ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್ ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಲು ಅವಕಾಶವಿದೆ. ಇದಲ್ಲದೆ, ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು. ಜೂನ್ 15 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಹೊಸ ಮನೆ, ಹೊಸ ಬಾಡಿಗೆದಾರರಿಗೆ ರಾಜ್ಯದ ವಿದ್ಯುತ್ ಬಳಕೆಯ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು. ಒಂದು ವರ್ಷದ ಸರಾಸರಿ ಲಭ್ಯವಾದ ನಂತರ, ಈ ದತ್ತಾಂಶವನ್ನು ಆಧರಿಸಿ, ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದರು.
ಹಳೆ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಸೆಪ್ಟೆಂಬರ್ 30 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಗೃಹಜ್ಯೋತಿ ಯೋಜನೆಗೆ ಆಧಾರ್, ಆರ್. ಆರ್. ಸಂಖ್ಯೆ, ಬಾಡಿಗೆದಾರರು ಕರಾರು ಪತ್ರ ಹಾಗೂ ಅದೇ ವಿಳಾಸದ ಮತದಾರರ ಗುರುತು ಚೀಟಿ ಮಾಹಿತಿ ಸಲ್ಲಿಸಿ, ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.