ಕಳೆದ ಕೆಲ ದಿನಗಳಿಂದ ನ್ಯುಮೋನಿಯಾ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕಟಾರಿಯಾ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ ನೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಜಲಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿದ್ದ ಕಟಾರಿಯಾ ಅವರು ಎರಡು ವರ್ಷಗಳ ಕಾಲ ಸೇವೆಯ ಬಳಿಕ 2021 ರ ಜುಲೈನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ಕಟಾರಿಯಾ ಅವರು ಅಂಬಾಲಾ (ಮೀಸಲು) ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಯಾಗಿದ್ದರು. ಚುನಾವಣೆಯಲ್ಲಿ ಪ್ರಸ್ತುತ ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆಯಾಗಿರುವ ಕುಮಾರಿ ಸೆಲ್ಜಾ ಅವರನ್ನು ಸುಮಾರು 3.42 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
ಅವರು 1999 ಮತ್ತು 2014 ರಲ್ಲಿ ಅಂಬಾಲಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಅವರು 2004 ಮತ್ತು 2009 ರ ಲೋಕಸಭೆ ಚುನಾವಣೆಯಲ್ಲಿ ಕುಮಾರಿ ಸೆಲ್ಜಾ ಅವರಿಂದಲೇ ಎರಡು ಬಾರಿ ಸೋಲು ಅನುಭವಿಸಿದ್ದರು.
ರತನ್ ಲಾಲಾ ಕಟಾರಿಯಾ ಅವರ ನಿಧನಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರು ಸಂತಾಪ ಸೂಚಿಸಿದ್ದು, ಪಂಚಕುಲದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.