ವಿಮೋಚನೆ
ಶಶಿಕುಮಾರ್ ಕೆ.
ಅಕ್ರಮ ವಲಸೆಯಿಂದಾಗಿ ಅಸ್ಸಾಂನಲ್ಲಿ ಅನೇಕ ಸಮಸ್ಯೆಗಳಾಗುತ್ತಿವೆ. ಜನಸಂಖ್ಯಾ ಸ್ವರೂಪ ಬದಲಾಗುತ್ತಿದ್ದು, ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಭೂಸಂಪತ್ತು, ಜಲಸಂಪತ್ತನ್ನು ಬಾಂಗ್ಲಾದ ಅಕ್ರಮ ವಲಸಿಗರು ದೋಚುತ್ತಿದ್ದಾರೆ. ಅವರನ್ನೆಲ್ಲಾ ಅಲ್ಲಿಂದ ಓಡಿಸಬೇಕಾಗಿದೆ.
ಮೇ ೨೮. ದೇಶದ ಜನರೆಲ್ಲಾ ಹೊಸ ಸಂಸತ್ ಭವನದ ಆರಂಭೋತ್ಸವದ ಕಡೆಗೆ ಮಗ್ನರಾಗಿದ್ದರೂ, ಪ್ರಧಾನ ಮಂತ್ರಿಯವರ ಭಾಷಣವನ್ನು ಕೇಳು ತ್ತಿದ್ದರು. ಅದೇ ವೇಳೆಗೆ ಅಸ್ಸಾಂನಲ್ಲಿ ಬಹುದೊಡ್ಡ ಕೆಲಸವೊಂದು ಯಾವುದೇ ಆರ್ಭಟವಿಲ್ಲದೆ ನಡೆದು ಹೋಯಿತು. ಅದೆಂದರೆ- ೨೧,೦೦೦ ಬಿಗಾಗಳಷ್ಟು ಭೂಮಿಯನ್ನು ಬಾಂಗ್ಲಾದ ಅಕ್ರಮ ವಲಸಿಗರಿಂದ ವಿಮುಕ್ತಿಗೊಳಿಸಿದ್ದು. ಸುಮಾರು ೨೦೦೦ ಮಂದಿ ಪೊಲೀಸರು, ಡೆಮಾಲಿಷನ್ ಸ್ಕ್ವಾಡ್ನ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಒರಾಂಗ್ ರಾಷ್ಟ್ರೀಯ ಉದ್ಯಾನವನ್ನು (ಇದರ ವಿಸ್ತೀರ್ಣ ೭೯.೨೮ ಚ.ಕಿ.ಮೀ.) ಪ್ರವೇಶಿಸಿ, ಅಲ್ಲಿ ಅಕ್ರಮವಾಗಿ ಆಕ್ರಮಿಸಿ ಕೊಂಡಿದ್ದ ಬಾಂಗ್ಲಾ ವಲಸಿಗರನ್ನು ಒಂದೇ ಏಟಿಗೆ ಅಲ್ಲಿಂದ ಓಡಿಸಿದರು.
ಬುಲ್ಡೋಜರ್ ನೆರವಿನಿಂದ ಅವರ ಮನೆಗಳನ್ನು ಒಡೆದು ಹಾಕಿ, ಅವರ ತೋಟ-ಹೊಲಗಳನ್ನೆಲ್ಲ ನಾಶ ಮಾಡಿದರು. ಒರಾಂಗ್ ರಾಷ್ಟ್ರೀಯ ಉದ್ಯಾನವು ದರಂಗ್ ಜಿಲ್ಲೆಯಲ್ಲಿದೆ. ಈ ಜಿಲ್ಲೆಗೊಂದು ವಿಶೇಷತೆಯಿದೆ. ಅಕ್ರಮ ವಲಸಿಗರ ವಿರುದ್ಧ ೬ ವರ್ಷಗಳ (೧೯೭೯-೮೫) ಸುದೀರ್ಘ ಹೋರಾಟ ನಡೆದದ್ದು ಈ ಜಿಲ್ಲೆಯಲ್ಲೇ. ಇದಕ್ಕೊಂದು ಹಿನ್ನೆಲೆಯಿದೆ. ಜಿಲ್ಲೆಯ ಲೋಕಸಭಾ ಸದಸ್ಯ ಹೀರಾಲಾಲ್ ಪಟ್ವಾರಿ ಅವರು ೧೯೭೭ರ ಚುನಾವಣೆಯಲ್ಲಿ ಜನಸಂಘದ ಮೂಲಕ ಗೆಲುವು ಸಾಧಿಸಿದ್ದರು.
ಗೆದ್ದ ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪಿದರು. ಅವರ ನಿಧನದ ೬ ತಿಂಗಳೊಳಗಾಗಿ ಉಪಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ, ಆರೇ ತಿಂಗಳ ಅವಽಯಲ್ಲಿ ಅಂದಾಜು ೭೦,೦೦೦ ಹೊಸ
ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು. ಇವರೆಲ್ಲರೂ ಬಾಂಗ್ಲಾದೇಶದ ಅಕ್ರಮ ವಲಸಿಗರೇ. ಇದರಿಂದಾಗಿ ಅಸ್ಸಾಂ ಜನರು ಒಮ್ಮೆಲೇ ಬೆಚ್ಚಿಬಿದ್ದರು, ರಾಜ್ಯದಲ್ಲಿ ಹೋರಾಟ ಶುರುವಾಯಿತು.
ಒರಾಂಗ್ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಅಂದಿನಿಂದ ಇಂದಿನವರೆಗೂ ೨೧,೦೦೦ ಬಿಗಾಗಳಷ್ಟು ಭೂಮಿಯನ್ನು ಆಕ್ರಮಿಸಿಕೊಂಡ ೧೩೦೦ ಕುಟುಂಬಗಳು ೪೯೦೦ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದವು. ಈ ಅಭಯಾರಣ್ಯದ
ವೈಶಿಷ್ಟ್ಯವೆಂದರೆ, ಇದು ಬ್ರಹ್ಮಪುತ್ರಾ ನದಿಯ ದಡದಲ್ಲಿದ್ದು ಅಭಯಾರಣ್ಯಕ್ಕೆ ಸೇರಿದ ಮರಳಿನಲ್ಲಿ ನದಿಯ ಕೊರೆತ ಉಂಟಾಗಿ ಸಣ್ಣ ಸಣ್ಣ ದ್ವೀಪಗಳಾಗುತ್ತವೆ. ಇವನ್ನು ಅಸ್ಸಾಮಿ ಭಾಷೆಯಲ್ಲಿ ‘ಚರ್’ ಎನ್ನುತ್ತಾರೆ (ಚರ್ ಎಂದರೆ ಜಾನುವಾರುಗಳನ್ನು ಮೇಯಿಸುವ ಭೂಮಿ). ಕೆಲವು ಕಡೆ ಸಮತಲವಾಗಿರುವಂಥ ಭೂಮಿಯನ್ನು ‘ಚಾಪೋರಿ’ ಎನ್ನುತ್ತಾರೆ.
ಈ ಚರ್-ಚಾಪೋರಿ ಗಳಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ಮನೆ ಅಥವಾ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಿಕೊಂಡು ವಾಸವಿರುತ್ತಾರೆ. ಈ ಚರ್-ಚಾಪೋರಿಗಳಲ್ಲಿ ವಾಸವಿದ್ದ ಮತ್ತು ಅಭಯಾರಣ್ಯವನ್ನು ಆಕ್ರಮಿಸಿದ್ದ ಅಕ್ರಮ ವಲಸಿಗರನ್ನು ಗುವಾಹಟಿ ಹೈಕೋರ್ಟ್ ಆದೇಶದ ಮೇರೆಗೆ ಹಿಮಾಂತ ಬಿಸ್ವ ಶರ್ಮಾ ಸರಕಾರ ಇಲ್ಲಿಂದ ತೊಲಗಿಸುತ್ತಿದೆ. ಪಕ್ಕದ ಶೋನಿತ್ಪುರ ಜಿಲ್ಲೆಯ ಬುಡಾ ಚಾಪೋರಿಯಲ್ಲಿನ ವನ್ಯಜೀವಿ ಅಭಯಾರಣ್ಯದಲ್ಲಿ ಅಕ್ರಮ ವಲಸಿಗರು ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದರು.
ಕಳೆದ ಫೆಬ್ರವರಿಯಲ್ಲಿ ಸುಮಾರು ೨೫೦೦ ಕುಟುಂಬಗಳನ್ನು ಇಲ್ಲಿಂದ ತೊಲಗಿಸಿದ ಅಸ್ಸಾಂ ಸರಕಾರ ೧೯ ಹೆಕ್ಟೇರ್ನಷ್ಟು ಭೂಮಿಯನ್ನು ವಿಮುಕ್ತಿ ಗೊಳಿಸಿತ್ತು. ಅಸ್ಸಾಂ ಗಡಿಪ್ರಾಂತ್ಯಗಳಲ್ಲೇ ಜಮಾವಣೆಯಾಗುತ್ತಿರುವ ಅಕ್ರಮ ವಲಸಿಗರು ಇಲ್ಲಿನ
ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನು ಆಕ್ರಮಿಸಿ ವನ್ಯಸಂಪತ್ತು ಮತ್ತು ಪ್ರಾಣಿಸಂಪತ್ತನ್ನು ದೋಚುತ್ತಿದ್ದಾರೆ. ಮುಖ್ಯವಾಗಿ, ಅಸ್ಸಾಂನ ಪ್ರಮುಖ ಪ್ರಾಣಿಯಾದ ಖಡ್ಗಮೃಗವನ್ನು ಬೇಟೆಯಾಡಿ, ಅದರ ಕೊಂಬನ್ನು ಆಗ್ನೇಯ ಏಷ್ಯಾ ದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದಾರೆ.
ಈ ರಾಷ್ಟ್ರಗಳಲ್ಲಿ ಖಡ್ಗಮೃಗದ ಒಂದು ಅಂಗುಲದಷ್ಟು ಕೊಂಬಿಗೆ ೨-೩ ಲಕ್ಷ ರುಪಾಯಿ ಬೆಲೆ ಇದೆಯಂತೆ. ಅಲ್ಲಿ ಸ್ಥಳೀಯವಾಗಿ ಔಷಽಗಳ ತಯಾರಿಕೆಯಲ್ಲಿ ಅದನ್ನು ಬಳಸುತ್ತಾರೆ. ಈ ಚಾಪೋರಿಗಳಲ್ಲಿ ಇವರದೇ ಒಂದು ಪ್ರತ್ಯೇಕ ಆಡಳಿತ ಶುರುವಾಗಿದ್ದು, ಇಲ್ಲಿಗೆ ಕೇಂದ್ರ ಸರಕಾರವಾಗಲೀ ಅಸ್ಸಾಂ ಸರಕಾರವಾಗಲೀ ಪ್ರವೇಶಿಸುವ ಪರಿಸ್ಥಿತಿಯಿಲ್ಲ. ಈ ಪರ್ಯಾಯ ಸರಕಾರ ದೊಳಗೆ ಭಯೋತ್ಪಾದಕರು, ಬಾಂಗ್ಲಾದೇಶಿ ಕಳ್ಳಸಾಗಣೆಗಾರರು, ಜಿಹಾದಿಗಳು ಬಂದುಹೋಗುತ್ತಿರುತ್ತಾರೆ. ಆದ್ದರಿಂದ ಈ ಅಭಯಾರಣ್ಯಗಳು ಮತ್ತು ಚರ್-ಚಾಪೋರಿಗಳನ್ನು ಅವರಿಂದ ವಿಮುಕ್ತಿಗೊಳಿಸಬೇಕೆಂದು ಅಸ್ಸಾಂ ಸರಕಾರ ನಿರ್ಣಯಿಸಿದೆ.
ಈ ಕಾರಣಕ್ಕೇ, ಮೇ ೨೮ರಂದು ಇಡೀ ದೇಶದ ಗಮನ ಹೊಸ ಸಂಸತ್ ಭವನದ ಆರಂಭೋತ್ಸವದೆಡೆಗೆ ಕಣ್ಣು ನೆಟ್ಟಿದ್ದಾಗ,
ಅಸ್ಸಾಂನಲ್ಲಿ ಹಿಮಾಂತ ಬಿಸ್ವ ಶರ್ಮಾ ಸರಕಾರ ಈ ಕಠಿಣ ಕ್ರಮಗಳನ್ನು ಕೈಗೊಂಡಿದ್ದು. ತನ್ಮೂಲಕ ತನ್ನದೃಢಸಂಕಲ್ಪವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದು. ವಾಸ್ತವವಾಗಿ, ಅಕ್ರಮ ವಲಸೆಯಿಂದಾಗಿ ಅಸ್ಸಾಂನಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಮುಖ್ಯವಾಗಿ ಜನ ಸಂಖ್ಯಾ ಸ್ವರೂಪ ಬದಲಾಗುತ್ತಿದ್ದು, ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ.
ಭೂಸಂಪತ್ತು, ಜಲಸಂಪತ್ತನ್ನು ಬಾಂಗ್ಲಾದ ಅಕ್ರಮ ವಲಸಿಗರು ದೋಚುತ್ತಿದ್ದಾರೆ. ಅವರನ್ನೆಲ್ಲಾ ಅಲ್ಲಿಂದ ಓಡಿಸಬೇಕಾಗಿ ರುವುದೇ ಇವೆಲ್ಲಕ್ಕೂ ಇರುವ ಪರಿಹಾರದ ಮಾರ್ಗೋಪಾಯ; ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಿಎಂ ಹಿಮಾಂತ ಬಿಸ್ವ ಶರ್ಮಾ ಅವರನ್ನು ಅಭಿನಂದಿಸಲೇಬೇಕು. ಹೋರಾಟದ ಇತಿಹಾಸ: ಬಾಂಗ್ಲಾದೇಶದ ಅಕ್ರಮ ವಲಸಿಗರ
ವಿರುದ್ಧ ಅಸ್ಸಾಂನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೊಡ್ಡ ಇತಿಹಾಸವೇ ಒದೆ. ೧೯೪೭ರ ದೇಶ ವಿಭಜನೆಯ ಸಮಯ
ದಲ್ಲಿ ಹಾಗೂ ೧೯೭೧ರ ಬಾಂಗ್ಲಾ ವಿಮೋಚನಾ ಸಂದರ್ಭದಲ್ಲಿ ೧೦ ಲಕ್ಷ ವಲಸೆಗಾರರು ಅಸ್ಸಾಂಗೆ ನುಗ್ಗಿಬಂದರು. ಅವರಲ್ಲಿ
ಮುಸ್ಲಿಮರೇ ಹೆಚ್ಚಾಗಿದ್ದುದು ಗಮನಾರ್ಹ.
ಹೀಗೆ ಬಂದವರು ಸ್ಥಳೀಯರಿಂದ ಭೂಮಿ ಕಸಿದುಕೊಂಡು ಭದ್ರವಾಗಿ ತಳವೂರಿದರು. ಕ್ರಮೇಣ ಅಸ್ಸಾಂ ವಾಸಿಗಳೇ
ಅಲ್ಪಸಂಖ್ಯಾತರಾದರು. ಅಕ್ರಮ ವಲಸಿಗರನ್ನು ಅಸ್ಸಾಂನಿಂದ ಹೊರಹಾಕಬೇಕೆಂದು ಅಸ್ಸಾಮಿಗಳು ಉಗ್ರ ಹೋರಾಟಕ್ಕಿಳಿ
ದರು. ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ಮತ್ತು ‘ಅಸ್ಸಾಂ ಗಣ ಸಂಗ್ರಾಮ ಪರಿಷತ್’ ಸಂಘಟನೆಗಳು ಅಕ್ರಮ
ವಲಸಿಗರ ವಿರುದ್ಧ ತೊಡೆತಟ್ಟಿದವು.
ಬಾಂಗ್ಲಾದೇಶಿ ಮುಸ್ಮಿರಿಗೆ ಇಲ್ಲಿನ ಪೌರತ್ವ ನೀಡಬಾರದು, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಬೇಕು, ಅಸ್ಸಾಂ-ಬಾಂಗ್ಲಾ ಗಡಿಯನ್ನು ಮುಚ್ಚಬೇಕು ಎಂಬ ಬೇಡಿಕೆಗಳನ್ನು ಅವರು ಮುಂದಿಟ್ಟರು. ಆದರೆ ಈ ಬೇಡಿಕೆಗಳನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದ ಪರಿಣಾಮ ಹೋರಾಟ ಉಗ್ರರೂಪ ಪಡೆಯಿತು. ಹಿಂಸಾಚಾರ ತಾರಕಕ್ಕೇರಿ ೩೦೦೦ ಮಂದಿ ಕೊಲ್ಲಲ್ಪ
ಟ್ಟರು. ಕೊನೆಗೆ ಮುಷ್ಕರನಿರತ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆಸಿಕೊಂಡ ಪ್ರಧಾನಿ ರಾಜೀವ್ ಗಾಂಧಿಯವರು ೧೯೮೫ರ ಆಗಸ್ಟ್ ೧೫ರಂದು ಅಸ್ಸಾಂ ಒಪ್ಪಂದವನ್ನು ಮಾಡಿಕೊಂಡರು.
ಆ ಪ್ರಕಾರ, ೧೯೫೧-೬೧ರ ನಡುವೆ ಬಂದ ವಲಸೆಗಾರರಿಗೆ ಮಾತ್ರ ಮತದಾನದ ಹಕ್ಕು ಕೊಟ್ಟು ೧೯೭೦ರ ನಂತರ ಬಂದವರನ್ನು ದೇಶದಿಂದ ಹೊರಹಾಕಬೇಕು. ೧೯೬೧-೭೧ರ ನಡುವೆ ಬಂದವರಿಗೆ ಪೌರತ್ವ ಮಾತ್ರ ಕೊಡಬೇಕು ಎಂದು
ತೀರ್ಮಾನಿಸಲಾಯಿತು. ಆಗ ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ಮತ್ತು ‘ಅಸ್ಸಾಂ ಗಣ ಸಂಗ್ರಾಮ ಪರಿಷತ್ತು’ಗಳು ಒಟ್ಟುಗೂಡಿ ೧೯೮೫ರಲ್ಲಿ ‘ಅಸ್ಸಾಂ ಗಣ ಪರಿಷತ್’ (ಎಜಿಪಿ) ಅನ್ನು ಸ್ಥಾಪಿಸಿಕೊಂಡವು.
ಬಾಂಗ್ಲಾದೇಶದಿಂದ ಬರುವ ವಲಸೆಗಾರರನ್ನು ತಡೆಗಟ್ಟುವುದು, ಅಸ್ಸಾಂನಲ್ಲಿ ಅಲ್ಪಸಂಖ್ಯಾತರಾಗಿರುವ ಅಸ್ಸಾಮಿ ಹಿಂದೂ ಗಳನ್ನು ರಕ್ಷಿಸುವುದು ಎಜಿಪಿಯ ಉದ್ದೇಶಗಳಾಗಿದ್ದವು. ೧೯೮೫ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಜಿಪಿ ಜಯಗಳಿಸಿ, ೩೨ರ ಹರೆಯದ ವಿದ್ಯಾರ್ಥಿ ನಾಯಕ ಪ್ರಫುಲ್ಲ ಕುಮಾರ್ ಮಹಂತ ಅಸ್ಸಾಂನ ಮುಖ್ಯಮಂತ್ರಿಯಾಗಿ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.
೧೯೯೧ರ ಚುನಾವಣೆಯಲ್ಲಿ ಎಜಿಪಿ ಸೋತು, ಜಯ ಗಳಿಸಿದ ಕಾಂಗ್ರೆಸ್ಸಿನ ಹಿತೇಶ್ವರ ಸೈಕಿಯಾ ಮುಖ್ಯಮಂತ್ರಿಯಾದರು. ೧೯೯೬ರಲ್ಲಿ ೬೭ ಸ್ಥಾನ ಗಳಿಸಿದ ಎಜಿಪಿ ಸರಕಾರ ರಚಿಸಿತು. ಪ್ರಪುಲ್ಲ ಕುಮಾರ್ ಮಹಂತ ಪುನಃ ಮುಖ್ಯಮಂತ್ರಿಯಾದರು. ಆಗ ಕೇಂದ್ರದ ಎಚ್.ಡಿ ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ನೇತೃತ್ವದ ಜನತಾದಳ ಸರಕಾರಕ್ಕೆ ಎಜಿಪಿ ಬೆಂಬಲ ನೀಡಿತು. ನಂತರ ಬಿಜೆಪಿ ರಚಿಸಿದ ಎನ್ಡಿಎ ಸರಕಾರದಲ್ಲಿ ಸಹಭಾಗಿಯಾಯಿತು.
೨೦೦೧ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ೨೦ ಸ್ಥಾನ ಗಳಿಸಿದ ಎಜಿಪಿ ವಿರೋಧ ಪಕ್ಷವಾಯಿತು…. ಹಲವು ದಶಕಗಳ ಬಳಿಕ ಈಗ ಅಸ್ಸಾಂನಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿರುದ್ಧ ಹೋರಾಟ ನಡೆಸದೆ ಸರಕಾರವು ಸದ್ದು ಗದ್ದಲವಿಲ್ಲದೆ ಅವರನ್ನೆ ಹೊರಹಾಕುತ್ತಿರುವುದು ಶ್ಲಾಘನೀಯ ನಡೆಯಾಗಿದೆ.