Friday, 22nd November 2024

ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನ ಪರ ಘೋಷಣೆ ಏಕೆ ?

ವಿದೇಶ ವಾಸಿ

dhyapaa@gmail.com

ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಜನ ಅಮೆರಿಕ ಜಿಂದಾಬಾದ್ ಎಂದು ಯಾಕೆ ಕೂಗುವುದಿಲ್ಲ? ಅದೇ ಪಾಕಿಸ್ತಾನಿ ಗಳ ಸ್ವರ್ಗವಾದ ಇಂಗ್ಲೆಂಡ್ ಜಿಂದಾಬಾದ್ ಎಂದು ಯಾಕೆ ಅರಚುವುದಿಲ್ಲ. ಎಂದೋ ಮುಳುಗಿ ಹೋಗುತ್ತಿದ್ದ ಪಾಕಿಸ್ತಾನವನ್ನು ಎತ್ತಿದ ಸೌದಿ, ಕತಾರ್, ಯುಎಇಯಂತಹ ದೇಶದ ಪರವಾಗಿ ಘೋಷಣೆಗಳೂ ಇಲ್ಲ.

ಕರ್ನಾಟಕ ವಿಧಾನಸಭೆಗೆ ಚುನಾವಣೆ ಮುಗಿದು, ಕಳೆದ ಮೇ ಹದಿಮೂರನೇ ತಾರೀಖು ಫಲಿತಾಂಶ ಬರುವ ಸಮಯದಲ್ಲಿ ಕೆಲವರು ಪಾಕಿಸ್ತಾನ ಪರ ಘೋಷಣೆ ಕೂಗಿದರಂತೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿರುವ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಕೂಗಿದ್ದು ಬೆಳಗಾವಿಯ ಒಂದು ಭಾಗದಲ್ಲಿ, ಕಾಂಗ್ರೆಸ್ ವಿಜಯೋತ್ಸವದ ಸಂದರ್ಭದಲ್ಲಂತೆ.

ಹಾಗೆ ಕೂಗಿದವರಲ್ಲಿ ಮಕ್ಕಳೂ ಇದ್ದರು. ಪೋಲೀಸರು ಕೇಸು ದಾಖಲಿಸಿ ಕೊಂಡಿದ್ದು, ವಿಡಿಯೋ ತುಣುಕನ್ನು ಪರೀಕ್ಷೆಗೆ ಕಳಿಸಿಕೊಟ್ಟಿದ್ದಾರಂತೆ. ‘ಎಲ್ಲವನ್ನೂ ಪರಿಶೀಲಿಸಿದ ನಂತರ ಕಾನೂನಿನ ಪ್ರಕಾರ ಕ್ರಮ ಗೈಗೊಳ್ಳ ಲಾಗುವುದು’ ಎಂದು ಪೋಲೀಸರು ಹೇಳಿದ್ದಾರೆ. ನಾವೂ ಅದೇ ನಂಬಿಕೆಯಲ್ಲಿ ರೋಣ! ಇಲ್ಲಿ ಅರ್ಥವಾಗದೇ ಇರುವ ಸಂಗತಿ ಎಂದರೆ, ಕಾಂಗ್ರೆಸ್ ಪಕ್ಷದ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಘೋಷಣೆ ಯಾಕೆ? ಹಿಂದೂಸ್ತಾನ್ ಜಿಂದಾಬಾದ್, ಕಾಂಗ್ರೆಸ್ ಜಿಂದಾಬಾದ್ ಎಂದರೆ ಸರಿ.

ಸೋನಿಯಾ-ರಾಹುಲ್-ಪ್ರಿಯಾಂಕಾ, ಸಿದ್ದು, ಖರ್ಗೆ, ಡಿಕೆಶಿ ಅಥವಾ ಇನ್ಯಾವುದೇ ನಾಯಕರ ಪರ ಘೋಷಣೆಯೂ ಸರಿ. ಹೋಗಲಿ, ಯಾವುದೋ ತಿಮ್ಮೇಶ, ತಿಪ್ಪೇಶನ ಪರವಾಗಿ ಕೂಗಿ ದರೂ ಓಕೆ. ಎಲ್ಲಾ ಬಿಟ್ಟು ಪಾಕಿಸ್ತಾನದ ಪರವಾಗಿ ಯಾಕೆ? ಇದು ಯಾವ ರೀತಿಯ ಮನಸ್ಥಿತಿ? ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವುದಕ್ಕೂ, ಪಾಕಿಸ್ತಾನ ಪರ ಘೋಷಣೆಗೂ, ಒಂದಕ್ಕೊಂದು ಸಂಬಂಧವೇ ಇಲ್ಲ. ಏನಾದರೂ ಸಂಬಂಧವಿದ್ದರೆ, ಯಾರಾದರೂ ತಿಳಿಸಿಕೊಡಬೇಕು.

ಮೊದಲು ಈ ‘ಜಿಂದಾಬಾದ್’ ಎಲ್ಲಿ ಹುಟ್ಟಿಕೊಂಡಿತು ಎಂದು ತಿಳಿದು ಮುಂದೆ ಹೋಗೋಣ. ‘ಜಿಂದಾಬಾದ್’ ಎಂಬ ಉರ್ದು ಪದ ಪ್ರಚಲಿತವಾದದ್ದು ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲದಲ್ಲಿ. ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ ಆ ಕಾಲದಲ್ಲಿ ಜನಪ್ರಿಯವಾಯಿತು. ‘ಕ್ರಾಂತಿ ಚಿರಾಯುವಾಗಲಿ’ ಎಂದು ಅದರ ಅರ್ಥ. ಇದನ್ನು ಹುಟ್ಟಿಹಾಕಿದ್ದು, ಈಗಿನ
ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಕವಿ, ವಿದ್ವಾಂಸ, ಮೊಹಮ್ಮದ್ ಇಕ್ಬಾಲ.

ಆ ಕಾಲದಲ್ಲಿ ಜಿಂದಾಬಾದ್ ಎನ್ನುವುದು ಪ್ರೇರಣೆಯ ಸ್ಫೂರ್ತಿ ಆಗಿತ್ತು ಎಂದುಕೊಂಡರೂ, ನಿಜವಾಗಿ ಚಿರಾಯುವಾಗ ಬೇಕಾದದ್ದು ಶಾಂತಿಯೇ ವಿನಃ ಕ್ರಾಂತಿಯಲ್ಲ! ಇರಲಿ, ಅಂದು ಆರಂಭವಾದ ‘ಜಿಂದಾಬಾದ್’ ಇಂದಿಗೂ ಮುಂದುವರಿದು ಕೊಂಡು ಬಂದಿದೆ ಎಂದೇ ಇಟ್ಟುಕೊಳ್ಳೋಣ. ಆದರೆ ಅದನ್ನು ಯಾವ ಸಂದರ್ಭದಲ್ಲಿ ಬಳಸಬೇಕು ಎನ್ನುವುದೂ ತಿಳಿಯ
ದಿದ್ದರೆ ಬಳಸುವುದಕ್ಕಿಂತ ಸುಮ್ಮನೆ ಕುಳಿತುಕೊಳ್ಳುವುದು ಒಳಿತು. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಜನ ಅಮೆರಿಕ ಜಿಂದಾಬಾದ್ ಎಂದು ಯಾಕೆ ಕೂಗುವುದಿಲ್ಲ? ಅದೇ ಪಾಕಿಸ್ತಾನಿಗಳ ಸ್ವರ್ಗವಾದ ಇಂಗ್ಲೆಂಡ್ ಜಿಂದಾಬಾದ್ ಎಂದು ಯಾಕೆ ಅರಚುವುದಿಲ್ಲ.

ಹೋಗಲಿ, ಎಂದೋ ಮುಳುಗಿ ಹೋಗುತ್ತಿದ್ದ ಪಾಕಿಸ್ತಾನವನ್ನು ಎತ್ತಿ ಹಿಡಿದ ಸೌದಿ ಅರೇಬಿಯಾ, ಕತಾರ್, ಯುಎಇಯಂತಹ ದೇಶದ ಪರವಾಗಿ ಘೋಷಣೆಗಳೂ ಇಲ್ಲ. ನಿಜವಾಗಿ ಪಾಕಿಸ್ತಾನ ಪ್ರಿಯರು ಘೋಷಣೆ ಕೂಗಬೇಕಾದದ್ದು ಇವರ ಪರವಾ ಗಲ್ಲವೇ? ಇಂತಹ ದೇಶಗಳು ಇದ್ದದ್ದರಿಂದ ಇಂದು ಪಾಕಿಸ್ತಾನ ಉಳಿದಿದೆಯೇ ವಿನಃ ತನ್ನ ಸ್ವಂತ ಬಲದಿಂದ ಅಲ್ಲ. ಈಗಲೂ ಹೇಳುತ್ತೇನೆ, ನಮ್ಮ ದೇಶದ ಯಾವುದೇ ವಿಷಯದಲ್ಲಿ, ಸಂಭ್ರಮದಲ್ಲಿ, ಉತ್ಸವದಲ್ಲಿ, ಬೇರೆ ದೇಶಕ್ಕೆ ಜೈಕಾರ ಹಾಕುವ ಅವಶ್ಯಕತೆಯೇ ಇಲ್ಲ.

ಒಂದು ವೇಳೆ ಜಿಂದಾಬಾದ್ ಹೇಳಲೇಬೇಕು ಅನಿಸಿದರೆ, ಪಾಕಿಸ್ತಾನಕ್ಕಂತೂ ಖಂಡಿತ ಅಲ್ಲ. ಯಾಕೆಂದರೆ ಪಾಕಿಸ್ತಾನ ನಮಗೆ
ಯಾವ ರೀತಿಯಲ್ಲೂ ಒಳ್ಳೆಯ ಮಾದರಿಯಲ್ಲ. ಒಳ್ಳೆಯ ಮಾದರಿಯಲ್ಲದ್ದಕ್ಕೆ ಜೈಕಾರ ಯಾಕೆ ಬೇಕು? ಅದು ಯಾಕೆ ಚಿರಾಯು ವಾಗಿರಬೇಕು? ಇಷ್ಟು ಹೇಳಿದರೆ ಕೆಲಸ ಮುಗಿಯುವುದಿಲ್ಲ. ಪಾಕಿಸ್ತಾನ ಯಾಕೆ ಮಾದರಿಯಲ್ಲ ಎಂಬುದನ್ನೂ ನೋಡಬೇಕು. ಎಲ್ಲಕ್ಕಿಂತ ಮೊದಲು ನಮ್ಮ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಕಿಸ್ತಾನದ ಹೆಸರೇ ಬರಬಾರದು ಎನ್ನುವ ನಿಲುವು ನನ್ನದು. ಈ
ಭೂಮಿಯ ಮೇಲೆ ಪ್ರಜಾಪ್ರಭುತ್ವಕ್ಕೆ ಕೆಟ್ಟ ಮಾದರಿಯ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಪಾಕಿಸ್ತಾನ.

ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷದಲ್ಲಿ, ಜನರಿಂದ ಚುನಾಯಿತವಾದ ಒಂದೇ ಒಂದು ಸರಕಾರವೂ ತನ್ನ ಅವಧಿ ಪೂರೈಸಿದ ದಾಖಲೆ ಇಲ್ಲದ ದೇಶ ಅದು. ಆ ದೇಶ ತನ್ನ ಪ್ರಧಾನಿಗಳನ್ನು ನಡೆಸಿಕೊಂಡ ರೀತಿ ಎಲ್ಲರೂ ತಿಳಿದದ್ದೇ. ಹಸಿ ಹಸಿ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ನನ್ನು ಅಲ್ಲಿಯ ಪ್ಯಾರಾ ಮಿಲಿಟರಿಯವರು
ಬಂಽಸಿ, ರಸ್ತೆಯಲ್ಲಿ ಎಳೆದುಕೊಂಡು ಹೋದರು.

ಕಾರಣ, ಆತ ಪ್ರಧಾನಿಯಾಗಿzಗ ಆತನ ಪತ್ನಿಯ ಹೆಸರಿನಲ್ಲಿರುವ ಒಂದು ಚಾರಿಟೇಬಲ್ ಟ್ರಸ್ಟ್‌ಗೆ ಭೂಮಿ ವ್ಯಾಪಾರಿಯೊಬ್ಬ ಏಳುನೂರು ಕೋಟಿ ಪಾಕಿಸ್ತಾನಿ ರುಪಾಯಿ ಮೌಲ್ಯದ ಅರವತ್ತು ಎಕರೆ ಭೂಮಿಯನ್ನು ಕೊಡುಗೆಯಾಗಿ ನೀಡಿದನಂತೆ. ಅದು ವಿಶ್ವವಿದ್ಯಾಲಯಕ್ಕೆಂದು ಮೀಸಲಾಗಿಟ್ಟ ಸ್ಥಳವಾಗಿತ್ತಂತೆ. ಅದರೊಂದಿಗೆ ಆತನ ಮನೆಯ ಸುತ್ತಲೂ ಇರುವ ಬೆಲೆ ಬಾಳುವ ಭೂಮಿಯನ್ನೂ ಟ್ರಸ್ಟ್‌ಗೆ ನೀಡಲಾಗಿತ್ತಂತೆ. ಅಲ್ಲದೇ, ಟ್ರಸ್ಟ್‌ನ ಕಾರ್ಯವೆಚ್ಚಕ್ಕೆ ಹದಿನೆಂಟು ಕೋಟಿ ರು. ಸಂಗ್ರಹಿಸಲಾಗಿತ್ತು, ಆದರೆ ದಾಖಲೆಯಲ್ಲಿ ಕೇವಲ ಎಂಬತ್ತೈದು ಲಕ್ಷ ಮಾತ್ರ ತೋರಿಸಲಾಗಿದೆ ಎಂಬ ಆಪಾದನೆ. ಇಮ್ರಾನ್ ಖಾನ್ ಬಂಧನ ವಿರೋಽಸಿ ಪಾಕಿಸ್ತಾನದಲ್ಲಷ್ಟೇ ಅಲ್ಲದೆ ಯುರೋಪ್‌ನ ಕೆಲವು ದೇಶಗಳಲ್ಲೂ ತೀವ್ರ ಪ್ರತಿಭಟನೆಯಾಯಿತು.

ಸರಕಾರಿ ಕಚೇರಿಗಳು, ಬಸ್ ಇತ್ಯಾದಿ ಹಾನಿಗೊಳಗಾದದ್ದಷ್ಟೇ ಅಲ್ಲದೆ, ಪ್ರತಿಭಟನಾಕಾರರ ಕೈ ಅಲ್ಲಿಯ ಕಮಾಂಡರ್ ಮನೆಯ ಫ್ರಿಜ್ ಬಾಗಿಲನ್ನೂ ತಲುಪಿತ್ತು. ಜನ ಪಾಕಿಸ್ತಾನದ ಸೇನೆಯ ಮುಖ್ಯ ಕಚೇರಿಗೆ ಬೆಂಕಿ ಇಡುವುದಕ್ಕೆ ಮುಂದಾ
ದರು. ಯಾವುದೇ ದೇಶವಾಗಲಿ, ದಂಗೆಯ ಸಮಯದಲ್ಲಿ ಒಬ್ಬ ಸಾಮಾನ್ಯ ಪ್ರಜೆ ಒಬ್ಬ ಸುರಕ್ಷಾ ಸಿಬ್ಬಂದಿಯ ಅಡುಗೆಮನೆಗೆ ಕಾಲಿಡುತ್ತಾನೆ ಎಂದರೆ, ಅದು ಸುರಕ್ಷಿತವೂ ಅಲ್ಲ, ಮಾದರಿ ಯಂತೂ ಅಲ್ಲವೇ ಅಲ್ಲ.

ಇದು ಒಂದು ಕಡೆ, ಇನ್ನೊಂದೆಡೆ ಪಾಕಿಸ್ತಾನದ ಹಣದುಬ್ಬರ ಇಂದು ಸುಮಾರು ನಲವತ್ತು ಪ್ರತಿಶತದಷ್ಟಿದೆ. ಅದರಲ್ಲೂ ಆಹಾರ ಪದಾರ್ಥಗಳ ಬೆಲೆ ಶೇಕಡಾ ಐವತ್ತರಷ್ಟು ಹೆಚ್ಚಿದೆ. ವಿದೇಶೀ ಮೀಸಲು ಹಣ ನಾಲ್ಕೂವರೆ ಬಿಲಿಯನ್‌ಗಿಂತಲೂ
ಕಮ್ಮಿ ಇದೆ. ಅದೂ ಬೇರೆ ದೇಶದ ಮುಂದೆ ಭಿಕ್ಷಾಪಾತ್ರೆ ಹಿಡಿದು ಬೇಡಿ ತಂದ ಹಣ. ಈ ಹಣದಿಂದ ಪಾಕಿಸ್ತಾನ ಒಂದು ತಿಂಗಳಿಗಾಗುವಷ್ಟು ಸಾಮಗ್ರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಸಾಧ್ಯ.

ಅದಾದ ನಂತರ ಪುನಃ ‘ಭವತಿ ಭಿಕ್ಷಾಂ ದೇಹಿ’. ಮುಂದೊಂದು ದಿನ ಪಾಕಿಸ್ತಾನ ಭಿಕ್ಷೆ ಬೇಡುವುದಕ್ಕೆ ಬೇಕಾದ ಪಾತ್ರೆ ಕೊಳ್ಳುವುದಕ್ಕೂ ಭಿಕ್ಷೆ ಬೇಡಬೇಕಾದೀತು. ಇನ್ನು ಶಿಕ್ಷಣ. ಸ್ವಾತಂತ್ರ್ಯಾನಂತರದ ಐದು ವರ್ಷದವರೆಗೂ ಪಾಕಿಸ್ತಾನದಲ್ಲಿ ಇನ್ನೂರ ಐವತ್ತಕ್ಕೂ ಕಮ್ಮಿ ಮದರಸಾಗಳಿದ್ದವು. ಎಪ್ಪತ್ತರ ದಶಕ ತಲುಪುವ ಹೊತ್ತಿಗೆ ಇವುಗಳ ಸಂಖ್ಯೆ ಏಳುನೂರ ರಷ್ಟಾಗಿತ್ತು. ಅದೇ ಎರಡು ಸಾವಿರದ ಹತ್ತನೇ ಇಸವಿಯಲ್ಲಿ ಈ ಸಂಖ್ಯೆ ಸುಮಾರು ನಲವತ್ತೆರಡು ಸಾವಿರ ದಾಟಿತ್ತು. ಅಂದರೆ,
ಮೊದಲ ಇಪ್ಪತ್ತು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾದದ್ದು, ನಂತರದ ನಲವತ್ತು ವರ್ಷದಲ್ಲಿ ಸುಮಾರು ಅರವತ್ತು ಪಟ್ಟು ಹೆಚ್ಚಿತು.

ಎಪ್ಪತ್ತರವರೆಗೆ ಮದರಸಾದಲ್ಲಿ ಓದಿದವರು ಮೌಲ್ವಿಗಳಾಗಲು, ಧರ್ಮ ಪ್ರಚಾರಕರಾಗಲು ಮಾತ್ರ ಅವಕಾಶವಿತ್ತು. ಎಪ್ಪತ್ತೇಳರಲ್ಲಿ ಜಿಯಾ-ಉಲ್-ಹಕ್ ಅಧಿಕಾರಕ್ಕೆ ಬಂದ ನಂತರ ಮದರಸಾದಲ್ಲಿ ಕಲಿತವರನ್ನು ಸೇನೆಯ ಕೆಳ ದರ್ಜೆಯ ನೌಕರರನ್ನಾಗಿ ಸೇರಿಸಿಕೊಳ್ಳಬಹುದು ಎಂಬ ಕಾನೂನು ತಂದರು. ಮದರಸಾಕ್ಕೆ ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಂದ ಹಣ ತಂದರು. ಆಗ ಮದರಸಾದಲ್ಲಿ ಕಲಿಯುವ ಮಕ್ಕಳಿಗೆ ಊಟ ಮತ್ತು ವಸತಿಯೂ ಉಚಿತವಾಗಿ
ಸಿಗಲಾರಂಭಿಸಿತು.

ಜಿಯಾ-ಉಲ್-ಹಕ್ ಸರಕಾರಿ ಶಾಲೆಗಳಿಗೆ ಇರಬೇಕಾದ ಬಜೆಟ್ ಕಡಿತಗೊಳಿಸಿದರು. ಆಗ ಓದಬೇಕು ಎನ್ನುವವರು ಮದರಸಾಕ್ಕೆ ಹೋಗುವುದು ಅನಿವಾರ್ಯವಾಯಿತು. ಇದ್ದ ಬಿದ್ದ ಸರಕಾರಿ ಶಾಲೆಗಳಲ್ಲೂ ವಿಜ್ಞಾನ, ಗಣಿತ ಕಲಿಸುವ ಬದಲು
ದ್ವೇಷದ ಬೀಜ ಬಿತ್ತಲಾಯಿತು. ಟೈಮ್ಸ್ ಆಫ್ ಇಂಡಿಯಾದ ಒಂದು ವರದಿಯ ಪ್ರಕಾರ, ಪಾಕಿಸ್ತಾನದ ಶಾಲೆಗಳಲ್ಲಿ ಅಲ್ಪಸಂಖ್ಯಾತರು,

ಅದರಲ್ಲೂ ಹಿಂದೂಗಳು ಇಸ್ಲಾಮ್ ಧರ್ಮದ ವಿರೋಧಿಗಳು, ಹಿಂದೂ-ಯಹೂದಿಗಳು ದ್ವೇಶಕ್ಕೆ ಅರ್ಹರು ಎಂಬ ಪಾಠ ಹೇಳಲಾಯಿತು. ೨೦೧೦ ರ ವೇಳೆಗೆ ತೆಹ್ರೀಕ್-ಎ-ತಾಲಿಬಾನ್ ಹೆಣ್ಣುಮಕ್ಕಳ ಶಾಲಾ ಶಿಕ್ಷಣ ನಿಲ್ಲಿಸಿದ್ದರಿಂದ ಸುಮಾರು ಒಂದು ಲಕ್ಷ  ಮಕ್ಕಳು ಮನೆಯ ಕುಳಿತುಕೊಳ್ಳುವಂತಾಯಿತು. ಸಾಲದು ಎಂಬಂತೆ ನೂರ ಎಂಬತ್ತಕ್ಕೂ ಹೆಚ್ಚು ಶಾಲೆಗಳು ಬಾಂಬ್ ದಾಳಿಗೆ ಗುರಿಯಾದವು.

ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಅಮೆರಿಕದೊಂದಿಗೆ ಸೇರಿ ರಷ್ಯಾ ವಿರುದ್ಧ ಹೋರಾಟಕ್ಕೆ ಸಜ್ಜಾದವು. ಅದಕ್ಕೆ ಬೇಕಾಗಿ ಅಮೆರಿಕ ಮದರಸಾಗಳಿಗೆ ಬೇಕಾದ ಪಠ್ಯಗಳನ್ನು ತಯಾರಿಸಿತು ಎಂದರೆ ಅಲ್ಲಿಂದ ಬಂದ ಉತ್ಪನ್ನ ಹೇಗಿದ್ದೀತು? ಮೊದಲು ರಷ್ಯಾ ವಿರುದ್ಧ ದ್ವೇಷ, ನಂತರ ಮುಸ್ಲಿಂ ಹೊರತುಪಡಿಸಿ ಉಳಿದವರೊಂದಿಗೆ ದ್ವೇಷ. ಅದರ ಪರಿಣಾಮವೇ ತಾಲಿಬಾನ್,
ಎಸೆಸ್ಪಿ, ಎಲಇಜೆ, ಹರ್ಕತ್-ಉಲ-ಮುಜಾಹಿದ್ದೀನ್, ಜೈಶ್-ಎ-ಮೊಹಮ್ಮದ್ ಇತ್ಯಾದಿ ಇತ್ಯಾದಿ. ಈ ಸಂಘಟನೆಗಳ ಸುಮಾರು ತೊಂಬತ್ತು ಪ್ರತಿಶತ ಸಿಪಾಯಿಗಳು ಇಲ್ಲಿಂದಲೇ ಬಂದವರು.

ಈ ಸಂಘಟನೆಗಳು ವಿಶ್ವದಾದ್ಯಂತ ಏನೆಲ್ಲ ಅನಾಹುತ ಸೃಷ್ಠಿಸಿದವು ಎಂದು ತಿಳಿದೇ ಇದೆ. ಆದರೆ ಏನು ಗೊತ್ತಾ? ಈ ಸಂಘಟನೆಗಳು ಬೇರೆ ದೇಶಕ್ಕಿಂತ ಪಾಕಿಸ್ತಾನಕ್ಕೆ ಹಾನಿ ಮಾಡಿದ್ದೇ ಹೆಚ್ಚು. ಇದೆಲ್ಲದರ ಪರಿಣಾಮ, ಪಾಕಿಸ್ತಾನದಲ್ಲಿ ಆಂತರಿಕ
ಯುದ್ಧದ ಕ್ಷಣಗಳು ದೂರವಿಲ್ಲ. ಇದು ಮಾದರಿಯಾಗಬೇಕೆ? ಇದು ಚಿರಾಯುವಾಗಬೇಕೇ? ಇದಕ್ಕೆ ಜಯವಾಗಬೇಕೆ? ನಾವೂ ಅವರಂತೆಯೇ ಆಗಬೇಕೇ? ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ರೀತಿಯ ಆಡಳಿತ ನಡೆಸಬೇಕೆ? ಭಾರತದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವುದು ಇದೇ ಮೊದಲಲ್ಲ.

ಸುಮಾರು ಮೂರು ವರ್ಷದ ಮೊದಲು ಹತ್ತೊಂಬತ್ತೊ-ಇಪ್ಪತ್ತೋ ವರ್ಷದ ಕರ್ನಾಟಕದ ಅಮೂಲ್ಯ ಲಿಯೋನಿ ಕೂಡ ಇದೇ ರೀತಿ ಕೂಗಿದ್ದಳು. ಅವಳ ಉದ್ದೇಶ ಅದಾಗಿರಲಿಲ್ಲ, ಮುಂದೆ ಏನನ್ನೋ ಹೇಳುವ ಮೊದಲೇ ಅಸಾದುದ್ದೀನ್ ಓವೈಸಿ (ಅದು ಅವರದ್ದೇ ಸಭೆಯಾಗಿತ್ತು) ಮೈಕ್ ಕಸಿದುಕೊಂಡರು ಎಂದು ಹೇಳಲಾಗುತ್ತಿದೆಯಾದರೂ, ಆಕೆ ಸುಮಾರು ನಾಲ್ಕು ತಿಂಗಳು ಸೆರೆಮನೆಯಲ್ಲಿದ್ದಳು. ತೀರಾ ಇತ್ತೀಚೆಗೆ, ಕಳೆದ ಅಗಸ್ಟ್‌ನಲ್ಲಿ ರಾಜಸ್ಥಾನದಲ್ಲಿ ದೂ ಧ್ವಜವನ್ನು ಕಿತ್ತುಹಾಕುವ ಭರದಲ್ಲಿ
ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಕ್ಕೆ ಇಬ್ಬರನ್ನು ಬಂಧಿಸಲಾಯಿತು.

ನವೆಂಬರ್‌ನಲ್ಲಿ ಬಿಹಾರದಲ್ಲಿ ಪಿಎಫ್ ಐ ಮುಖಂಡನನ್ನು ಬಂಧಿಸಲಾಯಿತು. ಅದೇ ತಿಂಗಳು ಆದಮ್ಘಡದಲ್ಲಿಯೂ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಲಾಯಿತು. ಇದೇ ರೀತಿ ಘೋಷಣೆ ಕೂಗುವಾಗ ಪುಣೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಬಂಽಸಲಾಯಿತು. ಡಿಸೆಂಬರ್ ತಿಂಗಳಿನಲ್ಲಿ ಬಿಹಾರದಲ್ಲಿ ಐದು ಜನರನ್ನು ಅಲ್ಲಿಯ ಪೋಲೀಸರು ಸೆರೆಮನೆಗೆ ಕಳುಹಿಸಿದ್ದರು. ಬ್ಯಾಡ್ಮಿಂಟನ್ ಪಂದ್ಯ ಗೆದ್ದ ನಂತರ ಪಾಕಿಸ್ತಾನದ ಪರ ಘೋಷಣೆ ಕೂಗಿದರು ಎಂಬ ಆಪಾದನೆ ಅವರ ಮೇಲಿತ್ತು.

ಇದು ತೀರ ಇತ್ತೀಚಿನ , ಕಳೆದ ಆರು ಏಳು ತಿಂಗಳಿನ ಉದಾಹರಣೆಗಳು ಅಷ್ಟೇ. ಇವರೆಲ್ಲರ ಮೇಲೆ ಯಾವ ರೀತಿ ‘ಕಟ್ಟು ನಿಟ್ಟಿನ ಕ್ರಮ’ ಕೈಗೊಳ್ಳಲಾಗಿದೆ ಎಂದು ತಿಳಿದಿಲ್ಲ. ಸದ್ಯ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತಿಲ್ಲ. ಅದೇನಾದರೂ ಇದ್ದಿದ್ದರೆ, ಪಾಕಿಸ್ತಾನ ಜಯಿಸಿದ್ದರೆ ಇನ್ನೊಂದಿಷ್ಟು ಇದೇ ರೀತಿಯ ‘ಕಾರ್ಯ-ಕ್ರಮ’ಗಳು ನಡೆಯುತ್ತಿದ್ದವು. ಹಳೆಯ ದಿನಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದರೆ ಪಟಾಕಿ ಸಿಡಿಸುವುದು, ನಂತರ ಪೋಲೀಸರು ಅವರ ಬೆನ್ನು ಪುಡಿ ಮಾಡುವುದು,
ಇದೆಲ್ಲ ನೋಡದೇ ಇದ್ದದ್ದೇನೂ ಅಲ್ಲ! ವಿಚಿತ್ರ ಎಂದರೆ, ಅದೇ ಜನ ಇಂಗ್ಲೆಂಡ್ ಅಥವಾ ಆಸ್ಟ್ರೆಲಿಯಾ ಗೆದ್ದರೆ ಸಂಭ್ರಮಿಸುತ್ತಿರಲಿಲ್ಲ.

ನಮ್ಮ ಪಕ್ಕದ ದೇಶಗಳಾದ ಶ್ರೀಲಂಕಾ ಅಥವಾ ಬಾಂಗ್ಲಾದೇಶ ಗೆದ್ದರೆ ಪಠಾಕಿ, ಮದ್ದು ಸದ್ದು ಮಾಡುವುದಿಲ್ಲ. ಪಾಕಿಸ್ತಾನದ ಮೇಲೆ ಅದೆಂಥ ಪ್ರೀತಿ? ಅದ್ಯಾವ ಬಾಂಧವ್ಯ? ಇದನ್ನು ಭಾರತ ಮೇಲಿರುವ ದ್ವೇಷ ಎನ್ನಬೇಕೆ ಅಥವಾ ಪಾಕಿಸ್ತಾನದ
ಮೇಲಿರುವ ಪ್ರೀತಿ ಎನ್ನಬೇಕೆ? ಆದರೂ ಫಕೀರ ಪಾಕಿಸ್ತಾನವೇ ಪ್ರೀತಿ ಎಂದಾದರೆ, ಅಲ್ಲಿಯೇ ಹೋಗಿ ಉಳಿಯಲು ಮನಸ್ಸು ಮಾಡಿದರೆ (ನಮ್ಮ ದೇಶ ಪಾಕಿಸ್ತಾನದಂತೆ ಆಗಲು ಬಿಡದಿದ್ದುದರಿಂದ) ಆ ದೇಶ ಇಂಥವರನ್ನು ತನ್ನ ದೇಶದ ಒಳಗೆ ಬಿಟ್ಟುಕೊಂಡರೆ, ಅಂಥವರು ಭಾರತದಲ್ಲಿ ವೃಥಾ ಸಮಯ ವ್ಯರ್ಥಿಸದೆ ಅಲ್ಲಿ ಹೋಗುವುದು ಒಳಿತು. ವರ್ಷಕ್ಕೆ ಇಬ್ಬರಿಗೆ ನನ್ನ
ಕಡೆಯಿಂದ ಏಕಮುಖ ಸಂಚಾರದ (ಒನ್ ವೇ) ಟಿಕೆಟ್ ಉಚಿತ!