Saturday, 23rd November 2024

ವಸಂತನರಸಾಪುರಕ್ಕೆ ಮೆಟ್ರೋ ರೈಲು: ಪರಮೇಶ್ವರ್ ವಿಶ್ವಾಸ

ತುಮಕೂರು: ನಗರದ ಹೊರವಲಯದ ವಸಂತನರಸಾಪುರದವರೆಗೆ ಮೆಟ್ರೋ ರೈಲು ತರುವ ಕುರಿತು ಪ್ರಣಾಳಿಕೆಯಲ್ಲಿ ಸೇರಿದ್ದು ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಗ್ರೇಟರ್ ತುಮಕೂರು ಮಾಡ ಬೇಕು ಎಂಬುದು ನನ್ನ ಕನಸಾಗಿದೆ. ಬೆಂಗಳೂರಿನಂತೆ ತುಮಕೂರು ನಗರವನ್ನು ಅಭಿವೃದ್ಧಿಪಡಿಸಲು ಹಲವು ಯೋಜನೆ ಗಳನ್ನು ರೂಪಿಸಲಾಗಿದೆ. ಸ್ಮಾರ್ಟ್ಸಿಟಿ ಯೋಜನೆಯಡಿ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಎತ್ತಿನಹೊಳೆ ಯೋಜನೆಗೆ ಸರ್ಕಾರದಿಂದ ಹಣ ತಂದು ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಮೊದಲು ಉದ್ಯೋಗ ಅವಕಾಶ ನೀಡಬೇಕು ಇಲ್ಲವಾದಲ್ಲಿ ಕಂಪನಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಕಂಪನಿಗಳಿಗೆ ಸ್ಥಳೀಯರಿಗೆ ಕೆಲಸ ಕೊಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ತಮಗೆ ಕೆಲಸ ಸಿಗುತ್ತಿಲ್ಲ ಎಂದು ಯುವಕರು ಆತಂಕಪಡುವ ಅಗತ್ಯ ವಿಲ್ಲ. ನಮ್ಮ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಲಾಗು ವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ಗೌಡ, ವಕ್ತಾರ ಮುರುಳೀಧರ್ ಹಾಲಪ್ಪ ಮತ್ತಿತರ ರಿದ್ದರು.
ಸಿದ್ಧಗಂಗಾ ಮಠಕ್ಕೆ ಭೇಟಿ
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಡಾ. ಜಿ.ಪರಮೇಶ್ವರ್ ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು ಪೀಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು, ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಶ್ರೀಗಳ ಅಶೀರ್ವಾದ ಪಡೆದರು. ಸಿದ್ಧಗಂಗಾ ಮಠದ ಮಕ್ಕಳ ಜತೆ ಕೆಲ ಕಾಲ ಮಾತುಕತೆ ನಡೆಸಿದರು. ಯಾವುದೇ ಕಾರ್ಯಕ್ಕೂ ಮುನ್ನಾ  ಶ್ರೀ ಮಠಕ್ಕೆ ಭೇಟಿ ಕೊಟ್ಟು, ಪರಮಪೂಜ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಳ್ಳುವುದು ಸಂಪ್ರದಾಯವಾಗಿದೆ. ಚುನಾವಣೆಯ ಮೊದಲು ಇಲ್ಲಿಗೆ ಬಂದು ಆಶೀರ್ವಾದ ಪಡೆದು ಕೊಂಡಿದ್ದೆ. ಈಗ ಗೆದ್ದ ಮೇಲೆ ಬಂದು ಅದರಲ್ಲೂ ವಿಶೇಷವಾಗಿ ಸಚಿವರಾಗಿ ಬಂದು ಆಶೀರ್ವಾದ ಪಡೆದಿದ್ದೇನೆ. ರಾಜ್ಯಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದ್ದಾರೆ ಎಂದರು.
ಖಾತೆ ಹಂಚಿಕೆ ಸಿಎಂಗೆ ಬಿಟ್ಟಿದ್ದು
ಖಾತೆ ಹಂಚಿಕೆ ವಿಚಾರ ಈಗಾಗಲೇ ೧೦ ಜನರಿಗೆ ಸಚಿವ, ಉಪಮುಖ್ಯಮಂತ್ರಿ ಹೀಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇನ್ನುಳಿದವರಿಗೆ ಮೂರು ದಿನ ಆದ ಮೇಲೆ ಸಚಿವ ಸ್ಥಾನ ಕೊಡಬಹುದು ಅಂತ ಅಂದುಕೊಂಡಿದ್ದೇನೆ. ಇನ್ನು ೨೪, ೨೫ ಸಚಿವರ ಆಯ್ಕೆಯಾಗ ಬೇಕು. ಬಹುಶಃ ಅದೆಲ್ಲಾ ಆದ ಮೇಲೆ ಮುಖ್ಯಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡುವ ಚಿಂತನೆ ಇರಬಹುದು. ಅಥವಾ ಈಗಲೇ ಮಾಡಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾರಿಗೆ ಯಾವ ಖಾತೆ ಕೊಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಪರಮೇಶ್ವರ್ ತಿಳಿಸಿದರು.