ಹುಬ್ಬಳ್ಳಿ: ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರದಂತೆ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆಂಬ ವರದಿಯಾಗಿದೆ.
ವಿಧಾನಸಭೆ ಫಲಿತಾಂಶದ ನಂತರ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಕಾಂಗ್ರೆಸ್ ಕಲಿಗಳು ಮಹತ್ವದ ಸೂಚನೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗುತ್ತದೆಯೋ ಇಲ್ಲವೋ ಎನ್ನು ವುದು ಕೂಡ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಟಿಕೆಟ್ ನಿರಾಕರಣೆಯಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದು ಪಕ್ಷ ತೊರೆದಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕ್ಷೇತ್ರದ ಜನರು ಕೈ ಹಿಡಿಯದ ಕಾರಣ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಎದುರು ಶೆಟ್ಟರ್ ಸೋಲು ಅನುಭವಿಸ ಬೇಕಾಯಿತು.
ಜಗದೀಶ್ ಶೆಟ್ಟರ್ ಬಿಜೆಪಿ ಮೇಲೆ ತೀವ್ರ ಅಸಮಾಧಾನಗೊಂಡಿದ್ದು, ಟಿಕೆಟ್ ವಂಚಿತರಾಗಲು ಹಾಗೂ ತಮ್ಮ ಸೋಲಿಗೆ ಬಿ.ಎಲ್. ಸಂತೋಷ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಕಾರಣ ಎಂದಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮಾರನೇ ದಿನವೇ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಾಯ ಕರು ಕರೆ ಮಾಡಿ ಧಾರವಾಡದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಜಗದೀಶ್ ಶೆಟ್ಟರ್ ಸೋತರೂ ಅವರ ಹಿರಿತನಕ್ಕೆ ಗೌರವ ಕೊಟ್ಟು ಕಾಂಗ್ರೆಸ್ ಎಂಎಲ್‌ಸಿ ಮಾಡುವ ಮೂಲಕ ಮಂತ್ರಿ ಸ್ಥಾನ ನೀಡಬಹುದು ಎಂದುಕೊಂಡಿದ್ದ ಬಹುಜನರಿಗೆ ನಿರಾಸೆ ಯಾಗಿದೆ.
ಆದರೆ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವಂತೆ ಕೈ ನಾಯಕರು ಸೂಚನೆ ನೀಡಿದ್ದಾರೆಂಬ ಮಾತುಗಳು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಅಷ್ಟೇ ಅಲ್ಲ, ರಾಜ್ಯಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಸೋಲನ್ನು ಸಹಜ ಎಂಬಂತೆ ಸ್ವೀಕರಿಸಿರುವ ಜಗದೀಶ್ ಶೆಟ್ಟರ್ ನನಗೀಗ 67. 70ನೇ ವಯಸ್ಸಿಗೆ ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ. ಅಲ್ಲಿಯವರೆಗೆ ರಾಜಕೀಯವಾಗಿ ಮೊದಲಿಗಿಂತಲೂ ಸಕ್ರೀಯನಾಗಿ ಇರುತ್ತೇನೆ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿ ಕೊಳ್ಳುತ್ತೇನೆ ಎಂಬ ಶೆಟ್ಟರ ಮಾತುಗಳೇ ಈ ವಿಷಯಕ್ಕೆ ಪುಷ್ಠಿ ನೀಡುವಂತಿದೆ.
ಈ ನಡುವೆ ನಾಯಕತ್ವದ ಕೊರತೆಯಿಂದ ಬಳಲುತ್ತಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್ಸಿಗೆ ಜಗದೀಶ್ ಶೆಟ್ಟರ್ ಭೀಮಬಲ ಬಂದಂತಾಗಿದೆ.