ಶಶಾಂಕಣ
shashidhara.halady@gmail.com
ಮಳೆಗಾಲದ ಆರಂಭವು ನಮ್ಮ ನಡುವಿನ ಒಂದು ವಿಸ್ಮಯ; ಮಳೆ ಬಿದ್ದಾಗ ಭೂಮಿಗೆ ಸಂಭ್ರಮ! ಒಂದೆರಡು ವಾರ ಮಳೆ ಬಿದ್ದ ನಂತರ, ನೆಲದಿಂದ ಮೇಲೇಳುವ ಇದೊಂದು ತಿನಿಸು, ತುಸು ಅಪರೂಪದ್ದು ಎಂಬುದಂತೂ ನಿಜ.
ಮಲೆನಾಡು ಮತ್ತು ಕರಾವಳಿಯವರಿಗೆ ಮಾತ್ರ ಪರಿಚಯವಿರುವ ಈ ಒಂದು ತಿನಿಸು ಅಥವಾ ಸ್ನ್ಯಾಕ್ ಇದೆ; ಬಯಲು ಸೀಮೆಯವರು ಅದನ್ನು ತಿಂದಿರುವ, ಅಷ್ಟೇಕೆ ನೋಡಿರುವ ಸಾಧ್ಯತೆಯೇ ಇಲ್ಲ. ಅದೇ ಗೋಡಂಬಿ ಮೊಳಕೆ! ಆಂ, ಗೋಡಂಬಿ ಬೀಜದ ಮೊಳಕೆಯನ್ನು ತಿನ್ನಬಹುದೇ ಎಂದು ನಿಮ್ಮಲ್ಲಿ ಕೆಲವರಿ ಗಾದರೂ ಅಚ್ಚರಿಯಾಗಿರಲೇ ಬೇಕು. ಅದರ ಕುರಿತು ಅನವಶ್ಯಕ ಕೌತುಕವನ್ನು ಲಂಬಿಸದೇ, ಸೀದಾ ವಿವರ ಹೇಳಿಬಿಡುತ್ತೇನೆ.
ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ವಾರ ನಮ್ಮ ಹಳ್ಳಿಯಲ್ಲಿ ಮಳೆಗಾಲ ಆರಂಭ. (ಈ ವರ್ಷ ನಮ್ಮೂರಿನಲ್ಲಿ ಮಳೆಗಾಲದ ಆರಂಭವು ತುಸು ವಿಳಂಬ ವಾಗುತ್ತಿರುವ ಸೂಚನೆ ಕಾಣುತ್ತಿದೆ). ಮೇ ೨೫ರಿಂದ ೩೧ರ ಅವದರ್ಯಳ ಎಲ್ಲಿ ಒಂದೆರಡು ಬಾರಿ, ಭಾರೀ ಗುಡುಗು – ಸಿಡಿಲು – ಮಿಂಚುಗಳ ನಡುವೆ ಮಳೆ ಸುರಿಯುತ್ತದೆ; ಆಗಾಗ ಗಾಳಿಯೂ ಅದರ ಸಹವರ್ತಿ; ಇದಾಗಿ ಒಂದೆರಡು ದಿನಗಳಲ್ಲಿ, ಒಂದು ರಾತ್ರಿ ಮಳೆ ಧೋ ಎಂದು ಸುರಿಯತೊಡಗಿ, ಬೆಳಗಿನ ತನಕವೂ ತನ್ನ ಪ್ರತಾಪ ತೋರುತ್ತದೆ. ಆ ರೀತಿ ನಾಲ್ಕಾರು ಗಂಟೆ ಮಳೆ ಸುರಿದಾಗ, ‘ಹಾಂ ಮಳೆಗಾಲ ಸುರು ಆಯಿತು ಕಾಣಿ’ ಎನ್ನುತ್ತಾ ನಮ್ಮೂರಿನವರು ಉಳುಮೆ ಮತ್ತಿತರ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಈ ರೀತಿ ನಾಲ್ಕೆಂಟು ದಿನ ಮಳೆ ಸುರಿದು, ಗುಡ್ಡ, ಹಾಡಿ, ಹಕ್ಕಲುಗಳ ನೆಲವೆಲ್ಲಾ ಚೆನ್ನಾಗಿ ಮಳೆನೀರನ್ನು ಹೀರಿಕೊಂಡು, ಭೂಮಿಯೊಳಗಿನ ಉಜರು (ಝರಿ)ಕಣ್ ಬಿಟ್ಟು, ನೀರು ಹರಿಸಿ, ಗದ್ದೆಯಂಚಿನ ತೋಡಿನಲ್ಲಿ ನಿರಂತರ ನೀರು ಹರಿಯ ತೊಡಗುತ್ತದೆ. ಇಷ್ಟಾದ ನಂತರ, ನಡುವೆ ನಾಲ್ಕಾರು ದಿನ ಹೊಳವಾಗುವುದುಂಟು.
ಈ ಹೊಳದ ಸಮಯದಲ್ಲಿ, ‘ಗೋಡಂಬಿ ಮೊಳಕೆ’ಯ ಬೇಟೆಗೆ ನಾವೆಲ್ಲಾ ಮಕ್ಕಳು ಸನ್ನದ್ಧರಾಗುತ್ತೇವೆ. ಮನೆಯ ಹಿಂದಿನ ಹಕ್ಕಲಿನಲ್ಲಿ, ಗುಡ್ಡೆಯಂಚಿನಲ್ಲಿ ಬೆಳೆದ ಗೋಡಂಬಿ ಮರಗಳ ಅಡಿ ಬೆಳೆದ ಕುರುಚಲು ಗಿಡಗಳ ನಡುವೆ ‘ಗೋಡಂಬಿ ಮೊಳಕೆ’
ಸಿಗುತ್ತದೆ. ಅದನ್ನೇ ರುಚಿಯಿಂದ ತಿನ್ನುವ ಅಭ್ಯಾಸ. ಕೆಲವು ಬಾರಿ ಅವುಗಳನ್ನು ಗುಡ್ಡದಿಂದ ಆರಿಸಿ, ಮನೆಗೆ ತಂದು ತಿನ್ನುವುದೂ ಉಂಟು.
ಎಪ್ರಿಲ್ ಮೇ ತಿಂಗಳಿನಲ್ಲಿ ಗೋಡಂಬಿ ಹಣ್ಣಾಗುವ ಶ್ರಾಯ. ಕೆಲವು ಮಗಳಲ್ಲಿ ಸಾವಿರಾರು ಹಣ್ಣುಗಳಾ ಗುತ್ತವೆ; ಚಿಕ್ಕ
ಮರಗಳಲ್ಲಿ ಕೆಲವೇ ಗೋಡಂಬಿ ಹಣ್ಣಾಗುವುದೂ ಉಂಟು. ಪ್ರತಿದಿನ ಗೋಡಂಬಿ ಹಣ್ಣು- ಬೀಜ ಕೊಯ್ಯಬೇಕು, ಮರದ ಅಡಿ ತಾವಾಗಿಯೇ ಬಿದ್ದ ಹಣ್ಣುಗಳನ್ನು ಆರಿಸಬೇಕು. ವಿಶೇಷ ಎಂದರೆ ಗೋಡಂಬಿ ‘ಹಣ್ಣು’ ಹಣ್ಣಲ್ಲ, ಗೋಡಂಬಿ ‘ಬೀಜ’ ಬೀಜವಲ್ಲ! ಹಣ್ಣಿನ ಬುಡಕ್ಕೆ ಜೋತು ಹಾಕಿಕೊಂಡಿರುವಂತೆ ಅಂಟಿಕೊಂಡಿರುವ ಬೀಜವೇ ನಿಜವಾದ ಹಣ್ಣು; ಹಣ್ಣೇ ಗಟ್ಟಿಯಾಗಿ ಬೀಜದ ಸ್ವರೂಪ ಪಡೆದಿರುವ ಪ್ರಾಕೃತಿಕ ವಿಸ್ಮಯ ಅದು.
ಗೋಡಂಬಿಯ ನಿಜವಾದ ಬೀಜ ಎಂದರೆ ಅದರ ತಿರುಳು. ಬೇಸಗೆಯಲ್ಲಿ, ಗೋಡಂಬಿ ಹಣ್ಣನ್ನು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಆರಿಸಿದರೂ, ಕೆಲವು ಹಣ್ಣುಗಳು ಅಲ್ಲಲ್ಲಿ ಕುರುಚಲು ಗಿಡಗಳ ನಡುವೆ ಹುದುಗಿ ಕುಳಿತಿರುವುದುಂಟು. ಅಂತಹ ಹಣ್ಣಿನ
ತುದಿಯಲ್ಲಿರುವ ಬೀಜಗಳೇ, ಜೂನ್ ಮೊದಲ ವಾರದ ಮಳೆಯ ನಂತರ ಮೊಳಕೆ ಒಡೆಯುತ್ತವೆ. ನೆಲದಿಂದ ಸುಮಾರು ಅರ್ಧ ಅಡಿ ಎತ್ತರಕ್ಕೆ ಬೆಳೆಯುವ ಆ ಮೊಳಕೆಯ ಎರಡೂ ಪಕ್ಕದಲ್ಲಿ ಎರಡು ಎಸಳುಗಳಿರುತ್ತವೆ – ದೂರದಿಂದ ನೋಡಿದರೆ ಎಲೆಯಂತೆಯೂ ಕಾಣಬಹುದು – ಅವೇ ಗೋಡಂಬಿ ಬೀಜ, ಮೊಳಕೆಯ ಜತೆಯಲ್ಲೇ ಭೂಮಿಯಿಂದ ಮೇಲೆ ಬಂದ ರುಚಿಯ ಖಜಾನೆ.
ತನ್ನ ಪೀಳಿಗೆಯು ಚೆನ್ನಾಗಿ ಪೌಷ್ಟಿಕಾಂಶ ಹೀರಿಕೊಂಡು, ಉತ್ತಮ ಗಿಡವಾಗಿ ಬೆಳೆಯಲು ಎಂದು, ತಾಯಿ ಮರವು ಬೀಜದಲ್ಲಿ ಹುದುಗಿಸಿರುವ ತಿರುಳು ಅದು. ಒಂದು ವಾರ ಭೋರೆಂದು ಮಳೆ ಸುರಿದಾಗ, ಬೀಜ ಮೊಳಕೆ ಯೊಡೆದು, ಪುಟಾಣಿ ಗಿಡಕ್ಕೆ
ಅಂಟಿಕೊಂಡಿರುವ ಆ ತಿರುಳನ್ನು ನಾವೆಲ್ಲಾ ಮಕ್ಕಳು ಆರಿಸಿ ತಿನ್ನುತ್ತಿದ್ದೆವು! ಅಂದು ಗಂಟಿ ಮೇಯಿಸುತ್ತಿದ್ದ ಮಕ್ಕಳಿಗೆ, ಒಂದೆರೆಡು ವಾರ ಈ ಮೊಳಕೆಯನ್ನು ತಿನ್ನುವುದೇ ಕೆಲಸ! ಮೊಳಕೆಯು ಹದವಾಗಿ ಬೆಳೆದಾಗ, ಅದರಲ್ಲಿ ಅಂಟಿಕೊಂಡಿರುವ ಬೀಜದ ಎಸಳುಗಳನ್ನು ಕಿತ್ತು ತಿನ್ನಬೇಕು; ಒಂದೆ ರಡು ದಿನ ಕಳೆದರೆ, ಬೀಜದಲ್ಲಿರುವ ಸಾರವನ್ನು ತುದಿಯಲ್ಲಿರುವ ಎಲೆಯು ಹೀರಿಕೊಂಡುಬಿಡುತ್ತದೆ; ಆ ನಂತರ ನಾವು ಆ ಬೀಜವನ್ನು ಆರಿಸಿ ತಿಂದರೆ, ಮರದ ತೊಗಟೆ ತಿಂದ ರುಚಿ! ಇದು ಮೊದಲ ಮಳೆಯು ನಮ್ಮ ಭೂಮಿಯ ಮೇಲೆ ಮಾಡುವ ವಿಸ್ಮಯಗಳಲ್ಲಿ ಒಂದು.
ಗೋಡಂಬಿ ಮಾತ್ರವಲ್ಲ, ಆ ಮೊದಲ ಮಳೆಗೆ ಅವೆಷ್ಟೋ ನೂರು ಗಿಡ, ಮರ, ಬಳ್ಳಿಗಳ ಬೀಜಗಳು ಮೊಳಕೆಯೊಡೆಯುತ್ತವೆ; ಗುಡ್ಡ, ಬೆಟ್ಟ, ಕಾಡು, ಹಾಡಿ, ಹೊಲ, ಹಕ್ಕಲು, ಬ್ಯಾಣ, ದರೆ ಮೊದಲಾದ ಕಡೆಗಲ್ಲಿ ಬಿದ್ದಿರುವ ಬೀಜಗಳೂ, ಜೂನ್ ಮೊದಲ
ವಾರದ ಮಳೆಗೆ ಕಾದು ಕುಳಿತು, ಕಾತರದಿಂದ ನಿರೀಕ್ಷಿಸಿ, ಮಳೆಯು ಇಳೆಯ ದಾಹವನ್ನು ತಣಿಸಿದ ಕೂಡಲೇ, ಬೀಜಗಳೆಲ್ಲಾ ಒಮ್ಮೆಗೆ ಮೊಳಕೆಯೊಡೆದು ತನ್ನ ಬದುಕನ್ನು ಆರಂಭಿಸುವ ರೀತಿಯನ್ನು ವಿಸ್ಮಯ ಎನ್ನದೇ, ಬೇರಾವ ಪದಗಳಿಂದಲೂ ಕರೆಯಲು ನನ್ನಿಂದಾಗದು.
ನಮ್ಮ ಹಳ್ಳಿಯ ಗದ್ದೆ ಬಯಲಿಗೆ ತಾಗಿಕೊಂಡಂತೆ, ‘ಹರನ ಗುಡ್ಡ’ ಎಂಬ ವಿಶಾಲವಾದ, ಎತ್ತರವಾದ ಬ್ಯಾಣ ಇದೆ. ಹತ್ತಾರು ಎಕರೆ ಪ್ರದೇಶದ, ಕಲ್ಲುಮಿಶ್ರಿತ ಜಾಗವದು. ವಿಶಾಲ ಬರಡು ಭೂ ಪ್ರದೇಶದ ನಡುನಡುವೆ ಅಲ್ಲಲ್ಲಿ ಕೆಲವು ಮರಗಳು,
ಪೊದೆಗಳಿವೆ; ಮುರಕಲ್ಲು ಮಿಶ್ರಿತ ನೆಲ ಅದು. ಬೇಸಗೆಯಲ್ಲಿ ಒಣಗಿ, ಬರಡು ಭೂಮಿಯಂತೆ ಕಾಣುತ್ತದೆ; ಮಳೆಗಾಲ ಶುರುವಾಗಿ ಎರಡೇ ವಾರಗಳಲ್ಲಿ ಆ ಇಡೀ ಹರನಗುಡ್ಡವು, ಹಸಿರಿನಿಂದ ನಳನಳಿಸುವ ಪರಿಯನ್ನು ವರ್ಣಿಸಲು ಪದಗಳು
ಸಾಲವು. ಲಕ್ಷಾಂತರ ಹುಲ್ಲಿನ ಗಿಡಗಳು ಒಮ್ಮೆಗೇ ಮೊಳಕೆಯೊಡೆದು, ಆ ಇಡೀ ಗುಡ್ಡದ ಮೇಲ್ಮೈಯನ್ನು ಹಸಿರಿನ ಹಚ್ಚಡದಂತೆ ಪರಿವರ್ತಿಸುವ ರೀತಿಯೇ ಒಂದು ವಿಸ್ಮಯ.
ಜೂನ್ ಮೊದಲ ಮತ್ತು ಎರಡನೆಯ ವಾರನಮ್ಮೂರಿನ ಇಳೆಗೆ ಸುರಿವ ಮಳೆಯು ಮಾಡುವ ಮೋಡಿಯನ್ನು ನೆನಪಿಸಿಕೊಂಡು, ಗೋಡಂಬಿ ಮೊಳಕೆಗಳನ್ನು ಮಕ್ಕಳು ಆರಿಸಿ ತಿನ್ನುವ ವಿಚಾರವನ್ನು ಸಾಂದರ್ಭಿಕವಾಗಿ ಉದಹರಿಸಿದೆ ಅಷ್ಟೆ! ವಾಸ್ತವವೆಂದರೆ, ಒಂದು ವಾರ ಮಳೆ ಬಿದ್ದ ಕೂಡಲೆ ಈ ರೀತಿ ಮೊಳಕೆ ಒಡೆವ ಅವೆಷ್ಟೋ ಪ್ರಭೇದದ ಗಿಡ ಮರಗಳ ಬೀಜಗಳು ಒಂದೆಡೆ ಯಾದರೆ, ಇದರ ಜತೆಜತೆಯಲ್ಲಿ ಅಥವ ತುಸು ಹಿಂದು ಮುಂದು, ಹೊಸ ಬದುಕನ್ನು ಆರಂಭಿಸುವ ಜೀವಕೋಟಿಯ ವೈವಿಧ್ಯತೆ ಇನ್ನೊಂದೆಡೆ.
ಬಿರು ಬೇಸಗೆಯಲ್ಲಿ ಸದ್ದಿಲ್ಲದೇ, ನೆಳದಾಳಕ್ಕೆ ಪಯಣಿಸಿ ಶಿಶಿರ ನಿದ್ದೆ ಡುವ ಕಪ್ಪೆಗಳು, ಮಳೆ ಬಿದ್ದ ಕೂಡಲೆ, ಮೇಲೆ ಬಂದು ನಿರಂತರವಾಗಿ ವಟವಟ ಎಂದು ಕೂಗುವ ರೀತಿಯು ಇನ್ನೊಂದು ವಿಸ್ಮಯ. ಮನೆ ಮುಂದಿನ ಗದ್ದೆಯಲ್ಲಿ ಸಾವಿರಾರು ಕಪ್ಪೆಗಳು ರಾತ್ರಿ ಹೊತ್ತಿನಲ್ಲಿ ಒಂದೇ ಸಮನೆ ಕೂಗತೊಡಗಿದಾಗ ಕೇಳಿಸುವ ‘ಸಂಗೀತ ಕಚೇರಿ’ಯು, ಕೆಲವರಿಗೆ ತಲೆ ಚಿಟ್ಟು
ಹಿಡಿಸಿದರೂ ಅಚ್ಚರಿಯಿಲ್ಲ. ಅತ್ತ ಉಜುರು ನೀರಿನಿಂದಾಗಿ ತೋಡಿನಲ್ಲಿ ನೀರು ನಿರಂ ವಾಗಿ ಹರಿಯತೊಡಗಿದ ತಕ್ಷಣ, ಅದೆಲ್ಲೋ ನೆಲದ ಮೂಲೆಯಲ್ಲಿ ಅಡಗಿದ್ದ ಮೀನುಗಳು ಹೊರಬಂದು, ತೋಡಿನುದ್ದಕ್ಕೂ ಈಜಾಡುವುದನ್ನು ಸಹ ಇನ್ನೊಂದು
ವಿಸ್ಮಯವೆಂದೇ ನಾನು ನೋಡುತ್ತೇನೆ. ಮಳೆಗಾಲ ಆರಂಭವಾದ ಕೂಡಲೆ ಕಾಣಿಸುವ ಇಂತಹ ಅವೆಷ್ಟೋ ಪ್ರಾಕೃತಿಕ ವಿಸ್ಮಯಯಗಳ ನಡುವೆ, ಗೋಡಂಬಿ ಮೊಳಕೆಗೆ ಸವಾಲೆಸೆಯಬಲ್ಲ ಇನ್ನೂ ಹಲವು ವಿದ್ಯಮಾನಗಳಿಗೆ ನಮ್ಮೂರು ಸಾಕ್ಷಿಯಾಗುತ್ತದೆ.
ಅವುಗಳಲ್ಲಿ ಅಣಬೆಗಳ ವಿಚಾರ ತುಸು ವಿಶೇಷ. ನಮ್ಮ ಹಳ್ಳಿಯಲ್ಲಿ ನಾನಾ ಪ್ರಭೇದದ ಅಣಬೆಗಳಿವೆ; ಕೆಲವು ಪುಟ್ಟವು, ಕೆಲವು ದೊಡ್ಡವು, ಕೆಲವು ಕೊಡೆಯ ಸ್ವರೂಪ, ಕೆಲವು ಅಣಬೆಗಳ ಮೈತುಂಬಾ ಬಣ್ಣ, ಕೆಲವು ನಾಜೂಕು, ಕೆಲವು ದಪ್ಪ ಮತ್ತು ದೃಢ. ಆದರೆ ಇವೆಲ್ಲ ಅಣಬೆಗಳೂ ಪ್ರತ್ಯಕ್ಷವಾಗಲು ಗುಡುಗು-ಮಿಂಚು-ಮಳೆ ಬೇಕೇ ಬೇಕು. ಒಂದೆರಡು ವಾರ ಚೆನ್ನಾಗಿ ಮಳೆ ಸುರಿದು, ಎಲ್ಲೆಡೆ‘ಜಲಸಾಮ್ರಾಜ್ಯ’ದ ಆಧಿಪತ್ಯ ಆರಂಭವಾದಾಗ, ನೆಲವನ್ನು ಬಗೆದು ಮೇಲೆ ಬಂದವೇನೋ ಎಂಬಂತೆ
ಭಾಸವಾಗುವ ‘ಭೂ ನಕ್ಷತ್ರ’ ಅಣಬೆಗಳು, ಗುಡ್ಡದ ಬರಡು ನೆಲದ ಮೇಲೆ ಅಲ್ಲಲ್ಲಿ ಚಿತ್ತಾರ ಬಿಡಿಸಿದಂತೆ ಎದ್ದು ಕುಳಿತುಕೊಳ್ಳುತ್ತವೆ; ಹಲವು ದಿನಗಳ ನಂತರ, ದುಂಡಗಿನ ಅವುಗಳ ಬಿಳಿ ಮೈ ಒಡೆದು, ನಕ್ಷತ್ರದ ಸ್ವರೂಪ ತಳೆದು ನೆಲದ ಮೇಲೆ ಹರಡುತ್ತದೆ. ಅವು ಇನ್ನೂ ದುಂಡಾಗಿರುವಾಗಲೇ, ಕಿತ್ತು, ಸಂಗ್ರಹಿಸಿ, ಅಡುಗೆಗೆ ಬಳಸುವ ಪದ್ಧತಿ. ಇದೇ ರೀತಿ, ಗುಡ್ಡಗಳಲ್ಲಿ, ಹಾಡಿ-ಹಕ್ಕಲುಗಳಲ್ಲಿ ಬೆಳೆಯುವ ಅಣಬೆಗಳನ್ನು ಸಂಗ್ರಹಿಸಿ, ಪದಾರ್ಥ ಮಾಡುವ ಅಭ್ಯಾಸ ನಮ್ಮೂರಿನಲ್ಲಿದೆ; ಅಡುಗೆಗೆ ಯಾವುದು ಉತ್ತಮ ಎಂಬುದನ್ನು ಅನುಭವದ ಮೇಲೆ ಗುರುತಿಸಿ, ಆಯ್ದು ತರುವ ಕೆಲಸ ಹೆಂಗೆಳೆಯರದ್ದು. ಆದರೆ, ಅದೇಕೋ ನಮ್ಮ ಮನೆಯಲ್ಲಿ ಮಾತ್ರ ಮೊದಲಿನಿಂದಲೂ ಅಣಬೆ ತಿನ್ನುವ ಅಭ್ಯಾಸಕ್ಕೆ ನಿಷೇಧವಿದೆ.
ಹಾಗೆ ನೋಡಿದರೆ, ನಮ್ಮ ಹಳ್ಳಿಯಲ್ಲಿ ಅವೆಷ್ಟು ಪ್ರಭೇದದ ಅಣಬೆಗಳಿವೆ ಎಂದರೆ, ‘ಅಣಬೆಗಳ ಲೋಕ’ ಎಂಬ ಕಿರು ಪುಸ್ತಕವನ್ನೇ ರಚಿಸಬಹುದು! ಅವು ಬೆಳೆಯುವ ಜಾಗವೂ ವಿಶಿಷ್ಟ, ವೈವಿಧ್ಯಮಯ. ನೆಲದ ಮೇಲೆ ಕೆಲವು ಅಣಬೆಗಳು ಮೇಲೆದ್ದರೆ, ಇನ್ನು ಕೆಲವು ಅಣಬೆಗಳು ಖಚಿತವಾಗಿ ಒಣಗಿದ ಮರದ ಕಾಂಡದ ಮೇಲೆ ಪ್ರತ್ಯಕ್ಷವಾಗುತ್ತವೆ; ಕೊಳೆತ ಗಿಡ,
ಬಳ್ಳಿ, ಹುಲ್ಲುಗಳು ಕೆಲವು ಅಣಬೆಗಳ ಜನ್ಮಸ್ಥಾನ. ಕೆಲವು ಅಣಬೆಗಳು ಮಳೆಗಾಲ ಆರಂಭವಾದ ಕೂಡಲೇ ಕಾಣಿಸಿಕೊಂಡರೆ, ಇನ್ನು ಕೆಲವು ಪ್ರಭೇದದ ಅಣಬೆಗಳು ಪ್ರ್ಯತ್ಯಕ್ಷವಾಗಲು ಅಷಾಡದ ಜಡಿಮಳೆ ಅತಿ ಅಗತ್ಯ.
ನಿರಂತರ ಮಳೆ ಸುರಿದು, ಸುತ್ತಲಿನ ವಾತವರಣವೆಲ್ಲಾ ನೀರಿನ ಪಸೆಯಿಂದ ತುಂಬಿಹೋಗಿ, ನೆಲವೆಲ್ಲಾ ನೆನೆದು, ಅಲ್ಲಿನ
ತರಗಲೆಗಳೂ ಕೊಳೆತು ಗೊಬ್ಬರವಾದ ನಂತರ, ಆ ಪಿಚಪಿಚ ಎನ್ನುವ ಮೆತ್ತಗಿನ ಜಾಗವನ್ನೇ ಆರಿಸಿಕೊಂಡು ಹುಟ್ಟಿಕೊಳ್ಳುವ ಅಣಬೆಗಳೂ ಇವೆ. ನಾವೆಲ್ಲಾ ಕೆಸರು, ಕೊಳಕು ಎನ್ನುವ ಜಾಗವೇ ಇನ್ನು ಕೆಲವು ಅಣಬೆಗಳ ಆಡುಂಬೊಲ.
ಮರವೊಂದು ಬಿದ್ದು, ಅದರ ಕಾಂಡವು ಹಲವು ವರ್ಷಗಳ ಕಾಲ ಮಳೆ, ಬಿಸಿಲಿಗೆ ಪಕ್ಕಾಗಿ ಕುಂಬು ಕುಂಬಾದ ನಂತವಷ್ಟೇ ಅಲ್ಲಿ ಬೆಳೆಯುವ ಕೆಲವು ಅಣಬೆಗಳಿವೆ. ಹಳೆಯ ಮರದ ಕೊಂಬೆಯು ಪೂರ್ತಿ ಪುಡಿ ಪುಡಿಯಾಗುವ ಸ್ಥಿತಿ ತಲುಪಿದಾಗ, ಒಮ್ಮೊಮ್ಮೆ
ಸಾವಿರಾರು ಪುಟಾಣಿ ಬಿಳಿ ಅಣಬೆಗಳು ಅದರ ಮೇಲೆ ಜನಿಸುವುದುಂಟು! ಹಳೆಯ ಮರದ ಮೇಲೆ ಬೆಳೆಯುವ ಇಂತಹ ಕೆಲವು ಪ್ರಭೇದದ ಅಣಬೆಗಳು ಕತ್ತಲಿನಲ್ಲಿ ಮಿನುಗಬಲ್ಲವು. ರಾತ್ರಿ ಹೊತ್ತಿನಲ್ಲಿ ಸಂಚರಿಸುವ ಹಳ್ಳಿಗರಿಗೆ ಇಂತಹ ಅಣಬೆ ತುಂಬಿದ
ಮರವು ‘ಕೊಳ್ಳಿದೆವ್ವ’ವಾಗಿ ಕಂಡರೂ ಅಚ್ಚರಿಯಿಲ್ಲ!
ನಮ್ಮ ಹಳ್ಳಿಯಲ್ಲಿ ತೋಟದಾಚೆಯ ತೋಡಿನ ಬಳಿ ಎಂದೋ ಬಿದ್ದ, ಹಳೆಯದಾಗಿ, ಕುಂಬಾದ ಒಂದು ಮರದ ಕಾಂಡದ ಮೇಲೆ, ಈ ರೀತಿ ರಾತ್ರಿ ಬೆಳಗುವ ರಾಶಿ ರಾಶಿ ಅಣಬೆಗಳ ಸಾಲನ್ನು ನಾನು ಒಮ್ಮೆ ಕಂಡದ್ದುಂಟು. ಯಕ್ಷಗಾನದ ಬಣ್ಣದ
ವೇಷಧಾರಿಯಂತೆ, ಹಲವು ಬಣ್ಣಗಳಿಂದ ತುಂಬಿರುವ ‘ಕೊಡೆ’ ಹೊಂದಿದ ಅಣಬೆಗಳೂ ನಮ್ಮೂರಿನಲ್ಲಿ ಬೆಳೆಯುತ್ತಿವೆ, ಆದರೆ ತುಸು ಅಪೂರ್ವ.
ನಮ್ಮ ನಾಡಿನ ಅಣಬೆಗಳ ವಿಚಾರ ಬಂದರೆ, ಅಗತ್ಯವಾಗಿ ನೆನಪಿಸಿಕೊಳ್ಳಬೇಕಾದ ಅಣಬೆ ಎಂದರೆ ಡಿಕ್ಟಿಯೋ-ರಾ ಎಂಬ ಬಹು ಸುಂದರ ಅಣಬೆ. ಕುಸುರಿ ಕೆಲಸ ಮಾಡಿರುವ ಬಿಳಿ ಬಣ್ಣದ ಲಂಗವನ್ನು ಧರಿಸಿದ ಸ್ವರೂಪ ಹೊಂದಿರುವ ಈ ಅಣಬೆ ಯನ್ನು ಬಿಜಿಎಲ್ ಸ್ವಾಮಿಯವರು ‘ಕನ್ಯಾಸೀ’ ಎಂದು ಹೆಸರಿಸಿ, ವರ್ಣಿಸಿದ್ದಾರೆ. ಚೆನ್ನಾಗಿ ಮಳೆ ಬೀಳುವ ಆಷಾಢದ ಸಮಯದಲ್ಲಿ ನಮ್ಮೂರಿನಲ್ಲಿ ನಾಲ್ಕಾರು ಡಿಕ್ಟಿಯೋ-ರಾ ಅಣಬೆಗಳು ನೆಲದಿಂದ ಮೇಲೇಳುತ್ತವೆ.
ಬೆಳಗ್ಗೆ ಹೊತ್ತಿಗೆ ನೆಲದಿಂದ ಮೊಳಕೆಯೊಡೆಯಲಾರಂಭಿಸಿ, ಮಧ್ಯಾಹ್ನದ ಸಮಯಕ್ಕೆ ಸುಮಾರು ಅರ್ಧ ಅಡಿ ಎತ್ತರಕ್ಕೆ
ಬೆಳೆಯುವ ಡಿಕ್ಟಿಯೋ-ರಾ ಅಣಬೆಯು ನಿಜಕ್ಕೂ ಸುಂದರ. ಮಧ್ಯಾಹ್ನದ ಸಮಯದಲ್ಲಿ ಅದರ ದೇಹದಿಂದ, ತುದಿಯ ಗುಬುಟಿನಿಂದ ಒಂದು ರೀತಿಯ ರಸ ವಸರಲಾಂಭಿಸಿ, ಅದು ಕೆಟ್ಟ ವಾಸನೆಯನ್ನು ಸೂಸುತ್ತದೆ; ಆ ವಾಸನೆ ಎಂದರೆ
ಕೆಲವು ಕೀಟ, ದುಂಬಿಗಳಿಗೆ ಇಷ್ಟ! ಅವು ಅಲ್ಲಿ ಕುಳಿತು, ರಸವನ್ನು ಆಸ್ವಾದಿಸುವುದನ್ನು ನೋಡಿದಾಗ, ಪ್ರಕೃತಿಯ ವ್ಯಾಪಾರವನ್ನು ಕಂಡು ವಿಸ್ಮಯ ಮೂಡುತ್ತದೆ. ಆ ರೀತಿ ರಸ ಹೀರುವ ಕೀಟಗಳೇ ಆ ಅಣಬೆಯ ಬೀಜಪ್ರಸಾರ ಮಾಡುತ್ತವೆ! ಸಂಜೆಯ ಸಮಯಕ್ಕೆ ಆ ಸುಂದರ ಅಣಬೆಯು, ಮುದುರಿ ಬಿದ್ದು, ಮಣ್ಣಿನೊಳಗೊಂದಾಗುತ್ತದೆ. ಕುಸುರಿ ಕೆಲಸ ಮಾಡಿದ ಬಲೆಯ ಸ್ವರೂಪದ ಲಂಗ ಧರಿಸಿದ ಈ ಅಣಬೆಯು, ನಮ್ಮ ದೇಶದ ಅತಿ ಸುಂದರ ಅಣಬೆಗಳಲ್ಲೊಂದು ಎಂಬುದರಲ್ಲಿ ಸಂಶಯವಿಲ್ಲ.
ಮಳೆಗಾಲವು ಭೂಮಿಯನ್ನು ತಣಿಸಿದಾಗ ನೆಲದಿಂದ ಒಡಮೂಡುವ ಮೊಳಕೆಗಳನ್ನು ಚರ್ಚಿಸುತ್ತಾ, ಗೋಡಂಬಿ ಮೊಳಕೆಯಿಂದ ಅಣಬೆಯ ಲಂಗದ ತನಕ ಬಂದೆವು! ಈಗ ನಮ್ಮ ನಾಡಿನಲ್ಲಿ ಮಳೆ ಬೀಳಲಾರಂಭಿಸಿದೆ; ನಿಮ್ಮ ಸುತ್ತಲಿನ
ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ನೀವೂ ಗಮನಿಸಿ, ಗುರುತಿಸಿ, ಇಳೆಯು ಈ ಮುಂಗಾರಿನ ಮೊದಲ ದಿನಗಳಲ್ಲಿ ಪಡುತ್ತಿರುವ ಸಂಭ್ರಮದಲ್ಲಿ ನೀವೂ ಪಾಲುದಾರರಾಗಿ.