Sunday, 24th November 2024

ಬಿಜೆಪಿಯ ತಾತ್ಕಾಲಿಕ ಹಿನ್ನಡೆ

ವೀಕೆಂಡ್ ವಿತ್ ಮೋಹನ್

camohanbn@gmail.com

ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಮತದಾರ ನೀಡಿದ ತೀರ್ಪನ್ನು ಗೌರವಿಸಿ ಉಂಟಾ ಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು. ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ, ಕೆಲವೊಂದು ಗಟ್ಟಿ ನಿರ್ಧಾರಗಳನ್ನು ಕೈಗೊಂಡಾಗ ತುಸು ಹಿನ್ನಡೆ ಅನುಭವಿಸಬೇಕಾಗುತ್ತದೆ. ಎರಡು ಹೆಜ್ಜೆ ಹಿಂದಿಟ್ಟಾಕ್ಷಣ ಗುರಿ ತಲುಪುವುದು ತುಸು ತಡವಾಗಬಹುದು, ಆದರೆ ತಲುಪುವುದು ಪಕ್ಕಾ. ಬಿಜೆಪಿ ಎಂದೂ ಸಹ ತನ್ನನ್ನು ತಾನು ಒಂದು ಕುಟುಂಬಕ್ಕೆ ಸೀಮಿತ ಗೊಳಿಸಿ ಕೊಂಡಿಲ್ಲ, ಕೋಟ್ಯಂತರ ಕಾರ್ಯಕರ್ತರ ಪರಿಶ್ರಮದಿಂದ ಗಟ್ಟಿಯಾಗಿ ನಿಂತಿರುವ ಪಕ್ಷ.

೨೦೨೩ ರ ಚುನಾವಣೆ ಸಂಪೂರ್ಣ ಸ್ಥಳೀಯ ಮಟ್ಟದ ಸಮಸ್ಯೆಗಳು, ಜಾತಿ ಸಮೀಕರಣ, ಸ್ಥಳೀಯ ಆಡಳಿತ ವಿರೋಧಿ ಅಲೆಯ ಮೇಲೆ ನಿಂತಿತ್ತು. ಆಡಳಿತದಲ್ಲಿದ್ದುಕೊಂಡು ಸರ್ಕಾರವನ್ನು ಉಳಿಸಿಕೊಳ್ಳುವುದು ಸುಲಭವಲ್ಲ, ವಿರೋಧ ಪಕ್ಷದಲ್ಲಿ ಕುಳಿತು ಆಡಳಿತ ಪಕ್ಷದ ಕಡೆಗೆ ಬೆರಳು ತೋರಿಸುವುದು ಸುಲಭ. ಈ ಚುನಾವಣೆಯಲ್ಲಿ ಒಂದು ಅಗೋಚರ ವಿಷಯ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಗ್ಯಾಸ್ ವಿಚಾರವನ್ನೇ ಬಂಡವಾಳವಾಗಿಸಿ ಕೊಂಡಿದ್ದ ಕಾಂಗ್ರೆಸ್ ಪಕ್ಷ ತನ್ನ ಉಚಿತ ಗ್ಯಾರಂಟಿ ಕಾರ್ಡುಗಳ ಮೂಲಕ ಜನರನ್ನು ಮರಳು ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಇಡೀ ಜಗತ್ತೇ ಗ್ಯಾಸ್ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ ಭಾರತ ವೇನು ಹೊರತಾಗಿ ರಲಿಲ್ಲ, ಯೂರೋಪಿನ ಹಲವು ದೇಶಗಳಿಗೆ ಗ್ಯಾಸ್ ವಿತರ ಣೆಯೇ ಆಗುತ್ತಿಲ್ಲ. ಆದರೆ ಭಾರತದ ದೃಢ ನಾಯಕತ್ವದಿಂದ ಗ್ಯಾಸ್ ವಿತರಣೆಯ ಕೊರತೆ ಎಲ್ಲಿಯೂ ಎದುರಾಗಲಿಲ್ಲ. ಆದರೆ ಈ ವಿಷಯ ಗಳನ್ನು ಹಳ್ಳಿಯ ಹೆಣ್ಣು ಮಕ್ಕಳಿಗೆ ಹೇಗೆ ತಾನೇ ತಿಳಿ ಹೇಳಲು ಸಾಧ್ಯ? ವಿಪರ್ಯಾಸವೆಂದರೆ ನರೇಂದ್ರ ಮೋದಿಯವರ ನೇತೃತ್ವ ದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಾದ್ಯಂತ ಉಜ್ವಲ ಯೋಜನೆಯಡಿ ಯಲ್ಲಿ ಸುಮಾರು ೧೨ ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ.

ಕರ್ನಾಟಕದಲ್ಲಿ ಸುಮಾರು ೩೭ ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಹಳ್ಳಿಗಾಡಿನ ಹೆಣ್ಣುಮಕ್ಕಳು ಕಟ್ಟಿಗೆಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ ಉತ್ತಮ ಆರೋಗ್ಯ ಸಿಗಬೇಕೆಂದು ನೀಡಿದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಅಸಂವಿಧಾನಿಕವಾಗಿ ಮುಸಲ್ಮಾನರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯಿತ ಮತ್ತು ಒಕ್ಕಲಿಗರ
ಮೀಸಲಾತಿಯನ್ನು ಹೆಚ್ಚಿಸಲಾಯಿತು. ಆದರೆ ಬಿಜೆಪಿ ಕೈಗೊಂಡಿದ್ದ ನಿರ್ಧಾರದ ವಿರುದ್ಧ ಮುಸಲ್ಮಾನರು ಹೋರಾಟ ಮಾಡ ಲಿಲ್ಲ. ಹಾಗಂತ ಅವರಿಗೇನು ಅಸಮಾಧಾನ ಇಲ್ಲವೆಂತಿಲ್ಲ, ಅವರ ಅಸಮಾಧಾನವನ್ನು ಹೊರಹಾಕಿ ರಸ್ತೆಗಿಳಿದರೆ ಹಿಂದೂಗಳ ಒಗ್ಗಟ್ಟು ಹೆಚ್ಚಾಗುತ್ತದೆಯೆಂಬ ಸ್ಪಷ್ಟತೆ ಅವರಲ್ಲಿತ್ತು. ಹಿಂದೂಗಳ ಒಗ್ಗಟ್ಟು ಹೆಚ್ಚಾದಷ್ಟು ಬಿಜೆಪಿಗೆ ಅನುಕೂಲ ವಾಗುತ್ತದೆ ಯೆಂಬ ಸತ್ಯ ಅವರಿಗೆ ತಿಳಿದಿತ್ತು.

ಇದನ್ನೇ ಬಳಸಿಕೊಂಡ ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪರವಾಗಿ ನಿಂತು ತಾನು ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ರದ್ದತಿ ಯಾಗಿರುವ ಮೀಸಲಾತಿಯನ್ನು ಪುನಃ ನೀಡುವುದಾಗಿ ಹೇಳಿತು. ಮುಸಲ್ಮಾನರು ಜಾತ್ಯತೀತ ಜನತಾ ದಳವನ್ನು ಬಿಟ್ಟು ಬಹಳಷ್ಟು ದೂರ ಹೋಗಿಯಾಗಿದೆ. ಕಾಂಗ್ರೆಸ್ ಮುಸಲ್ಮಾನರ ಓಲೈಕೆಗಾಗಿ ತನ್ನ ನಿಲುವನ್ನು ಪ್ರದರ್ಶಿಸಿದಾಗ ಮುಸಲ್ಮಾನ ರೆಲ್ಲರೂ ಒಟ್ಟಾದರು. ಜಾತ್ಯತೀತ ಜನತಾದಳದ ಮುಸ್ಲಿಂ ಮತಬ್ಯಾಂಕ್ ಪಾತಾಳಕ್ಕೆ ಕುಸಿಯಿತು. ಇದರ ಅನುಕೂಲ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಯಿತು.

ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್ ‘ಬಜರಂಗದಳ’ವನ್ನು ನಿಷೇಧಿಸುವ ಮತ್ತೊಂದು ಅಸ್ತ್ರವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತು. ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಯಿತು. ಸುಮಾರು ೫೨ ಕ್ಷೇತ್ರಗಳಲ್ಲಿ ಮುಸಲ್ಮಾನರನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷ ಜಾತ್ಯತೀತ ಜನತಾದಳ ಮತ್ತು ಇತರೆ ಪಕ್ಷದ ಮತಬ್ಯಾಂಕನ್ನು ತನ್ನೆಡೆಗೆ ಸೆಳೆಯಿತು. ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಯವರು ಕಳೆದ ಬಾರಿಗಿಂತಲೂ ಹೆಚ್ಚಿನ ಮತವನ್ನು ಪಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಜಾತ್ಯತೀತ ಜನತಾದಳದ ಮತಗಳು ಹೆಚ್ಚುವರಿಯಾಗಿ ಬಂದ ಕಾರಣ ರವಿಯವರು ಸೋಲಬೇಕಾ ಯಿತು.

ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಹೊಗಳುಭಟ್ಟರ ತಂಡದಲ್ಲಿದ್ದ ಭೋಜೇಗೌಡ ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಸೂಚಿಸಿದ ಕಾರಣ ಜಾತ್ಯತೀತ ಜನತಾದಳದ ಮತಗಳು ಕಾಂಗ್ರೆಸ್ ಪಾಲಾದವು. ತನ್ನ ಪಕ್ಷಕ್ಕೆ ಬಹಿರಂಗವಾಗಿ
ದ್ರೋಹ ಬಗೆದ ಭೋಜೇಗೌಡರಿಗೆ ಅಲ್ಲಿನ ಸ್ಥಳೀಯರು ಹಾಲಿನ ಅಭಿಷೇಕ ಮಾಡಿದ್ದಾರೆ. ‘ನರೇಂದ್ರ ಮೋದಿ’ಯವರ ಅಲೆಯ ಬಗ್ಗೆ ಋಣಾತ್ಮಕವಾಗಿ ಮಾತನಾಡುತ್ತಿರುವವರಿಗೆ ಒಂದು ವಿಷಯವನ್ನು ನೆನಪಿಸಲು ಬಯಸುತ್ತೇನೆ. ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷ ಕಳೆದ ಬಾರಿಗಿಂತಲೂ ಒಂದು ಸ್ಥಾನವನ್ನು ಹೆಚ್ಚುವರಿಯಾಗಿ ಪಡೆದಿದೆ.

ಗಾಂಧಿನಗರ ಕ್ಷೇತ್ರದಲ್ಲಿ ಕೇವಲ ೧೦೫ ಮತಗಳಿಂದ ಬಿಜೆಪಿ ಅಭ್ಯರ್ಥಿ ‘ಸಪ್ತಗಿರಿ ಗೌಡ’ ಸೋತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ನಾಲ್ಕು ಸ್ಥಾನಗಳಲ್ಲಿ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಪಕ್ಷ ಯಶಸ್ವಿಯಾಗಿದೆ. ಹೊಸ ಮುಖಗಳಿಗೆ ಅವಕಾಶ ನೀಡುವ ಸಲುವಾಗಿ ಹಲವು ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಮಾಡಲಾಗಿತ್ತು.

ಸುಮಾರು ೭೪ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ೨೪ ಕ್ಷೇತ್ರಗಳಲ್ಲಿ ಹಾಲಿ ಭಾರತೀಯ ಜನತಾ ಪಕ್ಷದ ಶಾಸಕರಿದ್ದರು. ೨೪ ರಲ್ಲಿ ೨೨ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ತೀರ್ಮಾನ ಸರಿಯೆಂಬು ದನ್ನು ಮತದಾರ ಸಾಬೀತು ಪಡಿಸಿದ್ದಾನೆ. ಉಳಿದ ೫೦ ಕ್ಷೇತ್ರಗಳು ಬಹುತೇಕ ಹಳೆ ಮೈಸೂರು ಭಾಗ ದಲ್ಲಿವೆ. ಹಳೇ ಮೈಸೂರು
ಭಾಗದಲ್ಲಿನ ೬೧ ಕ್ಷೇತ್ರಗಳಲ್ಲಿ ಸುಮಾರು ಒಂದು ಕೋಟಿ ಮತಗಳು ಚಲಾವಣೆಯಾಗಿದ್ದು, ಇದರ ಪೈಕಿ ಜಾತ್ಯತೀತ ಜನತಾದಳಕ್ಕೆ ಸುಮಾರು ೩೦ ಲಕ್ಷ ಮತಗಳು ಬಿದ್ದಿದ್ದರೆ, ಬಿಜೆಪಿಗೆ ಸುಮಾರು ೨೪ ಲಕ್ಷ ಮತಗಳು ಬಿದ್ದಿವೆ.

ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಕ್ಷ ತನ್ನ ಪಾಲಿನ ಮತ ಬ್ಯಾಂಕನ್ನು ಹೆಚ್ಚಿಸಿಕೊಂಡಿದೆ. ಮಂಡ್ಯ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿ ಇತ್ತು. ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸುಮಾರು ೩೦,೦೦೦
ಮತಗಳನ್ನು ತೆಗೆದುಕೊಂಡರು, ಮದ್ದೂರಿನಲ್ಲಿ ಸುಮಾರು ೨೮,೦೦೦ ಮತಗಳನ್ನು ತೆಗೆದು ಕೊಂಡರು, ಶ್ರೀರಂಗಪಟ್ಟಣ ದಲ್ಲಿ ಸುಮಾರು ೪೨,೦೦೦ ಮತಗಳನ್ನು ತೆಗೆದುಕೊಂಡರು, ಮಳವಳ್ಳಿಯಲ್ಲಿ ಸುಮಾರು ೨೫,೦೦೦ ಮತಗಳನ್ನು ತೆಗೆದುಕೊಂಡರು. ಮೈಸೂರಿನ ಹೆಗ್ಗಡದೇವನ ಕೋಟೆಯ ಬಿಜೆಪಿ ಅಭ್ಯರ್ಥಿ ಸುಮಾರು ೪೮,೦೦೦ ಮತಗಳನ್ನು ತೆಗೆದುಕೊಂಡಿದ್ದಾರೆ, ಟಿ.ನರಸೀಪುರದ ಅಭ್ಯರ್ಥಿ ಸುಮಾರು ೨೦,೦೦೦ ಮತಗಳನ್ನು ತೆಗೆದುಕೊಂಡಿದ್ದಾರೆ, ಮಾಗಡಿಯ ಅಭ್ಯರ್ಥಿ ಸುಮಾರು ೨೦,೦೦೦ ಮತಗಳನ್ನು ತೆಗೆದುಕೊಂಡಿದ್ದಾರೆ, ದೇವನಹಳ್ಳಿಯ ಅಭ್ಯರ್ಥಿ ಸುಮಾರು ೩೪,೦೦೦ ಮತಗಳನ್ನು ತೆಗೆದುಕೊಂಡಿ ದ್ದಾರೆ.

ಸೋಲಿನ ಪರಾಮರ್ಶೆ ಯಾಗುವಾಗ ಎರಡೂ ಕಡೆಯ ಚರ್ಚೆ ಯಾಗಬೇಕು. ಕೆಲವರು ಕೇವಲ ಸೋಲಿನ ಪರಾಮರ್ಶೆಯನ್ನೇ ಮಾಡುವಲ್ಲಿ ನಿರತರಾಗಿ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಬಾಯಿಗೆ ಬಂದಂತೆ ಮಾತ ನಾಡುತ್ತಾರೆ. ಕಳೆದ ೪೦ ವರ್ಷಗಳಿಂದ ಆಗದ ಸಾಧನೆಯನ್ನು ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಕ್ಷ ಮಾಡಿದೆ. ಪಕ್ಷದ ಕಾರ್ಯಕರ್ತರು ಸೋಲಿಗೆ ಎದೆಗುಂದದೆ ಪಕ್ಷದ ಸಾಧನೆಯ ಬಗ್ಗೆಯೂ ಮಾತನಾಡಬೇಕು. ಸೋಲು ಮತ್ತು ಗೆಲುವು ಎಂದೂ ಕೂಡ ಶಾಶ್ವತವಲ್ಲ, ಎರಡಕ್ಕೂ ‘ಕಡೇ ದಿನ’ ಇದ್ದೇ ಇರುತ್ತದೆ. ಚುನಾವಣಾ ತಂತ್ರಗಾರಿಕಾ ಸಂಸ್ಥೆಗಳು ಬಿಜೆಪಿ ವಿರುದ್ಧ ರಾಜಕೀಯವಾಗಿ ಹೋರಾ ಡಲು ಹುಡುಕಿಕೊಂಡಿರುವ ಅಸ್ತ್ರ ಉಚಿತ ಯೋಜನೆಗಳು. ರಾಜಕೀಯವಾಗಿ ತಂತ್ರಗಾರಿಕೆ ನಡೆಸಲು ವಿಫಲವಾದಾಗ ಜನರನ್ನು ಸರಣಿ ಉಚಿತ ಭಾಗ್ಯಗಳಿಗೆ ತಳ್ಳುವ ಕೆಲಸ ದೇಶದಾದ್ಯಂತ ನಡೆಯುತ್ತಿದೆ.

ಪಕ್ಕದ ಆಂಧ್ರ ಪ್ರದೇಶದಲ್ಲಿ ಚುನಾವಣಾ ತಂತ್ರಗಾರಿಕೆ ನಡೆಸಿದ್ದ ಸಂಸ್ಥೆ ಚುನಾವಣೆಯನ್ನು ಗೆಲ್ಲಲು ಭರಪೂರ ಉಚಿತ ಭಾಗ್ಯಗಳ ಮೊರೆ ಹೋಗಬೇಕಾಯಿತು. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ಉಚಿತ ಭಾಗ್ಯಗಳಿಂದಲೇ ಅಧಿಕಾರಕ್ಕೆ ಬಂದಿತ್ತು. ಪಶ್ಚಿಮ ಬಂಗಾಳದಲ್ಲಿಯೂ ಅದೇ ತಂತ್ರಗಾರಿಕೆಯನ್ನು ಬಳಸಲಾಯಿತು. ಪಂಜಾಬಿನಲ್ಲಂತೂ ಆಂಧ್ರ ಪ್ರದೇಶವನ್ನೂ ಮೀರಿಸುವಂತಹ ಉಚಿತ ಭಾಗ್ಯಗಳ ಘೋಷಣೆಗಳಾದವು. ತಮಿಳುನಾಡು ಬಹಳ ಹಿಂದಿನಿಂದಲೂ ಉಚಿತ ಭಾಗ್ಯಗಳಿಂದಲೇ ಚುನಾವಣೆಯನ್ನು ಗೆಲ್ಲುತ್ತಿರುವ ರಾಜ್ಯ. ಛತ್ತೀಸ್‌ಗಢದಲ್ಲಿ ಮತ್ತದೇ ಉಚಿತ ಭಾಗ್ಯಗಳ ಸರಣಿ.

ಕರ್ನಾಟಕದಲ್ಲಿಯೂ ಆಡಳಿತ ಪಕ್ಷವನ್ನು ಎದುರಿಸಲಾಗದೆ ಮತ್ತದೇ ಉಚಿತ ಭಾಗ್ಯಗಳ ಮೊರೆ ಹೋಗಲಾಗಿದೆ. ತಂತ್ರಗಾರಿಕಾ ಸಂಸ್ಥೆಗಳು ನೂರಾರು ಕೋಟಿ ಹಣವನ್ನು ಪಡೆದು ಹೋಗಿ ಬಿಡುತ್ತಾರೆ. ಆದರೆ ಅದರಿಂದಾಗುವ ಆರ್ಥಿಕ ಹೊಡೆತವನ್ನು ಅನುಭವಿಸುವವನು ಮತದಾರ. ತಂತ್ರಗಾರಿಕಾ ಸಂಸ್ಥೆಯವರಿಗೆ ದೇಶ ಮತ್ತು ರಾಜ್ಯದ ಆರ್ಥಿಕ ಶಿಸ್ತಿನ ಬಗ್ಗೆ ಕೊಂಚವೂ ಕಾಳಜಿಯಿಲ್ಲ. ತಮಗೆ ಬರಬೇಕಿರುವ ಹಣ ಸಂದಾಯವಾದರೆ ಸಾಕು, ಯಾವ ಮಟ್ಟದ ಕೆಲಸ ಮಾಡಲು ತಯಾರಾಗುತ್ತಾರೆ. ಆಂಧ್ರ ಪ್ರದೇಶದ ತಿಜೋರಿ ಕಾಲಿಯಾಗಿದೆ.

‘ಜಗನ್ ಮೋಹನ್ ರೆಡ್ಡಿ’ ತಾನು ಹೇಳಿದ್ದ ಉಚಿತ ಯೋಜನೆಗಳನ್ನು ಜನರಿಗೆ ತಲುಪಿಸಲಾಗದೆ ಒದ್ದಾಡುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ಒಂದು ಲೀಟರ್ ಪೆಟ್ರೋಲಿನ ಬೆಲೆ ೧೧೨ ರುಪಾಯಿ ತಲುಪಿದೆ. ಪಂಜಾಬಿನ ಸರ್ಕಾರಿ ನೌಕರರಿಗೆ ಸಂಬಳವನ್ನು
ಸರಿಯಾದ ಸಮಯದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿ ಒಂದು ವರ್ಗದ ಮೇಲೆ ಹೆಚ್ಚಿನ ತೆರಿಗೆಯನ್ನು ಹೇರಿ ಮತ್ತೊಂದು ವರ್ಗವನ್ನು ಸಾಕಲಾಗುತ್ತಿದೆ. ಕಾಂಗ್ರೆಸ್‌ಗೆ ಛತ್ತೀಸ್‌ಗಢದಲ್ಲಿ ನೀಡಿದ ಆಶ್ವಾಸನೆಯನ್ನು ಪೂರೈಸಲು ಸಾಧ್ಯ ವಾಗುತ್ತಿಲ್ಲ. ರಾಜಸ್ಥಾನದ ರೈತರ ಸಂಪೂರ್ಣ ಸಾಲ ಮನ್ನವಾಗಿಲ್ಲ.

ಕರ್ನಾಟಕದ ಸಾಲವನ್ನು ಮೊಟ್ಟಮೊದಲ ಬಾರಿಗೆ ಒಂದು ಲಕ್ಷ ಕೋಟಿ ದಾಟಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ತನ್ನ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್‌ಗೆ ವರ್ಷಕ್ಕೆ ಕನಿಷ್ಠವೆಂದರೂ ೭೦,೦೦೦ ಕೋಟಿಯ ಹೆಚ್ಚುವರಿ
ಹಣ ಬೇಕಾಗುತ್ತದೆ. ಹೆಚ್ಚುವರಿ ಹಣವನ್ನು ಕ್ರೂಡೀಕರಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಾರೆ ಅಥವಾ ಜನರಿಗೆ ನೀಡಿರುವ ಆಶ್ವಾಸನೆಗಳು ಈಡೇರುವುದಿಲ್ಲ.

ಕರ್ನಾಟಕವನ್ನು ಶ್ರೀಲಂಕಾ ಮತ್ತು ಪಾಕಿಸ್ತಾನ ಮಾಡುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದೆ. ಕೇವಲ ಉಚಿತ ಭಾಗ್ಯಗಳ ಮೂಲಕ ಮೋದಿಯವರನ್ನು ಎದುರಿಸುವವರನ್ನು ಅದ್ಯಾವ ಆಧಾರದ ಮೇಲೆ ಚುನಾವಣಾ ತಂತ್ರಜ್ಞ ಎನ್ನಬೇಕು? ಉಚಿತ ಭಾಗ್ಯಗಳ ಮೂಲಕ ಸದ್ಯಕ್ಕೆ ಚುನಾವಣೆಯನ್ನು ಗೆದ್ದಿರಬಹುದು. ಆದರೆ ಈ ಗೆಲುವು ಶಾಶ್ವತವಲ್ಲವೆಂಬುದನ್ನು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ತೋರಿಸಿಕೊಟ್ಟಿದೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಯವರ ಜನಪ್ರಿಯತೆ ಕುಸಿಯುತ್ತಿದೆ.

ಪಂಜಾಬಿನ ಸಾಲ ಗಗನಕ್ಕೇರಿದೆ, ತೆಲಂಗಾಣದಲ್ಲಿ ಭಾರ ತೀಯ ಜನತಾ ಪಕ್ಷ ಗಟ್ಟಿಯಾಗಿ ಬೇರೂರಿದೆ. ಕಾಂಗ್ರೆಸ್ಸಿನ ಉಚಿತ ಭಾಗ್ಯಗಳು, ಮುಸಲ್ಮಾನರ ಒಗ್ಗಟ್ಟು ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿಮತಗಳ ಹೆಚ್ಚಳ ಕಾಂಗ್ರೆಸ್ಸಿಗೆ ಹೆಚ್ಚಿನ ಲಾಭವನನ್ನು ತಂದಿರುವುದು ಕಣ್ಣಿಗೆ ಕಾಣುತ್ತಿದೆ. ಬಿಜೆಪಿ ಓಟಿನ ಪ್ರಮಾಣ ಕಳೆದ ಬಾರಿಯಷ್ಟೇ ಇದೆ. ಒಂದೆಡೆ ಕಳೆದು ಕೊಂಡಂತಹ ಮತವನ್ನು ಮತ್ತೊಂದೆಡೆ ಪಡೆಯುವಲ್ಲಿ ಪಕ್ಷ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಪುಡಪೋಶಿಗಳು ಉದ್ದೇಶಪೂರ್ವಕವಾಗಿ ಒಬ್ಬರನ್ನೇ ಗುರಿಯಾಗಿಸಿಕೊಂಡು ಇಲ್ಲಸಲ್ಲದ ಟೀಕೆಗಳನ್ನು ಮಾಡಿ ಕಾರ್ಯಕರ್ತರ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಸೋಲಿನಿಂದ ಕಾರ್ಯಕರ್ತ ಎದೆ ಗುಂದಬೇಕಿಲ್ಲ.

ಸಂಸತ್ ಚುನಾವಣೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ, ತಾಲೂಕು ಪಂಚಾಯಿತಿ ಚುನಾವಣೆ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗುತ್ತಿವೆ. ಸೋಲಿನ ಪರಾಮರ್ಶೆಯಾಗಿದೆ, ಗೆಲ್ಲಲು ಮಾಡಬೇಕಿರುವ ರಣತಂತ್ರಗಳನ್ನು ಮಾಡಿ ಮುಂದೆ ಸಾಗಬೇಕಿದೆ.