Friday, 22nd November 2024

ಮಾತೃಗೌರವ ಮೆರೆವ ಸಂಸ್ಕೃತ ಸೂಕ್ತಿಗಳು, ಸುಭಾಷಿತಗಳು

ತಿಳಿರು ತೋರಣ

srivathsajoshi@yahoo.com

ತಾಯಿ-ತಂದೆ, ಆಚಾರ್ಯ, ಅತಿಥಿ… ಇವರೆಲ್ಲರ ಬಗ್ಗೆಯೂ ಗೌರವವಿಟ್ಟುಕೊಂಡರೆ ನಿನಗೆ ಒಳ್ಳೆಯದಾಗುತ್ತದೆ. ನಿನ್ನ ಬಾಳು ಹಸನಾಗುತ್ತ ಸಾಗುತ್ತದೆ. ಇಲ್ಲಿ ಮುಖ್ಯವಾಗುವುದು ನಿನ್ನ ಸಂಸ್ಕರಣಗೊಳ್ಳುವಿಕೆ, ನಿನ್ನ ಗುಣನಡತೆಗಳ ಮಾಗುವಿಕೆ, ನಿನ್ನ ಆಚಾರ-ವಿಚಾರಗಳ ಪಕ್ವವಾಗುವಿಕೆ. ಏಕೆಂದರೆ ನೀನು ಗೌರವಿಸಿದರೂ ಇಲ್ಲದಿದ್ದರೂ ಅವರ ಘನತೆ-ಗೌರವಗಳಿಗೇನೂ ಚ್ಯುತಿ ಬರುವುದಿಲ್ಲ

ಅ ಮರಕೋಶದಲ್ಲಿ ತಾಯಿ ಎಂಬರ್ಥದ ಪದಗಳನ್ನು ಕೊಟ್ಟಿರುವುದು ಒಟ್ಟು ನಾಲ್ಕು ಮಾತ್ರ. ಹೀಗೆ ಆಶ್ಚರ್ಯ ಪಡಲಿಕ್ಕೆ ಕಾರಣವಿದೆ; ಸಂಸ್ಕೃತ ಭಾಷೆಯಲ್ಲಿ ಆನೆ ಎಂಬರ್ಥ ಕೊಡುವ ಪದಗಳು ಸರಿಸುಮಾರು ಒಂದು ಸಾವಿರದಷ್ಟು ಇವೆಯಂತೆ! ಆ ಮಟ್ಟಿಗೆ ತಾಯಿ ಎಂಬರ್ಥದವು ನಾಲ್ಕೇ ಇರುವುದು ಕಡಿಮೆಯಾಯಿತು ಅಂತ ಅಷ್ಟೇ. ಇರಲಿ, ಯಾವುವು ಆ ನಾಲ್ಕು ಪದಗಳು? ಜನಯಿತ್ರೀ, ಪ್ರಸೂ, ಮಾತೃ, ಮತ್ತು ಜನನೀ.

ಇದರಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಜನಯಿತ್ರೀ, ಪ್ರಸೂ, ಮತ್ತು ಜನನೀ- ಇವು ಮೂರು ‘ಮಕ್ಕಳನ್ನು ಹೆರುವವಳು’ ಎಂಬರ್ಥದಲ್ಲಿ ರೂಪುಗೊಂಡಿವೆ. ಹೆರಿಗೆ ಎಂಬರ್ಥದ ಪ್ರಸೂತಿ ಪದದಿಂದ ನಮಗದು ಗೊತ್ತಾಗುತ್ತದೆ. ಪ್ರಸವ ಮತ್ತು ಪ್ರಸೂತಿ ಕೂಡ ಒಂದೇ ಅರ್ಥ ತಾನೆ? ಜನಯಿತ್ರೀ ಸಹ- ಸೃಷ್ಟಿ ಮಾಡುವವನು, ಉತ್ಪತ್ತಿ ಮಾಡುವವನು, ತಂದೆ ಎಂಬರ್ಥದ ‘ಜನಯಿತೃ’ ಪದದ ಸ್ತ್ರೀಲಿಂಗ ರೂಪವಾಗಿ ಬಂದಿದೆ. ಜನನೀ ಅಂತೂ ಇನ್ನೂ ಸುಲಭ: ಜನನ ಉಂಟುಮಾಡುವವಳೇ ಜನನಿ. ಜನಕ ಪದದ ಸ್ತ್ರೀಲಿಂಗ.

ಆದರೆ ‘ಮಾತೃ’ ಅಥವಾ ಅದರದೇ ಇನ್ನೊಂದು ರೂಪ ‘ಮಾತಾ’ ಪದ ಹಾಗಲ್ಲ. ಇದರ ಅರ್ಥವೈಶಾಲ್ಯ ಮತ್ತು ಔನ್ನತ್ಯ ವಿಶೇಷವಾದುದು. ಹೆರುವವಳು ಎಂಬುದಷ್ಟೇ ಇದರ ಭಾವವಲ್ಲ. ಮಾತೆ ಎನಿಸಿದವಳು ಪೊರೆ ಯುವವಳೂ ಹೌದು. ನಿಷ್ಕಾಮ ಕಲ್ಮಷ ರೀತಿಯಲ್ಲಿ ಮಮತೆ-ವಾತ್ಸಲ್ಯಗಳ ಧಾರೆ ಎರೆಯುವವಳೂ ಹೌದು. ಆದ್ದರಿಂದಲೇ, ಹೆತ್ತ ತಾಯಿಯಷ್ಟೇ ಅಲ್ಲ, ಪ್ರಕೃತಿ, ಭೂಮಿ, ಗೋವು, ಲಕ್ಷ್ಮೀ, ಪಾರ್ವತಿ, ಸರಸ್ವತಿ, ಅಷ್ಟೇಕೆ ಅ-ಕಾರಾದಿ ಅಕ್ಷರಗಳುಳ್ಳ ಭಾಷೆ- ಇವೆಲ್ಲವೂ ನಮಗೆ ಮಾತೃಸ್ವರೂಪಿ ಎನಿಸುತ್ತವೆ.

ನಮ್ಮ ಸನಾತನ ಸಂಸ್ಕೃತಿಯ ಉದಾತ್ತತೆಯನ್ನು ಎತ್ತಿತೋರಿಸುತ್ತವೆ. ಇಂಗ್ಲಿಷ್‌ನ ‘ಮದರ್’ ಸೇರಿದಂತೆ ಪ್ರಪಂಚದ ಅನೇಕ ಭಾಷೆಗಳಲ್ಲಿ ತಾಯಿ ಎಂಬರ್ಥದ ಪದ ಸಂಸ್ಕೃತದ ‘ಮಾತೃ’ಗೆ ಹತ್ತಿರವಾಗಿಯೇ ಇರುವುದು, ಮತ್ತು ಆ ಭಾಷೆಗಳಲ್ಲೂ ಅದು ಹೆರುವವಳು ಎಂಬುದಷ್ಟಕ್ಕೇ ಸೀಮಿತವಾಗದೆ ನಮ್ಮಲ್ಲಿರುವಂತೆ ಅರ್ಥವೈಶಾಲ್ಯ ಮತ್ತು ಔನ್ನತ್ಯ ಹೊಂದಿರುವುದು ಗಮನಾರ್ಹ.
‘ಮಾತೃ ದೇವೋ ಭವ’- ಇದು ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ವಾಕ್ಯ. ತಾಯಿಯೇ ದೇವರು ಎಂದು ಇದರ ಸ್ಥೂಲ ಅರ್ಥ ಹೌದಾದರೂ ನಿಖರವಾಗಿ ಹೇಳುವುದಾರೆ ‘ತಾಯಿಯನ್ನೇ ದೇವರೆಂದು ಪರಿಗಣಿಸುವವನಾಗು’ ಎಂದು ಬಲು ಸೂಕ್ಷ್ಮವಾದ
ಅರ್ಥ ಈ ವಾಕ್ಯಕ್ಕಿದೆ.

ಅಂದರೆ, ತಾಯಿಯು ದೇವರಿದ್ದಂತೆ ಎನ್ನುವುದಂತೂ ಹೌದೇಹೌದು, ಅದನ್ನು ಅರ್ಥ ಮಾಡಿಕೊಂಡು ನೀನು ತಾಯಿಯನ್ನು ದೇವರೆಂದು ಗೌರವಿಸು ಎನ್ನುವ ಬೋಧನೆಗೆ ಇದರಲ್ಲಿ ಹೆಚ್ಚು ಒತ್ತು. ಅದೇ ತೈತ್ತಿರೀಯ ಉಪನಿಷತ್ತಿನಲ್ಲಿ ಇದಾದ ಕೂಡಲೇ ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ… ಎಂದು ಕೂಡ ಬರುತ್ತದೆ. ತಂದೆಯನ್ನೂ ದೇವರೆಂದು ಪರಿಗಣಿಸು. ಗುರುವನ್ನೂ ದೇವರೆಂದು ಪರಿಗಣಿಸು. ಮನೆಗೆ ಬಂದ ಅತಿಥಿಯನ್ನೂ ದೇವರೆಂದು ಪರಿಗಣಿಸು. ಅಂದರೆ, ತಾಯಿ-ತಂದೆ, ಆಚಾರ್ಯ, ಅತಿಥಿ… ಇವರೆಲ್ಲರ ಬಗ್ಗೆಯೂ ಗೌರವವಿಟ್ಟುಕೊಂಡರೆ ನಿನಗೆ ಒಳ್ಳೆಯದಾಗುತ್ತದೆ.

ನಿನ್ನ ಬಾಳು ಹಸನಾಗುತ್ತ ಸಾಗುತ್ತದೆ. ಇಲ್ಲಿ ಮುಖ್ಯವಾಗುವುದು ನಿನ್ನ ಸಂಸ್ಕರಣಗೊಳ್ಳುವಿಕೆ, ನಿನ್ನ ಗುಣನಡತೆಗಳ ಮಾಗುವಿಕೆ, ನಿನ್ನ ಆಚಾರ- ವಿಚಾರಗಳ ಪಕ್ವವಾಗುವಿಕೆ. ಏಕೆಂದರೆ ನೀನು ಗೌರವಿಸಿದರೂ ಇಲ್ಲದಿದ್ದರೂ ಅವರ ಘನತೆ-ಗೌರವಗಳಿಗೇನೂ ಚ್ಯುತಿ ಬರುವುದಿಲ್ಲ. ಹಾಗೆ ಘನತೆವೆತ್ತವರ ಪಟ್ಟಿಯಲ್ಲಿ ಮಾತೆಯೇ ಮೊದಲ ಸ್ಥಾನದಲ್ಲಿ ಇದ್ದಾಳೆನ್ನುವುದು ಗಮನಾರ್ಹ ವಿಷಯ.

ಮನುಸ್ಮೃತಿಯಲ್ಲಿ ಬರುವ ಒಂದು ಶ್ಲೋಕವು ‘ಉಪಾಧ್ಯಾಯಾನ್ ದಶಾಚಾರ್ಯ ಆಚಾರ್ಯಾಣಾಂ ಶತಂಪಿತಾ| ಸಹಸ್ರಂ ತು ಪಿತೄನ್ ಮಾತಾ ಗೌರವೇಣಾತಿರಿಚ್ಯತೇ||’ ಎನ್ನುತ್ತದೆ. ಉಪಾಧ್ಯಾಯ ಅಂದರೆ ಶಿಕ್ಷಕ. ಏನನ್ನೆಲ್ಲ ಕಲಿಸಬೇಕೆಂದು ಸಿಲೆಬಸ್‌ನಲ್ಲಿ ಹೇಳಿದೆಯೋ ಅದಷ್ಟನ್ನು ಮತ್ತು ಅದಷ್ಟನ್ನೇ ಮಾಡುವವನು. ತರಗತಿಯ/ಶಾಲೆಯ ನಾಲ್ಕು ಗೋಡೆಗಳ ಹೊರಗೆ ಆತನ ಪ್ರಭಾವ-ಪರಿಣಾಮ ಶೂನ್ಯವಲ್ಲವಾದರೂ ಭಾರೀ ಗಣ್ಯವೂ ಅಲ್ಲ. ಆದರೆ ಆಚಾರ್ಯ ಅಥವಾ ಗುರು ಎಂದೆನಿಸಿಕೊಳ್ಳುವವನು ಶಿಕ್ಷಕನಿಗಿಂತ ಹತ್ತು ಪಟ್ಟು ಶ್ರೇಷ್ಠನು.

ಕಾರಣ ಆತ ತನ್ನ ಶಿಷ್ಯನ ಸಂಪೂರ್ಣ ಬೌದ್ಧಿಕ ವಿಕಾಸಕ್ಕೆ ಮಾರ್ಗದರ್ಶಿಯಾಗುತ್ತಾನೆ. ಗುರುವಿಗಿಂತಲೂ ನೂರು ಪಟ್ಟು ಹೆಚ್ಚಿನ ಶ್ರೇಷ್ಠತೆ ತಂದೆಯದು. ಏಕೆಂದರೆ ಬೌದ್ಧಿಕ ವಿಕಾಸವಷ್ಟೇ ಅಲ್ಲ ಬದುಕಿನಲ್ಲಿ ಸರ್ವಾಂಗೀಣ ಉನ್ನತಿಗೆ ಭದ್ರ ಬುನಾದಿ ಒದಗಿಸುವವನು ತಂದೆ. ಅಂತಹ ತಂದೆಗಿಂತಲೂ ಸಾವಿರ ಪಟ್ಟು ಗೌರವ ತಾಯಿಗೆ ಸಲ್ಲುತ್ತದೆ, ಸಲ್ಲಬೇಕು. ಏಕೆಂದರೆ ಬೌದ್ಧಿಕ ವಿಕಾಸ, ಬದುಕಿನ ಭದ್ರತೆ ಮುಂತಾದುವುಗಳಿಗಿಂತಲೂ ಭಾವನಾತ್ಮಕತೆಯ ಕುಸುರಿ ಸೇರಿ ಬಾಳೆಂಬ ಶಿಲ್ಪ ಸುಂದರಗೊಳ್ಳುವುದು ತಾಯಿಯಿಂದಲೇ. ಗುರುವಿನಿಂದಾಗಿ ಐ.ಕ್ಯೂ(ಬುದ್ಧಿಮತ್ತೆ) ಹೆಚ್ಚಬಹುದು, ಆದರೆ ಅಷ್ಟೇ ಮಹತ್ತ್ವವಿರುವ ಇ.ಕ್ಯೂ(ಭಾವಸಮೃದ್ಧಿ) ಹೆಚ್ಚುವುದು ತಾಯಿಯಿಂದಲೇ.

ಮನುಸ್ಮೃತಿಯಲ್ಲಿ ಹಾಗಿದೆ-ಹೀಗಿದೆ-ಕೆಟ್ಟದಾಗಿದೆ ಅದನ್ನು ಸುಟ್ಟುಬಿಡಬೇಕು ಅಂತೆಲ್ಲ ಕಿರುಚಾಡುವವರು (ಅದೂ ಆ ಗ್ರಂಥವನ್ನೇನೂ ತೆರೆದುನೋಡದೆಯೇ! ಓದುವುದಂತೂ ದೂರವೇ ಉಳಿಯಿತು) ಇಂತಹ ಶ್ರೇಷ್ಠ ಮೌಲ್ಯಗಳು ಅದರಲ್ಲಿ
ಪ್ರತಿಪಾದನೆಯಾಗಿವೆ ಎಂದು ಏಕೆ ಅರ್ಥಮಾಡಿಕೊಳ್ಳುವುದಿಲ್ಲವೋ. ಪದ್ಮಪುರಾಣದ ಒಂದು ಶ್ಲೋಕದಲ್ಲಿ ‘ಸರ್ವತೀರ್ಥಮಯೀ
ಮಾತಾ ಸರ್ವದೇವಮಯಃ ಪಿತಾ| ಮಾತರಂ ಪಿತರಂ ತಸ್ಮಾತ್ ಸರ್ವಯತ್ನೇನ ಪೂಜಯೇತ್||’ ಎಂದಿದೆ. ತಾಯಿಯಲ್ಲಿ ಎಲ್ಲ
ತೀರ್ಥಕ್ಷೇತ್ರಗಳ ಸನ್ನಿಧಾನ ಇದೆ. ತಂದೆಯಲ್ಲಿ ಎಲ್ಲ ದೇವತೆಗಳ ಸನ್ನಿಧಾನ ಇದೆ.

ತಾಯಿ-ತಂದೆ ಯಾವ ಪರಿಸ್ಥಿತಿಯಲ್ಲಿದ್ದರೂ ನಾವು ಅವರನ್ನು ಸಕಲಪ್ರಯತ್ನದಿಂದ ಪೂಜಿಸಬೇಕು. ತಾಯಿಯನ್ನು ನೋಡಿಕೊಳ್ಳದ ಮಗ ಎಷ್ಟು ತೀರ್ಥಯಾತ್ರೆ ಮಾಡಿದರೂ ವ್ಯರ್ಥ; ತಂದೆಯನ್ನು ನೋಡಿಕೊಳ್ಳದ ಮಗ ಎಷ್ಟು ದೇವರಿಗೆ ಕೈಮುಗಿದರೂ ವ್ಯರ್ಥ. ಇನ್ನು, ಚಾಣಕ್ಯನೀತಿಯಲ್ಲಿ ಬರುವ ಒಂದು ಸೂಕ್ತಿ ಹೀಗಿದೆ: ‘ನಾನ್ನೋದಕಸಮಂ ದಾನಂ ನ ತಿಥಿರ್ದ್ವಾದಶೀಸಮಾ| ನ ಗಾಯತ್ರ್ಯಾಸಮೋ ಮಂತ್ರೋ ನ ಮಾತುಃ ಪರದೈವತಮ್||’. ಹಸಿದಾತನೊಬ್ಬನಿಗೆ ತಿನ್ನುವುದಕ್ಕೆ ತುತ್ತು ಅನ್ನ, ಕುಡಿಯುವುದಕ್ಕೆ ಬೊಗಸೆ ನೀರು ಕೊಟ್ಟರೆ ಅದಕ್ಕಿಂತ ದೊಡ್ಡ ದಾನವೇನಿದೆ? ವೈಶಾಖ ಮಾಸದ ಸುಡುಬೇಸಗೆಯ ಈ ದಿನಗಳಲ್ಲಿ ದಾರಿಹೋಕರಿಗೆ ನೀರಿನ ಅರವಟ್ಟಿಗೆಗಳ ವ್ಯವಸ್ಥೆ, ಪ್ರಾಣಿ-ಪಕ್ಷಿಗಳಿಗೆ ಕುಡಿಯಲಿಕ್ಕಾಗುವಂತೆ ನೀರಿನ ಬೋಗುಣಿಗಳು… ಇದಕ್ಕೆ ಸಮಾನವಾದ ದಾನ ಬೇರೆ ಇಲ್ಲ.

ಇದರಿಂದ ಸಿಗುವ ತೃಪ್ತಿ ಬೇರಾವ ದಾನದಿಂದಲೂ ಸಿಗುವುದಿಲ್ಲ. ಅಂತೆಯೇ, ದ್ವಾದಶಿಗೆ ಸಮಾನವಾದ ತಿಥಿಯಿಲ್ಲ, ವಿಷ್ಣುವಿನ
ಪೂಜೆಗೆ ಅದು ಶ್ರೇಷ್ಠವಾದುದು. ಗಾಯತ್ರಿಗೆ ಸಮನಾದ ಮಂತ್ರವಿಲ್ಲ, ಅದು ಸುಲಭವೂ ಪಾಪನಾಶಕವೂ ಆಗಿರುವುದು ಎನ್ನುವ ಈ ಶ್ಲೋಕವು ಕೊನೆಯ ಚರಣದಲ್ಲಿ- ತಾಯಿಗಿಂತ ದೊಡ್ಡ ದೇವರಿಲ್ಲ, ಇದ್ದಾನೆಯೇ ಎಂದು ಹುಡುಕುವುದೂ ಬೇಕಿಲ್ಲ
ಎನ್ನುತ್ತದೆ. ರಾಮಾಯಣದಲ್ಲಿ ಅಯೋಧ್ಯಾಕಾಂಡದ ಒಂದು ಶ್ಲೋಕದಲ್ಲೂ ಇದನ್ನೇ ಹೇಳಲಾಗಿದೆ: ‘ಸ್ವಾಧೀನಂ ಸಮತಿಕ್ರಮ್ಯ
ಮಾತರಂ ಪಿತರಂ ಗುರುಂ| ಅಸ್ವಾಧಿನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ||’ ಕಣ್ಣೆದುರಿಗಿರುವ ತಾಯಿ-ತಂದೆ ಮತ್ತು
ಗುರುಮನ್ನೇ ದೇವರು ಎಂದುಕೊಂಡು ಗೌರವಿಸದೆ, ಕಾಣದ ಬೇರೆ ದೇವರನ್ನೇಕೆ ಹುಡುಕುತ್ತ ಅಲೆಯುವೆ? ರಾಮಾಯಣ ಎಂದಾಗ ನೆನಪಾಗುವ ಹೃದಯಸ್ಪರ್ಶಿ ಸನ್ನಿವೇಶವೊಂದಿದೆ.

ವಾಲ್ಮೀಕಿಯ ರಚನೆಯಲ್ಲಿ ಅಲ್ಲ ಇದು ಭಾಸ ಕವಿಯ ‘ಪ್ರತಿಮಾ’ ನಾಟಕದಲ್ಲಿ ಬರುವಂಥದು. ಮಂಥರೆಯ ಮಾತುಗಳಿಗೆ ಕಿವಿಗೊಡುವ ಕೈಕೇಯಿಯು ರಾಮನ ಪಟ್ಟಾಭಿಷೇಕವನ್ನು ತಪ್ಪಿಸುತ್ತಾಳೆ. ಬದಲಿಗೆ ತನ್ನ ಮಗ ಭರತನ ಪಟ್ಟಾಭಿಷೇಕ
ಆಗಬೇಕೆಂದೂ, ರಾಮನಿಗೆ ವನವಾಸ ವಿಧಿಸಬೇಕೆಂದೂ ದಶರಥನಲ್ಲಿ ಕೇಳಿಕೊಳ್ಳುತ್ತಾಳೆ. ಕೈಕೇಯಿಯ ಕಲ್ಲುಹೃದಯದ ಈ
ಬೇಡಿಕೆಗಳನ್ನು ಜೀರ್ಣಿಸಿಕೊಳ್ಳಲಾಗದೆ ದಶರಥ ಸಾವನ್ನಪ್ಪುತ್ತಾನೆ.

ತಂದೆ ವಚನಭ್ರಷ್ಟನಾಗಬಾರದೆಂದು ಶ್ರೀರಾಮ ಸೀತೆ ಮತ್ತು ಲಕ್ಷ್ಮಣನೊಡನೆ ಕಾಡಿಗೆ ತೆರಳುತ್ತಾನೆ. ಆಗಿನ್ನೂ ಮಾವನ
ಮನೆಯಲ್ಲೇ ಉಳಿದಿದ್ದ ಭರತ-ಶತ್ರುಘ್ನರನ್ನು ಅಯೋಧ್ಯೆಗೆ ಕರೆಸಲಾಗುತ್ತದೆ. ಪಟ್ಟಣದ ಹೊರಗಿನ ಉದ್ಯಾನದವರೆಗೆ ಅವರು ತಲುಪುತ್ತಾರೆ. ರಘುವಂಶದ ಈ ಹಿಂದಿನ ರಾಜರೆಲ್ಲರ ಪ್ರತಿಮೆಗಳನ್ನು ಆ ಉದ್ಯಾನದಲ್ಲಿ ಸ್ಥಾಪಿಸಿದ್ದಿರುತ್ತದೆ. ಮೊದಲು ದಿಲೀಪ, ರಘು, ಮತ್ತು ಅಜ ಈ ಮೂವರ ಪ್ರತಿಮೆಗಳಷ್ಟೇ ಅಲ್ಲಿದ್ದದ್ದು. ಈಗ ನಾಲ್ಕನೆಯದಾಗಿ ದಶರಥನ ಪ್ರತಿಮೆಯೂ ಸೇರಿದೆ! ಅದನ್ನು
ನೋಡಿ ಭರತ ದಿಗ್ಭ್ರಾಂತನಾಗುತ್ತಾನೆ, ಎಚ್ಚರ ತಪ್ಪಿ ಕುಸಿಯುತ್ತಾನೆ.

ಹೃದಯವಿದ್ರಾವಕ ದೃಶ್ಯವದು. ತಂದೆ ತೀರಿಹೋದ ಸಮಾಚಾರ ಭರತನಿಗಿನ್ನೂ ತಿಳಿದಿರಲಿಲ್ಲ, ಅಲ್ಲಿ ತಂದೆಯದೇ ಪ್ರತಿಮೆ ಯನ್ನು ನೋಡಿದಾಗಲೇ ಅವನಿಗೆ ಗೊತ್ತಾದದ್ದು. ಅಷ್ಟು ಹೊತ್ತಿಗೆ ಅಲ್ಲಿಗೆ ಕೌಸಲ್ಯಾ, ಕೈಕೇಯಿ, ಸುಮಿತ್ರೆಯರೂ ಬರುತ್ತಾರೆ. ಅವರು ಪ್ರೀತಿಯಿಂದ ಭರತನ ಮೈದಡವುತ್ತಾರೆ. ಉದ್ಯಾನವನದ ಮೇಲ್ವಿಚಾರಕ ಮತ್ತು ಪ್ರತಿಮಾಗೃಹದ ಕಾವಲುಗಾರ ನಾಗಿದ್ದ ದೇವಕುಲಿಕ ಎಂಬಾತ ಆ ದೃಶ್ಯವನ್ನು ನೋಡಿ ಮಮ್ಮಲಮುರುಗುತ್ತ ನುಡಿಯುತ್ತಾನೆ: ‘ಹಸ್ತಸ್ಪರ್ಶೋ ಹಿ ಮಾತೄಣಾಂ ಅಜಲಸ್ಯ ಜಲಾಂಜಲಿಃ’ – ಭರತನಿಗೆ ಈ ಮೂವರು ತಾಯಿಯಂದಿರ ಕರಸ್ಪರ್ಶವೇ ಬಾಯಾರಿದವನಿಗೆ ಬೊಗಸೆ ನೀರು ಸಿಕ್ಕಂತಾಯ್ತು- ಎಂದು. ಮಾತೃಹೃದಯದ ಮಮತೆಯ ಸಿಂಚನ ಹೇಗಿರುತ್ತದೆಂದು ಒಬ್ಬ ಯಃಕಶ್ಚಿತ್ ಕಾವಲುಗಾರನೂ ಅದೆಷ್ಟು ಮಧುರಭಾವದಿಂದ ಹೇಳಿದ್ದಾನೆ! ಅಥವಾ, ಭಾಸ ಕವಿ ಹಾಗೆ ಚಿತ್ರಿಸಿದ್ದಾನೆ! ಅಜಲಸ್ಯ ಜಲಾಂಜಲಿಃ ಎಂಬಲ್ಲಿನ ಅಕ್ಷರವಿನ್ಯಾಸವೂ ಹಾಯೆನಿಸುವಂಥದ್ದೇ.

ರಾಮಾಯಣದ್ದೇ ಎನ್ನಲಾದ (ಇದು ಸಹ ವಾಲ್ಮೀಕಿಯದಲ್ಲ, ಬೇರಾರದೋ ಕಲ್ಪನೆ) ಅತ್ಯಂತ ಜನಜನಿತ ನುಡಿ ‘ಜನನೀ
ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಕೂಡ ಮಾತೆಯ ಮಹತ್ತ್ವವನ್ನು ಸೂಚಿಸುವಂಥದು. ರಾವಣನನ್ನು ಕೊಂದ ಮೇಲೆ ರಾಮ, ಸೀತೆ, ಲಕ್ಷ್ಮಣ ಮತ್ತು ವಾನರಸೇನೆಯೆಲ್ಲ ಲಂಕೆಯಿಂದ ಹಿಂದಿರುಗುವ ಸಮಯ. ವಿಶ್ವಕರ್ಮನಿಂದ ನಿರ್ಮಿತ ಅತ್ಯಾಕರ್ಷಕ ಲಂಕಾನಗರಿಯನ್ನು ಬಿಟ್ಟುಹೋಗುವುದೇ ಎಂದು ಲಕ್ಷ್ಮಣನ ಮನಸ್ಸು ಒಮ್ಮೆ ವಿಚಲಿತವಾಗುತ್ತದೆ.

ಅಣ್ಣನಲ್ಲಿ ಹೇಳುತ್ತಾನೆ, ಇಲ್ಲೇ ಇದ್ದುಬಿಡೋಣ ಅಯೋಧ್ಯೆಗೇಕೆ ಹಿಂದಿರುಗಬೇಕು? ಅಲ್ಲಿ ಭರತ ನಮ್ಮನ್ನು ಸೇರಿಸಿಕೊಳ್ಳು ತ್ತಾನೋ ಇಲ್ಲವೋ. ಆಗ ರಾಮ, ಲಕ್ಷ್ಮಣ ನಿಗೆ ಹೇಳುವ ಮಾತು ಅತ್ಯಂತ ಮಾರ್ಮಿಕವೂ ಮನೋಜ್ಞವೂ ಆದುದು. ಆತನೆನ್ನುತ್ತಾನೆ, ‘ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ| ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀ ಯಸೀ||’ ಲಕ್ಷ್ಮಣಾ, ಈ ಲಂಕಾನಗರಿಯು ಬಂಗಾರದಿಂದ ನಿರ್ಮಿಸಿದ್ದೇ ಆಗಿರಬಹುದು, ಸಕಲಸೌಕರ್ಯಗಳಿರುವ ಸಮೃದ್ಧ ನಾಡೇ
ಆಗಿರಬಹುದು. ಆದರೆ ನನಗೆ ಇದು ಆಕರ್ಷಕವೆನಿಸುವುದಿಲ್ಲ.

ಏಕೆಂದರೆ ಹೆತ್ತ ತಾಯಿ ಮತ್ತು ಜನ್ಮಭೂಮಿ ಇವು ಸ್ವರ್ಗಕ್ಕಿಂತಲೂ ಶ್ರೇಷ್ಠವಾದವು. ನಾನು ತಾಯಿಯಿದ್ದಲ್ಲಿಗೆ, ತಾಯ್ನಾಡಿಗೆ  ಹಿಂದಿರುಗಲೇಬೇಕು.’ ಮಹಾಭಾರತದಲ್ಲಿ ವನಪರ್ವದಲ್ಲಿ ಯುಧಿಷ್ಠಿರನು ಯಕ್ಷನ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೂ ತಾಯಿಯ ಹಿರಿಮೆ ಬರುತ್ತದೆ. ‘ಭೂಮಿಗಿಂತಲೂ ಗುರುತರವಾದುದು ಯಾವುದು?’ ಎಂಬ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನ ಉತ್ತರ ‘ಮಾತಾ ಗುರುತರೋ ಭೂಮೇಃ – ಭೂಮಿಗಿಂತಲೂ ಗುರುತರವೆಂದು ನಾನು ಗೌರವಿಸುವುದು ತಾಯಿಯನ್ನು’ ಎಂದು.

ತ್ರೇತಾ, ದ್ವಾಪರ ಯುಗಗಳಿಂದ ಕಲಿಯುಗಕ್ಕೆ ಬಂದರೆ- ‘ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ
ಶಯನಂ’ ಎಂದ ಶಂಕರಾಚಾರ್ಯರು ತಾಯಿಯನ್ನು ಬಣ್ಣಿಸಿರುವ ರೀತಿ ಅನನ್ಯವಾದುದು. ಅಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಅವರೆನ್ನುತ್ತಾರೆ: ‘ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ| ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ| ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ| ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||’ – ಎಲೈ ಜಗನ್ಮಾತೆ ಯಾದ ನನ್ನ ತಾಯಿಯೇ, ನಿನ್ನ ಪಾದಸೇವೆಯನ್ನು ನಾನು ಮಾಡಲಿಲ್ಲ.

ನಿನಗಾಗಿ ಸಾಕಷ್ಟು ಧನವನ್ನೂ ವ್ಯಯಿಸಲಿಲ್ಲ. ಆದರೂ ನೀನು ನನ್ನ ವಿಷಯದಲ್ಲಿ ಅನುಪಮವಾದ ಸ್ನೇಹವಾತ್ಸಲ್ಯಗಳನ್ನು ತೋರಿಸುತ್ತಿರುವೆ. ಲೋಕದಲ್ಲಿ ಯಾವನೋ ಕೆಟ್ಟ ಮಗ ಹುಟ್ಟಿಯಾನು, ಆದರೆ ಕೆಟ್ಟ ತಾಯಿ ಅಂತ ಯಾರೂ  ಅನಿಸಿಕೊಳ್ಳುವುದಿಲ್ಲ.’ ಅದೇ ಸ್ತೋತ್ರದಲ್ಲಿ ಇನ್ನೊಂದು ಶ್ಲೋಕವೂ ತಾಯಿಯ ಹೆಚ್ಚುಗಾರಿಕೆಯನ್ನು ಬಣ್ಣಿಸುತ್ತದೆ. ‘ಜಗದಂಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ| ಅಪರಾಧ ಪರಂಪರಾವೃತಂ ನ ಹಿ ಮಾತಾ ಸಮುಪೇಕ್ಷತೇ ಸುತಮ್||’ – ನೀನು ನನ್ನ ಮೇಲೆ ಸಂಪೂರ್ಣ ಕರುಣೆ ತೋರಿಸುತ್ತಾ ಇರುವುದರಲ್ಲಿ ಆಶ್ಚರ್ಯವೇನಿದೆ? ಏಕೆಂದರೆ ಸಾವಿರ ತಪ್ಪು ಮಾಡಿದ್ದರೂ ಕೂಡ ತಾಯಿಯಾ ದವಳು ಯಾವತ್ತಿಗೂ ಮಗನನ್ನು ಕಡೆಗಣಿಸುವುದಿಲ್ಲ.’

ಇಲ್ಲಿ ತಾಯಿಯೆಂದರೆ ಹೆತ್ತತಾಯಿಯಲ್ಲ ಜಗತ್ತಿಗೆಲ್ಲ ತಾಯಿಯೆನಿದ ದೇವಿ ಜಗನ್ಮಾತೆ. ‘ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ’ ಎಂದು ದೇವೀಸಪ್ತಶತಿಯಲ್ಲಿ ಇರುವಂತೆ ಹೇಳಿರುವುದು. ಶಂಕರಾಚಾರ್ಯರು ಒಬ್ಬ ಯತಿಯಾ ಗಿದ್ದವರು. ಸಂನ್ಯಾಸ ಸ್ವೀಕರಿಸುವಾಗ ಪ್ರಾಪಂಚಿಕ ಸಂಬಂಧಗಳನ್ನೆಲ್ಲ ಕಡಿದುಕೊಂಡವರು. ಆದರೆ ತಾಯಿಗೂ ಮಗನಿಗೂ ಇರುವ ಕರುಳಿನ ಸಂಬಂಧ ಮಾತ್ರ ಎಂದಿಗೂ ಕಡಿದು ಹೋಗುವುದಿಲ್ಲ. ಸಂನ್ಯಾಸಿಯಾದವನೂ ತನ್ನ ತಾಯಿಗೆ ಗೌರವ ಸೂಚಿಸಲೇಬೇಕು. ಶಂಕರಾಚಾರ್ಯರು ತನ್ನ ಪೂರ್ವಾಶ್ರಮದ ತಾಯಿ ದೈವಾಧೀನರಾದಾಗ ತಾವೇ ಅಲ್ಲಿಗೆ ಬಂದು ಅಂತ್ಯಕ್ರಿಯೆ ವಿಧಿಗಳನ್ನೆಲ್ಲ ನೆರವೇರಿಸಿದ್ದರೆಂಬುದು ಯತಿಪರಂಪರೆಗೆ ಮಾರ್ಗದರ್ಶಿಯಾಗಿ ನಿಲ್ಲುವ ನಿದರ್ಶನ.

ಸಂಸ್ಕೃತ ಸುಭಾಷಿತಗಳಲ್ಲಿ ಮಾತೆಯ ಮಹತ್ತ್ವವನ್ನು ಅನೇಕ ರೀತಿಯಲ್ಲಿ ಬಣ್ಣಿಸಲಾಗಿದೆ. ‘ನಾಸ್ತಿ ಮಾತೃ ಸಮಾ ಛಾಯಾ ನಾಸ್ತಿ
ಮಾತೃ ಸಮಾ ಗತಿಃ| ನಾಸ್ತಿ ಮಾತೃ ಸಮಂ ತ್ರಾಣಂ ನಾಸ್ತಿ ಮಾತೃ ಸಮಾ ಪ್ರಪಾ||’ – ಈ ಜಗತ್ತಿನಲ್ಲಿ ತಾಯಿಗೆ ಸಮನಾದ ನೆರಳಿಲ್ಲ; ತಾಯಿಗೆ ಸಮಾನವಾದ ಆಶ್ರಯವಿಲ್ಲ; ತಾಯಿಗೆ ಸಮಾನವಾದ ರಕ್ಷಕರಿಲ್ಲ; ತಾಯಿಯಂತೆ ಜೀವ ನೀಡುವವರು ಯಾರೂ ಇಲ್ಲ ಎನ್ನುತ್ತದೆ ಒಂದು ಸುಭಾಷಿತ. ಹಾಗೆಯೇ, ‘ಮಾತ್ರಾಸಮಂ ನಾಸ್ತಿ ಶರೀರಪೋಷಣಂ| ಚಿಂತಾಸಮಂ ನಾಸ್ತಿ ಶರೀರಶೋಷಣಂ| ಭಾರ್ಯಾಸಮಂ ನಾಸ್ತಿ ಶರೀರತೋಷಣಂ| ವಿದ್ಯಾಸಮಂ ನಾಸ್ತಿ ಶರೀರಭೂಷಣಂ||’ ಅಂದರೆ, ಅಮ್ಮ ಮಾಡಿದ ಆರೈಕೆಗೆ ಸಮವಾದುದಿಲ್ಲ ನಮ್ಮ ಶರೀರಕ್ಕೆ ಪೋಷಣೆ.

ಚಿಂತಾಕ್ರಾಂತರಾದರೆ ಅದೇ ಶರೀರಕ್ಕೆ ಶೋಷಣೆ. ಶರೀರಕ್ಕೆ ಸುಖ ಕೊಡುವುದರಲ್ಲಿ ಭಾರ್ಯೆಗೆ ಮಿಗಿಲಿಲ್ಲ, ಭೂಷಣ ವಾಗಿಸುವುದರಲ್ಲಿ ವಿದ್ಯೆಗೆ ಸಾಟಿಯಾದುದಿಲ್ಲ ಎಂದು ಅರ್ಥ. ವಿದ್ಯೆಯ ಮಹತ್ತ್ವವನ್ನು ಬಣ್ಣಿಸುವ ಇನ್ನೊಂದು ಸುಭಾಷಿತ ‘ಮಾತೇವ ರಕ್ಷತಿ ಪಿತೇವ ಹಿತೇ ನಿಯುಂಕ್ತೇ| ಕಾಂತೇವ ಚಾಭಿರಮಯಂತ್ಯಪನೀಯ ಖೇದಮ್| ಲಕ್ಷ್ಮೀಂ ತನೋತಿ ವಿತನೋತಿ ಚ ದಿಕ್ಷು ಕೀರ್ತಿಂ| ಕಿಂ ಕಿಂ ನ ಸಾಧಯತಿ ಕಲ್ಪಲತೇವ ವಿದ್ಯಾ||’ ಎನ್ನುತ್ತದೆ. ತಾಯಿಯು ಮಗುವನ್ನು ಹೊತ್ತು ಹೆತ್ತು ಸಲಹುವಂತೆ ವಿದ್ಯೆಯೂ ಮನುಷ್ಯನನ್ನು ಪಾಲನೆ ಪೋಷಣೆ ಮಾಡಿ ರಕ್ಷಿಸುತ್ತದೆಂಬ ವಿವರಣೆ.

‘ಮಾತೃವತ್ ಪರದಾರಾಂಶ್ಚ ಪರದ್ರವ್ಯಾಣಿ ಲೋಷ್ಟವತ್| ಆತ್ಮವತ್ ಸರ್ವಭೂತಾನಾಂ ಯಃ ಪಶ್ಯತಿ ಸ ಪಶ್ಯತಿ||’ ಅಂತೊಂದು ನೀತಿಬೋಧೆ ಇದೆ. ಪರಸ್ತ್ರೀಯರನ್ನು ತಾಯಿಯಂತೆ, ಪರಧನವನ್ನು ಮಣ್ಣಿನ ಹೆಂಟೆಯಂತೆ, ಸಕಲ ಜೀವಿಗಳನ್ನೂ ತನ್ನಂತೆ ಯಾವನು ನೋಡುತ್ತಾನೋ ಅವನೇ ನಿಜವಾಗಿ ನೋಡತಕ್ಕವನು(eನಿ) ಎಂದು ಅದರ ತಾತ್ಪರ್ಯ. ‘ಮಾತಾ ಯಸ್ಯ ಗೃಹೇ ನಾಸ್ತಿ ಭಾರ್ಯಾ ವಾ ಪ್ರಿಯವಾದಿನೀ| ಅರಣ್ಯಂ ತೇನ ಗಂತವ್ಯಂ ಯಥಾರಣ್ಯಂ ತಥಾಗೃಹಂ||’ ತಾಯಿಯಿಲ್ಲದ ಮನೆ ಮನೆಯೇ ಅಲ್ಲ, ಕಾಡಿದ್ದಂತೆ. ಅಂತಹ ಮನೆಯಲ್ಲಿ ವಾಸಿಸುವುದೂ ಒಂದೇ, ಕಾಡಿಗೆ ಹೋಗುವುದೂ ಒಂದೇ.

‘ಮಾತಾ ಮಿತ್ರಂ ಪಿತಾಚೇತಿ ಸ್ವಭಾವಾತ್ ತ್ರಿತಯಂ ಹಿತಮ್| ಕಾರ್ಯಕಾರಣ ತಶ್ಚಾನ್ಯೇ ಭವಂತಿ ಹಿತಬುದ್ಧಯಃ||’ ತಾಯಿ-ತಂದೆಯರು ಮತ್ತು ಪ್ರಾಣಸ್ನೇಹಿತರು ಮಾತ್ರ ಅತ್ಯಂತ ಸಹಜತೆಯಿಂದ ನಮ್ಮ ಹಿತಚಿಂತನೆ ಮಾಡುತ್ತಾರೆ. ಬೇರೆಯವರೆಲ್ಲ ತಮ್ಮತಮ್ಮ ಒಳಿತಿನ ದೃಷ್ಟಿಯಿಂದಷ್ಟೇ ನಮ್ಮ ಕುಶಲ ವಿಚಾರಿಸುತ್ತಾರೆ. ಇನ್ನೂ ಒಂದು ಸುಭಾಷಿತದ ಪ್ರಕಾರ ‘ರಾಜಪತ್ನೀ ಗುರೋಃ ಪತ್ನೀ ಮಿತ್ರಪತ್ನೀ ತಥೈವ ಚ| ಪತ್ನೀಮಾತಾ ಸ್ವಸ್ಯ ಮಾತಾ ಪಂಚೈತಾಮಾತರಸ್ಮೃತಃ||’- ರಾಜನ ಹೆಂಡತಿ, ಗುರುವಿನ
ಹೆಂಡತಿ, ಮಿತ್ರನ ಹೆಂಡತಿ, ತನ್ನದೇ ಹೆಂಡತಿಯ ತಾಯಿ, ಮತ್ತು ತನ್ನ ಸ್ವಂತ ತಾಯಿ- ಈ ಐದು ಮಂದಿಯೂ ನಮಗೆ
ತಾಯಿಯಂದಿರೇ.

ಹೆತ್ತ ತಾಯಿಗೆ ಸಲ್ಲುವ ಗೌರವಕ್ಕೆ ಅರ್ಹರಾದವರೇ. ಬರೀ ಅವರಷ್ಟೇ ಅಲ್ಲ, ಈ ಅಂಕಣ ಓದುವ(ಮತ್ತು ಓದುವವರ) ತಾಯಿಯರೆಲ್ಲರೂ ಸದಾ ಗೌರವಾರ್ಹರೇ ಎನ್ನುತ್ತೇನೆ ನಾನು. ಎಲ್ಲರಿಗೂ ಈ ದಿನದ ಶುಭಾಶಯ.