ತಿಳಿರು ತೋರಣ
srivathsajoshi@yahoo.com
ಗುಬ್ಬಿಯಂತಹ ಚಿಕ್ಕ ಪಕ್ಷಿಯಿಂದ ಹಿಡಿದು, ಆನೆಯಂತಹ ಬೃಹದ್ಗಾತ್ರದ ಜೀವಿಗಳ ಕೊಡುಗೆ, ಸಹಕಾರ ಎಲ್ಲದರಲ್ಲೂ ಎಲ್ಲ ಕಡೆಯೂ ಇರುತ್ತದೆ. ಒಂದು ಸಾಧನೆಯಲ್ಲಿ, ಅದರ ಯಶಸ್ಸಿನಲ್ಲಿ, ಮತ್ತು ಪ್ರಯೋಜನದಲ್ಲಿ ಎಲ್ಲರೂ ಸಮಭಾಗಿಗಳಾಗುತ್ತಾರೆ. ಕೆಲವರದು ಪ್ರತ್ಯಕ್ಷ ಸಹಕಾರವಿರಬಹುದು, ಕೆಲವರದು ಪರೋಕ್ಷವಿರಬಹುದು. ಆದರೆ ಸಮಭಾವದಿಂದ ಎಲ್ಲರನ್ನೂ ಗುರುತಿಸಿ ಗೌರವಿಸುವುದು ಮುಖ್ಯ.
ಅಳಿಲುಸೇವೆ ಎಂಬ ಜನಪ್ರಿಯ ನುಡಿಗಟ್ಟಿಗೆ ಕಾರಣವಾದ ಪುರಾಣಕಥೆ ನಮಗೆಲ್ಲ ಗೊತ್ತೇ ಇರುವಂಥದ್ದು. ಮೂಲ ವಾಲ್ಮೀಕಿ ರಾಮಾಯಣ ದ್ದಲ್ಲವಾದರೂ, ಆಮೇಲಿನ ಕವಿಗಳಾರೋ ಕಲ್ಪಿಸಿದ್ದಾದರೂ, ಸತ್ತ್ವಪೂರ್ಣ ಮತ್ತು ಮೌಲ್ಯಯುತ ಕಥೆ ಅದು. ವಾನರ ಸೇನೆಯು ಲಂಕೆಗೆ ಸೇತುವೆ ಕಟ್ಟುತ್ತಿರುವಾಗ ಪುಟ್ಟದೊಂದು ಅಳಿಲು ತಾನೂ ಆ ಮಹತ್ಕಾರ್ಯದಲ್ಲಿ ಭಾಗಿಯಾಗಬೇಕೆಂದು ಬಯಸುತ್ತದೆ; ಸಮುದ್ರದ ನೀರಿನಲ್ಲಿ ಮುಳುಗಿ ಮೈ ಒದ್ದೆ ಮಾಡಿ ಕೊಂಡು ಬಂದು ಸಮುದ್ರತೀರದ ಮರಳಿನ ಮೇಲೆ ಹೊರಳಾಡಿ ಮೈಗೆಲ್ಲ ಮರಳು ಅಂಟಿಸಿಕೊಳ್ಳುತ್ತದೆ; ನಿರ್ಮಾಣವಾಗುತ್ತಿರುವ ಸೇತುವೆಯ ಮೇಲೆ ಹೋಗಿ ಮೈ ಕೊಡವಿಕೊಂಡು ಕಲ್ಲುಗಳ ನಡುವೆ ಮರಳನ್ನು ಉದುರಿಸುತ್ತದೆ; ಕಲ್ಲುಗಳು ಒತ್ತಟ್ಟಾಗಿ ಬೆಸೆದು ಸೇತುವೆ ಭದ್ರವಾಗಲೆಂದು ಅದರ ಆಶಯ. ಈ ಪರಿಕ್ರಮವನ್ನು ಅಳಿಲು ದಿನವಿಡೀ ದಣಿವಿಲ್ಲದೆ ಮಾಡುತ್ತದೆ.
ಸೇತುವೆಯನ್ನು ಕಟ್ಟುತ್ತಿದ್ದ ಕಪಿಗಳು ಎಲ್ಲಿಯದಪ್ಪಾ ಇದೊಂದು ಉಪದ್ರವ ಎಂದು ಅಳಿಲಿಗೆ ಛೀಮಾರಿ ಹಾಕಿದ್ದೂ ಇರಬಹುದು. ಆದರೂ ಅಳಿಲು ಏಕಾಗ್ರತೆಯಿಂದ ತನ್ನ ಪಾಡಿಗೆ ತಾನು ಆ ರೀತಿ ಮರಳು ತುಂಬುವ ಕೆಲಸ ಮುಂದುವರಿಸುತ್ತದೆ. ಸೇತುವೆ ನಿರ್ಮಾಣಕಾರ್ಯ ಭರದಿಂದ ಸಾಗುತ್ತಿರುವುದನ್ನು ನೋಡುತ್ತಿದ್ದ ಶ್ರೀರಾಮ ಆ ಅಳಿಲಿನ ಕಾರ್ಯತತ್ಪರತೆಯನ್ನು ಗಮನಿಸುತ್ತಾನೆ. ಅದನ್ನೆತ್ತಿ ಕೊಂಡು ಮೈದಡವಿ ಮುದ್ದಿಸುತ್ತಾನೆ. ಹಾಗೆ ಬೆನ್ನಮೇಲೆ ಶ್ರೀರಾಮನು ಕೈಯಿಂದ ನೇವರಿಸಿದ್ದರಿಂದಲೇ ಅಳಿಲಿಗೆ ಈಗಲೂ ಬೆನ್ನಮೇಲೆ ಮೂರು ಗೆರೆಗಳು- ಅಂತೊಂದು ಚಂದದ ನಂಬಿಕೆ.
ಈ ಕಥೆಯಲ್ಲಿ ನಾವು ಹೆಕ್ಕಿಕೊಳ್ಳಬೇಕಾದ ಕೆಲವು ಅಂಶಗಳಿವೆ. ಅಳಿಲು ಹೇಳಿಕೇಳಿ ಬಲು ಚಿಕ್ಕ ಪ್ರಾಣಿ. ಸಮುದ್ರದ ಮೇಲೆ ಸೇತುವೆ ನಿರ್ಮಾಣದಂಥ ಅತಿ ಕಷ್ಟಕರ ಬೃಹತ್ ಯೋಜನೆಯಲ್ಲಿ ಪುಟಗೋಸಿ ಅಳಿಲು ಏನು ತಾನೆ ನೆರವು ನೀಡೀತು? ಆದರೂ ಅದು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನ್ನ ಮನಸ್ಸನ್ನೂ ಹೃದಯ ವನ್ನೂ ಸಮರ್ಪಿಸಿ ಆ ಬೃಹತ್ ಯೋಜನೆಯ ಸಂಕಲ್ಪದಲ್ಲಿ ತೊಡಗಿಸಿಕೊಂಡಿತು; ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿತು. ಸೇತುವೆಯ ಅಗಾಧತೆಯ ಮುಂದೆ ಆ ಅಳಿಲು ಉದುರಿಸಿದ ಮರಳಿನ ಕಣಗಳು ಏನೇನೂ ಅಲ್ಲ.
ಆದರೇನಂತೆ, ಅದರ ಸೇವಾ ಮನೋಭಾವ, ಒಂದು ಸದುದ್ದೇಶಕ್ಕಾಗಿ ದೈಹಿಕ ಶ್ರಮದ ಸಮರ್ಪಣೆ ಸಾಟಿಯಿಲ್ಲದವು. ಆದ್ದರಿಂದಲೇ ಶ್ರೀರಾಮ
ಅದನ್ನು ಮೆಚ್ಚಿ ಮುದ್ದಾಡಿದನು. ಸೇವೆ ಸಲ್ಲಿಸಿದ್ದರ ಗುರುತು ಅಳಿಲಿಗೆ ತಲೆತಲಾಂತರಗಳಲ್ಲೂ ಅಳಿಯದೇ ಇರುವಂತೆ ಹರಸಿದನು. ದೇವರಿಗೆ ಸೇವೆಯಲ್ಲಿ ಚಿಕ್ಕದು ದೊಡ್ಡದು ಅಂತೇನಿಲ್ಲ. ಹೃದಯ ಪೂರ್ವಕವಾಗಿ ಮಾಡುವ ಕಿಂಚಿತ್ ಸೇವೆ ಕೂಡ ದೇವರ ದೃಷ್ಟಿಯಲ್ಲಿ ದೊಡ್ಡದೇ. ಇದರಲ್ಲಿ ಇನ್ನೂ ಒಂದು ಸೂಕ್ಷ್ಮ ವಿಚಾರವಿದೆ: ಇಲ್ಲಿ ಅಳಿಲಿನ ನಿಸ್ವಾರ್ಥ ಸೇವೆ ಎಷ್ಟು ಮುಖ್ಯವೋ ಶ್ರೀರಾಮಚಂದ್ರನು ಅದನ್ನು ಗುರುತಿಸಿ ಗೌರವಿಸಿದನು
ಎನ್ನುವುದೂ ಅಷ್ಟೇ ಮುಖ್ಯ.
ಈಗ ಕಲಿಯುಗದಲ್ಲಿ ಸಾಮಾನ್ಯವಾಗಿ ಏನಾಗುತ್ತದೆಂದರೆ, ನಿರ್ಮಲ ಮನಸ್ಸಿನಿಂದ ನಿಸ್ವಾರ್ಥ ಭಾವದಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ
ಕೆಲಸ ಮಾಡುವ ‘ಅಳಿಲು’ಗಳು ಇರುತ್ತವೆ; ಆದರೆ ಅವುಗಳ ಸೇವೆಯನ್ನು ಗುರುತಿಸಿ ಗೌರವಿಸುವ ‘ಶ್ರೀರಾಮಚಂದ್ರ’ರು ಬಲು ಅಪರೂಪ. ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂದು ಬೀಗುವವರ ಸಂಖ್ಯೆಯೇ ಹೆಚ್ಚು. ಬೇರೆಯವರಿಗೆ ಸಲ್ಲಬೇಕಾದ ಕೀರ್ತಿಯನ್ನೂ ತಾನೇ ಕಸಿದುಕೊಳ್ಳುವ ಹುನ್ನಾರ. ಎರಡು-ಮೂರು ಜನರಷ್ಟೇ ಇರುವ ಚಿಕ್ಕಚಿಕ್ಕ ಸಂಸಾರಗಳಿರಲಿ, ಕಾರ್ಪೊರೇಟ್ ಜಗತ್ತಿನ ದೊಡ್ಡದೊಡ್ಡ ಬಹುರಾಷ್ಟ್ರೀಯ ಕಂಪನಿ ಗಳಿರಲಿ, ಲಾಭರಹಿತ ಉದ್ದೇಶದಿಂದ ಆರಂಭವಾಗಿ ಆಮೇಲೆ ರಾಜಕೀಯ ಮೆತ್ತಿಕೊಂಡು ಅಧ್ವಾನದ ಕೂಪಗಳಾಗುವ ಸಂಘ- ಸಂಸ್ಥೆ ಕೂಟ-ಒಕ್ಕೂಟಗಳೇ ಇರಲಿ… ಅಲ್ಲೆಲ್ಲ ಕೆಲವಾದರೂ ಅಳಿಲುಗಳು ಇದ್ದೇಇರುತ್ತವೆ; ಅವುಗಳ ಸೇವೆಯ ಗುರುತಿಸುವಿಕೆ, ಗೌರವಿಸುವಿಕೆ ಮಾತ್ರ ಇಲ್ಲವೇಇಲ್ಲ ಎನ್ನುವಷ್ಟು ಅಪರೂಪ.
ಈ ಹಿನ್ನೆಲೆಯಲ್ಲಿ, ಕಳೆದವಾರ ದಿಲ್ಲಿಯಲ್ಲಿ ಜರುಗಿದ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವನ್ನೊಮ್ಮೆ ಮೆಲುಕು ಹಾಕೋಣ. ಪ್ರಜಾಪ್ರಭುತ್ವದ ದೇಗುಲವೆಂದೇ ಭಾವಿಸಲಾಗುವ ಸಂಸತ್ತಿನ ಹೊಸ ಕಟ್ಟಡ ನಿರ್ಮಾಣ ಮತ್ತು ರಾಷ್ಟ್ರಕ್ಕೆ ಅದರ ಸಮರ್ಪಣೆ- ನಮ್ಮ ಜೀವಿತಕಾಲದಲ್ಲಿ ಪ್ರತ್ಯಕ್ಷ ಒದಗಿಬಂದ ಭಾಗ್ಯವೆಂಬಂತೆ ಮೂಡಿದ ಅಭೂತಪೂರ್ವ ದೃಶ್ಯಾವಳಿ; ಅಪ್ಪಟ ಭಾರತೀಯ ಪರಂಪರೆಯ ದ್ಯೋತಕವಾಗಿ ಹೋಮ-ಹವನ
ಗಳು; ಶೃಂಗೇರಿಯಿಂದ ವಿಶೇಷವಾಗಿ ಕರೆಸಿದ್ದ ಪುರೋಹಿತರಿಂದ ವೇದಮಂತ್ರಗಳ ಘೋಷ; ನಾದಸ್ವರದ ಮಂಗಲಧ್ವನಿ; ತಮಿಳುನಾಡಿನ ಆಧೀನಂ ಸಂತರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಸೆಂಗೋಲ್’ ಹಸ್ತಾಂತರ; ಕಚ್ಚೆ-ಪಂಚೆ ಉಟ್ಟುಕೊಂಡು ಮನೆಯ ಯಜಮಾನನಂತೆ ಕಾಣಿಸುತ್ತಿದ್ದ ಮೋದಿಯವರಿಂದ ಆ ರಾಜದಂಡಕ್ಕೆ ಶಿರಸಾಷ್ಟಾಂಗ ಪ್ರಣಾಮ; ಸಂಸತ್ ಭವನದೊಳಗೆ ಸಭಾಧ್ಯಕ್ಷ ಪೀಠದ ಹಿಂಭಾಗದ ಗೋಡೆಯಲ್ಲಿ ಅದಕ್ಕೆಂದೇ
ನಿರ್ಮಿಸಿದ ಕವಚದಲ್ಲಿ ರಾಜದಂಡದ ಸ್ಥಾಪನೆ; ವಿವಿಧ ಮತ ಧರ್ಮಗಳ ಗುರು-ಪ್ರತಿನಿಽಗಳಿಂದ ಸ್ವಸ್ತಿವಾಚನ; ಬಲದೇವಾನಂದ ಸಾಗರರಿಂದ ಭಗವದ್ಗೀತೆ ಪಠನ… ಎಲ್ಲವೂ ಚಂದವೋ ಚಂದ.
ನಮ್ಮನೆಯದೇ ಸಮಾರಂಭವೇನೋ ಎನ್ನುವಷ್ಟು ಆತ್ಮೀಯವೆನಿಸಿ ಪ್ರೇಕ್ಷಕರಿಗೆಲ್ಲ ಅಭಿಮಾನಪೂರ್ಣ ಆನಂದ. ಇವೆಲ್ಲದರ ನಡುವೆ ಇಡೀ ಸಮಾರಂಭಕ್ಕೆ ಕಳಶ ಪ್ರಾಯವಾಗಿ, ಅತ್ಯಂತ ಅರ್ಥ ಪೂರ್ಣವಾಗಿ ಮತ್ತು ಹೃದಯಸ್ಪರ್ಶಿಯಾಗಿ ದಾಖಲಾದದ್ದು ಈ ಭಾಗ: ಸಂಸತ್ ಭವನದ ವಿಧ್ಯುಕ್ತ
ಉದ್ಘಾಟನೆಯ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಮೃತಶಿಲೆಯ ಫಲಕಗಳ ಪರದೆ ಸರಿಸಿ ಆದಮೇಲೆ ಅಲ್ಲಿ ನಡೆದ ಮೊತ್ತಮೊದಲ ಸತ್ಕಾರ್ಯ, ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಸಾವಿರಾರು ಕಾರ್ಮಿಕರ ಪ್ರತಿನಿಧಿಗಳಾಗಿ ಆಯ್ದ ಹನ್ನೊಂದು ಮಂದಿಯನ್ನು ಮುಂದಕ್ಕೆ ಕರೆದು ಸಾಲಾಗಿ ನಿಲ್ಲಿಸಿ ಖುದ್ದಾಗಿ ಪ್ರಧಾನಿಯಿಂದಲೇ ಅವರಿಗೆ ಶಾಲು ಹೊದೆಸಿ ಫಲಕ ಕೊಟ್ಟು ಸನ್ಮಾನ.
ನಾನಂತೂ ಯುಟ್ಯೂಬ್‌ನಲ್ಲಿ ಆ ಭಾಗವನ್ನು ಮತ್ತೆಮತ್ತೆ ರಿ-ಪ್ಲೇ ಮಾಡಿ ಕಣ್ತುಂಬಿಸಿಕೊಂಡಿದ್ದೇನೆ. ಪ್ರತಿಸಾರಿ ನೋಡಿದಾಗ, ಆ ಕಾರ್ಮಿಕರ ಹೆಸರು-ವಿವರಗಳನ್ನು ಕೇಳಿದಾಗ ಗದ್ಗದಿತನಾಗಿದ್ದೇನೆ. ಎಲ್ಲಿಯವರೆಗೆಂದರೆ ಆ ಒಂದು ಭಾಗದ ಹಿಂದೀ ನಿರೂಪಣೆಯನ್ನು- ‘ಜೋ ಪಾನಿ ಸೇ ನಹಾತೇ ಹೈಂ ವೋ ಸಿರ್ಫ್ ಲಿಬಾಸ್ ಬದಲ್ತೇ ಹೈಂ; ಜೋ ಪಸೀನೇ ಸೇ ನಹಾತೇ ಹೈಂ ವೋಹೀ ಇತಿಹಾಸ್ ಬದಲ್ತೇ ಹೈಂ’ಯಿಂದ ಹಿಡಿದು ಅಷ್ಟೂ ವಿವರಗಳನ್ನು ಕನ್ನಡೀಕರಿಸಿ ನನ್ನ ಅಂಕಣಬರಹದಲ್ಲಿ ದಾಖಲಿಸಿ ಇಡಬೇಕೆಂದು ತೀರ್ಮಾನಿಸಿದ್ದೇನೆ, ಅದರ ಕಾರ್ಯರೂಪ ಇಲ್ಲಿದೆ: ‘ನನ್ನ ಸಂಸತ್ತು ನನ್ನ ಅಭಿಮಾನ!
ನೀರಿನಿಂದ ಸ್ನಾನ ಮಾಡಿ ದವರು ಪೋಷಾಕನ್ನಷ್ಟೇ ಬದಲಿಸಿಕೊಳ್ಳಬಹುದು; ಬೆವರಿನಿಂದ ಸ್ನಾನ ಮಾಡಿದವರು ಇತಿಹಾಸವನ್ನೇ ಬದಲಿಸುತ್ತಾರೆ. ಹೊಸ ಇತಿಹಾಸವನ್ನು ರಚಿಸಿದ ಶ್ರಮಜೀವಿಗಳು ಇಲ್ಲಿ ಈ ದಿನ ನಮ್ಮೊಂದಿಗೆ ಇದ್ದಾರೆ. ಪ್ರಧಾನಮಂತ್ರಿಯವರು ಅವರಿಗೆ ಅಭಿನಂದನ ಸನ್ಮಾನ ಮಾಡಬೇಕೆಂದು ಸಾದರ ವಿನಂತಿ. ಸತ್ಯರಂಜನ್ ದಾಸ್, ಪಶ್ಚಿಮ ಬಂಗಾಳದ ಸುಂದರಬನ್ ಮೂಲದವರು; ಇವರು ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಶ್ರಮಿಕರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಿದವರು. ಭಾಯಿರಾಮ್ ಮುರ್ಮುಜೀ, ಝಾರ್ಖಂಡ್‌ದವರು; ಈ ಎರಡೂವರೆ ವರ್ಷಗಳ ಅವಧಿಯಲ್ಲಿ ಇಲ್ಲಿ ಸ್ವಚ್ಛತೆ ಅಭಿಯಾನದ ಉಸ್ತುವಾರಿ ವಹಿಸಿದವರು.
ಇಜಾಜ್ ಅಹಮ್ಮದ್ ಸಾಹೇಬ್, ಕೆಲಸಗಳ ಮೇಲ್ವಿಚಾರಕರು ಮತ್ತು ಮುಖ್ಯವಾಗಿ ಮಾಳಿಗೆಮೆಟ್ಟಿಲುಗಳ ವಿನ್ಯಾಸದಲ್ಲಿ ಪರಿಣತರು. ಪುರಂಜನ್ ದಲಾಯಿಜೀ, ಒಡಿಶಾದ ಚಾಂದೀಪುರದವರು; ಸೇವಾಧರ್ಮವನ್ನು ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡವರು; ಕಟ್ಟಡ ಕೆಲಸಗಾರರಿಗೆ ಚಹ-ಪಾನೀಯ ಸರಬ ರಾಜಿನ ಹೊಣೆ ಹೊತ್ತವರು. ಕಿಶನ್‌ಲಾಲಜೀ, ರಾಜಸ್ಥಾನದ ಬಾಢ್‌ಮೇರ್‌ದವರು; ಕಟ್ಟಡದ ಪ್ರಾಂಗಣ ವಿನ್ಯಾಸಕಾರರು.
ದೇವಲಾಲ್ ಸುಥಾರ್‌ಜೀ, ಗುಜರಾತ್‌ನ ವಡೋದರಾದವರು; ಕಟ್ಟಡದ ಕೇಂದ್ರೀಯ ಭಾಗದಲ್ಲಿ ಛಾವಣಿಗೆ ಹಿತ್ತಾಳೆಯ ಅಂಚು ಗಳ ಜೋಡಣೆ ಮಾಡಿದವರು.
ಅನಿಲ್ ಕುಮಾರ್ ಯಾದವ್‌ಜೀ, ಬಿಹಾರದವರು; ಭವನದ ಹೊರ ಗೋಡೆಗಳ ಮೇಲೆ ಸ್ಯಾಂಡ್ ಸ್ಟೋನ್ ಅಳವಡಿಕೆ ಕಾರ್ಯ ಮಾಡಿದವರು. ಸುಬ್ರತಾ ಸೂತ್ರಧಾರ್, ಪೂರ್ವೋತ್ತರದವರು; ಬಿದಿರಿನಿಂದ ನಿರ್ಮಿತ ಫ್ಲೋರಿಂಗ್‌ನ ಕೆಲಸ ಇವರದೇ. ಮುಜಫರ್ ಖಾನ್ ಸಾಹೇಬ್, ಝಾರ್ಖಂಡ್‌ದವರು, ಮೆಕ್ಯಾನಿಕ್ ವೃತ್ತಿಯವರು; ಈ ಕಟ್ಟಡ ನಿರ್ಮಾಣದಲ್ಲಿ ಯಾವುದೇ ಯಂತ್ರದ ರಿಪೇರಿ ಆಗಬೇಕಾಗಿ ಬಂದಾಗ ಅದನ್ನು ತತ್‌ಕ್ಷಣವೇ ಮಾಡುತ್ತಿದ್ದವರಿವರು.
ಧರ್ಮೇಂದ್ರಜೀ, ಮೂಲತಃ ದಿಲ್ಲಿಯವರು; ಎರಡು ವರ್ಷ ಕಾಲ ಇಲ್ಲಿ ದುಡಿದಿದ್ದಾರೆ, ಹಿತ್ತಾಳೆಯ ವೆಲ್ಡಿಂಗ್ ಕೆಲಸದ ಜವಾಬ್ದಾರಿಯೆಲ್ಲ ಇವರದೇ. ಬನಾರಸ್‌ನ ಭೋಲೇಕೀನಗರಿಯಿಂದ ಆನಂದ್ ವಿಶ್ವಕರ್ಮಾಜೀ, ಲೋಕಸಭೆ-ರಾಜ್ಯಸಭೆ ಎರಡೂ ಚೇಂಬರ್‌ಗಳ ಛಾವಣಿ ಮತ್ತು ಕುರ್ಚಿಗಳ ಅಳವಡಿಕೆ ಕೆಲಸ ನಿರ್ವಹಿಸಿದ್ದಾರೆ; ಇವರದಂತೂ ಹೆಸರಿನಲ್ಲೇ ವಿಶ್ವಕರ್ಮ ಇದ್ದಾನೆ!’ ಮೋದಿಯವರು ಶಾಲು ಹೊದೆಸಿ ಫಲಕ ಕೊಟ್ಟು ಗೌರವಿಸಿದ್ದು ಅಲ್ಲಿ ಸಾಂಕೇತಿಕವಾಗಿ ಹನ್ನೊಂದು ಮಂದಿಯನ್ನಷ್ಟೇ ಇರಬಹುದು; ಆದರೆ ಅದು ಸಮಸ್ತಕಾರ್ಮಿಕವರ್ಗಕ್ಕೆ ಸಂದ ಅತ್ಯಂತ ಸಮಂಜಸ, ಶ್ರೇಷ್ಠ ಗೌರವ. ಇಲ್ಲೂ ನನಗೆ ಸಂಸ್ಕೃತ ಸುಭಾಷಿತ ವೊಂದು ಮತ್ತೆಮತ್ತೆ ನೆನಪಾಗುತ್ತಿದೆ.
‘ಲಾವಕಶ್ಚ ವರಾಹಶ್ಚ ಮಹಿಷಃ ಕುಂಜರಸ್ತಥಾ| ಕರ್ತಾ ಕಾರಯಿತಾ ಚೈವ ಷಡೇತೇ ಸಮಭಾಗಿನಃ||’ ಲಾವಕ ಅಂದರೆ ಗುಬ್ಬಿ. ಅದು ತನ್ನ ಕೊಕ್ಕಿನಿಂದ
ಮಣ್ಣನ್ನು ಅಗೆಯುತ್ತದೆ. ಅಲ್ಲಿ ಚಿಕ್ಕದೊಂದು ಗುಳಿ ಉಂಟಾಗುತ್ತದೆ. ಆ ಗುಳಿಯಲ್ಲಿ ಮಳೆನೀರು ತುಂಬುತ್ತದೆ. ಅಬ್ಬಬ್ಬಾ ಅಂದರೆ ಎಷ್ಟು, ಒಂದು ಬೊಗಸೆ ತುಂಬುವಷ್ಟು ನೀರು ಆಗಬಹುದು. ಆದರೆ ಗುಬ್ಬಿಗೆ ಅಷ್ಟು ಸಾಕು. ಗುಬ್ಬಿ ಅದರಲ್ಲಿ ಸ್ನಾನ ಮಾಡುತ್ತದೆ. ಆಮೇಲೆ ಒಂದು ಹಂದಿ(ವರಾಹ) ಅಲ್ಲಿಗೆ ಬಂದು ಅದೇ ಗುಳಿಯನ್ನು ತನ್ನ ಮೂತಿಯಿಂದ ಕೊರೆದು ದೊಡ್ಡದಾಗಿಸುತ್ತದೆ.
ನೀರು ಮತ್ತು ಮಣ್ಣು ಸೇರಿದಾಗ ಉಂಟಾದ ಕೆಸರಿನಲ್ಲಿ ಹಂದಿ ಹೊರಳಾಡುತ್ತದೆ, ಖುಷಿಪಡುತ್ತದೆ. ಅದಾದಮೇಲೆ ಅಲ್ಲಿಗೆ ಒಂದು ಕೋಣ(ಮಹಿಷ) ಬರುತ್ತದೆ. ಹೊಂಡದಲ್ಲಿ ಆರಾಮಾಗಿ ಮಲಗಿ ಮದಗೊಳ್ಳುತ್ತದೆ. ಕೊನೆಗೊಂದು ಆನೆ(ಕುಂಜರ) ಆ ಹೊಂಡಕ್ಕಿಳಿದು ಅದನ್ನು ಮತ್ತೂ ದೊಡ್ಡದಾಗಿಸುತ್ತದೆ. ತುಂಬಿದ ನೀರನ್ನು ತನ್ನ ಸೊಂಡಿಲಿನಿಂದ ಮೈಮೇಲೆಲ್ಲ ಸಿಂಪಡಿಸಿಕೊಂಡು ಸಂತಸಪಡುತ್ತದೆ. ಇವೆಲ್ಲ ಪ್ರಾಣಿಗಳು ನೀರಿನಾಟ ಆಡುತ್ತಿರು ವುದನ್ನು ಆ ರಾಜ್ಯದ ರಾಜ ಮತ್ತು ಮಂತ್ರಿ ಅಲ್ಲೇ ವಾಯು ವಿಹಾರಕ್ಕೆಂದು ಬಂದಿದ್ದವರು ಗಮನಿಸುತ್ತಾರೆ. ರಾಜ ಆಲೋಚಿಸುತ್ತಾನೆ: ‘ಈ ನೀರಿನ ಹೊಂಡಕ್ಕೆ ಮೆಟ್ಟಿಲು ಮತ್ತು ಸುತ್ತಲೂ ಕಟ್ಟೆ ಕಟ್ಟಿಸಿದರೆ ತುಂಬ ಚೆನ್ನಾಗಿರುತ್ತದೆ. ಪ್ರಜೆಗಳಿಗೂ ಅನುಕೂಲವಾಗುತ್ತದೆ’ ಎಂದು.
ಒಡನೆಯೇ ಮಂತ್ರಿಗೆ ಆದೇಶ ಕೊಡುತ್ತಾನೆ. ಕಟ್ಟೆ ಕಟ್ಟುವ ಕಾಮಗಾರಿಯು ಮಂತ್ರಿಯ ಉಸ್ತುವಾರಿಯಲ್ಲಿ ನಡೆಯುತ್ತದೆ. ಪ್ರಪಂಚದ ಮೊತ್ತಮೊದಲ, ಸುಂದರವಾದ ಕೆರೆಯ ನಿರ್ಮಾಣವಾಗುತ್ತದೆ. ಆದರೆ, ತಾನೇ ಆ ಕೆರೆಯನ್ನು ನಿರ್ಮಿಸಿದ್ದೆಂದು ರಾಜ ಹೇಳಿಕೊಳ್ಳಬಹುದೇ? ಖಂಡಿತ ಇಲ್ಲ. ಅವನೇನಿ
ದ್ದರೂ ಮಂತ್ರಿಯ ಮೂಲಕ, ಕೆಲಸಗಾರರ ಮೂಲಕ ಕೆರೆಯನ್ನು ಮಾಡಿಸಿದವನು(ಕಾರಯಿತಾ) ಅಷ್ಟೇ. ಮಂತ್ರಿ ಮತ್ತು ಕೆಲಸಗಾರರು ತಾವೇ ಆ ಕೆರೆಯ ನಿರ್ಮಾತೃರು ಎನ್ನಬಹುದೇ? ಇಲ್ಲ. ಅವರು ಕಟ್ಟೆ ಮತ್ತು ಮೆಟ್ಟಿಲುಗಳನ್ನು ಕಟ್ಟಿದವರು, ಆ ಮೂಲಕ ಕರ್ತಾ ಎನಿಸಿಕೊಂಡವರು ಹೌದಾದರೂ ಅಲ್ಲಿ ನೀರಿನ ಹೊಂಡ ಮೊದಲೇ ಇತ್ತಲ್ಲವೇ? ಹಾಗೆ ನೋಡಿದರೆ ಕೆರೆ ನಿರ್ಮಾಣದ ಶ್ರೇಯಸ್ಸಿನಲ್ಲಿ ರಾಜ, ಮಂತ್ರಿ ಮತ್ತು ಕೆಲಸಗಾರರದು ಮಾತ್ರವಲ್ಲ, ಆನೆ, ಕೋಣ, ಹಂದಿ, ಮತ್ತು ಗುಬ್ಬಿ- ಎಲ್ಲರದೂ ಸಮಪಾಲು ಇದೆ!
ಪ್ರಪಂಚದಲ್ಲಿ ಎಲ್ಲ ವಿಚಾರಗಳೂ ಹೀಗೆಯೇ. ನಾನೇ ಮಾಡಿದ್ದು, ನನ್ನಿಂದಲೇ ಎಲ್ಲ ಆದದ್ದು ಎಂಬ ಅಹಂಕಾರ ಸಲ್ಲದು. ಗುಬ್ಬಿಯಂತಹ ಚಿಕ್ಕ ಪಕ್ಷಿಯಿಂದ ಹಿಡಿದು, ಆನೆಯಂ ತಹ ಬೃಹದ್ಗಾತ್ರದ ಜೀವಿಗಳ ಕೊಡುಗೆ, ಸಹಕಾರ ಎಲ್ಲದರಲ್ಲೂ ಎಲ್ಲ ಕಡೆಯೂ ಇರುತ್ತದೆ. ಒಂದು ಸಾಧನೆಯಲ್ಲಿ, ಅದರ ಯಶಸ್ಸಿನಲ್ಲಿ, ಮತ್ತು ಪ್ರಯೋಜನದಲ್ಲಿ ಎಲ್ಲರೂ ಸಮಭಾಗಿಗಳಾಗುತ್ತಾರೆ. ಕೆಲವರದು ಪ್ರತ್ಯಕ್ಷ ಸಹಕಾರವಿರಬಹುದು, ಕೆಲವರದು ಪರೋಕ್ಷವಿರಬಹುದು. ಆದರೆ ಸಮಭಾವದಿಂದ ಎಲ್ಲರನ್ನೂ ಗುರುತಿಸಿ ಗೌರವಿಸುವುದು ಮುಖ್ಯ.
ನೂತನ ಸಂಸತ್ ಭವನದ ನೀಲಿನಕ್ಷೆಯಿಂದ ಹಿಡಿದು ಕಟ್ಟಡ ನಿರ್ಮಾಣ ಸಾಕಾರಗೊಂಡು ಉದ್ಘಾಟನಾ ಸಮಾರಂಭದ ತನಕ ಕೇಳಿಬಂದ ವಾದವಿವಾದಗಳು, ಚರ್ಚೆಗಳು, ಕೊಂಕು-ಕುಹಕ- ಕ್ಯಾತೆಗಳು ಒಂದೆರಡಲ್ಲ. ಬೇರೆಲ್ಲ ಬೇಡ ‘ಸೆಂಗೋಲ್’ ಪದವೊಂದೇ ಒಮ್ಮಿಂದೊಮ್ಮೆಗೆ ಎಲ್ಲರ ಬಾಯಿಯಲ್ಲಿ ನಲಿದಾಡಿ ಮೂಡಿಸಿದ ಪರ-ವಿರೋಧ ಅನಿಸಿಕೆ ಅಭಿಪ್ರಾಯಗಳಿಗೆ ಲೆಕ್ಕವಿಲ್ಲ. ಅವನ್ನೆಲ್ಲ ಮೆಟ್ಟಿನಿಂತು ಮುನ್ನಡೆಯುವ ಮೋದಿಯವರ
ತಾಳ್ಮೆಯ ಮನೋಧರ್ಮ ಮತ್ತು ಮುಂದಾಳುತ್ವವನ್ನಂತೂ ಎಷ್ಟು ಹೊಗಳಿದರೂ ಕಡಿಮೆಯೇ. ಆದರೆ ನಾನಿದನ್ನು ನೋಡುವುದು ಮೋದಿಯವರ ಪ್ರಶಂಸೆಯಾಗಿ ಅಲ್ಲ. ಇಷ್ಟು ಭವ್ಯವಾದ ಅತ್ಯಾಧುನಿಕ ಕಟ್ಟಡ ನಿರ್ಮಾಣದಲ್ಲಿ ಗ್ರೌಂಡ್-ಲೆವೆಲ್ ಕಾರ್ಮಿಕರನ್ನು ಗುರುತಿಸಿ ಗೌರವಿಸಿದ ನಡೆ ಇದೆಯಲ್ಲ, ಅದನ್ನು ಮೋದಿ ಅಂತಲ್ಲ ಯಾರೇ ಮಾಡಿದರೂ ಪ್ರಶಂಸಾರ್ಹವೇ.
ವಿಪರ್ಯಾಸವೆಂದರೆ ಸೋಷಿಯಲ್ ಮೀಡಿಯಾದಲ್ಲಾದರೂ ಅಷ್ಟೇ- ಯಾವ ಉಪಯೋಗವೂ ಇಲ್ಲದ ಕ್ಷುಲ್ಲಕ ವಿಷಯಗಳನ್ನೆಲ್ಲ ಹಿಡಿದೆಳೆದು ಹಿಂಜಿ ಹಿಪ್ಪೆಮಾಡಿ ಜಗ್ಗಾಡುವವರ, ಕಾಲಹರಣ ಮಾಡುವವರ, ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಪ್ರತಿಯೊಂದಕ್ಕೂ ವಿರೋಧ. ಮೈಮನದಲ್ಲೆಲ್ಲ ತುಂಬಿತುಳುಕುವ ದ್ವೇಷವಿಷದ ಅವ್ಯಾಹತ ವಿಸರ್ಜನ. ಅಥವಾ, ಇನ್ನೊಂದು ಎಕ್ಸ್ಟ್ರೀಮ್ ಎಂಬಂತೆ ಇಂದ್ರಚಂದ್ರ ಧ್ರುವತಾರೆ ಪ್ರಶಂಸನ. ಪರಂತು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ/ಅಳವಡಿಸಿಕೊಳ್ಳಬೇಕಾದ ಆದರ್ಶಗಳನ್ನು, ಗೌರವಿಸಬೇಕಾದ ಮೌಲ್ಯಗಳನ್ನು, ಯಾರಾದರೂ ಪಾಲಿಸಿದರೆ ನಾವದನ್ನು ಗಮನಿಸುವುದೂ ಇಲ್ಲ!
ಮೋದಿಯವರು ಈ ರೀತಿ ‘ಸಾಮಾನ್ಯರಲ್ಲಿ ಅತಿಸಾಮಾನ್ಯರಿಗೆ ಮನ್ನಣೆ’ ಒದಗಿಸಿದ್ದು ಇದೇ ಮೊದಲೇನಲ್ಲ. ಕಳೆದ ಜನವರಿ ೨೬ರಂದು ಗಣರಾಜ್ಯ ದಿವಸದ ಪರೇಡ್ ವೀಕ್ಷಣೆಗೂ ಇದೇ ಸಂಸತ್ ಭವನ ನಿರ್ಮಾಣ ಕಾಮಗಾರಿಯ ಶ್ರಮಿಕರನ್ನು ಮತ್ತವರ ಕುಟುಂಬಸ್ಥರನ್ನು ಆಹ್ವಾನಿಸಿ ವಿಐಪಿ ಗ್ಯಾಲರಿ ಯಲ್ಲಿ ಕೂರಿಸಿದವರು ಅವರು. ಆಗಲೂ ಹೀಗೆಯೇ- ಪರೇಡ್ ವೀಕ್ಷಕವಿವರಣೆಯ ಕ್ಯಾಮರಾ ಗಳು ವಿಐಪಿ ಗ್ಯಾಲರಿಯಲ್ಲಿದ್ದ ಕಾರ್ಮಿಕ ಕುಟುಂಬ ಗಳನ್ನು ಒಂದೆರಡು ಕ್ಷಣಕಾಲ ಫೋಕಸ್ ಮಾಡಿದರು ಎನ್ನುವುದನ್ನು ಬಿಟ್ಟರೆ ಅದೊಂದು ಬಹುಚರ್ಚಿತ ಸುದ್ದಿಯಾಗಲೇ ಇಲ್ಲ.
ನಾಲ್ಕೈದು ವರ್ಷಗಳ ಹಿಂದೊಮ್ಮೆ ಸ್ವಚ್ಛತಾ ಕರ್ಮಚಾರಿಗಳ ಕಾಲುತೊಳೆದು ಅವರ ಪಾದಪೂಜೆ ಮಾಡಿದ್ದರು ಮೋದಿ. ಯಥಾಪ್ರಕಾರ ಅದನ್ನೊಂದು ಸೋಗಲಾಡಿತನ ಎಂದು ಊಳಿಟ್ಟವು ಮೋದಿವಿರೋಧಿ ಮನಸ್ಸುಗಳು. ಆಯ್ತಪ್ಪಾ ಮೋದಿ ಅದನ್ನು ತೋರಿಕೆಗಾಗಿಯೇ ಮಾಡಿದರು ಎಂದಿರಲಿ. ಮೋದಿ
ಯವರ ಬದಲಿಗೆ ನಮಗೆ ಇಷ್ಟವಾಗುವ ಬೇರೊಬ್ಬರು ಅದನ್ನು ಮಾಡಿದರು ಎಂದೇ ತಿಳಿಯೋಣ. ಯಾರು ಮಾಡಿದರೆಂಬುದು ಮುಖ್ಯವಲ್ಲ, ಸಾಮಾನ್ಯ ರನ್ನೂ ಸನ್ಮಾನಿಸುವ ಆ ಸನ್ನಡತೆಯಿದೆಯಲ್ಲ, ಅದನ್ನು ವಸ್ತುನಿಷ್ಠವಾಗಿಯಷ್ಟೇ ಗ್ರಹಿಸಿ ಅನುಸರಿಸುವ, ಅಳವಡಿಸಿಕೊಳ್ಳುವ ಅಭ್ಯಾಸವನ್ನೇಕೆ ನಾವು ಮೈಗೂಡಿಸುವುದಿಲ್ಲ? ‘ಕೂಲೆಸ್ಟ್ ಆಫ್ ಕೂಲ್ ಕಪ್ತಾನ’ ಖ್ಯಾತಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಇಷ್ಟವಾಗುವುದು ಇದೇ ಕಾರಣಕ್ಕೆ.
ಮೊನ್ನೆ ಅಹಮ್ಮದಾಬಾದ್‌ನಲ್ಲಿ ಐಪಿಎಲ್ ಪಂದ್ಯಾವಳಿಯ ಅಂತಿಮ ಪಂದ್ಯ, ಅಂತಿಮ ಓವರ್‌ನ ಅಂತಿಮ ಎರಡು ಚೆಂಡೆಸೆತಗಳು ಬಾಕಿಯಿದ್ದ ಕ್ಷಣ. ಗೆಲ್ಲಬೇಕಿದ್ದರೆ ಚೆನ್ನೈ ಸುಪರ್ ಕಿಂಗ್‌ಗಳಿಗೆ ಹತ್ತು ರನ್ನುಗಳು ಬೇಕು. ವಿಜಯಮಾಲೆ ಬಹುತೇಕ ಗುಜರಾತ್ ಕೈಟನ್ಸ್‌ನ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಹಾರ್ದಿಕವಾಗಿ ಒಲಿದುಬರುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದೆವು. ಆವತ್ತಿನ ಆಟದಲ್ಲಿ ಅಷ್ಟೇನೂ ಚೆನ್ನಾಗಿ ಆಡದಿದ್ದ ಧೋನಿಯಂತೂ
ಪರಮಯೋಗಿಯಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಕಾಣುತ್ತಿದ್ದ.
ಕ್ರೀಸ್ ನಲ್ಲಿದ್ದದ್ದು ರವೀಂದ್ರ ಜಡೇಜಾ. ಒಂದರ್ಥದಲ್ಲಿ ಲಂಕೆಯಲ್ಲಿ ಯುದ್ಧವಾದಾಗ ಶ್ರೀರಾಮನ ಪಡೆಯಲ್ಲಿ ವಿಭೀಷಣ ಇದ್ದಂತೆ. ಜಡೇಜಾ ಕೈಲಿದ್ದದ್ದು ಬ್ಯಾಟೋ ಮಂತ್ರದಂಡವೋ ಗೊತ್ತಿಲ್ಲ, ಮೊದಲ ಎಸೆತಕ್ಕೆ ಸಿಕ್ಸರ್! ಅಲ್ಲಿಗೆ ಬೌಲರ್ ಒಂದಿಷ್ಟು ನರ್ವಸ್ ಆಗದಿರುತ್ತಾನೆಯೇ? ಕೊನೆ ಎಸೆತದಿಂದ ಇನ್ನೂ ನಾಲ್ಕು ಬೇಕು. ರವೀಂದ್ರ ಜಡೇಜಾನ ಮಂತ್ರದಂಡ ಅಬ್ರಕದಬ್ರ ಎನ್ನುತ್ತ ಚೆಂಡನ್ನು ಬೌಂಡರಿಯಾಚೆಗೆ ತಳ್ಳಿತು. ಧೋನಿ ತಂಡ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ಸ್! ಧೋನಿ ಹುಚ್ಚೆದ್ದು ಕುಣಿದನೇ? ತಾನೊಬ್ಬ ಅಜೇಯ ನಾಯಕನೆಂದು ಬೀಗಿದನೇ? ನೆವರ್.
ಆತ ಸ್ಟಾಂಡ್ಸ್‌ನಿಂದ ಗ್ರೌಂಡ್‌ಗೆ ಬಂದು ರವೀಂದ್ರ ಜಡೇಜಾನನ್ನು ಅಪ್ಪಿಕೊಂಡು ಮೇಲಕ್ಕೆತ್ತಿದ್ದ ರೀತಿಗೂ ಶ್ರೀರಾಮಚಂದ್ರನು ಅಳಿಲನ್ನು ಎತ್ತಿಕೊಂಡು ಅದರ ಬೆನ್ನು ನೇವರಿಸಿದ್ದ ರೀತಿಗೂ ಒಂದಿನಿತೂ ವ್ಯತ್ಯಾಸ ಇರಲಿಲ್ಲ!