Thursday, 12th December 2024

ಅಂಬಿ ಎಂಬ ಮಾನವತೆಯ ಮಹಾಪ್ರವಾಹ

ತನ್ನಿಮಿತ್ತ

ಬನ್ನೂರು ಕೆ.ರಾಜು

ಕನ್ನಡದ ಚಿತ್ರರಂಗದ ‘ಕಲಿಯುಗ ಕರ್ಣ’ ಅಂಬಿ ಬದುಕಿರುತ್ತಿದ್ದರೆ ೭೧ ವರ್ಷ ತುಂಬುತ್ತಿತ್ತು. ನಿನ್ನೆಯಷ್ಟೇ (೨೯ ಮೇ ೧೫೨) ಅವರ ಇನ್ನೊಂದು ಜನ್ಮದಿನ ಬಂದು ಹೋಗಿದೆ. ಅಸಾಮಾನ್ಯ ತಾರೆಯಾಗಿದ್ದರೂ, ಸಾಮಾನ್ಯ ವ್ಯಕ್ತಿಯೊಬ್ಬ.

ಧನಕನಕಾದಿಗಳು ಕಾಲ ಬುಡದ ಬಂದು ಬಿದ್ದಿದ್ದರೂ ತಾವೊಬ್ಬರೇ ಗಂಟು ಮಾಡಿಕೊಳ್ಳುವ ಸ್ವಾರ್ಥವನ್ನು ರೂಢಿಸಿಕೊಳ್ಳಲಿಲ್ಲ. ಬದಲಿಗೆ ತಮ್ಮೆಲ್ಲ ಸಂಪತ್ತನ್ನ ಎಲ್ಲರಿಗೂ ಹಂಚಿ ಅದರ ಮಹದಾನಂದ ಕಂಡರು. ಮುಳುಗಿ ಹೋಗುತ್ತಿದ್ದ ಅದೆಷ್ಟೋ ಮಂದಿಯ ಬದುಕನ್ನು ಮೇಲೆತ್ತಿದರು.ಎಂತೆಂಥವರ ಮೇಲಿದ್ದ ಸಾಲದ ನೊಗ ವನ್ನು ಎತ್ತಿ ಬಿಸಾಕಿದರು. ಇವತ್ತಿಗೂ ಗಾಂಧಿ ನಗರದಿಂದ ಇವರಿಗೆ ಬರಬೇಕಾದ ಬಾಕಿ ಹಣ ಬಹಳ. ಅವರ ಸಿನಿಮಾ ದುನಿಯಾವೇ ಅಂಥಾದ್ದು. ಬೌನ್ಸ್ ಆಗಿದ್ದ ಚೆಕ್ಕುಗಳನ್ನು ಕೊಟ್ಟವರಿಗೇ ವಾಪಸ್ ಕೊಟ್ಟು ‘ಬದಿಕ್ಕಳಿ ಹೋಗಿ’ ಎಂದ ದಾನಶೂರರವರು.

ಸ್ನೇಹಕ್ಕೆ, ಪ್ರೀತಿಗೆ, ವಿಶ್ವಾಸಕ್ಕೆ, ತ್ಯಾಗಕ್ಕೆ, ಮನುಷ್ಯತ್ವಕ್ಕೆ ಹೆಸರಾದ ಡಾ. ಅಂಬರೀಷ್ ಅವರ ಋಣದಲ್ಲಿ ಬಾಲಿವುಡ್ ಬಾದ್‌ಶಹಾ ಅಮಿತಾಬ್ ಬಚ್ಚನ್, ಇಂಡಿಯನ್ ಕ್ರಿಕೆಟ್ ತಾರೆ ಮಹೇಂದ್ರಸಿಂಗ್ ಧೋನಿ ಅವರು ಗಳಂಥವರೂ ಇzರೆಂದರೆ ಯಾರಿಗೇ ಆದರೂ ಅರ್ಥವಾಗುತ್ತದೆ ಅವರ ಕೊಡುಗೈ ಗುಣದ ಮೇರು ವ್ಯಕ್ತಿತ್ವದ ಮಹಿಮೆ. ಒಂದು ಕಾಲದಲ್ಲಿ ಬೆಳ್ಳಿತೆರೆ ಮೇಲೆ ಹುಲಿಯಂತೆ ಮೆರೆದ ‘ಟೈಗರ್’ ಪ್ರಭಾಕರ್ ಅನಾರೋಗ್ಯಪೀಡಿತನಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸಂದರ್ಭ, ಆಸ್ಪತ್ರೆಯ ಬಿಲ್ ಪಾವತಿಸಿ ಆ ಮೇರು ನಟನ ಶವ ಹೊತ್ತು ತಂದು, ಸ್ವತಃ ನಿಂತು ಅಂತ್ಯಕ್ರಿಯೆ ನೋಡಿಕೊಂಡರು.

ಹಾಗೆಯೇ ಖ್ಯಾತ ಖಳನಟ, ಸುಧೀರ್‌ಗೆ ಸ್ನೇಹಿತನಾಗಿ ಮನೆಕಟ್ಟಲು ಮಾಡಿ ಸಹಾಯಕ್ಕೆ ಪ್ರತಿಯಾಗಿ, ಆ ಮನೆಗೆ ‘ಅಂಬಿ
ನಿಲಯ’ವೆಂದೇ ಹೆಸರಿಟ್ಟಿದ್ದಾರೆ. ಬಾಲಿವುಡ್‌ನ ಮಹಾತಾರೆ ಅಮಿತಾಬ್, ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆಸಿ ತೊಂದರೆಗೆ ಸಿಲುಕಿ ತೊಳಲಾಡುತ್ತಿದ್ದರು. ವಿಷಯ ತಿಳಿದ ಅಂಬರೀಶ್ ಕ್ಷಣಾರ್ಧದಲ್ಲಿ ಆಪದ್ಭಾಂದವನಾಗಿ ಧಾವಿಸಿ ಬಂದು ಅಮಿತಾಬ್ ಪೊಲೀಸ್ ಇಲಾಖೆಗೆ ಕಟ್ಟ ಬೇಕಿದ್ದ ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಟ್ಟಿದ್ದರು.

ಹೀಗೆ ಇತರರ ಸಾವು- ನೋವಿಗೆ, ಬದುಕು-ಬೆಳಕಿಗೆ ಸದಾ ಉದಾರಶೀಲನಾಗಿ ಸ್ಪಂದಿಸುತ್ತ ನೆರವನ್ನೀಯುತ್ತಿದ್ದ ಅಂಬರೀಷ್ ಅವರ ಹಿಂದೆ ಇಂತಹ ಅಸಂಖ್ಯಾತ ಘಟನೆ ಗಳು, ದೃಶ್ಯಗಳಿವೆ. ಇಂಥ ಒಂದೊಂದು ದೃಶ್ಯಗಳೂ, ಒಂದೊಂದು ಕಥೆಗಳೂ ಯಾವ ಸಿನಿಮಾಕ್ಕೂ ಕಡಿಮೆ ಏನಿಲ್ಲ! ತನ್ನ ಚಿತ್ರ ತೆಗೆದು ನಷ್ಟಕ್ಕೀಡಾದ ನಿರ್ಮಾಪಕನಿಗೆ ಆತನ ಮತ್ತೊಂದು ಚಿತ್ರದಲ್ಲಿ ಸಂಭಾವನೆ ಪಡೆಯದೇ ನಟಿಸಿ ಅವನಿಗೆ ಲಾಭ ಮಾಡಿಕೊಡುವುದು, ಕಷ್ಟದಲ್ಲಿರುವ ಸಹ ನಟ-ನಟಿಯರಿಗೆ ತಮ್ಮ ಕೈಲಾದ ಸಹಾಯ ಮಾಡುವುದರಿಂದ ಹಿಡಿದು ಕತ್ತಲಲ್ಲಿರುವ ಬಡ ಲೈಟ್‌ಬಾಯ್‌ಗಳ ಕಷ್ಟ ಕಳೆವ ತನಕ ಅಂಬರೀಶ್‌ರ ಹೃದಯ ವೈಶಾಲ್ಯದ ಘಟನೆಗಳು ನೂರಾರು ಇವೆ.

ಸಾಹಸಸಿಂಹ ಡಾ.ವಿಷ್ಣುವರ್ಧನ್ ನಿಧನರಾದ ಸಂದರ್ಭದಲ್ಲಿ, ವಿಷ್ಣುವಿನ ಉಸಿರು ನಿಂತಗಳಿಗೆಯಿಂದ ಅವರ ಅಂತ್ಯಕ್ರಿಯೆ ಮುಗಿಯುವವರೆಗೂ ತನ್ನ ಜೀವದ ಗೆಳೆಯ ವಿಷ್ಣುವಿನ ಸಾವಿಗೊಂದು ಮಹಾಗೌರವ ದೊರಕಿಸಿ ಕೊಡಲು ಅಂಬರೀಷ್ ಸ್ಪಂದಿಸಿದ ರೀತಿಯನ್ನು ಇಡೀ ನಾಡೇ ಕೊಂಡಾಡಿದ್ದು ಇನ್ನೂ ನಮ್ಮ ಕಣ್ಮುಂದೆಯೇ ಇದೆ. ಸ್ನೇಹಕ್ಕೊಂದು ಹೊಸ ಭಾಷ್ಯ ಬರೆದು ತಮ್ಮ ಆಪ್ತಮಿತ್ರ ಡಾ. ವಿಷ್ಣುವರ್ಧನ್ ಅವರ ಸಾವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಚರಿತ್ರೆಯಾಗಿಸಿ ಎಳೆ ಮಗುವಿನಂತೆ ಗಳಗಳನೆ ಅತ್ತ ಅಂಬರೀಷ್ ವ್ಯಕ್ತಿತ್ವ ಎಷ್ಟು ಎತ್ತರದ್ದೊಂದು ಆವತ್ತು ಜಗಜ್ಜಾಹೀರಾಗಿತ್ತು.

ಹಾಗಂತ ಬರೀ ಚಿತ್ರರಂಗದವರ ಪಾಲಿಗೆ ಮಾತ್ರ ಅಂಬರೀಷ್ ಕೊಡುಗೈ ದೊರೆಯಾಗಿರಲಿಲ್ಲ. ಚಿತ್ರರಂಗದಿಂದಾ
ಚೆಗೂ ಇವರ ನೆರವಿನ ಹಸ್ತ ಚಾಚಿಕೊಂಡಿದೆ. ಮಹೇಂದ್ರಸಿಂಗ್ ಧೋನಿ ಅವರು ತಮ್ಮ ಕ್ರಿಕೆಟ್ ಜೀವನದ ಆರಂಭ
ಕಾಲದಲ್ಲಿ ಕಷ್ಟದಲ್ಲಿದ್ದುದನ್ನು ಅರಿತ ಅಂಬರೀಷ್, ಧೋನಿ ಕ್ರಿಕೆಟ್ ಪಂದ್ಯ ಆಡಲು ಮೊದಲ ಬಾರಿಗೆ ಬೆಂಗಳೂರಿಗೆ
ಬಂದಿzಗ ಚಿನ್ನಸ್ವಾಮಿ ಕ್ರೀಡಾಂಗಣದ ಅವರಿಗೆ ದೊಡ್ಡ ಮೊತ್ತದ ಹಣ ನೀಡಿದ್ದರು. ಅಷ್ಟೇ ಅಲ್ಲ ಅವರ ಕ್ರಿಕೆಟ್ ಜೀವನದ ಮುಂದಿನ ದಿನಗಳು ಇನ್ನೂ ಯಶಸ್ವಿಯಾಗಲೆಂದು ಅಭಿನಂದಿಸಿದ್ದರು.

ಹಾಗೆಯೇ ರಾಜಕೀಯ ಭಿನ್ನಾಭಿಪ್ರಾಯದಿಂದ ಸಿದ್ದರಾಮಯ್ಯ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಸಂದರ್ಭವದು. ಆಗ ಕರ್ನಾಟಕವಷ್ಟೇ ಅಲ್ಲದೆ ಇಡೀ ದೇಶವೇ ಸಿದ್ದರಾಮಯ್ಯನ ಸೋಲು ಗೆಲುವಿನತ್ತ ತಿರುಗಿ ನೋಡುವಂತೆ ೨೦೦೬ರಲ್ಲಿ ನಡೆದ ಮೈಸೂರು ಜಿಯ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಲವು ಹಳ್ಳಿಗಳಿಗೆ ಸಿದ್ದ ರಾಮಯ್ಯ ಚುನಾವಣಾ ಪ್ರಚಾರಕ್ಕೆ ಬಾರದಂತೆ ಆ ಹಳ್ಳಿ ಗರು ತಡೆಯೊಡ್ಡಿದ್ದರು. ಅಂಥಾ ಕಷ್ಟಕರ, ಕ್ಲಿಷ್ಟಕರ ಸಮಯದಲ್ಲಿ ಸೋಲುವ ಭೀತಿಯಿಂದ ಸಿದ್ದರಾಮಯ್ಯ ಕಂಗಳಲ್ಲಿ ಕಂಬನಿ ತುಂಬಿಕೊಂಡು ಅಂದು ಕೇಂದ್ರ ಸಚಿವ ರಾಗಿದ್ದ ಅಂಬಿಯ ಮೊರೆ ಹೋದರು.

ಆಗ ಅಂಬಿ ಎಂದಿನ ತಮ್ಮ ರೆಬಲ್ ಸ್ಟೈಲ್‌ನಲ್ಲಿ ‘ಏಯ್ ಬನ್ರಿರೀ, ಯಾವೂರೂ ಯಾರಪ್ಪಂದೂ ಅಲ್ಲ, ಅದ್ಯಾವನು ಅದೇನ್ ಮಾಡ್ಕೋ ತಾನೋ ನಾನೂ ನೋಡ್ತೀನಿ’ ಎಂದವರೇ ಹಳ್ಳಿಗಳತ್ತ ನಡೆದೇ ಬಿಟ್ಟರು. ಅಂಬಿಯನ್ನು ಕಂಡ ಮಂದಿ ಸಿದ್ದ
ರಾಮಯ್ಯನವರಿಗೆ ನಿರ್ಬಂಽಸಿದ್ದ ದಾರಿಯನ್ನು ಮುಕ್ತ ಗೊಳಿಸಿ ತಮ್ಮ ಹಳ್ಳಿಗಳಿಗೆ ಬರಮಾಡಿಕೊಂಡರು. ಆ ಉಪ
ಚುನಾವಣೆ ಯಲ್ಲಿ ಸಿದ್ದರಾಮಯ್ಯನವರು ಕೇವಲ ೨೫೭ ಮತಗಳ ಅಂತರದಿಂದ ಗೆದ್ದಿದ್ದರು. ಅಂದು ಅಂಬಿ ಸಿದ್ದರಾಮಯ್ಯನ ಬೆನ್ನಿಗೆ ನಿಲ್ಲದಿದ್ದರೆ ಅವರ ರಾಜಕೀಯ ಅಂದೇ ಕೊನೆಯಾಗುತ್ತಿತ್ತು.

ಅಂತೆಯೇ ಸಾರ್ವಜನಿಕ ಸೇವೆಯಲ್ಲಿ ಒಂದು ಕೈ ಮುಂದೆಯೇ ಇದ್ದ ಅವರು, ಬಡ ವಿದ್ಯಾರ್ಥಿಗಳ ಓದಿಗೆ ಸಹಾಯ, ಬಡ ರೈತರಿಗೆ ನೆರವು, ನಿರ್ಗತಿಕ ನಿರಾಶ್ರಿತರಿಗೆ ಆಶ್ರಯ, ಕೈಲಾಗದ ಅಂಗವಿಕಲರಿಗೆ ಸಹಾಯ… ಹೀಗೆ ಅವರಿವರೆಂಬ ಭೇದ-ಭಾವವಿಲ್ಲದೆ ತನ್ನಿಂದಾಗಬಹುದಾದ ತನು-ಮನ-ಧನ ಸಹಾಯವನ್ನೆಲ್ಲ ನೀಡುತ್ತಲೇ ಬಂದಿದ್ದ ಮಾನವತೆಯ ಮಹಾ ಪ್ರವಾಹ ಇವರು. ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ಸರ್, ಕಿಡ್ನಿ ತೊಂದರೆಯಂತಹ ಆರೋಗ್ಯದ ಮಹಾ ಆಪತ್ತು ಹೊತ್ತು ಅವರತ್ತ ಬಂದ ಬಹಳಷ್ಟು ಬಡ ರೋಗಿ ಗಳಿಗೆ ಕೈಯೆತ್ತಿ ಧಾರಾಳವಾಗಿ ಹಣ ನೀಡಿದ್ದಾರೆ.

ಅವರ ಕೈ ಗುಣವೋ ಏನೋ ಇವರಿಂದ ಸಹಾಯ ಪಡೆದ ಹಲವಾರು ರೋಗಿಗಳು ಗುಣಮುಖರಾಗಿ ಮತ್ತೆ ಅಂಬರೀಷ್ ಬಳಿ
ಬಂದು ವಿಷಯ ತಿಳಿಸಿ ಕೈ ಮುಗಿದು ಹೋಗುವಾಗ ನಿಜಕ್ಕೂ ಅವರ ಮುಖ ಸಾರ್ಥಕ ಭಾವದಿಂದ ಅರಳುತ್ತಿತ್ತು. ಹೀಗೆ ಉಪಕೃತರಾದವರು ಕೊಟ್ಟ ಬಿರುದೇ ‘ಅಭಿನವ ಕರ್ಣ’. ಅಂಬರೀಷ್ ಜೀವನ ಚರಿತ್ರೆಯನ್ನಾಧರಿಸಿ ನಿರ್ದೇಶಕ ಶಾಂತಾರಾಂ ತೆಗೆದಿರುವ ‘ಕರ್ಣನ ಸಂಪತ್ತು’  ಚಿತ್ರದ ಕ್ಲೈಮಾಕ್ಸ್‌ನಲ್ಲಿ ಇದನ್ನೇ ಚಿತ್ರಿಸಲಾಗಿದೆ. ಆ ಚಿತ್ರದಲ್ಲಿ ಒಬ್ಬೊಬ್ಬರಿಗೂ ಒಬ್ಬೊಬ್ಬ ಮಹಾನ್ ಪುರುಷನಾಗಿ ಅಂಬರೀಷ್ ಕಾಣಿಸುತ್ತಾರೆ. ಒಬ್ಬರ ಕಣ್ಣಲ್ಲಿ ಕರ್ಣನಾಗಿ ಕಂಡರೆ ಮತ್ತೊಬ್ಬರ ಕಣ್ಣಲ್ಲಿ ಧರ್ಮರಾಯ ನಾಗಿ ಕಾಣುತ್ತಾರೆ.

ಹಾಗೆಯೇ ಮಗದೊಬ್ಬರ ಕಣ್ಣಲ್ಲಿ ಶ್ರೀರಾಮನಾಗಿ ಕಂಡರೆ ಇನ್ನೊಬ್ಬರ ಕಣ್ಣಲ್ಲಿ ಶ್ರೀಕೃಷ್ಣನಾಗಿ ಕಾಣುತ್ತಾರೆ. ಹೀಗೆ ಒಬ್ಬೊಬ್ಬರ ಕಣ್ಣಲ್ಲೂ ಅಂಬರೀಷ್‌ರ ಉದಾತ್ತ ಗುಣಗಳ ವಿಶ್ವರೂಪವೇ ತೆರೆದುಕೊಳ್ಳುತ್ತ, ಕೊನೆಗೆ ಇವರು ದೈವತ್ವಕ್ಕೇರಿ ಬಿಡುತ್ತಾರೆ! ಮನುಷ್ಯತ್ವದಿಂದ ದೈವತ್ವಕ್ಕೇರುವ ನಿರ್ದೇಶಕರ ಪರಿಕಲ್ಪನೆಯೇ ಇಲ್ಲಿ ಅದ್ಭುತವಾಗಿದೆ. ಇದರ ಕೇಂದ್ರ ಬಿಂದುವಾಗಿ ಅಂಬರೀಷ್ ವ್ಯಕ್ತಿತ್ವ ಪ್ರಜ್ವಲಿಸುತ್ತದೆ.

ಇದೊಂದು ಬರೀ ಚಲನಚಿತ್ರವಾಗಿರದೆ ಅಂಬರೀಷ್ ಬದುಕಿನ ತೆರೆದ ಪುಸ್ತಕವಾಗಿ ಪುಟ ಪುಟವೂ ಅವರ ಹೃದಯ ಸಂಪನ್ನತೆಯ ಪ್ರತೀಕವಾಗಿದೆ. ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದ, ಅಷ್ಟೇ ಏಕೆ ವಿಶ್ವಚಿತ್ರರಂಗದ ಚರಿತ್ರೆಯ ಚಿತ್ರನಟನೊಬ್ಬನನ್ನು ದೈವತ್ವಕ್ಕೇರಿಸಿ ಚಿತ್ರಿಸಿ ರುವ ಚಲನಚಿತ್ರವೊಂದು ಮತ್ತೊಂದಿರಲಾರದೇನೋ…!

ಇವತ್ತು ಅಂಬರೀಷ್ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ‘ದ್ವಿಶತಕ ಬಾರಿಸಿದ ಚಿತ್ರನಟ’ ರಾಗಿರಬಹುದು, ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ನಂತರ ಮೊದಲಿಗೆ ಈ ಸಾಧನೆ ಮಾಡಿದ ಮತ್ತೊಬ್ಬ ನಾಯಕ ನಟನೆಂಬ ಹಿರಿಮೆ ಇರಬಹುದು, ವಿಲನ್ ಆಗಿ ಬಂದ ನಟನೊಬ್ಬ ನಾಯಕ ನಟನಾಗಿ ಇಂಥ ಸಾಧನೆಗೈದ ಪ್ರಪ್ರಥಮ ನಟನೆಂಬ ಗರಿಮೆಯನ್ನೂ ಹೊಂದಿರಬಹುದು, ಸಂಸದರಾಗಿ ಲೋಕಸಭೆ ಪ್ರವೇಶಿಸಿದ ಕನ್ನಡ ಚಿತ್ರರಂಗದ ಮೊದಲ ಕಲಾವಿದನೆಂಬ ಕೀರ್ತಿವಂತನೂ
ಆಗಿರಬಹುದು, ಭಾರತೀಯ ಚಿತ್ರರಂಗದ ಇತಿಹಾಸದ ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಗಳಿಸಿದ ಏಕೈಕ ನಟನೆಂಬ ಇತಿಹಾಸ ನಿರ್ಮಿಸಿರಬಹುದು.

ಕೇಂದ್ರ ಸಚಿವ ಸ್ಥಾನಕ್ಕೇರಿದ ಮೊಟ್ಟ ಮೊದಲ ಕನ್ನಡ ಕಲಾವಿದನೆಂಬ ದಾಖಲೆ ಇವರದ್ದಾಗಿರಬಹುದು, ಶಾಸಕರಾಗಿ ಆಯ್ಕೆಯಾದ ಪ್ರಥಮದ ಸಂಪುಟ ದರ್ಜೆಯ ಮಂತ್ರಿಯಾದ ಮೊದಲ ಸಿನಿಮಾತಾರೆ ಎಂಬ ಚರಿತ್ರೆ ಬರೆದ ಹಿರಿಮೆ ಕೂಡ ಇವರಿಗಿರಬಹುದು… ಆದರೆ ಇವೆಲ್ಲದಕ್ಕಿಂತ ಹೆಚ್ಚಾಗಿ ಅಂಬಿ ಒಬ್ಬ ಸಾಟಿಯಿಲ್ಲದ ಮನುಷ್ಯನೆಂದೇ ಕನ್ನಡಿಗರೆದೆ ಪುಟಗಳಲ್ಲಿ ದಾಖಲಾಗಿದ್ದಾರೆ.

ಅದಕ್ಕಾಗಿಯೇ ಅಂಬರೀಷ್ ಎಂದರೆ ಸಾಕು ‘ಓ! ಗುಣವಂತ ಓ! ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳು ಸಿಗುತ್ತಿಲ್ಲ …’ ಎಂಬ ಅವರದೇ ಚಲನಚಿತ್ರವೊಂದರ ಗೀತೆಯೊಂದು ಕಿವಿಯಲ್ಲಿ ತೇಲಿ ಬಂದು ಹೃದಯವನ್ನು ತುಂಬಿಕೊಳ್ಳುತ್ತದೆ.
ಒಂದು ಮಹದಾಶ್ಚರ್ಯವೆಂದರೆ, ಇತರೇ ನಟರ ಅಭಿಮಾನಿಗಳು ಕೂಡ ಅಂಬರೀಷ್‌ರನ್ನು ಅಪಾರವಾಗಿ ಅಭಿಮಾನಿಸು ತ್ತಾರೆ. ಅದು ಡಾ. ರಾಜ್ ಅಭಿಮಾನಿಗಳಿರಬಹುದು, ಡಾ.ವಿಷ್ಣು ಅಭಿಮಾನಿಗಳಿರಬಹುದು… ಹೀಗೆ ಎಲ್ಲ ನಟರ ಅಭಿಮಾನಿಗಳೂ ಒಂದು ರೀತಿಯಲ್ಲಿ ಇವರ ಅಭಿಮಾನಿಗಳಾಗಿರುತ್ತಾರೆಂದರೆ ಬಹುಶಃ ಇದು ಅಂಬಿಯಂಂತಹ ನಟರಿಗೆ ಮಾತ್ರ ಸಾಧ್ಯವೇನೋ! ಸುಮಾರು ನಾಲ್ಕವರೆ ದಶಕಗಳಿಗೂ ಹೆಚ್ಚು ಕಾಲದ ಇವರ ಬಣ್ಣದ ಬದುಕಿನಲ್ಲಿ ಒಂದು ಕಪ್ಪು ಚುಕ್ಕಿಯೂ ಇಲ್ಲದೆ, ಬಣ್ಣದ ಬೆಳಕಿನಲ್ಲಿ ಐಕ್ಯವಾಗುವ ತನಕ ಊರ್ಧ್ವಮುಖಿಯಾಗಿ ಮಿರಮಿರನೆ ಮಿನುಗಿದ ಹೃದಯವಂತ ಕಲಾವಿದರವರು.

ಕವಿಗಳೂ, ವಚನಕಾರರೂ ಆಗಿದ್ದ ಖ್ಯಾತ ಚಿತ್ರನಟ ದಿವಂಗತ ರಾಜಾನಂದ್ ಅವರು ತಮ್ಮ ವಚನ ಸಂಕಲನದಲ್ಲಿ ಅಂಬರೀಷ್ ಅವರನ್ನು ಕುರಿತು ಹೀಗೆ ಹೇಳಿದ್ದಾರೆ- ಹಲವಾರು ಮನೆಯಲ್ಲಿ ದೀಪಬೆಳಗಿಸಿ ಕೆಲವರಿಗೆ ನೆರವಿತ್ತು ತಾನೇ ಸಂತೈಸಿ ಒಲುಮೆಯಿಂದೆಲ್ಲರಲಿ ನಗುತ ಬಾಳುತ್ತಾ ಚೆಲುವಿಂದ ಇರ್ಪನು ’ಅಂಬಿ’ ಅಹುದೆಂದ ಕನ್ನಡದ ಕಂದ.