೨೫ ವರ್ಷಗಳಿಂದ ನಿರಂತರ ಸೇವೆ: ಅನಾಥ ಹುಲಿ, ಸಿಂಹ, ಚಿರತೆ ಮರಿಗಳ ಸಲಹುತ್ತಿರುವ ಮಹಾತಾಯಿ
ಅಪರ್ಣಾ ಎ.ಎಸ್. ಬೆಂಗಳೂರು
ಎಷ್ಟೋ ಬಾರಿ ಮನೆಯಲ್ಲಿ ಸಾಕಿರುವ ನಾಯಿ, ಬೆಕ್ಕನ್ನೇ ನಿಯಂತ್ರಿಸುವುದು ಕಷ್ಟ. ಆದರೆ, ಇಲ್ಲೊಬ್ಬರು ಬರೋ ಬ್ಬರಿ ೨೫ ವರ್ಷಗಳಿಂದ ಕಾಡು ಮೃಗಗಳನ್ನೇ ಸಾಕುಪ್ರಾಣಿಯ ರೀತಿಯಲ್ಲಿ ಆರೈಕೆ ಮಾಡುತ್ತ, ಆ ಎಲ್ಲ ಅನಾಥ ಮರಿಗಳ ಪಾಲಿಗೆ ‘ಮಹಾತಾಯಿ’ ಎನಿಸಿಕೊಂಡಿದ್ದಾರೆ.
ಬೆಳ್ಳಿ-ಬೊಮ್ಮನ್ ದಂಪತಿ ಆನೆಮರಿಗಳನ್ನು ಸಾಕಿದ ವಿಷಯ ಕೆಲ ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ಅದೇ ಮಾದರಿಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾ ನವನದಲ್ಲಿ ತಾಯಿಯಿಂದ ಬೇರ್ಪಟ್ಟ, ಅನಾರೋಗ್ಯ ಪೀಡಿತ ಚಿರತೆ, ಹುಲಿ ಹಾಗೂ ಸಿಂಹ ಸೇರಿದಂತೆ ಕಾಡು ಮೃಗಗಳನ್ನು ಪೋಷಿಸುವ ಕೆಲಸದಲ್ಲಿ ಕಳೆದ ೨೫ ವರ್ಷದಿಂದಲೂ ಪ್ರಾಣಿ ಪಾಲಕಿ ಸಾವಿತ್ರಮ್ಮ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಸುಮಾರು ೨೫೦ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನು ಈ ರೀತಿ ಪಾಲನೆ-ಪೋಷಣೆಯ ತಪಸ್ಸಿನಲ್ಲಿ ನಿರತರಾಗಿದ್ದಾರೆ.
ಸಾವಿತ್ರಮ್ಮ ಅವರಿಗೆ ಈಗಲೂ, ತಮ್ಮ ಕಿರಿಯ ಮಗ ಏನು ಓದುತ್ತಿದ್ದಾನೆ? ಎಲ್ಲಿ ಓದುತ್ತಿದ್ದಾನೆ? ಎನ್ನುವ ಬಗ್ಗೆ ಮಾಹಿತಿಯಿಲ್ಲವಂತೆ. ಏಕೆಂದು ಕೇಳಿದರೆ ನಿತ್ಯ ಇಲ್ಲಿಗೆ ಬಂದರೆ ವಾಪಸ್ ಹೋಗುವುದೇ ರಾತ್ರಿಗೆ. ಆದ್ದರಿಂದ ಮನೆ, ಮಕ್ಕಳ ದೇಖರೇಖಿಯನ್ನು ಹಿರಿ ಮಗ ನೋಡಿಕೊಳ್ಳುತ್ತಾನೆ. ‘ಮನೆಯ ಚಿಂತೆಗಿಂತ ನನಗೆ ಈ ಪ್ರಾಣಿಗಳನ್ನು ಪೋಷಿಸುವುದರಲ್ಲಿಯೇ ಹೆಚ್ಚು ನೆಮ್ಮದಿ ಇದೆ. ಬೆಳಗ್ಗೆ ನಾನು ಪೋಷಿಸಿದರೆ, ರಾತ್ರಿ ವೇಳೆ ಪರಸಪ್ಪ ಎನ್ನುವವರು ಇರುತ್ತಾರೆ. ನಮ್ಮಿಬ್ಬರೊಂದಿಗೆ ಒಟ್ಟು ೨೩ ಸಿಬ್ಬಂದಿ ಇದ್ದಾರೆ’ ಎನ್ನುತ್ತಾರೆ ಪ್ರಾಣಿ ಸಾಕಮ್ಮ.
೨೫೦ಕ್ಕೂ ಪ್ರಾಣಿಗಳ ಪೋಷಣೆ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವನದ ಕೆಲಸಕ್ಕೆ ಸಾವಿತ್ರಮ್ಮ ಸೇರಿ ೨೫ ವರ್ಷ ಕಳೆದಿದ್ದು, ಅಂದಿನಿಂದ ಇಲ್ಲಿಯ
ವರೆಗೆ ಇದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಸಮಸ್ಯೆ, ತಾಯಿಯಿಂದ ಬೇರ್ಪಟ್ಟು ಇಲ್ಲಿಗೆ ಬಂದಿರುವ ೨೫೦ಕ್ಕೂ ಅಧಿಕ ಪ್ರಾಣಿಗಳ
ಪೋಷಣೆಯನ್ನು ಮಾಡಿದ್ದಾರೆ. ಗಾಯಗೊಂಡ, ತಬ್ಬಲಿಯಾದ ಸಿಂಹ, ಹುಲಿ, ಚಿರತೆ ಮರಿಗಳಿಗೆ ಸಾವಿತ್ರಮ್ಮನೇ ತಾಯಿಯಾಗಿ ಆರೈಕೆ ಮಾಡುತ್ತಿದ್ದಾರೆ. ಮನೆಯ ಮಕ್ಕಳನ್ನು ಕರೆದಂತೆ ಚಿನ್ನ, ಬಂಗಾರವೆಂದು ಕರೆಯುತ್ತ ಚಿರತೆ, ಹುಲಿ, ಸಿಂಹದ ಮರಿಗಳನ್ನು ಮಗುವಿನಂತೆ ಮುದ್ದು ಮಾಡುವುದರಿಂದಾಗಿ ಈ ಪ್ರಾಣಿಗಳೂ ಇವರೊಂದಿಗೆ ಸಲುಗೆಯಿಂದ ವರ್ತಿಸುವುದಲ್ಲದೇ, ಹೇಳಿದಂತೆ ಕೇಳುತ್ತವೆ.
ನಿತ್ಯ ಹಾಲು ಕುಡಿಸಿ, ಆಡಿಸುವ ಸಿಬ್ಬಂದಿ: ಬನ್ನೇರುಘಟ್ಟ ಉದ್ಯಾನಕ್ಕೆ ತರಲಾಗುವ ಅನಾಥ, ಅನಾರೋಗ್ಯ ಪೀಡಿತ ಸಿಂಹ, ಚಿರತೆ, ಹುಲಿ ಸೇರಿದಂತೆ
ಅನೇಕ ಪ್ರಾಣಿಗಳು ಮರಿಗಳಿಗೆ, ಹಾಲು ಕುಡಿಸುವುದೂ ಸೇರಿದಂತೆ ಅಗತ್ಯ ಉಪಚಾರ ಮಾಡುವವರು ಸಾವಿತ್ರಮ್ಮ ಹಾಗೂ ಇತರೆ ಸಿಬ್ಬಂದಿ. ಅವುಗಳ
ಆಹಾರ ಪದ್ಧತಿ ಭಿನ್ನವಾಗಿರುವುದರಿಂದ ಅತ್ಯಂತ ಜಾಗರೂಕತೆ ಅಗತ್ಯ. ಚಿರತೆ, ಸಿಂಹ ಹಾಗೂ ಹುಲಿ ಮರಿಗಳು ಬಂದರೆ ಅವುಗಳಿಗೆ ಮೇಕೆ ಹಾಲು
ಕುಡಿಸುತ್ತೇವೆ. ದಿನಕ್ಕೆ ನಾಲ್ಕು ಬಾರಿ ಹಾಲು ಕುಡಿಸಬೇಕು. ಎಲ್ಲ ಸಿಬ್ಬಂದಿ ಅವುಗಳ ಜತೆಗೆ ಆಟವಾಡುತ್ತ, ಆಸ್ಪತ್ರೆಯ ಒಳಾಂಗಣದಲ್ಲೇ ಓಡಾಡಿಸುತ್ತ
ಇರುವುದರಿಂದ ಅವು ಆರಾಮಾಗಿ ಆಡಿಕೊಂಡು ಬೆಳೆಯುತ್ತಿವೆ.
ಅತ್ಯಾಧುನಿಕ ವ್ಯವಸ್ಥೆ: ಮೃಗಗಳನ್ನು ಹೊರಜಗತ್ತಿಗೆ ಹೋಗಲು ಬಿಡದೇ ಆರೈಕೆ ಮಾಡುತ್ತಿರುವುದರಿಂದ ಕಾಯಿಲೆ, ಸೋಂಕಿನ ಅಪಾಯ ತುಂಬಾ
ಕಡಿಮೆ. ಒಂದು ವೇಳೆ ಅನಾರೋಗ್ಯ ಕಾಡಿದರೂ ವೈದ್ಯರ ಸಲಹೆ ಪಡೆದು ಅಗತ್ಯ ಚಿಕಿತ್ಸೆ ನೀಡಲಾಗುವುದು. ಜತೆಗೆ ಇವುಗಳು ವಾತಾವರಣಕ್ಕೆ ಇನ್ನೂ
ಒಗ್ಗಿಕೊಳ್ಳದ ಹಿನ್ನೆಲೆ ಹಾಲು ಕುಡಿಯುತ್ತಿರುವ ಮರಿಗಳಿಗೆ ಚಳಿಗಾಲದ ವೇಲೆ ಹೀಟರ್ ಹಾಗೂ ಬೇಸಿಗೆಯಲ್ಲಿ ಎಸಿ ರೂಮ್ ಅನ್ನು ಸಿದ್ಧಪಡಿಸ
ಲಾಗಿದೆ. ಅಗತ್ಯ ಅತ್ಯಾಧುನಿಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗೂ ಸೌಲಭ್ಯಗಳಿವೆ ಎನ್ನುತ್ತಾರೆ ಉದ್ಯಾನವನದ
ವೈದ್ಯಾಧಿಕಾರಿ ಡಾ. ಉಮಾಶಂಕರ್.
ಸದ್ಯ ಮೂರು ತಿಂಗಳು ಪ್ರಾಯದ ಚಿರತೆ ಮರಿಗಳನ್ನು ಉದ್ಯಾನವನದ ಪಶು ಆಸ್ಪತ್ರೆಯಲ್ಲಿ ಪಾಲನೆ ಮಾಡಲಾಗುತ್ತಿದೆ. ೮ ಚಿರತೆ ಮರಿಗಳನ್ನು
ಒಂದು ಗುಂಪು, ೩ ಚಿರತೆ ಮರಿಗಳ ಮತ್ತೊಂದು ಗುಂಪಾಗಿ ಪ್ರತ್ಯೇಕಿಸಿಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ಬಳಿಕ ಈಗಾಗಲೇ ಸಿದ್ಧಗೊಳ್ಳುತ್ತಿ ರುವ ಚಿರತೆ
ಸ-ರಿಯ ಕ್ರಾಲನಲ್ಲಿ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು.
-ಡಾ. ಉಮಾಶಂಕರ್ ಉದ್ಯಾನವನದ ವೈದ್ಯಾಧಿಕಾರಿ
ಜನಿಸಿ ವಾರ ಕಳೆದಿದ್ದ ಹಸುಗೂಸನ್ನು ಆರೈಕೆ ಮಾಡುವುದೇ ದೊಡ್ಡ ಸವಾಲು. ಮೊದಲು ಚಿರತೆಗಳಿಗೆ ಮೇಕೆ ಹಾಲು ನೀಡಲಾಗುತ್ತಿದ್ದು ಅದು ಅಷ್ಟಾಗಿ ಒಗ್ಗುತ್ತಿರಲಿಲ್ಲ. ಇದೀಗ ಹೊಂದಿಕೊಂಡಿದ್ದು, ದಿನಕ್ಕೆರಡು ಬಾರಿ ಕುಡಿಸುತ್ತಿದ್ದೇವೆ. ಬೆಳಗ್ಗೆ ಮತ್ತು ಸಂಜೆ ಒಂದು ಲೀಟರ್ ಹಾಲು ಕುಡಿಯುತ್ತಿವೆ. ಎಲ್ಲ ಹನ್ನೊಂದು ಚಿರತೆ ಮರಿಗಳು ಆರೋಗ್ಯವಾಗಿದ್ದು, ಮಕ್ಕಳಂತೆ ಪಾಲನೆ ಪೋಷಣೆ ಮಾಡಿದ್ದರಿಂದ ಹೆಚ್ಚು ಲವಲವಿಕೆಯಿಂದ ಇವೆ.
-ಸಾವಿತ್ರಮ್ಮ ಉದ್ಯಾನವನದ ಪ್ರಾಣಿ ಪಾಲಕಿ
ಪತಿ ಕಳೆದುಕೊಂಡ ಬಳಿಕ ಸಿಕ್ಕ ಕೈಂಕರ್ಯ
ಸಾವಿತ್ರಮ್ಮ ಅವರ ಪತಿಯೂ ಬನ್ನೇರುಘಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಾಣಿ, ಅರಣ್ಯ ರಕ್ಷಣೆಯ ಕೆಲಸದಲ್ಲಿರುವಾಗಲೇ ಮೃತಪಟ್ಟಿದ್ದರು. ಬಳಿಕ ಮನೆ ನಿರ್ವಹಣೆ ಕಷ್ಟಕರವಾಗಿದ್ದ ಸಂದರ್ಭ ದಲ್ಲಿ ಬನ್ನೇರುಘಟ್ಟ ಉದ್ಯಾನವನದಲ್ಲಿಯೇ ಕೆಲಸಕ್ಕೆ ಸೇರಿಕೊಂಡ ಸಾವಿತ್ರಮ್ಮ ಇತರೆ ವಿಭಾಗ ದಲ್ಲಿ ಮೊದಲು ಕೆಲಸ ಮಾಡುತ್ತಿದ್ದರು. ಬಳಿಕ ಮೂರು ತಿಂಗಳಿನಲ್ಲಿಯೇ ಆಸ್ಪತ್ರೆ ವಿಭಾಗಕ್ಕೆ ವರ್ಗಾವಣೆ ಯಾಗಿ, ಅಂದಿನಿಂದಲೂ ವನ್ಯ ಮೃಗಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ಧಾರೆ.