Friday, 20th September 2024

ಜೂ.15 ರವರೆಗೆ ಮಣಿಪುರದಲ್ಲಿ ಅಂತರ್ಜಾಲ ನಿಷೇಧ ವಿಸ್ತರಣೆ

ಮಣಿಪುರ: ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮಣಿಪುರ ಸರ್ಕಾರ ಜೂನ್ 15 ರವರೆಗೆ ವಿಸ್ತರಿಸಿದೆ.

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿರುವ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಅಂತರ್ಜಾಲ ನಿಷೇಧವನ್ನು ಮುಂದಿನ ಐದು ದಿನಗಳವರೆಗೆ ವಿಸ್ತರಿಸಲಾಗಿದೆ” ಎಂದು ಅಧಿಕೃತ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಜೂನ್ 15 ರಂದು ಮಧ್ಯಾಹ್ನ 3 ಗಂಟೆಯವರೆಗೆ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಣಿಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಡಿಆರ್ ಸಪಂ ರಂಜನ್, “ರಾಜ್ಯವು ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಭಾಗದಿಂದ ಅಹಿತಕರ ಘಟನೆ ನಡೆದಿ ರುವ ವರದಿಯಾಗಿಲ್ಲ. ಮಣಿಪುರಾದ್ಯಂತ ಪ್ರಸ್ತುತ 349 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ” ಎಂದರು.

“ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಲೇ ಇದೆ. ಈ ತಿಂಗಳ ಆರಂಭದಲ್ಲಿ ಉಂಟಾದ ಘರ್ಷಣೆಯಲ್ಲಿ ಸುಮಾರು 60 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ. ಹಿಂಸಾಚಾರದ ಸಂದರ್ಭದಲ್ಲಿ ಅನೇಕ ಮನೆಗಳು ಸುಟ್ಟು ಹೋಗಿವೆ, ರಾಜ್ಯದ ಕೆಲವು ಭಾಗಗಳಿಂದ ಹೊಸ ಹೊಸ ಘಟನೆಗಳು ವರದಿಯಾಗಿವೆ. ಒಟ್ಟು ಲೂಟಿಯಾದ 4,537 ಶಸ್ತ್ರಾಸ್ತ್ರಗಳ ಪೈಕಿ 990 ಶಸ್ತ್ರಾಸ್ತ್ರಗಳನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡಿದೆ” ಎಂದು ಹೇಳಿದರು.

“ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಪುನಃಸ್ಥಾಪಿಸಲು ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇ 29 ರಿಂದ ಜೂನ್ 1ರ ನಡುವೆ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪುರವು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಶಾಂತಿ ಸಮಿತಿಯನ್ನು ಒಟ್ಟುಗೂಡಿಸಲಾಗುವುದು ಎಂದು ಘೋಷಿಸಿದ ಕೆಲ ದಿನಗಳ ನಂತರ ಈ ಸಮಿತಿಯನ್ನು ರಚಿಸಲಾಗಿದೆ.