Friday, 18th October 2024

ಲಿಂಗಸಗೂರು- ಬಿಜೆಪಿ; ರಾಯಚೂರು ಗ್ರಾಮೀಣ, ಮಾನವಿ, ಸಿಂಧನೂರು, ಮಸ್ಕಿ – ಕಾಂಗ್ರೆಸ್; ದೇವದುರ್ಗ- ಜೆಡಿಎಸ್

ರಾಯಚೂರು : ತೀರ್ವ ಕುತೂಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳ ಪೈಕಿ ರಾಯಚೂರು, ಲಿಂಗಸ್ಗೂರಿನಲ್ಲಿ ಕಮಲ ಅರಳಿದ್ದು, ರಾಯಚೂರು ಗ್ರಾಮೀಣ, ಮಾನವಿ, ಸಿಂಧನೂರು, ಮಸ್ಕಿಯಲ್ಲಿ ಕೈ ಜಯಭೇರಿಯಾಗಿದ್ದು , ದೇವದುರ್ಗದಲ್ಲಿ ತೆನೆ ಹೊತ್ತ ಮಹಿಳೆಗೆ ಪ್ರಚಂಡ ಬಹುಮತದ ಜಯ ಗಳಿಸಿದ್ದಾರೆ.

ನಗರದ ಎಸ್‌ಅರ್‌ಪಿಎಸ್ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ ೮ಕ್ಕೆ ಮತ ಎಣಿಕೆ ಪ್ರಾರಂಭವಾಯಿತು.

ಪ್ರಾರಂಭದಲ್ಲಿ ಅಂಚೆ ಮತ ಎಣಿಕೆ ನಡೆಯಿತು ತದನಂತರ ಕ್ಷೇತ್ರವಾರು ನಿಗದಿಪಡಿಸಿದ ಕೊಠಡಿಗಳಲ್ಲಿ ಮತ ಯಂತ್ರಗಳ ಎಣಿಕೆ ನಡೆಯಿತು.

ಪ್ರಾರಂಭಿಕವಾಗಿ ಅನೇಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಬಂದ ಕೆಲ ಅಭ್ಯರ್ಥಿಗಳು ತದ ನಂತರ ಹಲವು ಸುತ್ತುಗಳ ಮತ ಎಣಿಕೆ ನಂತರ ಹಿನ್ನಡೆಗೆ ಜಾರ ತೊಡಗಿದರು.

ರಾಯಚೂರು ನಗರ ಕ್ಷೇತ್ರದಲ್ಲಿ ಡಾ.ಶಿವರಾಜ ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧಿಸುವ ಮುಖಾಂತರ ನಗರದಲ್ಲಿ ಕಮಲ ಅರಳಿಸಿದರು.

ಲಿಂಗಸ್ಗೂರಿನಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ್ದ ಮಾನಪ್ಪ ವಜ್ಜಲ್ ಗೆಲುವಿನ ನಗೆ ಬೀರಿದರು.

ರಾಯಚೂರು ಗ್ರಾಮೀಣದಲ್ಲಿ ಬಸನಗೌಡ ದದ್ದಲ್ , ಮಾನವಿಯಲ್ಲಿ ಹಂಪಯ್ಯ ನಾಯಕ, ಸಿಂಧನೂರಿನಲ್ಲಿ ಹಂಪನಗೌಡ ಬಾದರ್ಲಿ, ಮಸ್ಕಿಯಲ್ಲಿ ಬಸನಗೌಡ ತುರವಿಹಾಳ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳಾಗಿದ್ದಾರೆ.

ದೇವದುರ್ಗದಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಕರೆಮ್ಮ ನಾಯಕ ಗೆಲುವು ಸಾಧಿಸಿದ್ದಾರೆ.

ಪ್ರಾರಂಭಿಕವಾಗಿ ರಾಯಚೂರು ನಗರ, ರಾಯಚೂರು ಗ್ರಾಮೀಣ,ಮಾನ್ವಿ, ಮಸ್ಕಿ ಅಭ್ಯರ್ಥಿ ಗಳು ಮರ‍್ನಾಲ್ಕು ಸಾವಿರ ಮತಗಳ ಅಂತರದಲ್ಲಿ ಪ್ರತಿಸ್ಪರ್ದಿಯೊಂದಿಗೆ ಹಣಾಹಣೆ ನಡೆಯಿತು, ತದ ನಂತರ ಮತಗಳ ಅಂತರ ಹೆಚ್ಚುತ್ತಾ ಹೋಯಿತು, ಸಿಂಧನೂರು, ಲಿಂಗಸ್ಗೂರು, ದೇವದುರ್ಗದಲ್ಲಿ ಪ್ರತಿಯೊಂದು ಸುತ್ತಿನಲ್ಲಿ ಮತಗಳ ಅಂತರ ಹೆಚ್ಚುತ್ತಾ ಹೋಯಿತು.

ಹ್ಯಾಟ್ರಿಕ್ ಗೆಲುವು: ಬಿಜೆಪಿಯಿಂದ ಸ್ಪರ್ದಿಸಿದ್ದ ಡಾ.ಶಿವರಾಜ ಪಾಟೀಲ್ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದರು.

ಸತತ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆ: ರಾಯಚೂರು ಗ್ರಾಮೀಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಬಸನಗೌಡ ದದ್ದಲ್ ಮತ್ತು ಮಸ್ಕಿಯಿಂದ ಸ್ಪರ್ದಿಸಿದ್ದ ಬಸನಗೌಡ ತುರವಿಹಾಳ ಎರಡನೆ ಬಾರಿಗೆ ಮತದಾರರ ಆಶೀರ್ವಾದ ಪಡೆದು ಜಯ ಸಾಧಿಸಿದರು.

ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶ: ಲಿಂಗಸ್ಗೂರಿನಿ0ದ ಈ ಹಿಂದೆ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಹಾಗೂ ಮಾನವಿಯಿಂದ ಶಾಸಕರಾಗಿದ್ದ ಹಂಪಯ್ಯ ನಾಯಕ ಹಾಗೂ ಸಿಂಧನೂರಿನಿ0ದ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ.
ಪ್ರಥಮ ಗೆಲುವು: ತೀರ್ವ ಹಣಾ ಹಣೀ ಏರ್ಪಟ್ಟಿದ್ದ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕರೆಮ್ಮ ಜಿ. ನಾಯಕ ಚೊಚ್ಚಲ ಗೆಲುವು ಸಾಧಿಸಿದ್ದಾರೆ. ಮಾಜಿ ಸಚಿವ ಕೆ.ಶಿವನಗೌಡ ನಾಯಕರನ್ನು ಹೀನಾಯವಾಗಿ ಸೋಲಿಸಿ ಗೆಲುವಿನ ತೆನೆ ಹೊತ್ತಿದ್ದಾರೆ.

ಸುಮಾರು ೨೦ ಸುತ್ತುಗಳ ಮತ ಎಣಿಕೆ ನಂತರ ಮಧ್ಯಾಹ್ನ ೧.೩೦ ಗಂಟೆ ವೇಳೆಗೆ ಫಲಿತಾಂಶ ಹೊರಬೀಳುತ್ತ ಹೋಯಿತು ತೀರ್ವ ಕುತುಹಲ ಕೆರಳಿಸಿದ್ದ ಮತ ಎಣಿಕೆ ಸುಲಲಿತವಾಗಿ ಶಾಂತಯುತವಾಗಿ ಪೂರ್ಣಗೊಂಡಿತು ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮತ ಎಣಿಕೆ ಕೇಂದ್ರ ಹೊರಗಡೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು ವಿಜೇತ ಅಭ್ಯರ್ಥಿಗಳಿಗೆ ಗುಲಾಲ್ ಎರಚಿ ಜಯಘೋಷ ಹಾಕುತ್ತ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಾಗಿದರು.