ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಇಡೀ ಪ್ರಚಾರ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ಮೋದಿ ಹಾಗು ಅಮಿತ್ ಶಾ ಅವರ ರೋಡ್ ಶೋಗಳು, ಚುನಾವಣಾ ರ್ಯಾಲಿಗಳು ಮಾತ್ರ ಬಿಜೆಪಿ ಕೈ ಹಿಡಿಯಲಿಲ್ಲ. ರ್ಯಾಲಿಗೆ ಜನ ಬಂದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ.
ಈವರೆಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಹೈಕಮಾಂಡ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಹೈ ಕಮಾಂಡ್ ನಾಯಕರೇ ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸಿದರು. ಬೃಹತ್ ಸಾರ್ವ ಜನಿಕ ಸಮಾವೇಶಗಳು,ರೋಡ್ ಶೋಗಳನ್ನು ನಡೆಸಿದರು.
ಕಳೆದ ಎರಡೂವರೆ ತಿಂಗಳಿನಲ್ಲಿ 17 ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 10ಕ್ಕೂ ಹೆಚ್ಚು ಬಾರಿ ಬಂದಿದ್ದಾರೆ. 31 ನಾಯಕರು ಹೊರ ರಾಜ್ಯದಿಂದ ಪ್ರಚಾರ ಕಾರ್ಯಕ್ಕೆ ಬಂದಿದ್ದರು. ನರೇಂದ್ರ ಮೋದಿ ರಾಜ್ಯದಲ್ಲಿ 19 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 6 ರೋಡ್ ಶೋ ನಡೆಸಿದ್ದರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 10 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 16 ರೋಡ್ ಶೋ ನಡೆಸಿದ್ದರು, ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ 16 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು,17 ರೋಡ್ ಶೋ ನಡೆಸಿದ್ದಾರೆ.
ವಿಶೇಷವಾಗಿ ಮೋದಿ ರೋಡ್ ಶೋ ಇಡೀ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿತ್ತು. ಬೆಂಗಳೂರಿನಲ್ಲಿ ಒಂದು ಮೆಗಾ ರೋಡ್ ಶೋ ಸೇರಿ ಮೂರು ರೋಡ್ ಶೋ ನಡೆಸಲಾಗಿತ್ತು. ನೈಸ್ ರಸ್ತೆ ಜಂಕ್ಷನ್ ನಿಂದ ಸುಮನಳ್ಳಿ ವೃತ್ತದವರೆಗೆ ಮೊದಲ ರೋಡ್ ಶೋ ನಡೆಸಿದ್ದ ಮೋದಿ ನಂತರ ಜೆಪಿ ನಗರದಿಂದ ಮಲ್ಲೇಶ್ವರದವರೆಗೆ 26 ಕಿಲೋಮೀಟರ್ ವರೆಗೆ ಬೃಹತ್ ರೋಡ್ ಶೋ ನಡೆಸಿದ್ದರು.
35 ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದರು.ನಂತರ ಹೊಸ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್ ವರೆಗೆ 6.5 ಕಿಲೋಮೀಟರ್ ರೋಡ್ ಶೋ ನಡೆಸಿದ್ದರು. ಬೆಂಗಳೂರಿನಲ್ಲಿ ಪ್ರಚಾರ ಸಭೆ ಬದಲು ಮೂರು ರೋಡ್ ಶೋ ಮೂಲಕವೇ ಪ್ರಚಾರ ನಡೆಸಿದ್ದರು.ಮೈಸೂರು ಸೇರಿದಂತೆ ರಾಜ್ಯದ ಇತರ ಕಡೆಯೂ ಮೋದಿ ರೋಡ್ ಶೋ ನಡೆಸಿದ್ದರು.
ಮೋದಿ ಮತ್ತು ಅಮಿತ್ ಶಾ ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಜನರನ್ನು ಸೆಳೆಯಲು ಸಫಲವಾದರೂ ಚುನಾವಣೆ ಗೆಲ್ಲಲು ವಿಫಲವಾದರು.
ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಅಗ್ರ ನಾಯಕರಾದ ಮೋದಿ ಹಾಗು ಅಮಿತ್ ಶಾ ನಡೆಸಿದ ರೋಡ್ ಶೋಗಳು ಹಾಗೂ ಚುನಾವಣಾ ರ್ಯಾಲಿಗಳು ಬಿಜೆಪಿ ಕೈ ಹಿಡಿಯುವಲ್ಲಿ ವಿಫಲವಾಗಿವೆ.