Sunday, 24th November 2024

ಬಿಜೆಪಿ ನಾಯಕರಿಂದ ಇನ್ನೂ ತೀರದ ಮೌನ !

ಅಶ್ವತ್ಥಕಟ್ಟೆ

ranjith.hoskere@gmail.com

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರಕಾರಗಳು ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಎಚ್ಚರಿಕೆಯ ಹೆಜ್ಜೆ ಯಿಡಲು ಪ್ರಬಲ ಪ್ರತಿಪಕ್ಷ ಅತ್ಯಗತ್ಯ. ಸರಕಾರದ ಯೋಜನೆಗಳಲ್ಲಿ ಯಾವುದೇ ಲೋಪ, ಭ್ರಷ್ಟಾಚಾರವಾಗದ ರೀತಿಯಲ್ಲಿ ಸಮರ್ಥವಾಗಿ ಜನರಿಗೆ ಮುಟ್ಟಬೇಕೆಂದರೆ ‘ಸೂಕ್ಷ್ಮ ಮನಸಿನ, ತೀಕ್ಷ್ಣ ಪ್ರತಿಪಕ್ಷ’ ಬೇಕಾಗುತ್ತದೆ.

ಈ ಕಾರಣಕ್ಕಾಗಿಯೇ ಪ್ರತಿಪಕ್ಷಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದೆ. ಆದರೆ ಇಂದಿನ ಮಟ್ಟಿಗೆ ಕರ್ನಾಟಕ ದಲ್ಲಿ ಅಧಿಕೃತ ಪ್ರತಿಪಕ್ಷ ವಾಗಿರುವ ಬಿಜೆಪಿ ಪ್ರಬಲವಾಗಿ ಕಾಣಿಸಿಕೊಳ್ಳುವುದು ಹೋಗಲಿ, ಸಂಘಟಿತ ಪಕ್ಷವಾಗಿಯೂ ಕಾಣಿಸಿಕೊಳ್ಳದ ಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗುವುದಿಲ್ಲ.

ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿ ನಾಲ್ಕು ವರ್ಷದ ಆಡಳಿತದ ಬಳಿಕ, ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದೆ ಎನ್ನುವುದು ಹಳೆಯೇ ಮಾತು.

ಕರ್ನಾಟಕದ ಇತಿಹಾಸದಲ್ಲಿ ಆಡಳಿತದಲ್ಲಿರುವ ಪಕ್ಷವೇ ಮತ್ತೊಂದು ಅವಽಗೆ ಅಧಿಕಾರವನ್ನು ಮುಂದುವರಿಸಿರುವ ಇತಿಹಾಸ ವಿರಳವಾ ಗಿರುವುದರಿಂದ, ಐದು ವರ್ಷದ ಬ್ರೇಕ್ ಬಳಿಕ ಮತ್ತೆ ಪ್ರಯತ್ನಿಸಬಹುದು ಎನ್ನುವುದು ಹಲವು ಬಿಜೆಪಿಗರ ಲೆಕ್ಕಾ ಚಾರ. ಆದರೆ ಆಡಳಿತದಿಂದ ಪ್ರತಿಪಕ್ಷಕ್ಕೆ ಬಂದಿರುವ ಪಕ್ಷ, ಪ್ರತಿಪಕ್ಷವಾಗಿ ಕೆಲಸ ಮುಂದುವರಿಸುವ ಬದಲು, ಐದು ವರ್ಷದ ‘ವಿರಾಮ’ ವೆಂದು ಸಂಪೂರ್ಣ ಮೌನಕ್ಕೆ ಶರಣಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಹಾಗೇ ನೋಡಿದರೆ, ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕ ಅಧಿಕಾರಕ್ಕೆ ಬರುವಾಗ ಬಿಜೆಪಿ ಮೇಲೆ ಬಹುದೊಡ್ಡ ನಿರೀಕ್ಷೆ ಯಿತ್ತು. ಅಂಥ ನಿರೀಕ್ಷೆಗಳು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಣೆಯಾದವು. ಅದರಲ್ಲಿಯೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಆ ಸ್ಥಾನಕ್ಕೆ ಕೂರಿಸಿದ ಬಳಿಕವಂತೂ ಸ್ವತಃ ಪಕ್ಷದ ಕಾರ್ಯಕರ್ತರಿಂದ, ಆರ್‌ಎಸ್‌ಎಸ್ ಪ್ರಚಾರಕರಿಂದಲೇ ‘ಯಾಕಾದರೂ ಈ ಸರಕಾರ ಬಂತೋ’ ಎಂಭ ಭಾವನೆ ಕಾಡಿದ್ದು ಸುಳ್ಳಲ್ಲ.

ಸರಕಾರ ಹಾಗೂ ಪಕ್ಷದ ನಡುವೆ ಬಹುದೊಡ್ಡ ಕಂದಕವನ್ನು ಸೃಷ್ಟಿಸಿಕೊಂಡು, ಸಂಘಟನೆಯನ್ನು ಸಂಪೂರ್ಣ ಹಾಳು
ಮಾಡಿಕೊಂಡಿದ್ದ ಬಿಜೆಪಿ ನಾಯಕರಿಗೆ, ಸೋತು ಸುಣ್ಣವಾದ ಬಳಿಕವೂ ಕೆಟ್ಟಿರುವ ಸಂಘಟನೆಯನ್ನು ಸರಿಪಡಿಸಿಕೊಳ್ಳಬೇಕು ಎನ್ನುವ ಆಲೋಚನೆಯಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ, ರಾಷ್ಟ್ರೀಯ ನಾಯಕರು ರಾಜ್ಯದತ್ತ ತಲೆಹಾಕಿಲ್ಲ, ರಾಜ್ಯ ನಾಯಕರು ಮನೆಯಿಂದ ಆಚೆ ಬರುತ್ತಿಲ್ಲ, ಕಾಂಗ್ರೆಸ್ ವಿರುದ್ಧ ಟೀಕಿಸಲು ಸಿಗುವ ಅವಕಾಶವನ್ನು ಬಳಕೆ ಮಾಡಿ ಕೊಳ್ಳುತ್ತಿಲ್ಲ.

ಹೀಗಾದರೆ, ನೆಲಕಚ್ಚಿರುವ ಸಂಘಟನೆ ಮತ್ತೆ ಸರಿಹೋಗುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಬಿಜೆಪಿ ಬಳಿ ಉತ್ತರವಿಲ್ಲ ವಾಗಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಆರ್. ಅಶೋಕ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ, ಟ್ವೀಟರ್‌ನಲ್ಲಿ ಅಥವಾ ಮಾಧ್ಯಮಗಳ ಮುಂದೆ ಗುಡುಕುತ್ತಿದ್ದಾರೆಯೇ ಹೊರತು, ಪ್ರತಿಪಕ್ಷವಾಗಿ ಇಡೀ ಬಿಜೆಪಿ ನೈಜವಾಗಿ ಮಾಡಬೇಕಿದ್ದ ಕೆಲಸವನ್ನು ಮಾಡುತ್ತಿಲ್ಲ. ದಶಕಗಳಿಂದ ಪಕ್ಷ ಸಂಘಟಿಸಿದ್ದ ಹಲವಾರು ನಾಯಕರನ್ನು ಪಕ್ಷ ದೂರವಿಟ್ಟಿದೆ.

ಸ್ವಯಂಪ್ರೇರಿತವಾಗಿ ಅವರೇ ಸಂಘಟನೆಗೆ ಮುಂದಾದರೂ, ಅದಕ್ಕೆ ಅಡ್ಡಗಾಲು ಹಾಕಲು ಹಲವು ನಾಯಕರಿದ್ದಾರೆ. ಆದ್ದರಿಂದ ಬುಡದಿಂದ ಪಕ್ಷವನ್ನು ಸಂಘಟಿಸಿದ್ದ ಹಲವು ನಾಯಕರು ಇಂದು ನಮಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ‘ಮೌನ’ವಾಗಿದ್ದಾರೆ. ಇತ್ತ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿದ್ದ ನಾಯಕರೂ ಟ್ವೀಟ್‌ಗೆ ಸೀಮಿತರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈಗಷ್ಟೇ ಒಂದು ತಿಂಗಳು ಕಳೆದಿದೆ. ಮುಂದಿನ ದಿನದಲ್ಲಿ ‘ಅಗ್ರೆಸಿವ್’ ರಾಜಕೀಯ ಮಾಡುತ್ತೇವೆ ಎನ್ನುವ ಸಬೂಬನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಆದರೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದಿರುವ ಬಿಜೆಪಿ ಮುಂದೇನು ಮಾಡಲಿದೆ ಎನ್ನುವುದು ಪಕ್ಷದೊಳಗೆ ಇರುವ ಅನೇಕರ ಪ್ರಶ್ನೆಯಾಗಿದೆ. ಹಾಗೇ ನೋಡಿದರೆ, ಬಿಜೆಪಿ ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ಪ್ರತಿಪಕ್ಷವಾಗಿ ದ್ದಾಗಲೇ ಸಕ್ರಿಯವಾಗಿರುತ್ತದೆ. ಆದರೆ ಕರ್ನಾಟಕದ ಮಟ್ಟಿಗೆ ಮಾತ್ರ ಈ ಬಾರಿ ಇದೂ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಸರಕಾರ ಅಧಿಕಾರದ ಗದ್ದುಗೆ ಏರಿ ಒಂದು ತಿಂಗಳು ಕಳೆಯದಿದ್ದರೂ, ಪಂಚ ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡು, ಈ ವೇಳೆ ಬಿಜೆಪಿ ಬಹುದೊಡ್ಡ ಆಂದೋಲನವನ್ನು ಶುರು ಮಾಡಬಹುದಾಗಿತ್ತು. ಆದರೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ.

ಇನ್ನು ವಿದ್ಯುತ್ ಬಿಲ್, ದುಪ್ಪಟ್ಟು ಬಂದಿರುವ ಬಗ್ಗೆ, ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ ವಿರೋಧ ಶುರುವಾಗಿದೆ. ಆದರೆ ಬಿಜೆಪಿ ನಾಯಕರು, ಮಾತ್ರ ಈ ಬಗ್ಗೆ ಕಿಮಿಕ್ ಎಂದಿಲ್ಲ. ಬಿಜೆಪಿ ನಾಯಕರ ಈ ‘ಮೌನ’ವನ್ನೇ ಬಳಸಿಕೊಂಡು ಕಾಂಗ್ರೆಸ್ ನಾಯಕರು ಇದಾಗಲೇ, ‘ವಿದ್ಯುತ್ ಬಿಲ್ ಹೆಚ್ಚಿಸಿದ್ದು ನಾವಲ್ಲ. ಬಿಜೆಪಿ ಸರಕಾರ’ ಎನ್ನುವ ಮಾತನ್ನು ಶುರುಮಾಡಿದ್ದಾರೆ. ಬಿಜೆಪಿ ಸರಕಾರದ ಅವಽಯಲ್ಲಿಯೇ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದರೂ, ಇತರೆ ಕಾಯಿದೆಗಳ ಮರುಪರಿಷ್ಕರಣೆ, ಪಠ್ಯ ಪರಿಷ್ಕರಣೆಯಂತೆ ವಿದ್ಯುತ್ ಬಿಲ್ ಹೆಚ್ಚಾಗದಂತೆ ಆದೇಶ ಹೊರಡಿಸಿ ಎಂದು ಬಾಯಿ ಮಾತಿಗೆ ಆಗ್ರಹಿಸುವ
ಸ್ಥಿತಿಯಲ್ಲಿಯೂ ಬಿಜೆಪಿ ಇಲ್ಲದಿರುವುದು ಪಕ್ಷದ ಕಾರ್ಯಕರ್ತರ ಆತಂಕವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದ ಸೀಟು ಬರಲಿಲ್ಲ, ಭಾರಿ ಹಿನ್ನಡೆ ಎನ್ನುವ ಕಾರಣಕ್ಕೆ ಸಹಜವಾಗಿಯೇ ಕೆಲ ದಿನಗಳ ಕಾಲ ‘ಶಾಕ್’ನಲ್ಲಿದ್ದಾರೆ ಎನ್ನಬಹುದು. ಆದರೆ ಅದಾದ ಬಳಿಕವಾದರೂ ಎಚ್ಚೆತ್ತುಕೊಳ್ಳಬೇಕಿತ್ತು. ಒಂದು ವೇಳೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಈ ರೀತಿಯ ಅವಕಾಶಗಳು ಸಿಕ್ಕಿದ್ದರೆ ಈ ವೇಳೆಗಾಗಲೇ, ಸರಕಾರದ ವಿರುದ್ಧ ‘ನೆಗೆಟಿವ್’ ನೆರಳು ಬರುವುದಕ್ಕೆ ಮಾಡಬೇಕಾದ ಕೆಲಸವನ್ನು ಆರಂಭಿಸಿರುತ್ತಿತ್ತು.

ಪ್ರತಿಪಕ್ಷ ಸ್ಥಾನದಲ್ಲಿ ಕೂತಾಗಲೂ ಕಾಂಗ್ರೆಸ್ ಸರಕಾರದ ವಿರುದ್ಧ ಮುಗಿಬೀಳುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ಬಿಜೆಪಿ ಮಾತ್ರ, ಈಗಲೂ ತನ್ನ ಶಾಸಕಾಂಗ ಪಕ್ಷದ ನಾಯಕನ್ಯಾರು? ಪ್ರತಿಪಕ್ಷ ಸ್ಥಾನದಲ್ಲಿ ಕೂರುವವರು ಯಾರು? ಯಾರಿಗೂ ಬೇಡವಾಗಿರುವ ರಾಜ್ಯಾಧ್ಯಕ್ಷರನ್ನು ಬದಲಾಯಿಸಿ ಯಾರನ್ನು ಕೂರಿಸಬೇಕು ಎನ್ನುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳನ್ನೇ ನಡೆಸಿಲ್ಲ.

ಅಧಿಕಾರದಲ್ಲಿ ಬಿಜೆಪಿ ಕೆಲಸ ಮಾಡಲ್ಲ. ಪ್ರತಿಪಕ್ಷವಾಗಿ ಕಾಂಗ್ರೆಸ್ ಹೋರಾಡಲ್ಲ ಎನ್ನುವ ಮಾತು ರಾಜಕೀಯ ಮೊಗಸಾಲೆ ಯಲ್ಲಿ ಸಾಮಾನ್ಯವಾಗಿರುವ ಮಾತು. ಆದರೆ ಕರ್ನಾಟದ ಸದ್ಯದ ಪರಿಸ್ಥಿತಿ ನೋಡಿದರೆ, ಬಿಜೆಪಿ ಆಡಳಿತವನ್ನೂ ಸರಿಯಾಗಿ ನಡೆಸದೇ ಪ್ರತಿಪಕ್ಷವಾಗಿಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನು ಕಾಂಗ್ರೆಸ್ ಪ್ರತಿಪಕ್ಷವಾಗಿಯೂ ಸಮರ್ಥ ಹೋರಾಟದೊಂದಿಗೆ ಜನರನ್ನು ತಲುಪಿತ್ತು.

ಆಡಳಿತ ಪಕ್ಷದಲ್ಲಿದ್ದುಕೊಂಡೂ, ಪ್ರತಿಪಕ್ಷದ ಯಾವುದೇ ‘ವಿರೋಧ’ವಿಲ್ಲದೇ ಒಂದು ತಿಂಗಳನ್ನು ಪೂರೈಸಿದೆ. ಕಲಾಪ ಶುರುವಾಗುತ್ತಿದ್ದಂತೆ, ಸದನದಲ್ಲಿ ಕಾಂಗ್ರೆಸ್ ಕಟ್ಟಿಹಾಕುತ್ತೇವೆ ಎನ್ನುವ ಮಾತನ್ನು ಕೆಲ ನಾಯಕರು ಆಡುತ್ತಿದ್ದಾರೆ. ಆದರೆ ಸಿಕ್ಕ ಸಮಯದಲ್ಲಿ ಅವಕಾಶವನ್ನೇ ಬಳಸಿಕೊಳ್ಳದೇ, ಎಲ್ಲವೂ ಹಳಸಲು ಆದ ಬಳಿಕ ಅದೇ ವಿಷಯವನ್ನು ಸದನದಲ್ಲಿ ಮೇಜು ಕುಟ್ಟಿ
ಪ್ರಶ್ನಿಸುವುದರಿಂದ ಆಗುವ ಲಾಭವೇನು? ಈಗಿರುವ ನಾಯಕತ್ವದಲ್ಲಿಯೇ ಮುಂದುವರಿದರೆ ಬಾಕಿ ಉಳಿದಿರುವ ಸಂಘಟನೆಯನ್ನು ಬಿಜೆಪಿ ಕಳೆದುಕೊಳ್ಳಬೇಕಾಗುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ಸ್ಥಾನಕ್ಕೆ ಹೊಸ ಮುಖಗಳಿಗೆ ಅಥವಾ ಕಾಂಗ್ರೆಸ್ ಅನ್ನು ಸಮರ್ಥವಾಗಿ ‘ಹೊಂದಾಣಿಕೆ’ ಮಾಡಿಕೊಳ್ಳದೇ ಹೋರಾಡುವ ನಾಯಕರ ಅಗತ್ಯವಿದೆ. ಆದರೆ, ಚುನಾವಣೆಯ ಬಳಿಕ ಕೇಂದ್ರ ನಾಯಕರೂ ಕರ್ನಾಟಕದ
ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇರುವುದರಿಂದ, ಸಂಘಟನೆಯ ವಿಷಯದಲ್ಲಿ ಹೇಳಿಕೊಳ್ಳುವ ಬದಲಾವಣೆಯಾಗುವುದೇ ಎನ್ನುವುದೇ ಹಲವರಲ್ಲಿರುವ ಆತಂಕವಾಗಿದೆ.

ಆದರೆ, ಬಿಜೆಪಿಯ ಬಹುತೇಕ ನಾಯಕರ ಪ್ರಕಾರ, ಈಗಿರುವ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಆರ್.ಅಶೋಕರನ್ನೇ ಮುಂದುವರಿಸಿದರೆ, ಮುಂಬರಲಿರುವ ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹೊಸ ಮುಖಗಳಿಗೆ ಅವಕಾಶ ನೀಡುವ ಕೆಲಸವನ್ನು ಮಾಡಬೇಕಾಗಿದೆ.

ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಬಲಿಷ್ಠ ಕಾರ್ಯಕರ್ತರ ಪಡೆಯನ್ನು ಸಿದ್ಧಪಡಿಸಿಕೊಂಡಿದೆ. ಸಂಘಟನೆಯಲ್ಲಿಯೂ ಉತ್ತಮ ರೀತಿ ಯಲ್ಲಿದೆ. ಅದರಲ್ಲಿಯೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ, ಇಡೀ ರಾಜ್ಯದಲ್ಲಿ ಸಂಘಟನೆಯನ್ನು ಹೆಚ್ಚಿಸುವಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಕೈಗೆತ್ತಿಕೊಂಡಿದ್ದಾರೆ. ಇದೀಗ ಅವರ ವಿರುದ್ಧ ನಿಂತು ಮಾತನಾಡುವಂತ ನಾಯಕತ್ವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಕಿದೆ ಎನ್ನುವುದು ಬಿಜೆಪಿ ಆಂತರಿಕ ಮಾತಾಗಿದೆ.

ಮೊದಲೇ ಹೇಳಿದಂತೆ ಪ್ರತಿಪಕ್ಷವಾಗಿದ್ದಾಗ ‘ಅಗ್ರೆಸಿವ್’ ಆಗಿರುವ ಬಿಜೆಪಿ ಈ ಬಾರಿ ಮಾತ್ರ, ರಾಜ್ಯ ನಾಯಕತ್ವದಲ್ಲಿ
ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಎರಡನೇ ಹಂತದ ನಾಯಕರನ್ನು ತಯಾರಿಸುವತ್ತ ಕೆಲ ವರ್ಷಗಳಿಂದ
ಯೋಚಿಸಿದ್ದರೂ, ಇಂದು ಬಿಜೆಪಿ ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಯಡಿಯೂರಪ್ಪ, ಅನಂತಕುಮಾರ, ಈಶ್ವರಪ್ಪ ಬಳಿಕ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವವರು ಯಾರು ಎನ್ನುವ ಬಗ್ಗೆ ಯೋಚಿಸದೇ ಇರುವುದು, ಇದೀಗ ಪಕ್ಷ ಈ ಪರಿಸ್ಥಿತಿಗೆ ಕಾರಣವಾಗಿದೆ.

ಬಿಜೆಪಿಯ ಈ ಲೂಪ್‌ಹೋಲ್ ಅನ್ನು ಅರಿತಿರುವ ಕಾಂಗ್ರೆಸ್ ನಾಯಕರು ಈಗಿನಿಂದಲೇ ಬಿಬಿಎಂಪಿ ಮಾತ್ರವಲ್ಲದೇ ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗೂ ತಯಾರಿಯನ್ನು ಬೂತ್‌ಮಟ್ಟದಲ್ಲಿ ಆರಂಭಿಸಿದ್ದಾರೆ. ಆದರೆ ವಿಧಾನಸಭೆಯಲ್ಲಿ ‘ಮೋದಿ ಹವಾ’ ಎನ್ನುವ ಮಂತ್ರವನ್ನು ಜಪಿಸಿಕೊಂಡಿದ್ದ ಬಿಜೆಪಿ ಲೋಕಸಭೆಯಲ್ಲಿಯೂ ಕೇಂದ್ರ ನಾಯಕರ ಮೇಲೆ ಹೊರೆ ಹಾಕುವ ಲೆಕ್ಕಾಚಾರದಲ್ಲಿರುವುದರಿಂದ ‘ಕಾದು ನೋಡುವ’ ತಂತ್ರಕ್ಕೆ ಮೊರೆಹೋಗಿದ್ದಾರೆ. ಆದರೆ ಪ್ರತಿಪಕ್ಷ ಎನ್ನುವುದು ‘ಶ್ಯಾಡೋ ಗೌರ್ವನ್‌ಮೆಂಟ್’ ಎಂದು ಬಿಜೆಪಿ ನಾಯಕರು ಎಂದಿಗೂ ಮರೆಯಬಾರದು.

ಬಿಜೆಪಿಯವರು ಆಡಳಿತ ನಡೆಸುವುದಕ್ಕಿಂತ ಪ್ರತಿಪಕ್ಷದಲ್ಲಿದ್ದರೇ ಚಾಲ್ತಿಯಲ್ಲಿರುತ್ತಾರೆ ಎನ್ನುವ ಮಾತನ್ನು ಈಗಿರುವ ಬಿಜೆಪಿ ತಂಡ ಸುಳ್ಳಾಗಿಸುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಬಿಟ್ಟು, ಆಡಳಿತ ಪಕ್ಷ ವನ್ನು ಎಚ್ಚರಿಸುವ ಕೆಲಸವನ್ನು ರಾಜ್ಯದ ಹಿತದೃಷ್ಟಿಯಿಂದಾ ದರೂ ನಿರಂತರವಾಗಿ ಮಾಡುವ ಕೆಲಸ ಮಾಡಬೇಕಿದೆ.