ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕರೆದಿರುವ ವಿರೋಧ ಪಕ್ಷಗಳ ಸಭೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗುಲಾಂ ನಬಿ ಆಜಾದ್, ತಮಗೆ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಎರಡೂ ಪಕ್ಷಗಳಿಗೆ ಏನಾದರೂ ಲಾಭ ಇದ್ದಾಗ ಮಾತ್ರ ವಿರೋಧದ ಒಗ್ಗಟ್ಟಿನಿಂದ ಪ್ರಯೋಜನವಾಗುತ್ತದೆ. ಇಬ್ಬರಿಗೂ ಲಾಭದ ಹಂಚಿಕೆಯಲ್ಲಿ ವ್ಯತ್ಯಾಸವಿರಬಹುದು – ಅದು 50-50 ಅಥವಾ 60-40 ಆಗಿರಬಹುದು. ಆದರೆ ಎರಡೂ ಕಡೆಯವರು ಏನೂ ಲಾಭ ಇಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂಗೆ ಒಬ್ಬನೇ ಒಬ್ಬ ಶಾಸಕ ಇಲ್ಲ.
ಹೀಗಿರುವಾಗ ಸಿಎಂ ಮಮತಾ ಬ್ಯಾನರ್ಜಿ ಅವರ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಎರಡು ಪಕ್ಷಗಳೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳುತ್ತದೆ? ಇದರಿಂದ ಟಿಎಂಸಿಗೆ ಏನು ಸಿಗಲಿದೆ. ಅದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ದಲ್ಲಿ ಟಿಎಂಸಿ ಯಾವುದೇ ಶಾಸಕರನ್ನು ಹೊಂದಿಲ್ಲ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಟಿಎಂಸಿಗೆ ಏನು ನೀಡುತ್ತದೆ? ಆಂಧ್ರಪ್ರದೇಶ ದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕನೂ ಇಲ್ಲ ಎಂದು ಹೇಳಿದರು.
ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿಗೆ ಯಾವ ರಾಜ್ಯದಲ್ಲೂ ಶಾಸಕರಿಲ್ಲ, ಅವರಿಗೆ ಕಾಂಗ್ರೆಸ್ ಏನು ಕೊಡುತ್ತದೆ ಇದನ್ನು ಆಲೋಚಿಸಬೇಕು ಎಂದರು. ವಿಪಕ್ಷಗಳು ಬಿಜೆಪಿಯನ್ನು ಸೋಲಿಸಬೇಕೆಂದು ಬಯಸುತ್ತಿವೆ, ಆದರೆ ಯಾವುದೇ ವಿರೋಧ ಪಕ್ಷಗಳು ತಮ್ಮ ಸ್ವಂತ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.