Saturday, 23rd November 2024

ತಾಯಿಯು ದೇವರು ಆದ ಕಥೆ

ಹಿಂದಿರುಗಿ ನೋಡಿದಾಗ

ಭ್ರೂಣ ವಿಜ್ಞಾನವು (ಎಂಬ್ರಯಾಲಜಿ) ತಾಯಿಯ ಗರ್ಭದ ಒಳಗೆ ಭ್ರೂ ಣದ ಬೆಳವಣಿಗೆಗೆ ಸಂಬಂಧಿಸಿದ ವಿಜ್ಞಾನ. ಜೀವಸೃಷ್ಟಿ, ಜಗತ್ತಿನ ಪರಮ ಚೋದ್ಯಗಳಲ್ಲಿ ಒಂದು. ನಮ್ಮ ಪೂರ್ವಜರಿಗೆ ಜೀವವು ಹೇಗೆ ಉತ್ಪತ್ತಿಯಾಗುತ್ತದೆ ಎನ್ನುವುದರ ಬಗ್ಗೆ ಲವಲೇಶ ಜ್ಞಾನವಿರಲಿಲ್ಲ. ಈ ಅರಿವು ಕ್ರಮವಾಗಿ ಬೆಳೆದು ಬಂದ ಬಗೆ ಹಾಗೂ ಇಂದು ವಿಜ್ಞಾನಿಗಳು ಭ್ರೂಣವನ್ನು ತಾಯಿಯ ಗರ್ಭದಿಂದ ಹೊರಗೆ, ಪ್ರಯೋಗಾಲಯದಲ್ಲಿ ಬೆಳೆಯುವ ಸಾಧ್ಯತೆಯ ವರೆಗಿನ ಬೆಳವಣಿಗೆ ಅಗಾಧ ಹಾಗೂ ಅತ್ಯಂತ ಕುತೂಹಲಕರ.

ಭ್ರೂಣ ವಿಜ್ಞಾನವು ಮಾನವ ಜನಾಂಗದಷ್ಟೇ ಹಳೆಯದು. ಪ್ರಸವದ ಮೂಲಕ ಸಂತಾನ ವರ್ಧನೆಯು ನಡೆಯುವ ವಿಚಾರವು ನಮ್ಮ ಪೂರ್ವಜರ ಗಮನಕ್ಕೆ ಯಾವಾಗ ಬಂದಿತು? ಇದನ್ನು ನಿಖರವಾಗಿ ಹೇಳುವುದು ಕಷ್ಟ. ಆದರೆ ಲಭ್ಯ ದಾಖಲೆಯ ಅನ್ವಯ ಅದು ಕ್ರಿ.ಪೂ. ೨೮,೦೦೦-ಕ್ರಿ.ಪೂ. ೨೨,೦೦೦ ವರ್ಷಗಳಷ್ಟು ಹಿಂದೆ ಹೋಗುತ್ತದೆ. ಈ ಅವಽಯಲ್ಲಿ ರಚನೆಗೊಂಡ ಗುಹಾಚಿತ್ರಗಳು ಹಾಗೂ ಶಿಲ್ಪಗಳು ಈ ಬಗ್ಗೆ ಮೂಲಭೂತ ಮಾಹಿತಿಯನ್ನು ಒದಗಿಸುತ್ತವೆ. ತಾಯಿಯು ಹೊಚ್ಚ ಹೊಸ ಜೀವಕ್ಕೆ ಜನ್ಮ ನೀಡುವುದು, ಅವರಿಗೆ ಪವಾಡ ಸದೃಶವಾಗಿ ಕಂಡಿದ್ದರೆ ಅಚ್ಚರಿಪಡ ಬೇಕಾಗಿಲ್ಲ.

ನಮ್ಮ ಪೂರ್ವಜರು ತಮ್ಮ ಅನಿಸಿಕೆಗಳನ್ನು ಗುಹಾಚಿತ್ರಗಳಲ್ಲಿ ದಾಖಲಿಸಿದರು. ಅವರಿಗೆ ಪ್ರಸವಿಸುವ ತಾಯಿಯು ದೈವಸ್ವರೂಪಗಳಿಗೆ ಕಂಡಳು (ನಮ್ಮ ಪೂರ್ವಜರ ಪಾಲಿಗೆ ಪ್ರಾಕೃತಿಕ ಶಕ್ತಿಗಳೇ ದೇವರಾದರು. ಸೂರ್ಯ, ಚಂದ್ರ, ಮಳೆ, ಗಾಳಿ, ಸಿಡಿಲು, ಗುಡುಗು ಇತ್ಯಾದಿಗಳು ಅವನನ್ನು ಭೀತಗೊಳಿಸಿದ್ದವು. ಆ ಭೀತಿಯೇ ಗೌರವವಾಗಿ ಬದಲಾವಣೆಯಾಗಿತ್ತು.
ಇವೆಲ್ಲವನ್ನು ಅವನಿಗೆ ಅರ್ಥವಾಗದ, ಅವನ ತಿಳಿವಳಿಕೆಯನ್ನು ಮೀರಿದ ಘಟನೆಗಳಾಗಿದ್ದವು. ಹಾಗಾಗಿ ಅವೆಲ್ಲವೂ ದೈವಸ್ವ ರೂಪವಾದವು. ತಾಯಿಯ ಪ್ರಸವ ಸಾಮರ್ಥ್ಯವೂ ಅವನಿಗೆ ವಿಶೇಷವಾಗಿ ಕಂಡು ಬಂದು, ಆಕೆಗೆ ದೈವದ ಸ್ಥಾನವನ್ನು ನೀಡಿದ್ದರೆ, ಅಚ್ಚರಿಪಡಬೇಕಾಗಿಲ್ಲ).

ಹಾಗಾಗಿ ಮಾತೃಶಿಲ್ಪಗಳನ್ನು ಕಡೆದ. ಮಾತೃದೇವತೆಯು ಫಲವಂತಿಕೆಯ ಸಂಕೇತ. ಮೃದು ಕಲ್ಲು, ಮೂಳೆ, ದಂತ ಮತ್ತು ಸುಟ್ಟ ಆವೆಮಣ್ಣಿನಲ್ಲಿ ರೂಪುಗೊಂಡ ಈ ಶಿಲ್ಪಗಳಲ್ಲಿ ಸ್ತನಗಳು ಮತ್ತು ಭಗ ಪ್ರದೇಶವು ಪ್ರಧಾನವಾಗಿ ಎದ್ದು ಕಾಣುತ್ತಿದ್ದವು. ಇಂತಹ ಮಾತೃದೇವತೆಯ ವಿಗ್ರಹಗಳು ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ಕಂಡು ಬಂದಿರುವಂತೆ, ನಮ್ಮ ಸಿಂಧು-ಸರಸ್ವತಿ ಸಂಸ್ಕೃತಿಯಲ್ಲೂ ಕಂಡುಬಂದಿವೆ. ಭೂಮಿಯ ಯಾವುದೇ ಭಾಗದಲ್ಲಿರಲಿ, ಮನುಷ್ಯನ ಮನಸ್ಸು ಏಕರೂಪವಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.

ತಾಯಿಯು ಮಗುವನ್ನು ಹೇಗೆ ಪ್ರಸವಿಸುತ್ತಾಳೆ ಎನ್ನುವ ವಿಚಾರವು ಬಹುಶಃ ಅವರಿಗೆ ನಿಗೂಢವಾಗಿದ್ದಿರಬೇಕು. ಸಂಭೋಗದ ಫಲವಾಗಿ ಸಂತಾನ ವರ್ಧನೆಯಾಗುತ್ತದೆ ಎನ್ನುವ ವಿಚಾರವು ಬಹುಶಃ ಅವರಿಗೆ ತಿಳಿದಿರಲಾರದು. ಅಂದಿನ ದಿನಗಳಲ್ಲಿ ಒಂದು ಸಮುದಾಯದಲ್ಲಿದ್ದ ಹೆಣ್ಣು ಮಕ್ಕಳೆಲ್ಲ ಸರಿಸುಮಾರು ಹುಣ್ಣಿಮೆಯಂದು ತಮ್ಮ ಅಂಡಗಳನ್ನು ಉತ್ಸರ್ಜಿಸುತ್ತಿದ್ದರು. ಹಾಲು ಚೆಲ್ಲಿದಂತೆ ಇರುವ ಹುಣ್ಣಿಮೆಯ ಬೆಳಕು ಅವರನ್ನು ಸಂಭೋಗದಲ್ಲಿ ತೊಡಗಲು ಪ್ರೇರೇಪಿಸುತ್ತಿತ್ತು.

ಹೀಗೆ ಸಂಭೋಗವು ನಡೆದು, ತಿಂಗಳಾದ ಮೇಲೆ ಮಗುವಿನ ಪ್ರಸವವಾಗುತ್ತಿತ್ತು. ಹಾಗಾಗಿ ೯ ತಿಂಗಳ ಹಿಂದೆ ನಡೆದ ಸಂಭೋಗವೇ, ಸಂತಾನವರ್ಧನೆಗೆ ಕಾರಣ ಎನ್ನುವ ತಿಳಿವಳಿಕೆಯು ಬಹುಶಃ ಅವರಿಗೆ ತಿಳಿದಿರಲಾರದು. ಮಗುವನ್ನು ಹೆರುವುದು ತಾಯಿಯಾದವಳಿಗೆ ದೈವದತ್ತವಾಗಿ ದೊರೆತ ಕೊಡುಗೆ ಎಂದೇ ಅವರು ಭಾವಿಸಿದ್ದಿರಬೇಕು.

ಕ್ರಿ.ಪೂ. ೧೧,೦೦೦ ವರ್ಷಗಳ ಆಸುಪಾಸಿನಲ್ಲಿ ನಮ್ಮ ಪೂರ್ವಜರು ಅಲೆಮಾರಿ ಬದುಕನ್ನು ತ್ಯಜಿಸಿದರು. ಫಲವತ್ತಾದ ನದಿ ಬಯಲುಗಳಲ್ಲಿ ಬೀಡು ಬಿಟ್ಟರು. ಕೃಷಿ ಮತ್ತು ಪಶುಪಾಲನೆಯಲ್ಲಿ ತೊಡಗಿದರು. ಪಶುಗಳ ಲೈಂಗಿಕ ವರ್ತನೆಯನ್ನು ನಿಕಟ ವಾಗಿ ಗಮನಿಸಿದರು. ಪ್ರಾಣಿಗಳಿಗೆ ನಿರ್ದಿಷ್ಟ ಅವಧಿಗೊಮ್ಮೆ ಬೆದೆಕಾಲ (ಈಸ್ಟ್ರಸ್ ಸೈಕಲ್) ಬರುತ್ತಿತ್ತು. ಆ ಸಮಯದಲ್ಲಿ ಗಂಡು ಮತ್ತು ಹೆಣ್ಣು ಪ್ರಾಣಿಗಳು ಮಿಲನಕ್ಕಾಗಿ ಹಾತೊರೆಯುತ್ತಿದ್ದವು. ಮಿಲನದ ನಂತರ ಗರ್ಭವು ಬೆಳೆಯುತ್ತಾ ಹೋಗು ತ್ತಿತ್ತು. ಕೊನೆಗೆ ಅವು ಮರಿಗಳನ್ನು ಹೆರುತ್ತಿದ್ದವು. ಇದನ್ನು ನಮ್ಮ ಪೂರ್ವಜರು ಅಧ್ಯಯನ ಮಾಡಿದರು. ಪ್ರಾಣಿಗಳಲ್ಲಿ ನಡೆಯುವ ಹಾಗೆ, ಮನುಷ್ಯರಲ್ಲಿಯೂ ಗಂಡು-ಹೆಣ್ಣುಗಳ ಮಿಲನದ ಫಲವಾಗಿಯೇ ಸಂತಾನವರ್ಧನೆಯಾಗುತ್ತದೆ ಎನ್ನುವ ತಿಳಿವು ಅವರಿಗೆ ಕ್ರಮೇಣ ದೊರೆಯಿತು.

ಈ ತಿಳಿವೇ ಮಾತೃದೇವತೆಯ ಮಹತ್ವವು ಕ್ರಮೇಣ ಕಡಿಮೆಯಾಗಲು ಕಾರಣವಾದದ್ದು ಮಾತ್ರ ವಿಪರ್ಯಾಸ. ಸೀ ಪುರುಷರ ಮಿಲನದಲ್ಲಿ, ಇಬ್ಬರ ಕಣ್ಣಿಗೆ ಕೇವಲ ಪುರುಷನ ವೀರ್ಯವು ಮಾತ್ರ ಕಾಣುತ್ತಿತ್ತು. ಸೀಯರ ಅಂಡವು ಕಾಣುತ್ತಿರಲಿಲ್ಲ.

ಹಾಗಾಗಿ ಹೆಣ್ಣು ಕೇವಲ ಕ್ಷೇತ್ರ ಮಾತ್ರ; ಗಂಡು ಅಲ್ಲಿ ಬೀಜವನ್ನು ಬಿತ್ತುತ್ತಾನೆ. ಆ ಬೀಜವೇ ಮೊಳೆತು ಸಂತಾನವಾಗುತ್ತದೆ. ಹಾಗಾಗಿ ಸಂತಾನವರ್ಧನೆಯ ಪಾತ್ರದಲ್ಲಿ ಗಂಡಿನ ಪಾತ್ರವು ಹಿರಿದು (ಕೃಷಿಯಿಂದ ದೊರೆತ ಜ್ಞಾನ) ಎಂಬ ಕಲ್ಪನೆಯು ಭಾರತೀಯರಲ್ಲಿ ಮಾತ್ರವಲ್ಲ ಇತರ ಧರ್ಮಗಳಲ್ಲೂ ಕಂಡುಬರುವುದನ್ನು ಗಮನಿಸಬಹುದು. ಈಜಿಪ್ಟಿಯನ್ ಪುರಾಣಗಳಲ್ಲಿ ಅತುಮ್ -ರೇ ಎನ್ನುವ ಪುರುಷ ದೈವ. ಇವನು ಮುಷ್ಟಿಮೈಥುನದ ಮೂಲಕ ತನ್ನ ವೀರ್ಯವನ್ನು ಹೊರಚೆಲ್ಲಿ ಭೂಮಿಯನ್ನು,
ದೇವಾನುದೇವತೆಗಳನ್ನು ಸೃಜಿಸಿದ. ಕ್ರೈಸ್ತಧರ್ಮದ ಬುಕ್ ಆಫ್ ಜೆನೆಸಿಸ್‌ನಲ್ಲಿ ಬರುವ ಪ್ರಸಂಗ.

ಓನನ್ ತನ್ನ ಅತ್ತಿಗೆಯು ಗರ್ಭವತಿಯಾಗುವುದನ್ನು ತಡೆಗಟ್ಟಲು ತನ್ನ ಬೀಜಗಳನ್ನು ನೆಲದ ಮೇಲೆ ಚೆಲ್ಲಿದ ಎಂಬ ವಿವರಣೆಯು ದೊರೆಯುತ್ತದೆ. ಯೂರೋಪ್ ಖಂಡದಲ್ಲಿ ಇತಿಹಾಸ ಎನ್ನುವುದು ನಾಲ್ಕು ಘಟ್ಟಗಳಲ್ಲಿ ಕಂಡುಬರುತ್ತದೆ. ಮೊದಲನೆಯದು ಕ್ರಿ.ಪೂ. ೮೦೦ ಕ್ಕಿಂತಲೂ ಹಿಂದಿನ ಇತಿಹಾಸಪೂರ್ವ ಕಾಲ. ಎರಡನೆಯದು ಅಭಿಜಾತ ಐತಿಹಾಸಿಕ ಕಾಲ. ಇದು ಕ್ರಿ.ಪೂ. ೮೦೦-ಕ್ರಿ.ಶ. ೫೦೦ ರ ನಡುವೆ ಕಂಡುಬರುತ್ತದೆ.

ಮೂರನೆಯದು ಐತಿಹಾಸಿಕ ಮಧ್ಯಯುಗ. ಇದು ಕ್ರಿ.ಶ. ೫೦೦-ಕ್ರಿ.ಶ. ೧೫೦೦ ರವರೆಗೆ ನಡೆಯುತ್ತದೆ. ಕ್ರಿ.ಶ. ೧೫೦೦ರ
ನಂತರದ ಕಾಲಘಟ್ಟವು ಆಧುನಿಕ ಯುಗಕ್ಕೆ ಸೇರುತ್ತದೆ. ಯೂರೋಪಿನ ಅಭಿಜಾತ ಐತಿಹಾಸಿಕ ಕಾಲಕ್ಕೆ ಸೇರಿದ ಗ್ರೀಕ್ ಸಂಸ್ಕೃತಿಯಲ್ಲಿ ಸಂತಾನವರ್ಧನೆಯನ್ನು ಸೂಚಿಸಲು ನಿಖರವಾದ ಶಬ್ದವಿರಲಿಲ್ಲ. ಇಂದು ಸಂತಾನ ವರ್ಧನೆಯನ್ನು ಸೂಚಿಸಲು ರಿ-ಪ್ರೊಡಕ್ಷನ್ ಎನ್ನುವ ಶಬ್ದವನ್ನು ಬಳಸುತ್ತೇವೆ.

ಇದು ಇತ್ತೀಚಿನ ಶಬ್ದ. ಆಗ ಸಂತಾನವರ್ಧನೆಗೆ ಪೀಳಿಗೆ, ಸಂತತಿ, ತಲೆಮಾರು ಎನ್ನುವ ಅರ್ಥದಲ್ಲಿ ಜೆನೆರೇಶನ್ ಎನ್ನುವ ಶಬ್ದವನ್ನು ಬಳಸುತ್ತಿದ್ದರು. ಆಧುನಿಕ ವೈದ್ಯಕೀಯದ ಪಿತಾಮಹ ಹಿಪ್ಪೋಕ್ರೇಟ್ಸ್ (ಕ್ರಿ.ಪೂ. ೪೬೦-ಕ್ರಿ.ಪೂ. ೩೭೦). ತನ್ನ ಸಮಕಾಲೀನ ಸಮಾಜದ ಮಹಾನ್ ಪ್ರತಿಭಾವಂತ. ಈತನು ಎರಡು ರೀತಿಯ ವೀರ್ಯಗಳ (ಸೆಮೆನ್) ಮಿಲನದಿಂದ ಪೀಳಿಗೆಯು ಮುಂದುವರಿಯುತ್ತದೆ ಎಂದು ಪ್ರತಿಪಾದಿಸಿದ. ಮೊದಲನೆಯ ವೀರ್ಯವು ಪುರುಷನ ಸ್ಖಲನದ ಮೂಲಕ ದೊರೆಯುತ್ತದೆ.

ಎರಡನೆಯ ವೀರ್ಯವು ಸೀಯರ ಆರ್ತವದಿಂದ, ಅಂದರೆ ಋತುಸ್ರಾವದ ಮೂಲಕ ಲಭ್ಯವಾಗುತ್ತದೆ ಎನ್ನುವುದು ಈತನ ವಾದ. ಈ ಎರಡು ವೀರ್ಯಗಳು ಸೇರಿದರೆ ಮಾತ್ರ ಪೀಳಿಗೆಯು ಮುಂದುವರಿಯುತ್ತದೆ ಎಂದು ಹೇಳಿದ. ಇದನ್ನು ಅಂದಿನ ಸಮಾಜವು ಒಪ್ಪಿತು. ಒಂದು ಶತಮಾನದ ನಂತರ ಗ್ರೀಕ್ ಸಂಸ್ಕೃತಿಯ ಮತ್ತೋರ್ವ ಪ್ರಬುದ್ಧ ಪ್ರತಿಭೆ ಅರಿಸ್ಟಾಟಲ್ (ಕ್ರಿ.ಪೂ. ೩೮೪-ಕ್ರಿ.ಪೂ. ೩೨೨) ಜನಿಸಿದ. ಇವನು ಭ್ರೂಣ ವಿಜ್ಞಾನಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಅಧ್ಯಯನವನ್ನು ಕೈಗೊಂಡ.

ಕ್ರಿ.ಪೂ. ೩೫೦ ರಲ್ಲಿ ಪ್ರಾಣಿಗಳ ಪೀಳಿಗೆಗೆ ಸಂಬಂಧಿಸಿದಂತೆ (ಆನ್ ಜೆನೆರೇಶನ್ ಆಫ್ ಅನಿಮಲ್ಸ್) ಎನ್ನುವ ಪುಸ್ತಕವನ್ನು
ಬರೆದ. ಬಹುಶಃ ಭ್ರೂಣ ವಿಜ್ಞಾನಕ್ಕೆ ಸಂಬಂಧಿಸಿದ ಹಾಗೆ, ಈತನೇ ಮೊದಲು ಅಧಿಕೃತ ಅಧ್ಯಯನವನ್ನು ನಡೆಸಿದ
ಎನ್ನಬಹುದು. ಇವನು ಅಂಡಜನನ (ಓವಿಪ್ಯಾರಿಟಿ), ಗರ್ಭಜನನ (ವೈವಿಪ್ಯಾರಿಟಿ) ಮತ್ತು ಗರ್ಭಾಂಡಜನನ (ಓವೋ ವೈವಿಪ್ಯಾರಿಟಿ) ಎಂಬ ಮೂರು ರೀತಿಯ ಜೆನೆರೇಶನ್‌ಗಳನ್ನು ವಿವರಿಸಿದ. ಅಂಡಜನನದಲ್ಲಿ ಹೆಣ್ಣು ಜೀವಿಯು ಮೊಟ್ಟೆಯನ್ನು ಇಡುತ್ತದೆ. ಅದಕ್ಕೆ ನಿರ್ದಿಷ್ಟ ದಿನಗಳವರೆಗೆ ಕಾವು ಕೊಡುತ್ತದೆ.

ಆನಂತರ ಮೊಟ್ಟೆಯೊಡೆದು ಮರಿಬರುತ್ತದೆ. ಗರ್ಭಜನನದಲ್ಲಿ ಭ್ರೂಣವು ತಾಯಿಯ ಒಡಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆದು, ನಂತರ ಪ್ರಸವದ ಮೂಲಕ ಜನನವಾಗುತ್ತದೆ. ಇಲ್ಲಿ ತಾಯಿ ಮತ್ತು ಮಗುವಿನ ನಡುವೆ ಹೊಕ್ಕಳುಬಳ್ಳಿಯಿರುತ್ತದೆ. ತಾಯಿಯ ಒಡಲಿನಲ್ಲಿರುವ ಎಲ್ಲ ಪೋಷಕಾಂಶಗಳು ಈ ಹೊಕ್ಕಳು ಬಳ್ಳಿಯ ಮೂಲಕ ಬೆಳೆಯುವ ಶಿಶುವಿಗೆ ಪೂರೈಕೆ ಯಾಗುತ್ತವೆ. ತನ್ಮೂಲಕ ಮಗುವಿನ ಆರೈಕೆಯನ್ನು ಮಾಡುತ್ತದೆ.

ಗರ್ಭಾಂಡಜನನದಲ್ಲಿ ಹೆಣ್ಣು ಜೀವಿಯು ಮೊಟ್ಟೆಯನ್ನು ರೂಪಿಸಿದರೂ, ಅದನ್ನು ತನ್ನ ದೇಹದಿಂದ ಹೊರಗೆ ಇಡುವುದಿಲ್ಲ. ತನ್ನ ದೇಹದಲ್ಲಿಯೇ ಉಳಿಸಿಕೊಳ್ಳುತ್ತದೆ. ಮೊಟ್ಟೆಯೊಳಗಿರುವ ಭ್ರೂಣವು ಸಂಪೂರ್ಣವಾಗಿ ಬೆಳೆದ ಮೇಲೆ, ಅದನ್ನು ಪ್ರಸವಿಸುತ್ತದೆ.
ಗರ್ಭಜನನದಲ್ಲಿರುವ ಹೊಕ್ಕಳುಬಳ್ಳಿಯಂತಹ ರಚನೆಯು ಇಲ್ಲಿರುವುದಿಲ್ಲ. ತಾಯಿ-ಮಗುವಿನ ನಡುವೆ ಜೈವಿಕ ಸಂಪರ್ಕ ಇರುವುದಿಲ್ಲ. ತಾಯಿಯು ಕೇವಲ ಭೌತಿಕ ರಕ್ಷಣೆಯನ್ನು ಮಾತ್ರ ಒದಗಿಸುತ್ತದೆ. ಈ ಅವಧಿಯಲ್ಲಿ ಮೊಟ್ಟೆಯೊಳಗೆ ಇರುವ ಹಳದಿಭಾಗವೇ ಭ್ರೂಣವನ್ನು ಪೋಷಿಸುತ್ತಿರುತ್ತದೆ. ಉದಾ: ನೆಕ್ಟೋಫ್ರೀನಾಯ್ಡೆ ಮತ್ತು ಯೂಲ್ಯೂಥೆರೋಡಕ್ಟೈಲಸ್ ಕುಲಗಳಿಗೆ ಸೇರಿದ ಹೆಣ್ಣು ಕಪ್ಪೆಯ ಮೊಟ್ಟೆಗಳ ಒಳಗೆಯೇ ಗೊದಮೊಟ್ಟೆಗಳು ಪೂರ್ಣಪ್ರಮಾಣದಲ್ಲಿ ಬೆಳೆದು, ಕೇವಲ ಕಪ್ಪೆಮರಿಗಳು ಮಾತ್ರ ಹೊರಬರುತ್ತವೆ.

ಹೀಗೆ ಭ್ರೂಣವಿಜ್ಞಾನದ ಅತ್ಯಂತ ಪ್ರಾಥಮಿಕ ಮಾಹಿತಿಯನ್ನು ಅರಿಸ್ಟಾಟಲ್ ನೀಡಿದ. ಅರಿಸ್ಟಾಟಲ್, ಪುರುಷನ ಬೀಜವು (ವೀರ್ಯ) ಶಿಶುವಿನ ಹುಟ್ಟಿಗೆ ಕಾರಣವೆಂದ. ಅರಗಿನ ಮೇಲೆ ಮುದ್ರೆಯನ್ನು ಒತ್ತಿದರೆ, ಹೇಗೆ ಮುದ್ರೆಯ ಚಿತ್ರವು ಅರಗಿನ ಮೇಲೆ ಮೂಡುವುದೋ, ಹಾಗೆಯೇ ಪುರುಷನು ಬೀಜವು ಸೀಯರ ಆರ್ತವದ ಮೂಲಕ ಹೊರಬರುವ ವಸ್ತು (ಮ್ಯಾಟರ್) ವಿಗೆ ರೂಪವನ್ನು ನೀಡುತ್ತದೆ ಎಂದ.

ಅರಿಸ್ಟಾಟಲ್ ಕೀಟಗಳಂತಹ ಕ್ಷುದ್ರಜೀವಿಗಳು ಸ್ವಯಂಜನನ (ಸ್ಪಾಂಟೇನಿಯಸ್ ಜೆನೆರೇಶನ್) ವಾಗುತ್ತವೆ ಅಂದರೆ ಸ್ವಯಂ
ಉದ್ಭವವಾಗುತ್ತವೆ ಎಂದು ಹೇಳಿದ. ಹೀಗೆ ಒಪ್ಪುಗಳ ನಡುವೆ ತಪ್ಪುಗಳನ್ನೂ ಪ್ರತಿಪಾದಿಸಿದ. ಕ್ರಿ.ಶ.೨ನೆಯ ಶತಮಾನ. ರೋಮ್ ಸಾಮ್ರಾಜ್ಯದಲ್ಲಿ ಗ್ಯಾಲನ್ (ಕ್ರಿ.ಶ. ೧೨೯-ಕ್ರಿ.ಶ. ೨೦೦) ಎಂಬ ಮಹಾ ವೈದ್ಯ, ಶಸವೈದ್ಯ ಮತ್ತು ದಾರ್ಶನಿಕ ಹುಟ್ಟಿದ. ಇವನು ಹಿಪ್ಪೋಕ್ರೇಟ್ಸ್ ಮಂಡಿಸಿದ ಸಂತಾನ ವರ್ಧನೆಗೆ ಪುರುಷ ವೀರ್ಯ ಮತ್ತು ಸೀ ವೀರ್ಯ ಕಾರಣವಾಗುತ್ತವೆ ಎಂಬ ವಿಚಾರವನ್ನು ಒಪ್ಪಿದ. ಇವನು ಮಾಡಿದ ಒಂದೇ ಒಂದು ತಪ್ಪು ಎಂದರೆ ಮನುಷ್ಯರ ಶರೀರವನ್ನು ವಿಚ್ಛೇದಿಸಿ
ಅಧ್ಯಯನವನ್ನು ಮಾಡದೆ, ಮಂಗ-ಹಂದಿಗಳನ್ನು ವಿಚ್ಛೇದಿಸಿ, ಅವುಗಳ ರಚನೆಯನ್ನೇ ಮನುಷ್ಯರಿಗೆ ಅನ್ವಯಿಸಿದ್ದು. ಪುರುಷರ ಜನನಾಂಗವೇ ತಿರುಗಮುರುಗವಾಗಿ ಸೀಯರ ಜನನಾಂಗವಾಗಿ, ಅವರ ದೇಹದೊಳಗೆ ಅಡಕವಾಗಿದೆ ಎಂಬ ಹೇಳಿಕೆಯನ್ನು ನೀಡಿದ.

ಇವನ ಈ ಹೇಳಿಕೆಗಳನ್ನು ಸರಿಸುಮಾರು ೧೨೦೦ ವರ್ಷಗಳವರೆಗೆ ಯೂರೋಪ್ ಖಂಡದ ವೈದ್ಯರು ಮನ್ನಿಸಿ ಒಪ್ಪಿದರು.
ಕೊನೆಗೆ ೧೫೪೩ರಲ್ಲಿ ಆಂಡ್ರಿಯಸ್ ವೆಸಾಲಿಯಸ್ (೧೫೧೪-೧೫೬೪) ಡಿ ಹ್ಯೂಮನಿ ಕಾರ್ಪೊರಿಸ್ -ಬ್ರಿಕ ಗ್ರಂಥವನ್ನು ಪ್ರಕಟಿಸಿದಾಗ, ಗ್ಯಾಲನ್ ಅಪಾರ ತಪ್ಪುಗಳನ್ನು ಮಾಡಿದ್ದಾನೆ ಎಂಬ ಸತ್ಯವು ಜಗಜ್ಜಾಹೀರಾಯಿತು. ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್ ಮಂಡಿಸಿದ ಸೀವೀರ್ಯದ ಅಸ್ತಿತ್ವಕ್ಕೆ ಪುರಾವೆಯು ದೊರೆಯದ ಕಾರಣ, ಅರಿಸ್ಟಾಟಲನ ವಿಚಾರವೇ ಎಲ್ಲೆಡೆ ಸ್ವೀಕೃತವಾಗಿತ್ತು. ಅರಬ್ ವೈದ್ಯರೂ ಸಹ ಗ್ರೀಕರ ತಿಳಿವನ್ನೇ ಅನುಕರಿಸುತ್ತಿದ್ದರು.