ತುಮಕೂರು: ನಗರದ ಕುಣಿಗಲ್ ರಸ್ತೆಯ ಮರಳೂರು ದಿಣ್ಣೆಯಲ್ಲಿರುವ ಇಂದಿರಾಗಾಂಧಿ ನರ್ಸಿಂಗ್ ವಿದ್ಯಾರ್ಥಿ ನಿಯರ ಹಾಸ್ಟೆಲ್, ವಾರ್ಡನ್ ನಿರ್ಲಕ್ಷ್ಯ ದಿಂದ ಸಮಸ್ಯೆಗಳ ತೊಟ್ಟಿಲಾಗಿದ್ದು, ವಿದ್ಯಾರ್ಥಿನಿಯರು ಪರದಾಡು ವಂತಾಗಿದೆ.
ವಾರ್ಡನ್ ಅನಿತಾಲಕ್ಷ್ಮಿ, ವಿದ್ಯಾರ್ಥಿನಿಯರಿಗೆ ಸರಿಯಾಗಿ ಊಟ, ನೀರು ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಹಾಸ್ಟೆಲ್ ನಲ್ಲಿ 126 ಮಂದಿ ವಿದ್ಯಾರ್ಥಿನಿಯರಿದ್ದು, ಕೆಲವು ಸಂದರ್ಭದಲ್ಲಿ ಹೋಟೆಲ್ ನಿಂದ ಊಟ ತಂದು ತಿನ್ನುವಂತಹ ಸಂಕಟ ಎದುರಾಗಿದೆ. ಊಟ, ತಿಂಡಿ, ನೀರು ಸೇರಿದಂತೆ ಯಾವುದೇ ಸವಲತ್ತು ಸರಿಯಾಗಿ ಸಿಗುತ್ತಿಲ್ಲ.
ವಾರ್ಡನ್ ವಿದ್ಯಾರ್ಥಿನಿಯರಲ್ಲಿ ಭಯ ಮೂಡಿಸಿ ಮೇಲಧಿಕಾರಿಗಳಿಗೆ ದೂರು ನೀಡಿದರೆ ಹಾಸ್ಟೆಲ್ ನಿಂದ ಹೊರಹಾಕುತ್ತೇನೆ ಎಂದು ಹೆದರಿಸುತ್ತಾರೆ. ಸಮಸ್ಯೆಗಳ ಸರಮಾಲೆಯಿಂದ ನೊಂದಿರುವ ವಿದ್ಯಾರ್ಥಿನಿಯರು ಬಿಸಿಎಂ ಜಿಲ್ಲಾ ಅಧಿಕಾರಿಗೆ ಪತ್ರ ಬರೆದು ನರ್ಸಿಂಗ್ ಹಾಸ್ಟೆಲ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ.
*
ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಸಮರ್ಪಕವಾಗಿ ವಾರ್ಡನ್ ಕಲ್ಪಿಸಿಕೊಡಬೇಕು. ವಾರ್ಡನ್ ನಿರ್ಲಕ್ಷ್ಯ ತೋರಿ ವಿದ್ಯಾರ್ಥಿನಿಯರಿಗೆ ತೊಂದರೆ ಮಾಡಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು.
ಗಂಗಪ್ಪ, ಜಿಲ್ಲಾ ಬಿಸಿಎಂ ಅಧಿಕಾರಿ, ತುಮಕೂರು.