Friday, 22nd November 2024

ಕಾಂಗ್ರೆಸ್ ಸರಕಾರದ ವಿರುದ್ಧ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿವೆ: ಪರಂ ಗರಂ

ತುಮಕೂರು:  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ವಹಿಸಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಇನ್ನು ಗೃಹ ಸಚಿವ ಪರಮೇಶ್ವರ್ ಪೊಲೀಸರಿಗೆ ಹಣೆಗೆ ಕುಂಕುಮ, ವಿಭೂತಿ ಇಟ್ಟುಕೊಳ್ಳಬಾರದೆಂದು ಎಂದು ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತು ಸ್ವತಃ ಗೃಹ ಸಚಿವರೇ ಸ್ಪಷ್ಟನೆ ನೀಡಿದ್ದು ನಾನು ಹೇಳಿಯೇ ಇಲ್ಲ ಎಂದು ತಿಳಿಸಿದ್ದಾರೆ.
 ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈ ಕುರಿತು ಮಾತನಾಡಿ, ಮೂರನೇ ಬಾರಿಗೆ ಜಿಲ್ಲೆಯ ಉಸ್ತುವಾರಿ ಯನ್ನು ವಹಿಸಿಕೊಂಡಿದ್ದೇನೆ. ಸಿಎಂ ಎಲ್ಲಾ ಸಚಿವರಿಗೂ ಉಸ್ತುವಾರಿ ಯನ್ನು ಕೊಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಶಾಂತಿ ಕಾಪಾಡುವ ಜವಾಬ್ದಾರಿ ಅವರ ಮೇಲೆ ಇದೆ.
ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇರುತ್ತೆ. ಮಳೆ ಬಂದು ಪ್ರವಾಹ ವಾಗಿ ಬೆಳೆ ಹಾನಿಯಾಗಿರುತ್ತದೆ ಕೆಲ ಜಿಲ್ಲೆಯಲ್ಲಿ ಮಳೆಯಾಗದೆ ನೀರಿನ ಸಮಸ್ಯೆ ಇರುತ್ತದೆ. ಸಮಸ್ಯೆಗಳಿಗೆ ತಕ್ಕಂತೆ ಸಚಿವರುಗಳು ಕ್ರಮ ಕೈಗೊಳ್ಳಬೇಕು ಎಂದು ಕಿವಿಮಾತನ್ನು ಹೇಳಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ನಿಯಮಗಳಿವೆ. ಸರ್ಕಾರದಲ್ಲಿ ಬ್ಲೂ ಬುಲ್ ಇದೆ ಅದರಲ್ಲಿ ಏನಿದೆಯೋ ಹಾಗೆಯೇ ಆಗಬೇಕು. ನಾನು ಸಚಿವನಾಗಿದ್ದೇನೆ ಎಂದು ಪ್ರತ್ಯೇಕವಾಗಿ ಕಾನೂನು ರೆಚಿಸಲು ಸಾಧ್ಯವಿಲ್ಲ.
ಕುಂಕುಮ, ವಿಭೂತಿ ಬೇಡ ಎಂದೇಳಿಲ್ಲ
ನಾನು ಪೊಲೀಸರಿಗೆ ಕುಂಕುಮ, ವಿಭೂತಿ, ಇಟ್ಟು ಕೊಳ್ಳಬಾರದು ಅಂತ ಹೇಳಿದ್ದೇನೆ ಎಂದು ವೈರಲ್ ಮಾಡಿದ್ದಾರೆ. ನನಗೆ ಪ್ರಜ್ಞೆಯಿದೆ, ನಾನು ಮೂರು ಬಾರಿ ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಅದನ್ನು ನಾನು ಹೇಳಿಯೇ ಇಲ್ಲ. ಯಾರು ವೈರಲ್ ಮಾಡಿದ್ದಾರೋ ಅವರನ್ನು ಹುಡುಕು ತ್ತಿದ್ದೇವೆ. ಇಂತಹವನ್ನೆಲ್ಲಾ ಸುಮ್ಮನೆ ಬಿಡುವುದಿಕ್ಕೆ ಆಗಲ್ಲ. ಸುಳ್ಳು ಸುದ್ದಿಗಳನ್ನು ಮಾಡಬಾರದು, ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ ಪ್ರಚೋದನೆ ಯಾಗುತ್ತದೆ. ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ಅಪೇಕ್ಷೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಹೇಳಿದ್ದೇವೆ ಅದರಂತೆ ಎಲ್ಲರೂ ಸಾಮರಸ್ಯದಿಂದ ಬದುಕೋಣ ಎಂದರು.