Friday, 22nd November 2024

ದಾಂತೇವಾಡ ಸ್ಫೋಟ: ಬಾಲಕ ಸೇರಿ ಮತ್ತೆ ಎಂಟು ನಕ್ಸಲರ ಬಂಧನ

ದಾಂತೇವಾಡ: ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಸ್ಫೋಟ ದಲ್ಲಿ 10 ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕ ಸೇರಿದಂತೆ ಮತ್ತೆ ಎಂಟು ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ಒಟ್ಟು ನಕ್ಸಲರ ಸಂಖ್ಯೆ 17ಕ್ಕೆ ಏರಿದೆ ಎಂದು ಅವರು ಹೇಳಿದರು. ಈ ಎಂಟು ನಕ್ಸಲರ ಪೈಕಿ ಐವರನ್ನು ಮೇ 17ರಂದು ಬಂಧಿಸಲಾಗಿದ್ದು, ಅಪ್ರಾಪ್ತ ಬಾಲಕ ಸೇರಿದಂತೆ ಇತರ ಮೂವರನ್ನು ಶುಕ್ರವಾರ ಅರನ್ಪುರ ಪೊಲೀಸ್ ಠಾಣಾ ಪ್ರದೇಶ ಮತ್ತು ಪಕ್ಕದ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆ ಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾಸಾ ಕವಾಸಿ, ಕೋಸ ಮಾಂಡವಿ, ಅರ್ಜುನ್ ಕುಂಜಮ್, ದೇವಾ ಮದ್ವಿ ಮತ್ತು ಗಂಗಾ ಮದ್ವಿ ಎಂಬ ಪೆಡ್ಕಾ ಗ್ರಾಮದ ಎಲ್ಲಾ ಸ್ಥಳೀಯರನ್ನು ಬುಧವಾರ ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಅಪ್ರಾಪ್ತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಏಪ್ರಿಲ್ 26 ರಂದು ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಬೆಂಗಾ ವಲು ಪಡೆಯ ಭಾಗವಾಗಿದ್ದ ಮಲ್ಟಿ ಯುಟಿಲಿಟಿ ವೆಹಿಕಲ್ (ಎಂಯುವಿ) ಅನ್ನು ನಕ್ಸಲರು ಸ್ಫೋಟಿಸಿದ್ದರು.