Saturday, 23rd November 2024

ಏನೂ ಮಾಡದೆ ಸುಮ್ಮನಿರುವುದೇ ದೊಡ್ಡ ಕೆಲಸ !

ಹಿಂದಿರುಗಿ ನೋಡಿದಾಗ

ನಾವು ಮಾಡುವ ಕೆಲಸಗಳನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆ ಯದು ಒಳ್ಳೆಯ ಕೆಲಸಗಳು ಅಥವಾ ಸುಕರ್ಮ. ಎರಡನೆಯದು ಕೆಟ್ಟ ಕೆಲಸಗಳು ಅಥವಾ ವಿಕರ್ಮ. ಮೂರನೆಯದು ಯಾವುದೇ ರೀತಿಯ ಕೆಲಸವನ್ನು ಮಾಡದೆ ಸುಮ್ಮನೇ ಇದ್ದು ಬಿಡುವುದು, ಅಕರ್ಮ!

ಕೃಷ್ಣನು ಕೆಲವು ಸಂದರ್ಭಗಳಲ್ಲಿ ಅಕರ್ಮವನ್ನು ಮಾಡಬೇಕು ಎನ್ನುತ್ತಾನೆ. ಕರ್ಮದಲ್ಲಿ ಅಕರ್ಮವನ್ನು, ಅಕರ್ಮದಲ್ಲಿ ಕರ್ಮವನ್ನು ಕಾಣುವವನು ಮನುಷ್ಯರಲ್ಲಿಯೇ ಬುದ್ಧಿ ವಂತನು (೪-೧೮). ಇದು ಅತ್ಯಂತ ಸೂಕ್ಷ್ಮವಾದ ಅರ್ಥವನ್ನು ಒಳಗೊಂಡ ಶ್ಲೋಕ. ಸರಿಯಾದ ಕೆಲಸವನ್ನು, ಸರಿಯಾದ ಕಾಲದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಕೆಲಸ ವನ್ನು ಮಾಡುವುದು ಬಹಳ ಮುಖ್ಯ. ನಿಜ. ಆದರೆ ಕೆಲವು ಸಲ ಕೆಲಸವನ್ನು ಮಾಡದೆ ಸುಮ್ಮನಿರುವುದೇ ಒಂದು ಬಹು ಮುಖ್ಯವಾದ ಕೆಲಸವಾಗಿ ಬಿಡುತ್ತದೆ!

ಮಧುಮೇಹಿಗಳು ಬೇರಿಯಾಟ್ರಿಕ್ ಸರ್ಜರಿಯನ್ನು ಮಾಡಿಸಿಕೊಂಡರೆ, ಮಧುಮೇಹವು ಸಂಪೂರ್ಣವಾಗಿ ಗುಣವಾಗುತ್ತದೆ ಎನ್ನುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿರಬಹುದು. ಇದು ಅಷ್ಟು ಸರಿಯಲ್ಲ. ಬೇರಿಯಾಟ್ರಿಕ್ ಸರ್ಜರಿಯಲ್ಲಿ ಮಧುಮೇಹಿಯ ಜಠರವನ್ನು ಭಾಗಶಃ ಛೇದಿಸುವರು. ಹೀಗೆ ಛೇದಿಸುವು ದರಿಂದ ಸ್ವಲ್ಪ ತಿಂದರೆ ಸಾಕು ಹೊಟ್ಟೆಯು ತುಂಬಿದ ಅನುಭವ ವಾಗುತ್ತದೆ.

ಆಗ ನಾವು ತಿನ್ನುವ ಪ್ರಮಾಣವು ಕಡಿಮೆಯಾಗುತ್ತದೆ. ಆಗ ಸಹಜವಾಗಿ ಸಕ್ಕರೆಯ ಪ್ರಮಾಣವೂ ಇಳಿಯುತ್ತದೆ. ಎಲ್ಲವೂ
ನಿಜವೆ! ಆದರೆ ನಮಗೆ ತುಂಬಾ ಮುಖ್ಯವಾದ ಆಹಾರವನ್ನು ಸೇವಿಸಿದ ತೃಪ್ತಿಯು ದೊರೆಯುವುದಿಲ್ಲ. ಇದೊಂದು ಗಂಭೀರ ವಾದ ಶಸ್ತ್ರಚಿಕಿತ್ಸೆ. ಅನೇಕ ಅನಗತ್ಯ ಪಾರ್ಶ್ವಪರಿಣಾಮಗಳನ್ನು ಒಳಗೊಂಡಿರುವಂಥದ್ದು. ಈ ಶಸ್ತ್ರಚಿಕಿತ್ಸೆಯು ಎಲ್ಲ ಬೊಜ್ಜು ಬಂದವರಿಗೆ ಅಥವಾ ಎಲ್ಲ ಮಧುಮೇಹಿಗಳಿಗೆ ಸೂಕ್ತವಲ್ಲ. ವಾಸ್ತವದಲ್ಲಿ ಕೃಷ್ಣನ ಕಿವಿ ಮಾತನ್ನು ಪರಿಪಾಲಿಸಬಲ್ಲ ವೈದ್ಯರು ಭಿನ್ನ ಮಾರ್ಗವನ್ನು ಅನುಸರಿಸಬಹುದು.

ಜಾಹೀರಾತನ್ನು ಓದಿದ ಮಧುಮೇಹಿಗಳು ಸ್ವಯಂ ಬಂದು ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡರೆ ಮಧುಮೇಹವು ಗುಣ ವಾಗುತ್ತದೆಯಂತೆ. ಇದನ್ನು ಮಾಡಿಸಿಕೊಳ್ಳಲೇ? ಎಂದು ಕೇಳಿದಾಗ ನಿಜವಾದ ವೈದ್ಯರು ಸ್ವಲ್ಪ ತಡೆಯಿರಿ ಎನ್ನುತ್ತಾರೆ ಅಥವಾ ಈ ಶಸಚಿಕಿತ್ಸೆಯು ಅನಗತ್ಯ ಎನ್ನುತ್ತಾರೆ. ಇಲ್ಲಿ ವೈದ್ಯರು ಅಕರ್ಮ ತತ್ತ್ವವನ್ನು ಪರಿಪಾಲಿಸುತ್ತಿದ್ದಾರೆ. ಸರ್ಜರಿ ಮಾಡಿಸಿದರೆ ಹಣ ದೊರೆಯುತ್ತದೆ ಅಥವಾ ಕಮಿಷನ್ ದೊರೆಯುತ್ತದೆ ಎನ್ನುವ ಆಮಿಷಕ್ಕೆ ಸಿಲುಕದ ವೈದ್ಯರು, ಇಂತಹ ಅಪಾಯಕಾರೀ ಶಸ್ತ್ರ ಚಿಕಿತ್ಸೆಯನ್ನು ಮಾಡಲು/ ಮಾಡಿಸಲು ಮುಂದಾಗುವುದಿಲ್ಲ. ಈ ಅಕರ್ಮವೇ ಮುಂದಿನ ದಿನಗಳಲ್ಲಿ ಬೇರಿಯಾಟ್ರಿಕ್ ಸರ್ಜರಿ ಯಿಂದ ಸಂಭವಿಸಬಹುದಾದ ಸಾವು ನೋವುಗಳನ್ನು ತಪ್ಪಿಸುತ್ತದೆ.

ಹಾಗಾಗಿ ಅಕರ್ಮದಲ್ಲಿ ಕರ್ಮವನ್ನು ಕಾಣುವವನು ಮನುಷ್ಯರಲ್ಲಿಯೇ ಬುದ್ಧಿವಂತನು ಎಂದು ಕೃಷ್ಣನು ಹೇಳಿರುವ ಮಾತು ಸಾರ್ವಕಾಲಿಕ ಸತ್ಯವಾಗಿದೆ. ನಂಬಿಕೆ: ವೈದ್ಯ ಮತ್ತು ರೋಗಿಗಳ ಸಂಬಂಧದ ಬಗ್ಗೆಯೂ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವು ದುಂಟು. ನಾವು ಎಂತಹ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು, ಹೇಗೆ ಅವರಲ್ಲಿ ನಂಬಿಕೆಯನ್ನಿಡಬೇಕು, ಎನ್ನುವುದನ್ನು ವಿವರಿಸಿರುವುದನ್ನು ಕೇವಲ ಮಧುಮೇಹಿಗಳು ಮಾತ್ರವಲ್ಲ, ಎಲ್ಲ ರೀತಿಯ ಅನಾರೋಗ್ಯ ಪೀಡಿತರು ತಮ್ಮ ತಮ್ಮ ವೈದ್ಯರನ್ನು ನಂಬಬೇಕಾಗುತ್ತದೆ.

ಅಜ್ಞಾನಿಗಳು, ಶ್ರದ್ಧೆಯಿಲ್ಲದವರು, ಅಪೌರುಷೇಯ ಗ್ರಂಥಗಳಲ್ಲಿ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ಇಂಥವರಿಗೆ ಭಗವಂತನ ಪ್ರeಯು ಲಭ್ಯವಾಗುವುದಿಲ್ಲ. ಅವರು ನಾಶವಾಗುವರು. ಸಂಶಯಾತ್ಮನಿಗೆ ಈ ಲೋಕದಲ್ಲಿ ಸುಖವಿಲ್ಲ. ಮುಂದಿನ ಲೋಕ ದಲ್ಲೂ ಸುಖವಿಲ್ಲ (೪-೪೦). ಒಂದು ನಿಗದಿತ ರೋಗವನ್ನು ಗುಣಪಡಿಸಬಲ್ಲ ತಜ್ಞ ವೈದ್ಯನ ಬಗ್ಗೆ ಅನೇಕ ಜನಸಾಮಾನ್ಯರಿಗೆ ಮಾಹಿತಿ ಇರುವುದಿಲ್ಲ. ಕೆಲವರ ದೃಷ್ಟಿಯಲ್ಲಿ ವೈದ್ಯರು ಎಂದರೆ ರೋಗಿಯನ್ನು ಕುಕ್ಕಿ ಕುಕ್ಕಿ ಹಣವನ್ನು ಕೀಳುವ ರಣಹದ್ದುಗಳು. ಉಳಿದವರಿಗೆ ಎಲ್ಲ ರೀತಿಯ ವೈದ್ಯಕೀಯ ಪದ್ಧತಿಗಳ ಬಗ್ಗೆಯೇ ಅತೃಪ್ತಿ.

ಯಾವ ಪದ್ಧತಿಯೂ ಪರಿಪೂರ್ಣವಲ್ಲ ಎಂಬ ನೈರಾಶ್ಯ ಮನೋಭಾವ. ಅವರು ಆಯುರ್ವೇದವನ್ನು ನಂಬಲ್ಲ, ಆಧುನಿಕ ವೈದ್ಯಕೀಯದ ಬಗ್ಗೆ ಭರವಸೆಯಿಲ್ಲ. ಹೋಮಿಯೋಪಥಿ ಕೆಲಸ ಮಾಡುತ್ತದೆಯೋ ಇಲ್ಲವೋ ಎಂಬ ಅನುಮಾನ. ವೈದ್ಯರ ಮೇಲೆ, ವೈದ್ಯರು ನೀಡುವ ಚಿಕಿತ್ಸೆಯ ಮೇಲೆ, ಅವರು ನೀಡುವ ಆಪ್ತಸಲಹೆಯ ಮೇಲೆ ವಿಶ್ವಾಸವಿರುವುದಿಲ್ಲ. ಇಂಥವರು ತಮ್ಮ ಬದುಕಿನಲ್ಲಿ ಯಶಸ್ಸನ್ನು ಕಾಣುವುದು ಕಷ್ಟ.

ನಾವು ಎಂತಹ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ವೈದ್ಯನು ತನ್ನ ವಿಷಯದಲ್ಲಿ ತಜ್ಞನಾಗಿರ ಬೇಕು. ಅನುಭವಿಯಾಗಿರಬೇಕು. ಸಾಕ್ಷ್ಯಾಧಾರಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕು. ನಿಗದಿತ ಸಮಯದಲ್ಲಿ ಸೇವೆಯನ್ನು ಸಲ್ಲಿಸುವಂತಿರಬೇಕು. ತುರ್ತು ಸ್ಥಿತಿಗಳಿಗೆ ಸ್ಪಂದಿಸುವಂತಿರಬೇಕು. ಮಧುಮೇಹಿಯು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಬೇಕು. ಹೆಚ್ಚಿನ ಮಾಹಿತಿಯನ್ನು ತಿಳಿಯುವಂತೆ ರೋಗಿಗೆ ಪ್ರೋತ್ಸಾಹವನ್ನು ನೀಡಿ ಸೂಕ್ತ ಪುಸ್ತಕಗಳನ್ನು ಸೂಚಿಸಬೇಕು.

ಮುಖ್ಯವಾಗಿ ವೈದ್ಯನು ಮಾನವೀಯ ಗುಣಗಳನ್ನು ಒಳಗೊಂಡವನಾಗಿರಬೇಕು. ತನ್ನ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವ ಹಾಗೂ ನ್ಯಾಯವನ್ನು ಒದಗಿಸುವ ವೈದ್ಯನನ್ನು ಆಯ್ಕೆ ಮಾಡಿಕೊಳ್ಳಬೇಕಾದದ್ದು ಬಹಳ ಮುಖ್ಯ. ಈ ಘಟ್ಟದಲ್ಲಿ ಒಂದು ಸೂಕ್ಷ್ಮವನ್ನು ಪ್ರಸ್ತಾಪಿಸಲೇ ಬೇಕು. ಅರ್ಜುನನು ಕೃಷ್ಣನನ್ನು ಬಿಟ್ಟು ಉಳಿದ ಯಾರನ್ನಾದರೂ ತನ್ನ ಸಾರಥಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರೆ, ಕುರುಕ್ಷೇತ್ರ ಯುದ್ಧವೇನಾಗುತ್ತಿತ್ತು, ಮಹಾಭಾರತವು ಹೇಗೆ ಕೊನೆಗೊಳ್ಳುತ್ತಿತ್ತು ಎಂದು ಯೋಚಿಸಿ. ಅರ್ಜುನನು ಕೃಷ್ಣನ ಶಕ್ತಿ, ಸಾಮರ್ಥ್ಯ, ಪ್ರತಿಭೆ, ಪ್ರೀತಿ, ಬದ್ಧತೆಗಳನ್ನು ಬಲ್ಲವನು.

ಅವನನ್ನು ಮೀರಿಸುವ ಮತ್ತೊಬ್ಬನು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಕಾರಣ ಕೃಷ್ಣನನ್ನು ತನ್ನ ಗುರುವೆಂದು
ಸ್ವೀಕರಿಸಿದ. ಅವನು ಹೇಳಿದಂತೆ ಕೇಳಿದ. ನಿರೀಕ್ಷಿಸಿದ ಯಶಸ್ಸನ್ನು ಪಡೆದ. ಹಾಗೆಯೇ ಮಧುಮೇಹಿಗಳು ಕೃಷ್ಣನನ್ನು ಹೋಲು ವಂತಹ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಅವರ ಬುದ್ಧಿವಂತಿಕೆಯಿದೆ. ವೈದ್ಯ ಮತ್ತು ರೋಗಿಯ ನಡುವೆ ನಂಬಿಕೆಯು ಬಹಳ ಮುಖ್ಯ.

ಇಂದಿಗೆ ಸುಮಾರು ೩೦-೪೦ ವರ್ಷಗಳ ಹಿಂದೆ ಕುಟುಂಬ ವೈದ್ಯರು ಇರುತ್ತಿದ್ದರು. ಕುಟುಂಬ ವೈದ್ಯರೆಂದರೆ ನಮ್ಮ ಮನೆಯ ವಿಸ್ತೃತ ಸದಸ್ಯರಲ್ಲಿ (ಎಕ್ಸ್‌ಟೆಂಡೆಡ್ ಫ್ಯಾಮಿಲಿ ಮೆಂಬರ್) ಒಬ್ಬರಾಗಿರುತ್ತಿದ್ದರು. ವೈದ್ಯರಿಗೆ ರೋಗಿಯ ಬಗ್ಗೆ, ಅವರ ಮನೆಮಂದಿಯ ಬಗ್ಗೆ ಅಗತ್ಯ ವಿಚಾರಗಳು ತಿಳಿದಿರುತ್ತಿದ್ದವು. ಹಾಗಾಗಿ ಅವರು ಇಡೀ ಕುಟುಂಬದ ಯೋಗಕ್ಷೇಮವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚಿಕಿತ್ಸೆಯನ್ನು ನೀಡುತ್ತಿದ್ದರು. ಈಗ ಕುಟುಂಬ ವೈದ್ಯರ ಸಂತತಿ ಅಳಿವಿನಂಚಿಗೆ ಬಂದಿದೆ. ನಗರ ಪ್ರದೇಶಗಳಲ್ಲಿ ಸಂಪೂರ್ಣವಾಗಿ ನಿರ್ನಾಮವಾಗಿದೆ. ಇಂದು ಕಾರ್ಪೊರೇಟ್ ಆಸ್ಪತ್ರೆಗಳು ಪ್ರಯೋಗಾಲಯದ ವರದಿಯನ್ನು ನೋಡಿ ಚಿಕಿತ್ಸೆಯನ್ನು ಕೊಡುವುದೇ ಹೆಚ್ಚು.

ರೋಗಿಯ ರೋಗ ಚರಿತ್ರೆಯನ್ನು ಕೇಳಲು, ರೋಗಿಯ ದೈಹಿಕ ತಪಾಸಣೆಯನ್ನು ಮಾಡಲು ಅಥವಾ ರೋಗಿಯ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಅಗತ್ಯ ಸಮಯವನ್ನೇ ನೀಡುವುದಿಲ್ಲ. ಇಂಥವರು ವೈದ್ಯಕೀಯ ವೃತ್ತಿಗೆ ಮಸಿ ಬಳಿಯುವವರು. ಈ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪವಿರುವುದಿಲ್ಲ. ಹಾಗಾಗಿ ಮಧುಮೇಹಿ ಯು ಎಂತಹ ವೈದ್ಯನನ್ನು ಆರಿಸಿಕೊಳ್ಳುತ್ತಾನೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಕೃಷ್ಣನು ಅದ್ಭುತ ಆಪ್ತ ಸಲಹೆಗಾರ! ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ಯುದ್ಧವನ್ನು ಮಾಡುವುದಿಲ್ಲ ಎಂದಾಗ, ನೀನು ಏಕೆ ಯುದ್ಧವನ್ನು ಮಾಡಬೇಕು ಎನ್ನುವುದನ್ನು ಸಾವಕಾಶವಾಗಿ ವಿವರಿಸುತ್ತಾನೆ. ಆದರೆ ಕೃಷ್ಣನು ತನ್ನ ಅನಿಸಿಕೆಗಳನ್ನು ಅರ್ಜುನನ ಮೇಲೆ ಎಲ್ಲಿಯೂ ಹೇರುವುದಿಲ್ಲ. ನಿನಗೆ ಗುಹ್ಯಕ್ಕಿಂತಲೂ ಗುಹ್ಯತರವಾದ ಜ್ಞಾನವನ್ನು ನೀಡಿದ್ದೇನೆ. ಇದನ್ನು ಚೆನ್ನಾಗಿ ವಿಚಾರ ಮಾಡಿ ನೋಡು. ಕೊನೆಗೆ ನಿನ್ನ ಇಷ್ಟಬಂದಂತೆ ಮಾಡು (೧೮-೬೩).

ನಿನಗೆ ಇಷ್ಟ ಬಂದಂತೆ ಮಾಡು ಎಂದು ಕೃಷ್ಣನು ಹೇಳುವುದು ಆತನ ವ್ಯಕ್ತಿತ್ವದ ಘನತೆಯನ್ನು ಎತ್ತಿಹಿಡಿಯುವಂತಹ
ಮಾತಾಗಿದೆ. ವೈದ್ಯರಾದವರೂ ಅಷ್ಟೇ. ಒಂದು ಚಿಕಿತ್ಸೆಯ ಸಾಧಕ-ಬಾಧಕಗಳನ್ನು ಅರ್ಥವಾಗುವಂತೆ ವಿವರಿಸುವುದು
ಅವರ ಕರ್ತ್ಯವ್ಯ. ಅದನ್ನು ಅರ್ಥ ಮಾಡಿಕೊಂಡು, ತನಗೆ ಹಿತವಾಗಬಹುದಾದ ಚಿಕಿತ್ಸಾ ಮಾರ್ಗವನ್ನು ಅನುಸರಿಸ
ಬೇಕಾದ ಹೊಣೆ ಆಯಾ ರೋಗಿಯದ್ದಾಗಿರುತ್ತದೆ. ನಾವು ಒಂದು ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗ ಬಹುದು. ಆದರೆ ನೀರನ್ನು ಕುಡಿಯಬೇಕೆ ಅಥವಾ ಬೇಡವೇ ಎನ್ನುವುದು ಆ ಕುದುರೆಗೆ ಬಿಟ್ಟದ್ದು.

ಹಾಗೆಯೇ ವೈದ್ಯರು ರೋಗಿಗೆ ಹಿತವಾದ ಮಾರ್ಗವನ್ನು ಸೂಚಿಸುವುದಷ್ಟೇ ಅವರ ಕರ್ತವ್ಯವಾಗಿರುತ್ತದೆ. ಅವರ ಹಿತವಾಕ್ಯ ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯವು ಮಧುಮೇಹಿಗೆ ಇದ್ದೇ ಇರುತ್ತದೆ. ಈ ಸತ್ಯವನ್ನು ವೈದ್ಯರು ಹಾಗೂ ರೋಗಿಯು ಇಬ್ಬರು ಮನಗಾಣಬೇಕು. ವೈದ್ಯ ಮತ್ತು ಮಧುಮೇಹಿಯ ನಡುವೆ ನಡೆದ ಭೇಟಿಯು ಹೇಗೆ ಕೊನೆಗೊಳ್ಳಬೇಕು ಎನ್ನುವುದರ ಬಗ್ಗೆಯೂ ಕೃಷ್ಣನು ಸೊಗಸಾಗಿ ಭ ಗವದ್ಗೀತೆಯಲ್ಲಿ ಹೇಳಿರುವುದುಂಟು.

ಪಾರ್ಥನೇ, ಧನಂಜಯನೇ! ಇದನ್ನು ನೀನು ಗಮನವಿಟ್ಟು ಕೇಳಿದೆಯ? ನಿನ್ನ ಅಜ್ಞಾನ ಮತ್ತು ಮೋಹಗಳು ನಾಶವಾದವೆ? (೧೮-೭೨). ಅರ್ಜುನನು ಯುದ್ಧ ವಿಮುಖನಾದುದಕ್ಕೆ ಕಾರಣ ಅಜ್ಞಾನ ಮತ್ತು ಮೋಹ. ಹಾಗಾಗಿ ಕೃಷ್ಣನು ತನ್ನ ವಿಶ್ವರೂಪ ವನ್ನು ತೋರಿಸಿ, ಈ ಎಲ್ಲ ಕೌರವರನ್ನು ಹಾಗೂ ೧೮ ಅಕ್ಷೌಹಿಣಿ ಸೈನ್ಯವನ್ನು ಈಗಾಗಲೇ ನಾನು ಕೊಂದು ಆಗಿದೆ. ನೀನು ನಿಮಿತ್ತ ಮಾತ್ರವಾಗಬೇಕಾಗಿದೆ ಅಷ್ಟೇ ಎನ್ನುವುದನ್ನು ಮನವರಿಕೆ ಮಾಡುವುದರ ಜೊತೆಯಲ್ಲಿ.

ಧರ್ಮ ಸಂಸ್ಥಾಪನೆಗಾಗಿ ಸೋದರರೆಂಬ ಮೋಹಕ್ಕೆ ಸಿಕ್ಕಿ ನಿನ್ನ ಕರ್ತವ್ಯಚ್ಯುತನಾಗುವುದು ತಪ್ಪು ಎಂಬ ಅಂಶವನ್ನು ೭೦೦+ ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಕೊನೆಗೆ ನಿನ್ನ ಅನುಮಾನಗಳೆಲ್ಲ ಪರಿಹಾರವಾದವೇ? ಎಂದು ಪ್ರಶ್ನೆಯನ್ನು ಕೇಳುತ್ತಾನೆ. ವೈದ್ಯನೂ ಸಹ, ತನ್ನ ರೋಗಿಗೆ ಆಪ್ತಸಲಹೆಯನ್ನು ನೀಡಿದ ಮೇಲೆ ಎಲ್ಲವೂ ಅರ್ಥವಾಯಿತೆ ಅಥವ ಇನ್ನೂ ಅನುಮಾನಗಳು
ಉಳಿದಿವೆಯೇ ಎಂದು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಕೃಷ್ಣನ ಪ್ರಶ್ನೆಗೆ ಅರ್ಜುನನು ಕೊಡುವ ಉತ್ತರವನ್ನು ನೋಡೋಣ. ನೀನು ಅನುಗ್ರಹವನ್ನು ಮಾಡಿ, ಈ ರಹಸ್ಯವಾದ ಆಧ್ಯಾತ್ಮಿಕ ವಿಚಾರಗಳನ್ನು ಕುರಿತು ನನಗೆ ಉಪದೇಶವನ್ನು ಮಾಡಿದೆ. ನನ್ನ ಮೋಹವನ್ನು ಕಳೆದೆ (೧೧-೦೧).

ಪ್ರಿಯ ಕೃಷ್ಣ… ಚ್ಯುತಿ ಇಲ್ಲದವನೆ… ನನ್ನ ಮೋಹವು ಮಾಯವಾಯಿತು. ನಿನ್ನ ದಯೆಯಿಂದ ನನ್ನ ಸ್ಮೃತಿಯನ್ನು ಮತ್ತೆ ಪಡೆದಿದ್ದೇನೆ. ಈಗ ನಾನು ದೃಢ ಮನಸ್ಸಿನಿಂದ ಇದ್ದೇನೆ. ನನ್ನ ಸಂದೇಹಗಳಿಂದ ಬಿಡುಗಡೆಯಾಗಿದ್ದೇನೆ. ನಿನ್ನ ಅಪ್ಪಣೆಯಂತೆ ನಡೆಯಲು ಸಿದ್ಧನಿದ್ದೇನೆ (೧೮-೭೩). ಕೃಷ್ಣನು ೧೮ ಅಧ್ಯಾಯಗಳಲ್ಲಿ ಹೇಳಿದ ಎಲ್ಲ ವಿಚಾರಗಳನ್ನು ಕೇಳಿದ ಮೇಲೆ, ಅರ್ಜುನನು ನನ್ನ ಎಲ್ಲ ಸಂದೇಹಗಳು ನಿವಾರಣೆಯಾಗಿವೆ. ನೀನು ಹೇಳಿದಂತೆ ಕೇಳಲು ನಾನು ಸಿದ್ಧನಿದ್ದೇನೆ ಎಂದು ತನ್ನ ಸಂಪೂರ್ಣ ಒಪ್ಪಿಗೆಯನ್ನು ನೀಡುತ್ತಾನೆ.

ವೈದ್ಯನು ಮಧುಮೇಹ (ಅಥವಾ ಯಾವುದೇ ರೋಗ) ವನ್ನು ಕುರಿತು ಸಮಗ್ರ ಮಾಹಿತಿಯನ್ನು ರೋಗಿಗೆ ತಿಳಿಸಬೇಕು. ಅದನ್ನು ಕೇಳಿದ ಮೇಲೆ ಮಧುಮೇಹಿಯು ಅರ್ಜುನನ ಹಾಗೆ ನನಗೆ ಎಲ್ಲವೂ ತಿಳಿಯಿತು. ಯಾವುದೇ ಪ್ರಶ್ನೆಗಳಿಲ್ಲ. ನೀವು ಚಿಕಿತ್ಸೆಯನ್ನು ಆರಂಭಿಸಬಹುದು ಎಂದು ಹೇಳಬೇಕು. ಆಗ ಮಾತ್ರ ವೈದ್ಯ-ರೋಗಿಯ ಸಂಬಂಧವು ಆರೋಗ್ಯಕರವಾಗಿ ಇರಲು ಸಾಧ್ಯವಿದೆ. ಭಗವದ್ಗೀತೆಯು ಆಶಾಭಾವನೆಯೊಂದಿಗೆ ಕೊನೆಗೊಳ್ಳುತ್ತದೆ. ಅರ್ಜುನನು ತಾನು ಸರಿಯಾದ ಕೆಲಸವನ್ನು, ಸರಿಯಾದ ಕಾಲ ದಲ್ಲಿ, ಸರಿಯಾದ ರೀತಿಯಲ್ಲಿ ನಡೆಸುವುದರ ಮೂಲಕ ಮಾತ್ರ ಮೋಕ್ಷವನ್ನು ಪಡೆಯಲು ಸಾಧ್ಯ ಎಂದು ಅರ್ಥ ಮಾಡಿಕೊಂಡಿ ದ್ದಾನೆ.

ಮಧುಮೇಹಿಯೂ ಸಹ ಸಕಾಲದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುವುದರ ಮೂಲಕ ತನ್ನ ರೋಗವನ್ನು ಹತೋಟಿಯ ಲ್ಲಿಟ್ಟುಕೊಳ್ಳಬೇಕು ಎನ್ನುವುದನ್ನು ಮನಗಾಣ ಬೇಕಿದೆ. ಹೀಗೆ ಭಗವದ್ಗೀತೆಯು ವೈದ್ಯರಿಗೂ ಹಾಗೂ ಮಧುಮೇಹಿಗಳು ಮಾತ್ರವಲ್ಲ ಎಲ್ಲ ರೀತಿಯ ಅನಾರೋಗ್ಯ ಪೀಡಿತರಿಗೂ ಭವ್ಯ ಭರವಸೆಯನ್ನು ನೀಡಿ, ಅವರನ್ನು ಪೂರ್ಣತ್ವದ ಕಡೆಗೆ ಕರೆದೊಯ್ಯುತ್ತದೆ.