Saturday, 14th December 2024

ಅಕ್ರಮವೆಸಗಿರುವ ಶಾಸಕ ರಂಗನಾಥ್ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ: ವಿಪ ಸದಸ್ಯ ನವೀನ್

ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಗಿಫ್ಟ್ ಕಾರ್ಡ್ ಹಂಚಿವ ಮೂಲಕ  ಶಾಸಕ ರಂಗನಾಥ್ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ. ಇವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದೆಂದು ವಿಧಾನಪರಿಷತ್ ಸದಸ್ಯ ನವೀನ್ ಆರೋಪಿಸಿದರು.
 ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಾಸಕ ಡಾ. ರಂಗನಾಥ್ ಹಾಗೂ ಬೆಂಗಳೂರು ಗ್ರಾಮಾಂತರ ಎಂಪಿ ಡಿ.ಕೆ. ಸುರೇಶ್ ಸೇರಿ ಅಕ್ರಮ ಮಾಡಿದ್ದಾರೆ. ಮತದಾನದ ಮುನ್ನಾ  ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದಾರೆ. ಅದರಲ್ಲಿ ಅಭ್ಯರ್ಥಿ ಕ್ರಮ ಸಂಖ್ಯೆ, ಸಿಂಬಲ್ ಹಾಗೂ ಬಾರ್ ಕೋಡ್ ಇದೆ. ಕಾಂಗ್ರೆಸ್ ಪಕ್ಷ ೬೦ ಸಾವಿರ ಕಾರ್ಡ್ ಗಳನ ಮನೆ, ಮನೆಗೆ ಹೋಗಿ ವಿತರಣೆ ಮಾಡಿದೆ ಎಂದು ದೂರಿದರು.
ಕಾರ್ಡ್ ಅನ್ನು ಎಟಿಎಮ್ ರೀತಿ ಬಳಸಬಹುದು. ಅದರಲ್ಲಿ ಗಿಫ್ಟ್ ಖರೀದಿ ಮಾಡಬಹುದು ಎಂದು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಮತದಾನ ಬಳಿಕ ಕಾರ್ಡ್ ಬಳಸಬಹುದೆಂದು ಸುಳ್ಳು ಭರವಸೆ ನೀಡಿದ್ದಾರೆ. ಮತದಾರರಿಗೆ ದಾರಿ ತಪ್ಪಿಸುವ ಕೆಲಸವಾಗಿದ್ದು, ಅಕ್ರಮ ಮಾಡಿ ಶಾಸಕ ಡಾ.ರಂಗನಾಥ್ ಗೆಲುವು ಸಾಧಿಸಿದ್ದು ಇದರ ವಿರುದ್ಧ  ಹೈ ಕೋರ್ಟ್ ನಲ್ಲಿ  ಕೇಸ್ ದಾಖಲು ಮಾಡುವ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದರು.
 ಅಕ್ರಮವಾಗಿ ಮತ ಪಡೆದಿರುವ ಕಾಂಗ್ರೆಸ್‌ಗೆ ಜನರು ಆಶೀರ್ವಾದ ಮಾಡಿದ್ದಾರೆಂದು ಹೇಳುವ ನೈತಿಕತೆ ಇಲ್ಲ. ಪ್ರಜಾಪ್ರಭುತ್ವ ವಿರುದ್ಧ ಚುನಾವಣೆ ಮಾಡಿ ಕಾಂಗ್ರೆಸ್ ಗೆದ್ದಿದ್ದೆ. ಡಾ. ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ. ಕುಕ್ಕರ್‌ಗಳನ್ನ ನಾಲ್ಕೈದು ತಿಂಗಳುಗಳಿಂದ ಮನೆ, ಮನೆಗೂ ಹಂಚಿ ದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಿದರೂ ಕೂಡ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಕುಣಿಗಲ್ ಬಿಜೆಪಿ ಮುಖಂಡರು ನಿರ್ಧಾರ ಮಾಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಪರಾಜಿತ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮತ್ತಿತರರಿದ್ದರು.