Saturday, 23rd November 2024

ವೀರ್ಯಾಣುವನ್ನು ಕಂಡುಹಿಡಿದ ಲ್ಯೂವೆನ್ ಹಾಕ್

ಹಿಂದಿರುಗಿ ನೋಡಿದಾಗ

ಜೀವಜಗತ್ತಿನಲ್ಲಿ ಪೀಳಿಗೆಯು ಹೇಗೆ ಮುಂದುವರಿಯುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ತಿಳಿದಿರಲಿಲ್ಲ. ಅಲೆಮಾರಿ ಬದುಕನ್ನು ನಡೆಸುತ್ತಿದ್ದವರು ನದಿ ಬಯಲಿನಲ್ಲಿ ಬೀಡುಬಿಟ್ಟು, ಕೃಷಿ ಮತ್ತು ಪಶುಪಾಲನೆಯಲ್ಲಿ ತೊಡಗಿದರು.

ಬೆದೆಕಾಲದಲ್ಲಿ ಪ್ರಾಣಿಗಳು ಕೂಡುವುದನ್ನು ನೋಡಿ, ಈ ಕೂಡುವಿಕೆಯಿಂದಲೇ ಹೊಸಜೀವವು ಹುಟ್ಟುತ್ತಿರಬೇಕು ಎಂದು ತರ್ಕಿಸಿದರು. ಅದೇ ತರ್ಕ ವನ್ನು ತಮಗೂ ಅನ್ವಯಿಸಿಕೊಂಡರು. ಗಂಡು-ಹೆಣ್ಣು ಕೂಡುವಾಗ ಇಬ್ಬರಿಗೂ ಕಾಣುತ್ತಿದ್ದುದು ಪುರುಷನ ವೀರ್ಯ ಮಾತ್ರ. ಹಾಗಾಗಿ ಸಂತಾನ ವರ್ಧನೆಗೆ ಗಂಡೇ ಕಾರಣ ಎನ್ನುವ ಭಾವವು ಪ್ರಧಾನವಾಯಿತು. ನಾಗರಿಕತೆ ಬೆಳೆಯುತ್ತಿರುವಂತೆ, ಕೆಲವರು ಸಂಪೂರ್ಣವಾಗಿ ಪೂರ್ವ-ರೂಪುಗೊಂಡ ಕುಬ್ಜಮಾನವನು (ಹೋಮಂಕ್ಯುಲಸ್) ವೀರ್ಯದಲ್ಲಿ ಇರುತ್ತಾನೆ ಎಂದರೆ, ಉಳಿದವರು ಅಂಡದಲ್ಲಿ ಇರುತ್ತಾನೆ ಎಂದು ವಾದಿಸಿದರು.

ಕೊನೆಗೆ ರೆನೀರ್ ಡಿ ಗ್ರಾಫ್ (೧೬೪೧-೧೬೭೩) ಎನ್ನುವ ಸಂಶೋಧಕ ಮೊಲದ ಅಂಡಾಶಯಗಳಲ್ಲಿ ಅಂಡಾಣು ಗಳಿರುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದ. ಅವನ ಗೌರವಾರ್ಥ, ಅಂಡಾಣುಗಳನ್ನು ಗ್ರಾಫಿಯನ್ ಫಾಲಿ ಕಲ್ ಎನ್ನುತ್ತಿದ್ದೇವೆ. ವೀರ್ಯದಿಂದ ಹೊರಬರುವ ಆವಿ ಅಥವಾ ಬಾಷ್ಪವು ಅಂಡಾಣುವನ್ನು ಫಲಗಟ್ಟಿಸುತ್ತದೆ ಎಂಬುದು ಅಂದಿನ ಪೀಳಿಗೆಯ ತಿಳಿವಿನ ಸಾರಾಂಶ ಎನ್ನಬಹುದು.

ಡಿ-ಗ್ರಾಫ್ನ ಕಾಲಕ್ಕೆ ವೀರ್ಯದಲ್ಲಿರುವ ವೀರ್ಯಾಣುಗಳು, ಅಂಡಾಣುವಿನಲ್ಲಿ ಸಂಯೋಗವಾಗಿ ಹೊಸಜೀವದ ಜನನಕ್ಕೆ ಕಾರಣವಾಗುತ್ತದೆ ಎಂಬ ತಿಳಿವಳಿಕೆಯಿರಲಿಲ್ಲ. ಏಕೆಂದರೆ ಆಗ ವೀರ್ಯಾಣುವಿನ ಆವಿಷ್ಕಾರವಾಗಿರಲಿಲ್ಲ! ರೆನೀರ್ ಡಿ ಗ್ರಾಫ್, ತನ್ನ ಸಂಶೋಧನಾ ಪ್ರಬಂಧವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿ, ಏಪ್ರಿಲ್ ೧೬೭೩ರಂದು ರಾಯಲ್ ಸೊಸೈಟಿಗೆ ಕಳುಹಿಸಿದ. ಜತೆಯಲ್ಲಿ ಒಂದು ಪತ್ರವನ್ನೂ ಇಟ್ಟ. ಓರ್ವ ಡಚ್ ಬಟ್ಟೆ ವ್ಯಾಪಾರಿ ಯಾಗಿದ್ದ ಆಂಟನ್ -ನ್ ಲ್ಯೂವೆನ್ ಹಾಕ್ ಎಂಬುವವನ ಬಗ್ಗೆ ಆ ಪತ್ರದಲ್ಲಿ ಪರಿಚಯ ನೀಡಿದ್ದ.

ಲ್ಯೂವೆನ್‌ಹಾಕ್ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿರಲಿಲ್ಲ, ಯಾವುದೇ ಸಾಂಪ್ರದಾಯಿಕ ಪದವಿ ಹೊಂದಿರಲಿಲ್ಲ. ಆದರೆ ವಿಜ್ಞಾನದ ಬಗ್ಗೆ ಅವನಿಗಿದ್ದ ಆಸಕ್ತಿ, ಅಧ್ಯಯನಶೀಲತೆ ಅಪೂರ್ವವಾದದ್ದು, ಅವನಿಗೆ ಪ್ರೋತ್ಸಾಹ ನೀಡಬೇಕೆಂದು ಡಿ-ಗ್ರಾಫ್ ಶಿಫಾರಸು ಮಾಡಿದ್ದ.
ಇಂಗ್ಲೆಂಡ್‌ನ ರಾಬರ್ಟ್ ಹುಕ್ ಎಂಬ ಭೌತವಿಜ್ಞಾನಿ ಸೂಕ್ಷ್ಮದರ್ಶಕವನ್ನು ರೂಪಿಸಿದ್ದ. ಮರದ ತೊಗಟೆಯನ್ನು ಅಧ್ಯಯನ ಮಾಡಿ, ಅದರಲ್ಲಿ ಸಣ್ಣ ಸಣ್ಣ ಕೋಣೆಗಳಂಥ ರಚಗಳಿರುವುದನ್ನು ಗಮನಿಸಿ ಅವಕ್ಕೆ ‘ಸೆಲ್’ ಎಂದು ನಾಮಕರಣ ಮಾಡಿದ. ಕಾರಣ ಅವು ಪಾದ್ರಿಗಳು ವಾಸಿಸುತ್ತಿದ್ದ ಕೋಣೆ ಗಳಂತೆ ಅವನಿಗೆ ಕಂಡಿದ್ದವು.

ನಂತರ ಹೇನು, ಚಿಗಟ, ಕೀಟಗಳ ಕಣ್ಣು, ನೊಣಗಳ ರೆಕ್ಕೆ ಮುಂತಾದವನ್ನು ಅಧ್ಯಯನ ಮಾಡಿ ಅವುಗಳ ಚಿತ್ರಗಳನ್ನು ಬರೆದ. ಎಲ್ಲವನ್ನೂ ಸಂಕಲಿಸಿ ‘ಮೈಕ್ರೋಗ್ರಾಫಿಯ’ ಎಂಬ ಪುಸ್ತಕವನ್ನು ಪ್ರಕಟಿಸಿದ. ಬಟ್ಟೆ ವ್ಯಾಪಾರಿಯಾಗಿದ್ದರೂ ಲ್ಯೂವೆನ್‌ಹಾಕ್‌ಗೆ ವಿಜ್ಞಾನದಲ್ಲಿ ಅಪಾರ ಆಸಕ್ತಿಯಿತ್ತು. ಮೈಕ್ರೋ ಗ್ರಾಫಿಯವನ್ನು ನೋಡಿದ ಮೇಲೆ ಸೂಕ್ಷ್ಮದರ್ಶಕದ ರಚನೆಯಲ್ಲಿ ಆಸಕ್ತಿ ತಳೆದು ತನ್ನದೇ ಆದ ಏಕಮಸೂರದ ಸೂಕ್ಷ್ಮದರ್ಶಕವನ್ನು ರೂಪಿಸಿದ. ಇವು ವಸ್ತುವನ್ನು ೨೭೫-೫೦೦ ಪಟ್ಟು ಹಿಗ್ಗಿಸಿ ತೋರಿಸುತ್ತಿದ್ದವು.

ಜೇನುನೊಣದ ಮುಳ್ಳು, ಹೇನು, ಶಿಲೀಂಧ್ರಗಳನ್ನು ಅಧ್ಯಯನ ಮಾಡಿ ಒಂದು ಅಧ್ಯಯನದ ವರದಿ ತಯಾರಿಸಿ ರಾಯಲ್ ಸೊಸೈಟಿಗೆ ಕಳುಹಿಸಿದ. ಈ ಮೊದಲ ಪತ್ರವು ಲ್ಯೂವೆನ್‌ಹಾಕ್ ಮತ್ತು ರಾಯಲ್ ಸೊಸೈಟಿಯ ನಡುವೆ ಒಂದು ಅವಿನಾಭಾವ ಸಂಬಂಧವನ್ನು ೫೦ ವರ್ಷಗಳ ಕಾಲ ಮುಂದು ವರಿಸಿತು. ಅವನು ಈ ಅವಧಿಯಲ್ಲಿ ಸುಮಾರು ೨೦೦ ಸಂಶೋಧನಾ ಪ್ರಬಂಧಗಳನ್ನು ಪತ್ರಗಳ ರೂಪದಲ್ಲಿ ಬರೆದ. ಲ್ಯೂವೆನ್‌ಹಾಕ್‌ನ ಸಮಕಾ ಲೀನರಲ್ಲಿ ರೆನೀರ್ ಡಿ ಗ್ರಾಫ್, ಕ್ರಿಶ್ಚಿಯಾನ್ ಹ್ಯೂಜೆನ್ಸ್, ಯಾನ್ ಸ್ವಾಮರ್ಡ್ಯಾಮ್ ಮತ್ತು ಡೇನ್ ನೀಲ್ಸ್ ಸ್ಟೆನ್ಸನ್ ಸ್ಟೆನೊ ಪ್ರಮುಖರು. ಇವರೆಲ್ಲ ವಿಶ್ವವಿದ್ಯಾಲಯಗಳಲ್ಲಿ ಅಧಿಕೃತ ಪದವಿಯನ್ನು ಪಡೆದಿದ್ದರೆ, ಲ್ಯೂವೆನ್ ಹಾಕ್ ಸಾಮಾನ್ಯನಾಗಿದ್ದ.

ಸ್ವಾಮರ್ಡ್ಯಾಮ್ ಸೂಕ್ಷ್ಮದರ್ಶಕದಡಿ ಕೆಂಪು ರಕ್ತ ಕಣಗಳನ್ನು ನೋಡಿದ. ಕಪ್ಪೆಯ ಯುಗ್ಮಜವು (ಜ಼ೈಗೋಟ್) ವಿಭಜನೆಯಾಗುವುದನ್ನು ಗಮನಿಸಿದ. ಅದರ ಚಿತ್ರಗಳನ್ನು ಬರೆದು ಅದೃಶ್ಯ ಲೋಕದ ಅಗೋಚರ ರಚನೆಗಳ ಬಗ್ಗೆ ವಿದ್ವಜ್ಜನರ ಕುತೂಹಲ ಕೆರಳಿಸಿದ. ಲಂಡನ್ ರಾಯಲ್ ಸೊಸೈಟಿಯ ಕಾರ್ಯದರ್ಶಿ ಹೆನ್ರಿ ಓಲ್ಡೆನ್‌ಬರ್ಗ್. ಯುರೋಪಿನ ವಿದೇಶಿ ವಿಜ್ಞಾನಿಗಳೊಡನೆ ಪತ್ರವ್ಯವಹಾರವನ್ನೂ ನಡೆಸುತ್ತಿದ್ದ ಇವನು, ಲ್ಯೂವೆನ್‌ಹಾಕನಿಗಿದ್ದ
ಅಸಾಂಪ್ರದಾಯಿಕ ಪ್ರತಿಭೆಯನ್ನು ಗುರುತಿಸಿ ಮುಕ್ತ ಪ್ರೋತ್ಸಾಹ ನೀಡಿದ. ಲ್ಯೂವೆನ್‌ಹಾಕ್ ರಾಯಲ್ ಸೊಸೈಟಿಗೆ ಬರೆದ ಮೊದಲ ಪತ್ರವನ್ನು ೧೬೭೪ರಲ್ಲಿ ಸೊಸೈಟಿಯ ಫಿಲಸಾಫಿಕಲ್ ಟ್ರಾನ್ ಸ್ಯಾಕ್ಷನ್ಸ್‌ನಲ್ಲಿ ಪ್ರಕಟಿಸಿದ. ನಂತರ ಮನುಷ್ಯನ ಶರೀರದಲ್ಲಿರುವ ಎಲ್ಲ ದ್ರವಗಳನ್ನು-ವೀರ್ಯವನ್ನೂ ಒಳಗೊಂಡಂತೆ- ಸೂಕ್ಷ್ಮದರ್ಶಕದಡಿ ಅಧ್ಯಯನ ಮಾಡಬೇಕೆಂದು ಸೂಚಿಸಿದ.

ಲ್ಯೂವೆನ್‌ಹಾಕ್ ಈ ಸೂಚನೆಯನ್ವಯ ಗಂಭೀರವಾಗಿ ಅಧ್ಯಯನ ಮುಂದುವರಿಸಿ, ಹಲವು ಸಂಶೋಧನಾ ಪ್ರಬಂಧ ಪತ್ರಗಳನ್ನು ಸೊಸೈಟಿಗೆ ಕಳುಹಿ ಸಿದ. ಸಿಹಿನೀರಿನಲ್ಲಿ ಸೂಕ್ಷಜೀವಿಗಳಿರುವುದನ್ನು ಗಮನಿಸಿದ. ವಾಸ್ತವದಲ್ಲಿ ಅವನು ಹಲವು ಆದಿಜೀವಿಗಳನ್ನು, ಶೈವಲಗಳನ್ನು ಹಾಗೂ ಬೃಹತ್ ಬ್ಯಾಕ್ಟೀರಿಯಗಳನ್ನು (ಇವೆಲ್ಲವನ್ನು ಪ್ರೋಟಿಸ್ಟ ಎನ್ನುವರು) ನೋಡಿದ. ಜೀವಕೋಶದೊಳಗಿರುವ ಪೊಳ್ಳನ್ನು (ವ್ಯಾಕ್ಯುಯೋಲ್) ಗಮನಿಸಿದ. ಸ್ನಾಯು ವನ್ನು ಅಧ್ಯಯನ ಮಾಡಿ ಅದರಲ್ಲಿ ಪಟ್ಟೆಗಳಿರುವುದನ್ನು ವಿವರಿಸಿದ.

೧೬೭೭ರ ಒಂದು ದಿನ ಲ್ಯೂವೆನ್‌ಹಾಕ್‌ನನ್ನು ನೋಡಲು ಬಂದ ಜೊಹಾನ್ ಹ್ಯಾಮ್ ಎಂಬ ಯುವ ವೈದ್ಯಕೀಯ ವಿದ್ಯಾರ್ಥಿ ತನ್ನೊಡನೆ ಕೀವು ಬೆರೆತ ವೀರ್ಯವನ್ನು ತಂದಿದ್ದ. ಅದು ಅಸ್ವಚ್ಛ ಹೆಣ್ಣಿನೊಡನೆ (ಲೈಂಗಿಕ ರೋಗವಾದ ಗೊನೋರಿಯ ಪೀಡಿತಳು) ಮಲಗಿದ್ದ ತನ್ನ ಗೆಳೆಯನದ್ದು ಎಂದು ಹೇಳಿದ. ಗೆಳೆಯನ ಕೀವು ಬೆರೆತ ವೀರ್ಯವನ್ನು ಹ್ಯಾಮ್ ಸೂಕ್ಷ್ಮದರ್ಶಕದಡಿ ಅದಾಗಲೇ ಅಧ್ಯಯನ ಮಾಡಿದ್ದ. ಅದರಲ್ಲಿ ಅಸಂಖ್ಯ ಸೂಕ್ಷ್ಮಜೀವಿಗಳು
ಅವನಿಗೆ ಕಂಡುಬಂದಿದ್ದವು. ಲ್ಯೂವೆನ್‌ಹಾಕ್ ಆ ಗೆಳೆಯನ ವೀರ್ಯವನ್ನು ಸೂಕ್ಷ್ಮ ದರ್ಶಕದಡಿ ನೋಡಿದಾಗ ಅವನಿಗೂ ಅಸಂಖ್ಯ ಸೂಕ್ಷ್ಮಜೀವಿಗಳು ಕಂಡವು! ಮರುದಿನ ಅವನು ತನ್ನ ವೀರ್ಯವನ್ನು ಪರೀಕ್ಷಿಸಿ ಆಶ್ಚರ್ಯದಿಂದ ಸ್ತಂಭೀಭೂತನಾದ!

ಸೂಕ್ಷ್ಮದರ್ಶಕದಡಿ ಲಕ್ಷಾಂತರ ಸೂಕ್ಷ್ಮಜೀವಿಗಳು ತೀವ್ರ ಚಟುವಟಿಕೆಯಿಂದ ಚಲಿಸುತ್ತಿದ್ದವು! ಲ್ಯೂವೆನ್‌ಹಾಕ್ ಮೊದಲ ಬಾರಿಗೆ ವೀರ್ಯಾಣುಗಳನ್ನು (ಸ್ಪರ್ಮ್) ನೋಡುತ್ತಿದ್ದ. ಆ ಸೂಕ್ಷ್ಮಜೀವಿಗಳನ್ನು ಸ್ಪರ್ಮಟೊಜ಼ೋವ (ಸ್ಪರ್ಮ=ಬೀಜ + ಜ಼ೋಯಿನ್=ಪ್ರಾಣಿಗಳು; ವೀರ್ಯಪ್ರಾಣಿಗಳು) ಎಂದು ಕರೆದ.
ಇದು ತಪ್ಪು ಶಬ್ದ. ಆದರೆ ಈ ಶಬ್ದವನ್ನು ಸರಿಪಡಿಸಲು ಯಾರೂ ಹೋಗದ ಕಾರಣ, ಇಂದಿಗೂ ವೀರ್ಯಾಣುಗಳಿಗೆ ಸ್ಪರ್ಮಟೋಜ಼ೋವ ಎಂಬ ಹೆಸರೇ ಉಳಿದಿದೆ. ಲ್ಯೂವೆನ್‌ಹಾಕ್‌ನಿಗೆ ಮಾನಸಿಕ ಆಘಾತವಾಗಿತ್ತು. ತಾನು ಕಣ್ಣಾರೆ ಕಂಡದ್ದನ್ನು ರಾಯಲ್ ಸೊಸೈಟಿಗೆ ವರದಿ ಮಾಡಬೇಕೇ ಅಥವಾ ಬೇಡವೇ ಎಂದು ೩ ತಿಂಗಳು ಯೋಚಿಸಿದ. ಕೊನೆಗೆ ಲ್ಯಾಟಿನ್ ಭಾಷೆಯಲ್ಲಿ ಒಂದು ಪತ್ರ ಬರೆದ. ‘ಈ ಪತ್ರವು ನಿಮಗೆ ಅಸಹ್ಯವೆನಿಸಬಹುದು. ಕೊಳಕು ವಿಚಾರ ಗಳನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದು ಭಾವಿಸಬಹುದು.

ಹಾಗಾಗಿ ಇದನ್ನು ಖಾಸಗಿ ಪತ್ರವೆಂದು ಭಾವಿಸಿ. ಇದನ್ನು ಪ್ರಕಟಿಸಬೇಕಾಗಿಲ್ಲ. ಯಾವುದಕ್ಕೂ ಖಾವಂದರು ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು’
ಎನ್ನುವುದು ಅದರ ತಿರುಳಾಗಿತ್ತು. ಈ ಪತ್ರವು ರಾಯಲ್ ಸೊಸೈಟಿಯನ್ನು ತಲುಪುವ ವೇಳೆಗೆ ಒಲ್ಡೆನ್‌ಬರ್ಗ್ ಮರಣಿಸಿದ್ದ. ಅವನ ಸ್ಥಾನದಲ್ಲಿ ನೆಹೆಮಿಯ ಗ್ರೂ ಎಂಬಾತ ಬಂದಿದ್ದ. ಈತನಿಗೆ ಲ್ಯೂವೆನ್‌ಹಾಕ್ ನಡೆಸಿದ ಸಂಶೋಧನೆಯ ಬಗ್ಗೆಯೇ ಅನುಮಾನ ಬಂದಿತು. ಹಾಗಾಗಿ ಕೊಳಕುಪತ್ರವನ್ನು ಪ್ರಕಟಿಸ ಲಿಲ್ಲ. ಬದಲಿಗೆ ನಾಯಿ, ಕುದುರೆ, ಬೆಕ್ಕು, ದನಗಳ ವೀರ್ಯವನ್ನು ಪರೀಕ್ಷಿಸಬೇಕೆಂದು ಸಲಹೆ ನೀಡಿದ. ಅದರಂತೆ ಲ್ಯೂವೆನ್‌ಹಾಕ್ ಅಧ್ಯಯನ ಮಾಡಿ, ತನ್ನ ಮೂಲ ಸಂಶೋಧನೆಗೆ ಮತ್ತಷ್ಟು ಪುರಾವೆ ಒದಗಿಸಿ, ೨ ಪ್ರಬಂಧಗಳನ್ನು ಪತ್ರರೂಪದಲ್ಲಿ ಕಳುಹಿಸಿದ.

ಕೊನೆಗೆ ಲ್ಯೂವೆನ್‌ಹಾಕ್ ಸಂಶೋಧನಾ ಪತ್ರಗಳು ಜನವರಿ, ೧೬೭೯ರಲ್ಲಿ ಪ್ರಕಟವಾದವು. ಲ್ಯೂವೆನ್‌ಹಾಕ್‌ನು ವೀರ್ಯಾಣುಗಳನ್ನು ನೋಡಿ ಶತ
ಶತಮಾನಗಳ ಹಳೆಯ ಸಿದ್ಧಾಂತಕ್ಕೆ ಮರುಜೀವ ನೀಡಿದ. ಪೂರ್ಣ ರೂಪುಗೊಂಡ ಕುಬ್ಜ ಮಾನವನು ವೀರ್ಯದಲ್ಲಿರುತ್ತಾನೆ ಎಂಬ ಅರಿಸ್ಟಾಟಲನ ಸಿದ್ಧಾಂತಕ್ಕೆ ಪೋಷಿಸಿದ. ಲ್ಯೂವೆನ್‌ಹಾಕನು ತನ್ನ ಸಂಶೋಧನೆಯ ಮಹತ್ವವನ್ನು ಅರಿಯಲೇ ಇ ಎನ್ನಬಹುದು. ಲ್ಯೂವೆನ್‌ಹಾಕ್ ಕಳುಹಿಸಿದ ಪ್ರಬಂಧಗಳನ್ನು ರಾಯಲ್ ಸೊಸೈಟಿ ಸಕಾಲದಲ್ಲಿ ಪ್ರಕಟಿಸಲಿಲ್ಲ.

ಜನವರಿ ೧೬೭೮. ಸ್ವಾಮರ್ಡ್ಯಾಮ್, ತೆವೆರ್ನಾಟನಿಗೆ ಒಂದು ಪತ್ರ ಬರೆದ. ಅದರಲ್ಲಿ ತಾನು ಇಲಿ ಮತ್ತು ನಾಯಿಯ ವೀರ್ಯವನ್ನು ಅಧ್ಯಯನ ಮಾಡಿ ದುದಾಗಿ, ಅವುಗಳಲ್ಲಿ ಅಸಂಖ್ಯ ಚಲಿಸುವ ಹುಳುಗಳು ಇರುವುದಾಗಿ ತಿಳಿಸಿದ. ಲ್ಯೂವೆನ್ ಹಾಕ್ ಸಂಶೋಧನಾ ಪ್ರಬಂಧವು ಪ್ರಕಟವಾಗುವುದಕ್ಕೆ ೬ ತಿಂಗಳ ಮೊದಲು ಕ್ರಿಶ್ಚಿಯಾನ್ ಹ್ಯೂಜೆನ್ಸ್ ಜರ್ನಲ್ ಡೆಸ್ ಸ್ಕ್ಯಾವೆನ್ಸ್ ಎಂಬ ನಿಯಕಾಲಿಕದಲ್ಲಿ ಒಂದು ಪ್ರಬಂಧವನ್ನು ಪ್ರಕಟಿಸಿದ. ಪೀಳಿಗೆಯು ಹೇಗೆ ಮುಂದುವರಿಯುತ್ತದೆ ಎಂಬ ಪ್ರಶ್ನೆಗೆ ಉತ್ತರ ಕೊಡುವಂಥ ಅದ್ಬುತ ಸಂಶೋಧನೆಯನ್ನು ಹಾಲೆಂಡಿನಲ್ಲಿ ನಾನು ಮೊದಲ ಬಾರಿಗೆ ಮಾಡಿದ್ದೇನೆ ಎನ್ನುವುದು ಪ್ರಬಂಧದ ಸಾರಾಂಶವಾಗಿತ್ತು.

ಜೊಹಾನ್ ಹ್ಯಾಮ್, ಸ್ವಾಮರ್ಡ್ಯಾಮ್ ಮತ್ತು ಹ್ಯೂಜೆನ್ಸ್ ಸ್ವತಂತ್ರವಾಗಿ ವೀರ್ಯಾಣುವನ್ನು ಗಮನಿಸಿದರು ಎನ್ನುವುದು ಸತ್ಯ. ಆದರೆ ವೀರ್ಯಾಣು ವನ್ನು ಕಂಡುಹಿಡಿದ ಕೀರ್ತಿ ಲ್ಯೂವೆನ್‌ಹಾಕನಿಗೆ ಸಂದಿದೆ. ಇಂಥ ವಿಪರ್ಯಾಸಗಳು ವಿಜ್ಞಾನಲೋಕದಲ್ಲಿ ಕಾಣಸಿಗುತ್ತವೆ. ಡಿ ಗ್ರಾಫ್ ಅಂಡಾಣುವನ್ನು ಹಾಗೂ ಲ್ಯೂವೆನ್‌ಹಾಕ್ ವೀರ್ಯಾಣುವನ್ನು ಕಂಡುಹಿಡಿದರೂ, ಇವೆರಡರ ಸಂಯೋಗದಿಂದಲೇ ಜೀವವು ಹುಟ್ಟುತ್ತದೆ ಎಂಬುದು ಯುರೋಪಿನ
ವೈದ್ಯರು ಹಾಗೂ ಸಂಶೋಧಕರಿಗೆ ಹೊಳೆದಿರಲಿಲ್ಲ. ಅವರು ವೀರ್ಯರೂಪಣ ಮತ್ತು ಅಂಡರೂಪಣ ಸಿದ್ಧಾಂತಗಳನ್ನು ಸುಮಾರು ೧೫೦ ವರ್ಷ ಚರ್ವಿತಚರ್ವಣವಾಗಿ ಜಗಿದರು.

ಜೀವೋತ್ಪಾದನೆಗೆ ಅಂಡಾಣು ಮತ್ತು ವೀರ್ಯಾಣುಗಳೆರಡೂ ಎಂಬ ಅಗತ್ಯ ಎನ್ನುವ ಸತ್ಯವನ್ನು ಮನಗಾಣಲು ೧೯ನೆಯ ಶತಮಾನದವರೆಗೆ ಕಾಯ ಬೇಕಾಯಿತು. ವೀರ್ಯಾಣು ಮತ್ತು ಅಂಡಾಣುಗಳ ಮಹತ್ವದ ಬಗೆಗಿನ ತಿಳಿವಳಿಕೆಯು ೩ ಹಂತಗಳಲ್ಲಿ ಬೆಳೆದುಬಂದಿತು. ಫ್ರಾನ್ಸಿನ ಪಿಯರಿ ಲೂಯಿ ಮೋರೋ ದಿ ಮೌಪೆರ್ಟಿಯಸ್ ಮತ್ತು ರೆನೆ ಆಂಟಾಯ್ನ್ ದಿ ರ‍್ಯೂಮರ್ ಎನ್ನುವ ಇಬ್ಬರು ಮಹನೀಯರು, ಫ್ರಾನ್ಸ್ ದೇಶದ ಅನೇಕ ಗಣ್ಯರ ವಂಶಾವಳಿ ಯನ್ನು ಆಳವಾಗಿ ಅಧ್ಯಯನ ಮಾಡಿದರು. ಕೆಲವು ಲಕ್ಷಣಗಳು ಹೆತ್ತವರಿಂದ ಮಕ್ಕಳಿಗೆ ಬರುವುದನ್ನು ದಾಖಲಿಸಿದರು. ೧೮೩೯ರಲ್ಲಿ ಥಿಯೋಡರ್ ಶ್ವಾನ್ ಮತ್ತು ಮಥಿಯಾಸ್ ಜಾಕೋಬ್ ಶ್ಲೀಡೆನ್ ಎಂಬ ವಿಜ್ಞಾನಿಗಳು ಜೀವಕೋಶ ಸಿದ್ಧಾಂತ ಪ್ರಕಟಿಸಿ, ‘ಎಲ್ಲ ಜೀವರಾಶಿಯು ಜೀವಕೋಶ ಗಳಿಂದಾಗಿವೆ ಹಾಗೂ ಹೊಸ ಜೀವಕೋಶಗಳು ಪೂರ್ವ ಅಸ್ತಿತ್ವ ಜೀವಕೋಶಗಳಿಂದಲೇ ರೂಪುಗೊಳ್ಳುತ್ತವೆ’ ಎಂದರು.

ಹಾಗಾಗಿ ವೀರ್ಯಾಣು ಮತ್ತು ಅಂಡಾಣುಗಳೆರಡೂ ಜನನಕೋಶಗಳೆನಿಸಿಕೊಂಡವು. ಎರಡರ ಗುಣ ಲಕ್ಷಣಗಳ ನಡುವೆ ಅಪಾರ ವ್ಯತ್ಯಾಸಗಳಿದ್ದರೂ,
ಕಾರ್ಯತಃ ಅವು ಸರಿಸಮಾನವಾಗಿವೆ ಎಂದರು. ರುಡಾಲ್ ವಿರ್ಚೋ ಜೀವಕೋಶಗಳ ವಿಭಜನೆಯ ಮೂಲಕ ಹೊಸ ಜೀವಕೋಶಗಳು ರೂಪು ಗೊಳ್ಳುತ್ತವೆ ಎನ್ನುವುದಕ್ಕೆ ಪುರಾವೆಯನ್ನು ಒದಗಿಸಿದರು. ರಾಬರ್ಟ್ ಬ್ಲಾಕ್ವೆಲ್ ಎಂಬ ಕೃಷಿ ತಜ್ಞನು ಸಸ್ಯಗಳ ನಡುವೆ ಹಾಗೂ ಪ್ರಾಣಿಗಳ ನಡುವೆ ವಿಸ್ತೃತ ತಳಿವರ್ಧನಾ ಪ್ರಯೋಗಗಳನ್ನು ಕೈಗೊಂಡ. ಸಂತಾನದ ಲಕ್ಷಣಗಳು ಎರಡೂ ಪಿತೃಗಳಿಂದ ಬರುತ್ತಿರಬೇಕು ಎಂದು ಗುಮಾನಿಯನ್ನು ವ್ಯಕ್ತಪಡಿಸಿದ. ಕೊನೆಗೆ ಆಸ್ಟ್ರಿಯಾದ ಕ್ರೈಸ್ತ ಸನ್ಯಾಸಿ ಹಾಗೂ ತಳಿವಿಜ್ಞಾನದ ಪಿತಾಮಹ ಗ್ರೆಗೋರ್ ಜೊಹಾನ್ ಮೆಂಡೆಲ್, ತಳಿವಿಜ್ಞಾನದ ಮೂಲಭೂತ
ಮಾಹಿತಿಯನ್ನು ಪ್ರಾಯೋಗಿಕವಾಗಿ ನಿರೂಪಿಸಿದ.

ಆಗ ಯೂರೋಪಿನ ವಿಜ್ಞಾನಿಗಳು ಪೀಳಿಗೆಯು ಮುಂದುವರಿಯಲು ವೀರ್ಯಾಣು ಹಾಗೂ ಅಂಡಾಣುಗಳೆರಡೂ ಬೇಕು ಎನ್ನುವ ಖಚಿತ ತೀರ್ಮಾನಕ್ಕೆ ಬಂದರು.