Saturday, 14th December 2024

ಕುಂಚಿಟಿಗ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ

ರಾಹುಲ್ ಗಾಂಧಿಗೆ ಟಿಬಿಜೆ ಮೊಮ್ಮಗಳು ಪತ್ರ
ತುಮಕೂರು: ಕಾಂಗ್ರೆಸ್ ಪಕ್ಷ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕುಂಚಿಟಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಕುಂಚಿಟಿಗ ಸಮುದಾಯದ ಮುಖಂಡರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 45 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಕುಂಚಿಟಿಗ ಸಮುದಾ ಯಕ್ಕೆ ಮಾಡಿರುವ ಅನ್ಯಾಯವನ್ನು ಸರಿಪಡಿಸದೇ ಹೋದರೆ ಕಾಂಗ್ರೆಸ್ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಕ್ಕಣ್ಣಪ್ಪ, ಮಸಿಯಪ್ಪ, ಮಾಲಿ ಮರಿಯಪ್ಪ ಅವರು ಸೇರಿದಂತೆ ಆರರಿಂದ ಎಂಟು ಜನ ಸಮುದಾಯದ ಶಾಸಕರು ಆಯ್ಕೆಯಾಗುತ್ತಿದ್ದರು. ಆದರೆ ಈಗ ಕುಂಚಿಟಿಗ ಸಮುದಾಯವನ್ನು ವ್ಯವಸ್ಥಿತ ರೀತಿಯಲ್ಲಿ ಮೂಲೆ ಗುಂಪು ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಕುಂಚಿಟಿಗ ಸಮುದಾಯದ ಏಕೈಕ ಶಾಸಕ ಜಯಚಂದ್ರ ಅವರು ಸಂಪುಟ ಸೇರುವುದು ಖಚಿತ ಎಂದು ಸಮುದಾ ಯದ ಭಾವಿಸಿತ್ತು, ಕಾಂಗ್ರೆಸ್ ನ ಹಿರಿಯ ಶಾಸಕರಾಗಿರುವ ಇವರಿಗೆ ಉನ್ನತ ಸ್ಥಾನಮಾನ ಕೊಡುತ್ತಾರೆ ಎಂಬ ಭಾವನೆ ಇತ್ತು ಅದನ್ನು ಕಾಂಗ್ರೆಸ್ ಹುಸಿಗೊಳಿಸಿದೆ ಎಂದರು.
ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಜಯಚಂದ್ರ ಅವರ ಕೊಡುಗೆ ನೀಡಿದ್ದಾರೆ. ಕಾವೇರಿ ಪ್ರದೇಶದ ನೀರನ್ನು ಭದ್ರಾ ಸೀಮೆಗೆ ಕೊಂಡೊಯ್ಯಲು ಜಾಣ್ತನದಿಂದ ಕೆಲಸ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕಾರ್ಯರೂಪಕ್ಕೆ ಬರಲು ಜಯಚಂದ್ರ ಕಾರಣ, ಇಂತಹ ಪರಿಣಿತರನ್ನು ಕಡೆಗಣಿಸಿಸು ವುದರ ಹಿಂದೆ ರಾಜಕೀಯ ಹುನ್ನಾರ, ಷಡ್ಯಂತ್ರ ಮಾಡಲಾಗಿದೆ ಎಂದರು.
 ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಆದಷ್ಟು ಶೀಘ್ರವಾಗಿ ಸರಿಪಡಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುಂಚಿಟಿಗರು ಮನಸು ಮಾಡಿದರೆ ತುಮಕೂರು, ಚಿತ್ರದುರ್ಗ ಎರಡು ಲೋಕಸಭಾ ಕ್ಷೇತ್ರದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಸಮಾಜಕ್ಕೆ ದ್ರೋಹ, ಅನ್ಯಾಯ ಮಾಡಲಾಗಿದೆ. ಪಿತೂರಿಗಳಿಂದಲೇ ಸಮುದಾಯವನ್ನು ಮೂಲೆಗುಂಪು ಮಾಡಲಾಗಿದೆ ಅವೈಜ್ಞಾನಿಕವಾಗಿ ಕುಂಚಿಟಿಗರು ಹೆಚ್ಚಿರುವ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಂಚಿಟಿಗ ಸಮುದಾಯದ ಮುಖಂಡರಾದ ಕಾಮರಾಜು,  ನೇತಾಜಿ ಶ್ರೀಧರ್, ರಾಜಕುಮಾರ್, ರವಿ, ಶಿವರಾಮ್ ಇದ್ದರು.
ರಾಹುಲ್ ಗಾಂಧಿಗೆ ಟಿಬಿಜೆ ಮೊಮ್ಮಗಳು ಪತ್ರ: ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಮೊಮ್ಮಗಳಾದ ಆರ್ನ ಸಂದೀಪ್, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ.