Friday, 22nd November 2024

ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಆಗಸ್ಟ್ 08 ಕ್ಕೆ ವಿಮಾನ ಹಾರಾಟ ಆರಂಭ

ಶಿವಮೊಗ್ಗ: ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಆಗಸ್ಟ್ 08 ಕ್ಕೆ ವಿಮಾನ ಹಾರಾಟವಾಗಬಹುದು ಎನ್ನಲಾಗುತ್ತಿದೆ.

ಶಿವಮೊಗ್ಗದ ಕುವೆಂಪು ವಿಮಾನ‌ ನಿಲ್ದಾಣವು ರಾಜ್ಯ ಸರ್ಕಾರದ ಸುರ್ಪದಿಯಲ್ಲಿ ಇರುವ ಏಕೈಕ‌ ವಿಮಾನ‌ ನಿಲ್ದಾಣ ವಾಗಿದೆ.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, “ಶಿವಮೊಗ್ಗದಿಂದ ಹಾರಾಟ ಮಾಡಲು ಇಂಡಿಗೋ ವಿಮಾನ ಸಂಸ್ಥೆ ಜೊತೆ ಮಾತುಕತೆ ಮಾಡಲಾಗಿದೆ. ಇಂಡಿಗೋ ವಿಮಾನ ಸಂಸ್ಥೆಯು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲು ತೀರ್ಮಾನಿಸಿದೆ. ನಂತರದ ದಿನಗಳಲ್ಲಿ ಬೆಂಗಳೂರಿನಿಂದ ದೆಹಲಿ, ಮುಂಬೈಗೆ ಹಾರಾಟ ನಡೆಸಲಿದೆ” ಎಂದು ತಿಳಿಸಿದ್ದಾರೆ.

ಸೋಗಾನೆ ಬಳಿ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 28 ರಂದು ಲೋಕಾರ್ಪಣೆ ಮಾಡಿದರು. ಬೆಂಗಳೂರು ಹೊರತು ಪಡಿಸಿ ಎರಡನೇ ಅತಿ ದೊಡ್ಡ ರನ್ ವೇ ಇದಾಗಿದೆ. ರಾತ್ರಿ ವೇಳೆ ಕೂಡ ವಿಮಾನ ಲ್ಯಾಂಡ್ ಆಗುವ ಸೌಕರ್ಯವಿದೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕಿಂತ ವಿಭಿನ್ನವಾದ ವಿನ್ಯಾಸವನ್ನು ಇದು ಹೊಂದಿದೆ. ಈ ವಿಮಾನ ನಿಲ್ದಾಣವನ್ನು ಹೈದರಾಬಾದ್ ಮೂಲದ ಕಂಪನಿ ನಿರ್ಮಾಣ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿದೆ. ವಿಮಾನ ಹಾರಾಟದ ಕುರಿತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.