Sunday, 24th November 2024

ಮಕ್ಕಳ ಆರೈಕೆಗಿಂತ ಮೃಗಗಳ ಆರೈಕೆ ನನಗಿಷ್ಟ

ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್.

ಹುಲಿ, ಸಿಂಹ, ಚಿರತೆ ಮರಿಗಳನ್ನು ಕಂಡಾಗ ನಮಗೇನು ಹೆದರಿಕೆಯಾಗುವುದಿಲ್ಲ. ಅವುಗಳು ಬೇರೆಯಲ್ಲ. ನಮ್ಮ ಮನೆಯ ಮಕ್ಕಳು ಬೇರಲ್ಲ ಎನ್ನುವಂತೆ ಸಾಕುತ್ತೇವೆ. ಅವುಗಳೂ ನಮ್ಮೊಂದಿಗೆ ಮನೆಯ ಸಾಕುಪ್ರಾಗಳ ರೀತಿಯಲ್ಲಿಯೇ ಇರುತ್ತದೆ ಎಂದು ಬನ್ನೇರುಘಟ್ಟದ ಪ್ರಾಣಿ ಪಾಲಕಿ ಸಾವಿತ್ರಮ್ಮ ಹೇಳಿದ್ದಾರೆ. ಮೂರು ತಿಂಗಳ ಎರಡು ಚಿರತೆ ಮರಿ ಸೇರಿದಂತೆ ೧೧ ಚಿರತೆ ಮರಿ, ತಲಾ ಒಂದೊಂದು ಸಿಂಹ ಹಾಗೂ ಹುಲಿಯನ್ನು ಸಲಹುತ್ತಿರುವ ಸಾವಿತ್ರಮ್ಮ ಅವರು ‘ವಿಶ್ವವಾಣಿ’ ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನ ಇಲ್ಲಿದೆ.

ಎಷ್ಟು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ?
ಅನುಕಂಪದ ಆಧಾರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಂದು ಸುಮಾರು ೨೫ ವರ್ಷ ಕಳೆದಿದೆ. ಆರಂಭದಲ್ಲಿ ಇತರೆ ವಿಭಾಗದಲ್ಲಿ ಕೆಲಸ ಮಾಡುತ್ತಿದೆ. ಆದರೀಗ ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ಆಸ್ಪತ್ರೆಯ ವಿಭಾಗಕ್ಕೆ ವರ್ಗಾಯಿಸಿದರು. ಅಂದಿನಿಂದ ಇಲ್ಲಿಯವರೆಗೆ ಇದೇ ವಿಭಾಗ ದಲ್ಲಿ ಕೆಲಸ ಮಾಡುತ್ತಿದ್ದೇನೆ.

ಕ್ರೂರ ಮೃಗಗಳನ್ನು ಬೆಳೆಸುವಾಗ ಭಯ ಆಗಿದೆಯೆ?
ಭಯ ಅನ್ನುವಂಥಹದ್ದು ಏನಿಲ್ಲ. ಇಲ್ಲಿಗೆ ತರುವ ಸಿಂಹ, ಚಿರತೆ, ಹುಲಿ ಸೇರಿದಂತೆ ಹಲವು ಪ್ರಾಣಿಗಳು ಹಸು ಗೂಸಾಗಿರುವುದರಿಂದಲೂ ನೋಡಿರು ತ್ತೇವೆ. ಆದ್ದರಿಂದ ಅವುಗಳಿಗೆ ನಾವೆಲ್ಲ ಪರಿಚಯಸ್ಥ ಮುಖ. ಹಾಗಾಗಿ ಭಯ ಅನಿಸುವುದಿಲ್ಲ. ಕೇವಲ ಸಿಬ್ಬಂದಿಯಷ್ಟೇ ಇದ್ದರೆ ಇಲ್ಲಿರುವ ಚಿರತೆ, ಹುಲಿ, ಸಿಂಹದ ಮರಿಗಳು ಸಾಮಾನ್ಯ ವಾಗಿಯೇ ಓಡಾಡಿಕೊಂಡಿರುತ್ತವೆ. ಅವುಗಳಿಗೆ ಹಾಲು ಕುಡಿಸುವುದು, ಗೂಡುಗಳ ಸ್ವಚ್ಛದ ಸಮಯದಲ್ಲಿ ಹೊರಗೆ ಇರುತ್ತದೆ. ಆದರೆ, ಜನ ಅಽಕವಾದರೆ ಮಾತ್ರ ಅವಕ್ಕೆ ಭಯವಾಗಿ ಕೂಗುತ್ತವೆ, ಕೆಲವೊಮ್ಮೆ ಪರಚುತ್ತವೆ.

ಇಲ್ಲಿಯವರೆಗೆ ನಿಮ್ಮ ಮೇಲೆ ಪ್ರಾಣಿಗಳು ಆಕ್ರಮಣ ಮಾಡಿವೆಯೇ?
ಇಲ್ಲ, ಕಳೆದ ೨೫ ವರ್ಷದ ಅನುಭವದಲ್ಲಿ ಯಾವ ಪ್ರಾಣಿಯೂ ನನಗೆ ಅಥವಾ ನನ್ನೊಂದಿಗಿರುವ ೨೩ ಸಿಬ್ಬಂದಿಗೆ ಯಾವುದೇ ರೀತಿಯಲ್ಲೂ ಹಾನಿ
ಮಾಡಿಲ್ಲ. ಒಳಗಡೆಯೇ ಇರಿಸಿ ಜತನದಿಂದ ಆರೈಕೆ ಮಾಡುತ್ತಿರುತ್ತೇವೆ. ಸಿಬ್ಬಂದಿ ಬಿಟ್ಟರೆ ಬೇರ‍್ಯಾರೂ ಕಾಣುವುದಿಲ್ಲ. ಅಪರೂಪಕ್ಕೆ ಬರುವ ಅಪರಿಚಿ ತರನ್ನು ಕಂಡಾಗ ಭಯಗೊಳ್ಳುತ್ತವೆ. ಪರಚುವುದು, ಕಿರಿಚುವುದು ಮಾಡುತ್ತವೆ. ಇಲ್ಲಿಯವರೆಗೆ ಯಾವುದೂ ಆಕ್ರಮಣ ಮಾಡಿಲ್ಲ.

ಒಟ್ಟು ಎಷ್ಟು ಜನ ಇಲ್ಲಿ ಆರೈಕೆಗಾಗಿ ಇದ್ದೀರಾ?
ಈ ವಿಭಾಗದಲ್ಲಿ ನಾವು ಒಟ್ಟು ೨೩ಕ್ಕಿಂತ ಹೆಚ್ಚು ಜನರಿದ್ದು, ಎರಡು ಪಾಳಿಯಲ್ಲಿ ಇಲ್ಲಿಗೆ ಬರುವ ಪ್ರಾಣಿಗಳನ್ನು ಆರೈಕೆ ಮಾಡುತ್ತೇವೆ. ಇಲ್ಲಿರುವ
ಬಹುತೇಕ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿರುವ ದಿನಗೂಲಿ ನೌಕರರು. ಹಲವರು ಬಾಡಿಗೆ ಕಟ್ಟುವುದು ಕಷ್ಟ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಆದರೆ, ಪ್ರಾಣಿಗಳನ್ನು ಮಾತ್ರ ಮನೆಮಕ್ಕಳ ರೀತಿ ನೋಡಿಕೊಳ್ಳುತ್ತಾರೆ. ಈಗಿರುವ ಉಮಾಶಂಕರ್ ಅವರು ವೈದ್ಯಾಧಿಕಾರಿಯಾಗಿ ಬಂದ ಮೇಲೆ ನಾವು ಕೇಳುವ
ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಪ್ರಾಣಿಗಳಿಗೂ ಎಲ್ಲ ರೀತಿ ಸೌಲಭ್ಯವನ್ನು ಒದಗಿಸುವುದಕ್ಕೆ ಸಹಾಯ ಮಾಡುತ್ತಿದ್ದಾರೆ.

ಮೃಗಗಳಿಗೆ ಅನಾರೋಗ್ಯವಾದ ಸಂದರ್ಭದಲ್ಲಿ ಆರೈಕೆ ಹೇಗೆ?
ಸಾಮಾನ್ಯವಾಗಿ ಇಲ್ಲಿರುವ ಪ್ರಾಣಿಗಳು ಹೊರ ಜಗತ್ತಿಗೆ ಹೆಚ್ಚು ಕಾಣಿಸಿಕೊಳ್ಳದೇ ಇರುವುದರಿಂದ ಸೋಂಕು ತಗಲುವುದು ಕಡಿಮೆ. ಒಂದು ವೇಳೆ
ಏನಾದರೂ ಅನಾರೋಗ್ಯ ಕಂಡು ಬಂದರೆ ವೈದ್ಯರ ಸಲಹೆ ಮೇರೆಗೆ ಎಲ್ಲಾ ಅವಶ್ಯಕ ಅಗತ್ಯಗಳನ್ನು ನೀಡಲಾಗುವುದು. ಇನ್ನು ಇತ್ತೀಚಿನ ದಿನದಲ್ಲಿ ಹಾಲು ಕುಡಿಯುವ ಮರಿಗಳನ್ನು ಸಂರಕ್ಷಿಸುವಾಗ, ಚಳಿಗಾಲದ ಸಂದರ್ಭದಲ್ಲಿ ಹೀಟರ್ ಹಾಗೂ ಬೇಸಿಗೆಯಲ್ಲಿ ಒಂದು ಎಸಿ ರೂಮ್‌ನಲ್ಲಿ ಮರಿಗಳನ್ನು ಬಿಡಲಾಗುತ್ತದೆ. ಸಂಪೂರ್ಣವಾಗಿ ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತದೆ.

ಆಹಾರವಾಗಿ ಏನನ್ನು ನೀಡುತ್ತೀರಿ?
ಆಹಾರ ಪದ್ಧತಿ ಪ್ರಾಣಿಯಿಂದ ಪ್ರಾಣಿಗೆ ಬದಲಾಗುತ್ತಾ ಹೋಗುತ್ತದೆ. ಹಾಲು ಕುಡಿಯುವ ಚಿರತೆ, ಸಿಂಹ ಹಾಗೂ ಹುಲಿ ಬಂದರೆ ಅವುಗಳಿಗೆ ಮೇಕೆ ಹಾಲು ಕುಡಿಸುತ್ತೇವೆ. ದಿನಕ್ಕೆ ನಾಲ್ಕು ಬಾರಿ ಹಾಲು ಕುಡಿಸಬೇಕು. ಬೆಳಗ್ಗೆ ಹೊತ್ತಿನಲ್ಲಿ ನಾನು ರಾತ್ರಿ ಸಮಯದಲ್ಲಿ ಪರಸಯ್ಯ ಎನ್ನುವವರು ಹಾಲು ಕುಡಿಸುತ್ತಾರೆ. ಸರಾಸರಿ ಒಂದು ಲೀಟರ್ ಹಾಲನ್ನು ಚಿರತೆ ಮರಿಗಳು ಕುಡಿಯುತ್ತವೆ. ಈಗಿರುವ ಈ ಚಿರತೆ ಮರಿಗಳು ಆರಂಭದಲ್ಲಿ ಹಾಲು ಕುಡಿಯಲು
ಒಗ್ಗಿಕೊಂಡಿರಲಿಲ್ಲ. ಅವುಗಳ ತಾಯಿಯ ನಿರೀಕ್ಷೆಯಲ್ಲಿದ್ದವು. ಇದರಿಂದಾಗಿ ಇಲ್ಲಿಗೆ ಕರೆತಂದಾಗ ಏನೂ ತಿನ್ನದೆ ನಿತ್ರಾಣವಾಗಿದ್ದವು. ಹೀಗಾಗಿ ಹಾಲು ಕುಡಿಸಲು ಪ್ರಾರಂಭ ಮಾಡಿದೆವು. ಬೆಳಗ್ಗೆ ಹಾಗೂ ರಾತ್ರಿಯ ವೇಳೆ ಒಂದು ಒಂದೂವರೆ ಲೀಟರ್ ಹಾಲು ಕುಡಿಸುತ್ತೇವೆ. ಈಗ ಆರಾಮಾಗಿ ಆಟವಾಡಿ ಕೊಂಡು ಬೆಳೆಯುತ್ತಿವೆ.

ಇಲ್ಲಿಯವರೆಗೆ ನೀವು ಎಷ್ಟು ಮೃಗಗಳ ಆರೈಕೆ ಮಾಡಿ ಬೆಳೆಸಿರುವಿರಿ?
ಕಳೆದ ೨೫ ವರ್ಷದಲ್ಲಿ ೨೫೦ಕ್ಕೂ ಅಧಿಕ ಪ್ರಾಣಿಗಳ ಆರೈಕೆ ಮಾಡಿ ಬೆಳೆಸಿದ್ದೇನೆ. ನಾನೊಬ್ಬಳೇ ಎನ್ನುವುದಕ್ಕಿಂತ ನಾವೆಲ್ಲ ಸೇರಿ ಈ ಪ್ರಾಣಿಗಳನ್ನು ಸಾಕಿದ್ದೇವೆ. ಭಿನ್ನ, ವಿಭಿನ್ನ ರೀತಿಯ, ಭಿನ್ನ ಸಮಸ್ಯೆಯ ಪ್ರಾಣಿಗಳನ್ನು ನೋಡಿದ್ದೇವೆ. ಆರಂಭದಲ್ಲಿ ಒಗ್ಗಿಕೊಳ್ಳದಿದ್ದರೂ ಕ್ರಮೇಣ ಎಲ್ಲ ಪ್ರಾಣಿಗಳು ನಮ್ಮ ಮನೆಯ ಸಾಕು ಪ್ರಾಣಿಗಳ ರೀತಿ ಹೊಂದಿಕೊಂಡು ಹೋಗುತ್ತವೆ.

ಈ ಅನುಭವ ಹೇಗನಿಸುತ್ತದೆ?
ನಮ್ಮ ಮಕ್ಕಳನ್ನು ನೋಡಿಕೊಳ್ಳುವ ರೀತಿಯಲ್ಲಿಯೇ ಇವುಗಳನ್ನು ಆರೈಕೆ ಮಾಡುತ್ತೇವೆ. ನಮಗೆ ಮಕ್ಕಳು ಹೆಚ್ಚಲ್ಲ, ಇವುಗಳೂ ಹೆಚ್ಚಲ್ಲ. ಇಲ್ಲಿಗೆ ಕರೆತರುವ ಪ್ರತಿ ಜೀವಿಯನ್ನು ಅತ್ಯಂತ ಹೆಚ್ಚು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತೇವೆ. ಅವುಗಳಿಗೇ ನೂ ಹೆಚ್ಚು ಕಮ್ಮಿಯಾಗದಂತೆ ನೋಡಿ ಕೊಳ್ಳುತ್ತೇವೆ. ಮೊದಲು ಮರಿಗಳು ಹೊಂದಿಕೊಳ್ಳಲು ಕಷ್ಟಪಡುತ್ತಿದ್ದವು ಆಗೆಲ್ಲಾ ಕಿರಿಚುವುದು, ಪರಚುವುದು ಮಾಡುತ್ತಿದ್ದವು.ಈಗ ಅವೆಲ್ಲಾ ಇಲ್ಲ.
ಇದು ಅತ್ಯಂತ ಖುಷಿ ಕೊಡುವ ಕೆಲಸ ಹಾಗಾಗಿ ಯಾವುದೇ ಬೇಸರವಿಲ್ಲದೇ ಮಾಡುತ್ತಿದ್ದೇವೆ.

ಮಕ್ಕಳಿಗಿಂತ ನನಗೆ ಇಲ್ಲಿರುವ ಮರಿಗಳೇ ಇಷ್ಟ ನನ್ನೊಂದಿಗೆ ೨೫೦ಕ್ಕೂ ಹೆಚ್ಚು ಸಿಬ್ಬಂದಿಗಳ ನಿರಂತರ ಶ್ರಮ ವೈದ್ಯಾಧಿಕಾರಿಯಾಗಿ ಡಾ.ಉಮಾಶಂಕರ್ ಬಂದ ಬಳಿಕ ಹಲವು ಬದಲಾವಣೆ ಕಳೆದ ೨೫ ವರ್ಷದಿಂದ ಬನ್ನೇರಘಟದ ಪ್ರಾಣಿಗಳ ಆಸ್ಪತ್ರೆಯೇ ಎರಡನೇ ಮನೆ.

*

ನಮ್ಮ ಮನೆಯ ಮಕ್ಕಳನ್ನು ಕರೆದಂತೆ ಚಿನ್ನ, ಬಂಗಾರ ಎಂದು ಸಿಬ್ಬಂದಿ ಸೇರಿ ನಾಮಕರಣ ಮಾಡಿರುತ್ತೇವೆ. ಆದರೆ ಪ್ರಾಣಿಗಳು ದೊಡ್ಡದಾದ ಬಳಿಕ ಅವುಗಳನ್ನು ಸ-ರಿ ಅಥವಾ ಮೃಗಾಲಯಕ್ಕೆ ಬಿಡುವ ಸಮಯದಲ್ಲಿ ಅವುಗಳಿಗೆ ಮರುನಾಮಕರಣ ಮಾಡಲಾಗುತ್ತದೆ. ಹಲವು ಬಾರಿ ದತ್ತು
ಪಡೆದ ವರು ಸೂಚಿಸುವ ಹೆಸರನ್ನು ಇಡಲಾಗುವುದು.
– ಸಾವಿತ್ರಮ್ಮ, ಪಾಲಕಿ