Sunday, 15th December 2024

ಕ್ರೀಡಾಪಟುಗಳಿಗಾಗಿರುವ ಅನ್ಯಾಯ ಖಂಡಿಸಿ ಪ್ರತಿಭಟನೆ

ತುಮಕೂರು: ಅಂತರಾಷ್ಟ್ರೀಯ ಕ್ರಿಡಾಪಟುಗಳಿಗೆ ಆಗಿರುವ  ಅವಮಾನವನ್ನು ಖಂಡಿಸಿ, ಮಂಗಳವಾರ ನಗರದ ಟೌನ್‌ಹಾಲ್  ಸರ್ಕಲ್ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಮತ್ತು ಕುಸ್ತಿ, ಕಬ್ಬಡಿ ಸೇರಿದಂತೆ ಇತರೆ ಕ್ರೀಡಾಪಟುಗಳೊಂದಿಗೆ ಸಾರ್ವಜನಿಕರಲ್ಲಿ ದೌರ್ಜನ್ಯಗಳ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟೌನ್‌ಹಾಲ್ ವೃತ್ತದಲ್ಲಿ ಆಂಜನೇಯಸ್ವಾಮಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಸಾಂಕೇ ತಿಕವಾಗಿ ಕುಸ್ತಿ ಪಂದ್ಯಾವಳಿಯನ್ನು ನಡೆಸುವ ಮೂಲಕ ವಿನೂತನವಾಗಿ ಮಹಿಳಾ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ತರಬೇತುದಾರ ಬ್ರಿಜ್ ಭೂಷಣ್ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳಾ ಕ್ರೀಡಾಪಟುಗಳನ್ನು ಪೊಲೀಸರು ಅಮಾನವೀಯವಾಗಿ ಎಳೆದೊಯ್ದ ರೀತಿ ಖಂಡನೀಯ ಎಂದರು.
ದೆಹಲಿಯ ಜಂತರ್‌ಮಂಥರ್‌ನಲ್ಲಿ ಏ.23 ರಿಂದ ಆರಂಭಗೊಂಡ ಹೋರಾಟಕ್ಕೆ ಇಂದಿಗೂ ನ್ಯಾಯ ಸಿಗದಿರುವುದು ಬೇಸರದ ಸಂಗತಿ. ಕುಸ್ತಿ ಒಂದೇ ಅಲ್ಲ, ಕ್ರಿಕೆಟ್, ಕಬಡ್ಡಿ, ಅಥ್ಲೆಟಿಕ್ಸ್ ಪ್ರತಿಯೊಂದರಲ್ಲೂ ಯಾರು ಧ್ವನಿ ಹೊರಗೆ ಹೇಳುವುದಕ್ಕೆ ಸಾಧ್ಯ ವಿಲ್ಲದೇ ಒಳಗೆಯೇ ಹೆಣ್ಣುಮಕ್ಕಳು ನೋವನ್ನು ಅನುಭವಿಸುತ್ತಿದ್ದಾರೋ ಅವರ ಪರವಾಗಿ ನಾವಿದ್ದೇವೆ ಎಂಬ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಹಿರಿಯ ಕುಸ್ತಿಪಟು ರೇವಣಸಿದ್ಧಯ್ಯ ಮಾತನಾಡಿ, ರಾಮಾಯಣ ಮಹಾಭಾರತದ ಕಾಲದಿಂದಲೂ ಹೆಸರುವಾಸಿಯಾದ ಕುಸ್ತಿ ಪಂದ್ಯಾವಳಿಯಲ್ಲಿ ಇಂದು ಮಹಿಳೆಯರು ಭಾಗವಹಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದು, ಇಂತಹ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಬ್ರಿಜ್ ಭೂಷಣ್ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಬಂಧಿಸಬೇಕೆAದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಸಾಂಕೇತಿಕವಾಗಿ ಕುಸ್ತಿ ನಡೆಸಲಾಯಿತು. ಆನಂದ್, ಅನಿಲ್, ಸಿದ್ಧಲಿಂಗೇಗೌಡ, ಷಣ್ಮುಖಪ್ಪ, ಮೋಹನ್, ರೇವಣ ಸಿದ್ಧಯ್ಯ, ತರುಣೇಶ್, ಮಂಜುನಾಥ್, ನಟರಾಜಶೆಟ್ಟಿ, ಸಂಜೀವ್‌ಕುಮಾರ್, ಅನಿಲ್, ಗೀತಾ ರುದ್ರೇಶ್, ಸವಿತಾ, ಕವಿತಾ, ವಸುಂಧರ, ಸಿ.ಡಿ.ಜಯಶ್ರೀ, ಅನ್ನಪೂರ್ಣ, ಗೀತಾ, ಪ್ರೇಮ, ಲಕ್ಷ್ಮಿದೇವಮ್ಮ,  ಟಿ.ಕೆ.ಆನಂದ್, ಪೈಲ್ವಾನ್ ಮಹೇಶ್, ಗಗನ್ ಗೌಡ, ಸಿದ್ಧರಾಜು, ಚಿಕ್ಕರಂಗಪ್ಪ, ತಾಹೇರಾ, ಪ್ರಕಾಶ್ ಸೇರಿದಂತೆ ಕುಸ್ತಿಪಟುಗಳು, ಹಲವಾರು ಕ್ರೀಡಾಪಟುಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.