡಿತಾ ತಳ್ಳಿಹಾಕಲಾರರು. ಇಳಿವಯಸ್ಸಿನಲ್ಲಿ
ನಾಡಿನ ರಾಜಕೀಯ ಅಸ್ತಿರತೆಯನ್ನು ಕಣ್ಣಾರೆ ನೋಡಲು ಇಚ್ಛಿಸದೆ ಅದನ್ನು ಹೋಗಲಾಡಿಸಲು ತಮ್ಮ ಮಕ್ಕಳು ಮೊಮ್ಮಕಳನ್ನಾದರೂ ಸಚಿವ ಸಂಪುಟಕ್ಕೆ ತಳ್ಳಿ ಮೊತ್ತೊಮ್ಮೆ ಬಿಜೆಪಿ-ಜೆಡಿಎಸ್ ೩೦-೩೦ ಸರಕಾರ ಅಸ್ತಿತ್ವಕ್ಕೆ ಬಂದರೂ ಅಚ್ಚರಿಯಿಲ್ಲ.

ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು!

ಏನುಬೇಕಾದರೂ ಆಗಬಹುದು-ಸೂತ್ರ ೫: ಇದ್ಯಾವ ಕಥೆ ಚಿತ್ರಕಥೆಯೂ ವರ್ಕ್‌ಔಟ್ ಆಗದೆ ಮೂವರು ಸೇರಿ ಒಂದು ಮದುವೆಯಾಗುವುದು ಅಸಾಧ್ಯವಾಗಿ ಮೂರೂ ಪಕ್ಷಗಳು ತಮ್ಮ ಪ್ರತಿಷ್ಠೆ ಕಾಯ್ದುಕೊಂಡು ಚುನಾವಣಾ ಪೂರ್ವದಲ್ಲಿ ಆಡಿದ
ಮಾತುಗಳಿಗೆ ಬದ್ಧರಾಗಿ ನಾಗರಹಾವಿನ ರಾಮಚಾರಿಯಂತೆ ಚಿತ್ರದುರ್ಗದ ತುದಿಯೇರಿ ಕೂತರೆ ಆಗ ಚಾಮಯ್ಯ ಮೇಷ್ಟ್ರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿಬಿಡಬಹುದು.

ಸಾರ್ವತ್ರಿಕ ಚುನಾವಣೆಯ ಫಲಿತಾಂಶವೇ ‘ಅಬಾಷನ್’ಗೆ ಒಳಗಾದಂತ್ತಾಗಿ ಆಗ ರಾಜ್ಯ ಮತ್ತೊಂದು ಅಕಾಲಿಕ ‘ಪ್ರೀಮೆಚುರ್ಡ್’ ಚುನಾವಣೆಗೆ ಬಸಿರಾಗಬೇಕಾಗುತ್ತದೆ. ಈ ಇಲ್ಲಾ ಸೂತ್ರಗಳಲ್ಲೂ ಗೋಚರಿಸುವ ಕಾಮನ್ ಫ್ಯಾಕ್ಟರ್
ಎಂದರೆ ಪೂರ್ಣಾವಧಿ ಸರಕಾರ ರೂಪುಗೊಳ್ಳುವುದು ಒಂದೆಡೆಯಾದರೆ ಜೆಡಿಎಸ್ ಎಂಬುದು ಕಾಂಗ್ರೆಸ್-ಬಿಜೆಪಿಗೆ ‘ಬ್ಯಾಕ್‌ಅಪ್’ ಪಕ್ಷದಂತೆ ಭಾಸವಾಗುವುದು. ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವ್ಯಯಿಸಿ ನಡೆಸುವ ಸಂವಿ
ಧಾನದ ಹಬ್ಬ ಚುನಾವಣೆಯೇ ಸೂತಕದ ಮನೆಯಂತ್ತಾದರೆ ಪ್ರಜಾಪ್ರಭುತ್ವದ ಗತಿಯೇನು? ಒಂದೆಡೆ ಮುಸಲ್ಮಾನರು ತಮ್ಮ ಧರ್ಮ ರಕ್ಷಣೆಯ ಮೂಲೋದ್ದೇಶದಲ್ಲಿ ನೂರಕ್ಕೆ ನೂರುಮಂದಿ ಮತಚಲಾಯಿಸುತ್ತಾರೆಂಬ ಘನತೆ ಹೊಂದಿದ್ದಾರೆ.

ಅದಕ್ಕಾಗಿಯೇ ಎಲ್ಲಾ ಪಕ್ಷಗಳು ಅವರನ್ನು ಓಲೈಸಿಕೊಂಡು ಅವರೊಂದಿಗೆ ಒಂದಷ್ಟು ದಲಿತರ ಮತ್ತು ಸ್ವಜಾತಿ ಕೋಟಾದಲ್ಲಿ ಒಂದಷ್ಟು, ‘ಖರೀದಿಯಲ್ಲಿ’ ಒಂದಷ್ಟು ಮತಗಳು ಬಂದರೆ ಸಾಕು ಇನ್ನೇಕೆ ಅವರಿಗೆ ಗೋಹತ್ಯೆ ಮತಾಂತರ ಲವ್‌ಜಿಹಾದ್‌ಗಳ
ಉಸಾಬರಿ? ಆದರೆ ಹಿಂದೂಗಳು ಸ್ವಜಾತಿಗಳ ಮೋಹಕ್ಕೆ ಆಮಿಷಗಳಿಗೆ ರಾಜಕೀಯ ತೇಟೆ ತೆವಲುಗಳಿಗೆ ಮತಚಲಾಯಿಸಿ ಅತಂತ್ರರಾಗುತ್ತಿರುವುದು ದುರದೃಷ್ಟಕರ. ಒಂದೆಡೆ ಪ್ರಧಾನಿಮೋದಿಯವರು ದೇಶದ ಭವಿಷ್ಯ ಭದ್ರತೆಗಳ ದೂರದೃಷ್ಟಿ
ಯಲ್ಲಿ ನಿಸ್ವಾರ್ಥವಾಗಿ ಇಡೀ ರಾಜ್ಯವನ್ನು ಸುತ್ತಿ ಮತಭಿಕ್ಷೆ ಬೇಡಿದರೂ ಮತದಾರರಿಗೆ ಬುದ್ಧಿ ಬಂದಂತಿಲ್ಲ.

ಭವಿಷ್ಯದ ಚಿಂತೆಗಳಿದ್ದಂತಿಲ್ಲ. ಇಂದಿನ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರಕದಿದ್ದರೆ ಅತಂತ್ರವೆಂಬುದು ಕೇವಲ ಪಕ್ಷಗಳಿಗಲ್ಲ ರಾಜ್ಯಕ್ಕೂ ಶಾಪವಾಗುತ್ತದೆ. ಈಗಲೇ ಅಯೋಗ್ಯರೆಲ್ಲಾ ಮೋದಿಯವರನ್ನು ಹೀಯಾಳಿಸಿ ‘ಮೋದಿ ಹವಾ ಏನೂ ಇಲ್ಲ’ ಎನ್ನುತ್ತಿದ್ದಾರೆ. ಹೀಗಿರುವಾಗ ಬಜೆಪಿ ಬಹುಮತ ಪಡೆಯದಿದ್ದರೆ ಮೋದಿಯವರನ್ನು ತೆಗಳುವ ಅಣುಕಿಸುವ
ನಾಲಾಯಕ್ಕು ಅವಿವೇಕಿಗಳಿಗೆ ಮತ್ತಷ್ಟು ‘ವಯಾಗ್ರ’ ಕೊಟ್ಟಂತ್ತಾಗುತ್ತದೆ. ನೋಡೋಣ ಇಂದು ಏನಾಗುತ್ತದೆ!