Sunday, 15th December 2024

ಗ್ಯಾರಂಟಿ ಜಾರಿ ಮಾಡಲು ಗೊಂದಲವಿಲ್ಲ: ಸಚಿವ ಖಂಡ್ರೆ

ತುಮಕೂರು: ಕಾಂಗ್ರೆಸ್ ಪಕ್ಷ ನೀಡಿರುವ 5 ಗ್ಯಾರಂಟಿಗಳ ಜಾರಿಯಲ್ಲಿ ಯಾವುದೇ ಗೊಂದಲವಿಲ್ಲ. ತಕ್ಷಣವೇ ಜಾರಿ ಮಾಡು ವಂತೆ ಈಗಾಗಲೇ ಸೂಚನೆ ಕೊಡಲಾಗಿದೆ. ಎಂದು ನೂತನ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ  ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ  ಮಾತನಾಡಿ, ನಾವು ಏನೇನು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆಯೋ ಅವುಗಳ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ಮೊದಲ ಸಚಿವ ಸಂಪುಟ ಸಭೆ ಯಲ್ಲೇ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. 2ನೇ ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇವೆ. ಜೂ. 1 ರಂದು ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದ್ದು, ರೂಪುರೇಷೆಗಳು ತಯಾರಾಗುತ್ತಿವೆ. ಅದರ ಪ್ರಕಾರ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ಅರಣ್ಯ ಪ್ರದೇಶಗಳಲ್ಲಿ ಅಧಿಕಾರಿಗಳ ಅಥವಾ ವ್ಯವಸ್ಥೆಯ ತಪ್ಪಿನಿಂದಾಗಿ ಬಡ ಜನರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವೆಡೆ ಜನವಸತಿ ಪ್ರದೇಶಗಳಿವೆ. ಆ ಜಾಗಗಳನ್ನು ಸರ್ವೆ ಮಾಡಿದಾಗ ಅರಣ್ಯ ಪ್ರದೇಶ ಎಂದು ಬರುತ್ತಿದೆ. ಅದನ್ನು ಸರಿಪ ಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು.
ನಿಖರವಾಗಿ ಇಷ್ಟೇ ಅರಣ್ಯ ಪ್ರದೇಶದ ಒತ್ತುವರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿಯವರೆಗೂ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಸಮೀಕ್ಷೆಯೂ ನಡೆದಿಲ್ಲ. ಈ ಎರಡೂ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಯಬೇಕಾಗಿದೆ ಎಂದರು.
ಈ ವೇಳೆ ಮುಖಂಡರಾದ  ಮುರುಳೀಧರ ಹಾಲಪ್ಪ, ಸಾಗರನಹಳ್ಳಿ ನಟರಾಜು, ಟಿ.ಬಿ. ಶೇಖರ್, ಚಂದ್ರಮೌಳಿ, ಶಶಿಹುಲಿ ಕುಂಟೆ ಮಠ್, ಡಿಎಫ್‌ಓ ಅನುಪಮ, ಎಸಿಎಫ್‌ಗಳಾದ ಬಿ.ಎನ್. ನಾಗರಾಜು, ಮಹೇಶ್ ವಿ.ಮಾಲಗತ್ತಿ, ಸುಬ್ಬರಾವ್, ಆರ್‌ಎಫ್‌ಓಗಳಾದ ಪವಿತ್ರ ವಿ., ರವಿ ಸಿ., ಸುರೇಶ್ ಹೆಚ್.ಎಂ., ರಾಕೇಶ್ ಟಿ.ಎಂ., ಕಾಂಗ್ರೆಸ್ ಮುಖಂಡೆ ಗೀತಾ ರುದ್ರೇಶ್, ಟೂಡಾ ಮಾಜಿ ಸದಸ್ಯೆ ಗೀತಮ್ಮ  ಉಪಸ್ಥಿತರಿದ್ದರು.