Friday, 22nd November 2024

ಕುಮಟಳ್ಳಿ ವಿರುದ್ಧ ಲಕ್ಷ್ಮಣ ಸವದಿಗೆ 12916 ಮತಗಳಿಂದ ಮುನ್ನಡೆ

ಬೆಂಗಳೂರು: ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ರಾದ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ವಿರುದ್ಧ 12916 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ನಾಲ್ಕನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ 9849 ಮತ ಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ 22765 ಮತಗಳನ್ನು ಸಾಧಿಸಿ ದ್ದಾರೆ.

ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು 3507 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಮಹೇಶ್ ಟೆಂಗಿನಕಾಯಿ 5819 ಮತಗಳನ್ನು ಪಡೆದು ಮುನ್ನಡೆ ಪಡೆದಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದೇಶದಲ್ಲಿಯೇ ಗಮನ ಸೆಳೆದಿರುವ ಮತ್ತು ಅಖಾಡ ದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುವ 2 ಕ್ಷೇತ್ರಗಳೆಂದರೆ ಹುಬ್ಬಳ್ಳಿ- ಧಾರವಾಡ ಕೇಂದ್ರ ಹಾಗು ಬೆಳಗಾವಿಯ ಅಥಣಿ. ಬಿಜೆಪಿಯ ಕಟ್ಟಾಳುಗಳಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ಟಿಕೆಟ್ ವಂಚಿತರಾದ ಬಳಿಕ ಪಕ್ಷಕ್ಕೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರಿದ್ದರು. ಮತ ಎಣಿಕೆ ಯಲ್ಲಿ ಇಬ್ಬರೂ ನಾಯಕರು ಮುನ್ನಡೆ ಸಾಧಿಸಿದ್ದಾರೆ. ಆ ಹಣಾಹಣಿಯ ಟ್ರೆಂಡ್ ಈಗ ಪ್ರಕಟಗೊಳ್ಳುತ್ತಾ ಸಾಗಿದೆ.

ಬಿಜೆಪಿಯಿಂದ 2012 ರಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಅವರು ಇದುವರೆಗೆ ಯಾವ ಚುನಾವಣೆಯಲ್ಲೂ ಸೋಲದೆ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 1999 ಹಾಗೂ 2013ರಲ್ಲೂ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ.

2008- 13 ರ ಅವಧಿಯಲ್ಲಿ ಸ್ಪೀಕರ್ ಆಗಿ, ಬಳಿಕ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. ನಂತರ ಸದಾನಂದ ಗೌಡರ ರಾಜೀನಾಮೆಯಿಂದ ರಾಜ್ಯದ ಸಿಎಂ ಆಗಿ ಕೆಲಸ ಮಾಡಿದ್ದರು.

ಲಕ್ಷ್ಮಣ ಸವದಿ ಅವರು 2018 ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಪಕ್ಷ ಉಪಮುಖ್ಯಮಂತ್ರಿ ಮಾಡಿ ಅಧಿಕಾರ ನೀಡಿತ್ತು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕ್ಷೇತ್ರವಾದ ಹುಬ್ಬಳ್ಳಿ- ಧಾರವಾಡ ಕೇಂದ್ರದಲ್ಲಿ ಗೆಲ್ಲಲೇಬೇಕೆಂದು ಹಠತೊಟ್ಟಿದ್ದರು. ಬಿಜೆಪಿ ಮತ್ತು ಆರ್​ಎಸ್‌ಎಸ್ ಪಡೆ ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಭರ್ಜರಿ ಪ್ರಚಾರ ನಡೆಸಿತ್ತು.