Friday, 20th September 2024

ವೊಡಾಫೋನ್’ನಲ್ಲೂ 11,000 ಉದ್ಯೋಗಿಗಳ ವಜಾ..!

ಲಂಡನ್ : ವೊಡಾಫೋನ್ ಐಡಿಯಾದ ಮಾತೃಸಂಸ್ಥೆ ವೊಡಾಫೋನ್ ಮುಂದಿನ 3 ವರ್ಷದಲ್ಲಿ 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಯೋಜನೆ ಹಾಕಿದೆ.

ನಿರೀಕ್ಷಿತ ಆದಾಯ ಬರದ ಹಿನ್ನೆಲೆಯಲ್ಲಿ ವೊಡಾಫೋನ್ , ಈ ನಿಟ್ಟಿನಲ್ಲಿ ಒಂದು ಕ್ರಮವಾಗಿ ಉದ್ಯೋಗ ಕಡಿತ ಮಾಡುತ್ತಿದೆ. ಲಂಡನ್​ನಲ್ಲಿ ಮುಖ್ಯಕಚೇರಿ ಹೊಂದಿರುವ ವೊಡಾಫೋನ್​ನಲ್ಲಿ 95,000 ಉದ್ಯೋಗಿಗಳನ್ನು ಹೊಂದಿದೆ . ಅದರಲ್ಲಿ 11,000 ಮಂದಿ ಲೇ ಆಫ್ ಅಗಲಿದೆ.

ಇದೇ ಏಪ್ರಿಲ್ ತಿಂಗಳಲ್ಲಿ ಇಟಲಿಯ ಮಾರ್ಗರೆಟಿ ಡೆಲ್ಲಾ ವ್ಯಾಲೆ ಅವರು ವೊಡಾಫೋನ್​ನ ಸಿಇಒ ಆಗಿ ನೇಮಕವಾಗಿದ್ದಾರೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ವೊಡಾಫೋನ್​ನ ವಿವಿಧೆಡೆಯಲ್ಲಿ ನಿರೀಕ್ಷಿಸಿದಷ್ಟು ಲಾಭ ಮತ್ತು ಆದಾಯ ಸಿಕ್ಕಿಲ್ಲ.

“ನಮ್ಮ ಸಾಧನೆ ಉತ್ತಮವಾಗಿಲ್ಲ. ಗ್ರಾಹಕರು, ಸರಳ ವ್ಯವಸ್ಥೆ ಮತ್ತು ಪ್ರಗತಿ ಇವು ನಮಗೆ ಆದ್ಯತೆಗಳಾಗಿವೆ. ನಮ್ಮ ಸಂಸ್ಥೆಯ ಸಂಕೀರ್ಣತೆಯನ್ನು ನೀಗಿಸಿ ಸರಳಗೊಳಿಸಿ ಸ್ಪರ್ಧಾತ್ಮಕ ವಾಗಿ ರೂಪುಗೊಳ್ಳುತ್ತೇವೆ” ಎಂದು ಹೊಸ ಸಿಇಒ ಹೇಳಿದ್ದರು.

ವೊಡಾಫೋನ್​ನ ಅತಿದೊಡ್ಡ ಮಾರುಕಟ್ಟೆ ಜರ್ಮನಿ ಆಗಿದೆ. ಅಲ್ಲಿ ಲಾಭ ಕಡಿಮೆ ಆಗಿದೆ. ಆಫ್ರಿಕಾದಲ್ಲಿ ಮೊಬೈಲ್ ಹ್ಯಾಂಡ್​ಸೆಟ್​ಗಳ ಮಾರಾಟ ಇತ್ತೀಚೆಗೆ ಗಣನೀಯವಾಗಿ ಏರಿದ್ದರಿಂದ ಅದಕ್ಕೆ ಅನುಗುಣವಾಗಿ ವೊಡಾಫೋನ್ ಕೂಡ ಲಾಭ ಮಾಡಿ ಕೊಂಡಿದೆ.

ಜರ್ಮನಿಯಲ್ಲಿ ಆದಾಯ ಸಿಗದೇ ಇರುವ ಹಿನ್ನೆಲೆಯಲ್ಲಿ ಜಾಬ್ ಕಟ್ ಆಗುವ ಸಾಧ್ಯತೆ ಇದೆ. ಜರ್ಮನಿಯಲ್ಲಿ 1,300 ಮಂದಿಯ ಲೇ ಆಫ್ ಆಗುವ ಸಾಧ್ಯತೆ ಇದೆ. ಇಟಲಿಯಲ್ಲಿ 1,000 ದಷ್ಟು ವೊಡಾಫೋನ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.