Sunday, 24th November 2024

ಸ್ಟಾಲಿನ್ ಬುಡಕ್ಕೆ ಬೆಂಕಿ ಇಟ್ಟ ಅಣ್ಣಾಮಲೈ

ವೀಕೆಂಡ್ ವಿತ್ ಮೋಹನ್

camohanbn@gmail.com

ತಮಿಳುನಾಡು ರಾಜಕೀಯವೇ ವಿಚಿತ್ರ. ನೂರಾರು ವರ್ಷ ತಮಿಳುನಾಡನ್ನು ಮತಾಂತರದ ಪ್ರಯೋಗಾಲಯವನ್ನಾಗಿಸಿ ಕೊಂಡಿದ್ದ ಬ್ರಿಟಿಷರು, ಭಾರತೀಯ ಸಂಸ್ಕೃತಿಯ ಮೇಲೆ ತಾವು ನಡೆಸಿದ ದಾಳಿಯನ್ನು ಸಮರ್ಥಿಸಿಕೊಳ್ಳಲು ಬಳಸಿ ಕೊಂಡಂತಹ ಫಲವತ್ತಾದ ಭೂಮಿ ಅದು. ಆರ್ಯ ಮತ್ತು ದ್ರಾವಿಡರೆಂಬ ಸುಳ್ಳು ಸಿದ್ಧಾಂತವನ್ನು ಆಳವಾಗಿ ತಮಿಳರ ತಲೆಯಲ್ಲಿ ತುಂಬಿ ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ಪಸರಿಸಿದರು.

ಹಿಂದೂ ದೇವರುಗಳ ಅಸ್ತಿತ್ವವನ್ನು ಅಲ್ಲಿನ ಹಿಂದುಗಳೇ ಪ್ರಶ್ನೆ ಮಾಡುವ ಪರಿಸ್ಥಿತಿಗೆ ತಮಿಳುನಾಡನ್ನು ಕೊಂಡೊಯ್ಯಲಾಯಿತು. ವಿಪರ್ಯಾಸ ವೆಂದರೆ ದೇಶದಲ್ಲಿ ಅತೀ ಹೆಚ್ಚು ದೇವಸ್ಥಾನಗಳಿರುವ ರಾಜ್ಯ  ತಮಿಳು ನಾಡು, ಇಂತಹ ರಾಜ್ಯದಲ್ಲಿ ಸುಳ್ಳು ಕಥೆಗಳ ಮೂಲಕ ಹಿಂದೂ ಧರ್ಮ ವನ್ನೇ ನಾಶಪಡಿಸ ಹೊರಟಿದ್ದು ದ್ರಾವಿಡ ಚಳುವಳಿ.

ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆಯನ್ನೇ ಗಾಳವನ್ನಾಗಿಸಿಕೊಂಡು ಲಕ್ಷಾಂತರ ಜನರನ್ನು ಮತಾಂತರ ಮಾಡುವಲ್ಲಿ ಬ್ರಿಟಿಷರು ಯಶಸ್ವಿಯಾ ಗಿದ್ದರು. ಪರಿಣಾಮ ೧೯೫೦ರ ದಶಕದಲ್ಲಿ ದ್ರಾವಿಡ ಚಳವಳಿಯ ಮೂಲಕ ರಾಜಕೀಯ ಪಕ್ಷದ ಉದಯವಾಯಿತು. ಇಡೀ ದೇಶವೇ ಒಂದು ದಿಕ್ಕಿನಲ್ಲಿ ಯೋಚಿಸಿದರೆ ತಮಿಳುನಾಡು ಮಾತ್ರ ಮತ್ತೊಂದು ದಿಕ್ಕಿನಲ್ಲಿ ಯೋಚಿಸುತ್ತಿರುತ್ತದೆ. ಕಾಮರಾಜ್ ಬಿಟ್ಟರೆ ಮತ್ಯಾವ ರಾಷ್ಟ್ರೀಯ ಪಕ್ಷದ ನಾಯಕರೂ ತಮಿಳುನಾಡು ರಾಜಕೀಯದಲ್ಲಿ ಸದ್ದು ಮಾಡಲಿಲ್ಲ.

ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮ ಅವಶ್ಯಕತೆಯಿದೆ ಎಂಬ ಭಾವನೆ ತಮಿಳುನಾಡಿನ ದ್ರಾವಿಡ
ರಾಜಕೀಯ ಪಕ್ಷಗಳಿಗಿದೆ. ಯುಪಿಎ ಅವಽಯಲ್ಲಿ ಡಿಎಂಕೆ ಮತ್ತು ಎನ್‌ಡಿಎ ಅವಧಿಯಲ್ಲಿ ಎಐಡಿಎಂಕೆ ಪಕ್ಷಗಳು ತಮ್ಮ
ಬೆಂಬಲ ನೀಡುತ್ತ ಬಂದಿವೆ. ತಮಿಳುನಾಡಿನಲ್ಲಿ ತಾವು ಆಡಿದ್ದೇ ಆಟವೆಂಬಂತೆ ರಾಜಕೀಯ ಮಾಡುವ ದ್ರಾವಿಡ ಚಳವಳಿಯ ಪಕ್ಷಗಳು ಮಾಡಿದ ಅಕ್ರಮಗಳು ಅಷ್ಟಿಷ್ಟಲ್ಲ.

ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ೨೦೦೪ರಿಂದ ೨೦೧೪ರ ನಡುವೆ ಕೇಂದ್ರದಲ್ಲಿದ್ದ ಯುಪಿಎ ಸರಕಾರಕ್ಕೆ ಬೆಂಬಲ ನೀಡಿ
ಮಾಡಬಾರದ ಹಗರಣಗಳನ್ನು ಮಾಡಿತ್ತು. ಸುಮಾರು ೨ಲಕ್ಷ ಕೋಟಿ ರು. ಮೌಲ್ಯದ ೨ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಭಾಗಿ
ಯಾಗಿದ್ದವರು ಕರುಣಾನಿಧಿ ಮಕ್ಕಳಾದ ಸಂಸದೆ ಕನ್ನಿಮೋಳಿ ಮತ್ತು ಎ.ರಾಜ. ತಮಿಳುನಾಡಿನ ಟಿ.ವಿ ಮನೋರಂಜನೆ
ಮತ್ತು ಮಾಧ್ಯಮಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಡಿಎಂಕೆಯ ಮತ್ತೊಬ್ಬ ನಾಯಕ ದಯಾನಿಧಿ ಮಾರನ್. ಇಂದಿಗೂ
ತಮಿಳುನಾಡಿನಲ್ಲಿ ನೂತನ ಟಿ.ವಿ. ಮಾಧ್ಯಮಗಳು ಕಾರ್ಯ ನಿರ್ವಹಿಸುವುದು ಸುಲಭವಿಲ್ಲ.

ರಾಜ್ಯದ ಮೂಲೆ ಮೂಲೆಗಳ ಕೇಬಲ್ ಮಾಲೀಕರನ್ನು ನಿಯಂತ್ರಿಸುವುದು ಮಾರನ್ ಕುಟುಂಬ. ಅತ್ತ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ತಮಿಳುನಾಡು ಸರಕಾರದ ಯುವಜನ ಮಂತ್ರಿಯಾಗಿದ್ದಾರೆ. ಸ್ಟಾಲಿನ್ ತಮಿಳುನಾಡು ಸರಕಾರದಲ್ಲಿ ನಡೆಸುವ ಭ್ರಷ್ಟಾಚಾರದ ಪ್ರಮುಖ ಪಾಲುದಾರ ಈತ. ತಮಿಳು ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರದಲ್ಲಿ ಅಭಿನಯಿಸಿರುವ ಉದಯನಿಧಿ ಅಲ್ಲಿಯೂ ನಿಯಂತ್ರಣ ಸಾಧಿಸಿದ್ದಾರೆ.

ದ್ರಾವಿಡ ಚಳವಳಿಯ ಹೆಸರಿನಲ್ಲಿ ಏಳು ದಶಕಗಳ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದಂತಹ ಡಿಎಂಕೆಯ ಹಗರಣಗಳು ದೇಶದಲ್ಲಿ ಈ ಹಿಂದೆ ಸುದ್ದಿಯಾಗಿದ್ದವು. ‘ಆಂಟೋನಿಯೋ ಮೈನೋ’ ನೇತೃತ್ವದ ಯುಪಿಎ ಸರಕಾರಕ್ಕೆ ಬೆಂಬಲ ಘೋಷಿ ಸುವ ಮುನ್ನವೇ ಈ ಪಕ್ಷಗಳು ತಮ್ಮ ಪಾಲಿನ ಹಗರಣಗಳ ಒಪ್ಪಂದಗಳ ಬಗ್ಗೆ ಮಾತನಾಡಿಕೊಂಡಿರುತ್ತವೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರಾಜ್ಯ ಮಟ್ಟದಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ನಡೆಸಿದ ಭ್ರಷ್ಟಾಚಾರದ ಬಗೆಗಿನ ಚರ್ಚೆಗಳು ದೊಡ್ಡಮಟ್ಟದಲ್ಲಿ ಈ ಹಿಂದೆ ಆದಂತಹ ಉದಾಹರಣೆಗಳಿಲ್ಲ.

ಆದರೆ ಸದ್ಯದ ಮಟ್ಟಿಗೆ ಅಣ್ಣಾಮಲೈ ಅವರು ಸ್ಟಾಲಿನ್ ನೇತೃತ್ವದ ಸರಕಾರದ ಬುಡಕ್ಕೇ ಬೆಂಕಿ ಹಚ್ಚಿದ್ದು ಡಿಎಂಕೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತರಾಗಿದ್ದ ಅಣ್ಣಾಮಲೈ, ತಮ್ಮ ಪೊಲೀಸ್ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯಕ್ಕೆ ಧುಮುಕಿದ್ದರು. ಐಪಿಎಸ್ ಅಧಿಕಾರಿಯಾಗಿ
ಕಾನೂನಿನ ಅರಿವಿರುವ ಅಣ್ಣಾಮಲೈ ಸುಖಾಸುಮ್ಮನೆ ಆರೋಪ ವಹಿಸುವವರಲ್ಲ. ಇತರರಂತೆ ಗಾಳಿಯಲ್ಲಿ ಗುಂಡು
ಹೊಡೆಯುವ ಜಾಯಮಾನ ಅವರದ್ದಲ್ಲ.

ನೇರ ನೇರ ಮಾತುಗಳಿಂದ ಮನೆಮಾತಾಗಿದ್ದ ಅಣ್ಣಾಮಲೈ, ತಮಿಳುನಾಡಿನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ. ಡಿಎಂಕೆ ಫೈಲ್ಸ್ ಎಂಬ ಭ್ರಷ್ಟಾಚಾರದ ಕಡತವನ್ನು ಬಿಡುಗಡೆ ಮಾಡಿರುವ ಅಣ್ಣಾಮಲೈ, ಚೆನ್ನೈ ನಗರದ ಪ್ರತಿಷ್ಠಿತ ಭಾಗ ದಲ್ಲಿರುವ ಸ್ಟಾಲಿನ್ ಪಕ್ಷದ ಮುಖ್ಯ ಕಚೇರಿಯ ಮಾರುಕಟ್ಟೆ ಮೌಲ್ಯ ಸುಮಾರು ೯೬೦ ಕೋಟಿಯಷ್ಟಿದೆಯೆಂದು ಹೇಳಿದ್ಧಾರೆ.

ನರೇಂದ್ರ ಮೋದಿ ಸರಕಾರ ಅಂದಾಜು ೮೬೦ ಕೋಟಿ ರು. ವೆಚ್ಚದಲ್ಲಿ ಕಟ್ಟಿದ್ದ ನೂತನ ಸಂಸತ್ ಭವನದ ಬಗ್ಗೆ ಉದ್ದುದ್ದ
ಮಾತನಾಡಿದ ಸ್ಟಾಲಿನ್, ತನ್ನ ಪಕ್ಷದ ಕಚೇರಿಯ ಮೌಲ್ಯ ಮತ್ತು ವೆಚ್ಚದ ಬಗ್ಗೆ ಮಾತನಾಡುವುದಿಲ್ಲ. ತಮಿಳುನಾಡಿನ
ಹಲವೆಡೆ ಡಿಎಂಕೆ ಪಕ್ಷ ನಡೆಸುತ್ತಿರುವ ಹಲವಾರು ಶಾಲೆಗಳಿವೆ ಯೆಂದು ಅಣ್ಣಾಮಲೈ ತಮ್ಮ ಫೈಲ್ಸ್ ನಲ್ಲಿ ಹೇಳಿದ್ದಾರೆ.

ಡಿಎಂಕೆಯ ಒಡೆತನದ ಶಾಲೆಗಳ ಮೌಲ್ಯ ಸುಮಾರು ೩,೪೧೪ ಕೋಟಿ ರು. ಮತ್ತು ಕಾಲೇಜುಗಳ ಮೌಲ್ಯ ಸುಮಾರು
೩೪,೧೮೪ ಕೋಟಿಯೆಂದು ಅಣ್ಣಾಮಲೈ ಹೇಳಿದ್ದಾರೆ. ಡಿಎಂಕೆ ಯುವಘಟಕದ ಕಚೇರಿಯ ಮೌಲ್ಯ ಅಂದಾಜು ೩೨ ಕೋಟಿ
ಯೆಂದು ಅಂದಾಜಿಸಲಾಗಿದೆ. ತಂಜಾವೂರಿನಲ್ಲಿ ಸುಮಾರು ೮ ಕೋಟಿ ವೆಚ್ಚದ ಭೂಮಿ ಪಕ್ಷದ ಒಡೆತನದಲ್ಲಿದೆ. ಡಿಎಂಕೆ
ನಾಯಕರ ಒಟ್ಟಾರೆ ಆಸ್ತಿ ಮೌಲ್ಯ ಸುಮಾರು ೧,೩೪,೦೦೦ ಕೋಟಿಯಷ್ಟಿದೆಯೆಂದು ಅಣ್ಣಾಮಲೈ ಫೈಲ್ಸ್ ಹೇಳುತ್ತಿದೆ.

ಒಂದು ಪ್ರಾದೇಶಿಕ ಪಕ್ಷದ ನಾಯಕರ ಒಟ್ಟಾರೆ ಆಸ್ತಿ ಮೌಲ್ಯ ಆ ರಾಜ್ಯದ ಒಂದು ವರ್ಷದ ಬಜೆಟ್‌ನ ಅರ್ಧದಷ್ಟಿದೆಯೆಂದರೆ ಕಳೆದ ಏಳು ದಶಕಗಳಿಂದ ಅದೆಷ್ಟು ಲೂಟಿ ಮಾಡಿರಬಹುದೆಂಬುದನ್ನು ಊಹಿಸಿಕೊಳ್ಳಬಹುದು. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಒಡೆತನದ ಕಂಪನಿಯ ಜತೆಗೆ ೧೦೦೦ ಕೋಟಿಯ ಹಣದ ವ್ಯವಹಾರ ನಡೆಸಲು ಸ್ಟಾಲಿನ್ ದುಬೈಗೆ ಹೋಗಿದ್ದಾ ರೆಂಬ ವಿಷಯವನ್ನು ಅಣ್ಣಾ ಮಲೈ ಹೇಳಿದ್ದಾರೆ, ಚುನಾವಣೆಯ ಕೆಲ ದಿನಗಳ ಹಿಂದೆ ಸ್ಟಾಲಿನ್ ಪುತ್ರ ಆ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಅಣ್ಣಾಮಲೈ ಆರೋಪಿಸಿದ್ದಾರೆ.

೨೦೦೬ ರಿಂದ ೨೦೧೧ ರ ನಡುವೆ ಡಿಎಂಕೆ , ಅಲ್ಸ್ಟೋಮ್ ಕಂಪನಿ ಮತ್ತು ಚೆನ್ನೈ ಮೆಟ್ರೋ ರೈಲು ನಿಗಮದೊಂದಿಗಿನ
ವ್ಯವಹಾರ ಒಪ್ಪಂದವನ್ನು ನೀಡಲು ೨೦೦ ಕೋಟಿ ಹಣವನ್ನು ಪಕ್ಷದ ದೇಣಿಗೆಯ ರೂಪದಲ್ಲಿ ಪಡೆದಿದ್ದಾರೆಂದು ಅಣ್ಣಾಮಲೈ ಆರೋಪಿಸಿದ್ದಾರೆ. ಅಣ್ಣಾಮಲೈ ತೆರೆದಿಟ್ಟಿರುವ ಡಿಎಂಕೆಯ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬೆಚ್ಚಿಬಿದ್ದಿರುವ ಸ್ಟಾಲಿನ್ ದಿಕ್ಕು ತೋಚದಂತಾಗಿರುವುದಂತೂ ನಿಜ.

ಡಿಎಂಕೆಯ ಮತ್ತೊಬ್ಬ ಮಂತ್ರಿ ಸೆಂತಿಲ್ ಬಾಲಾಜಿ ಕೆಲಸ ಕೊಡಿಸುವುದಾಗಿ ಹೇಳಿ ಹಣದ ಆಮಿಷವೊಡ್ಡಿರುವ ಪ್ರಕರಣ ದಲ್ಲಿ ಸಿಲುಕಿಕೊಂಡಿzರೆ. ತಾವು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕೆಲಸ ಕೊಡಿಸುವುದಾಗಿ ಲಂಚ ಸ್ವೀಕರಿಸಿರುವ ಪ್ರಕರಣದ ತನಿಖೆಯ ಭಾಗವಾಗಿ ಇಡಿ,ಇತ್ತೀಚೆಗೆ ಅವರನ್ನು ವಿಚಾರಣೆಗೆಂದು ಕರೆತರಲು ಹೋಗಿತ್ತು. ಆ ಸಂದರ್ಭದಲ್ಲಿ ಎದೆನೋವು ಕಾಣಿಸಿದೆಯೆಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸೆಂತಿಲ್ ಬಾಲಾಜಿ ಈ ಹಿಂದೆ ಎಐಎಡಿಎಂಕೆ ಸರಕಾರದಲ್ಲಿ ನಡೆಸಿದ್ದ ಅಕ್ರಮದ ತನಿಖೆ ಎದುರಿಸುತ್ತಿದ್ದಾರೆ.

ಆಗ ಇದೇ ಬಾಲಾಜಿಯ ವಿರುದ್ಧ ಆರೋಪ ಮಾಡಿದ್ದ ಸ್ಟಾಲಿನ್ ಇಂದು ತಮ್ಮ ಪಕ್ಷಕ್ಕೆ ಸೇರಿದ ನಂತರ ತಾವೇ ಮಾಡಿದ ಆರೋಪವನ್ನು ಸುಳ್ಳೆಂದು ಹೇಳುತ್ತಿದ್ದಾರೆ. ತಮಿಳುನಾಡಿನ ಜನ ಡಿಎಂಕೆಯ ಬ್ರಹ್ಮಾಂಡ ಭ್ರಷ್ಟಾಚಾರದ ಫೈಲ್ಸ್ ಗಳನ್ನು ಒಂದೊಂದಾಗಿ ನೋಡುತ್ತಿದ್ದಾರೆ. ಒಂದು ಪ್ರಾದೇಶಿಕ ಪಕ್ಷವಾಗಿ ಎಷ್ಟು ದೋಚಬಹುದೆಂಬುದನ್ನು ಸ್ಟಾಲಿನ್ ತೋರಿಸಿದ್ದಾರೆ.

ತಮಿಳು ನಾಡು ರಾಜಕೀಯದಲ್ಲಿ ಭ್ರಷ್ಟಾಚಾರದ ಸದ್ದು ಹೊಸತೇನಲ್ಲ ಡಿಎಂಕೆಯ ರಾಜ, ಕನಿಮೋಳಿ ಈಗಾಗಲೇ ೨ಜಿ ತರಂ
ಗಾಂತರದ ಹರಾಜಿನ ಹಗರಣದಲ್ಲಿ ಜೈಲಿಗೆ ಹೋಗಿ ಬಂದವರು. ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಕೇಸ್ ಇನ್ನೂ ಬಾಕಿ ಉಳಿದಿದೆ. ಅತ್ತ ಕಾಂಗ್ರೆಸ್ಸಿನ ಚಿದಂಬರಂ ಮತ್ತು ಪುತ್ರ ಕಾರ್ತಿ ಚಿದಂಬರಂ ಅತ್ತೆ ಮನೆಗೆ ಹೋಗಿ ಬಂದಂತೆ ಜೈಲಿಗೆ ಹೋಗಿ ಜಾಮೀನು ಪಡೆದುಕೊಂಡು ತಿರುಗಾಡುತ್ತಿದ್ದಾರೆ.

ಇವರುಗಳ ಸಾಲಿಗೆ ಹೊಸ ಸೇರ್ಪಡೆ ಸೆಂಥಿಲ್ ಬಾಲಾಜಿ. ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅಷ್ಟು ಸುಲಭವಾಗಿ ಬಗ್ಗುವ ಜವಮಾನದವರಲ್ಲ. ಅವರನ್ನು ಹತ್ತಿರದಿಂದ ನೋಡಿರುವವರಿಗೆ ಅವರ ಕೆಲಸದ ವೈಖರಿ ಚೆನ್ನಾಗಿ ಗೊತ್ತು.
ಉಡುಪಿ-ಚಿಕ್ಕಮಗಳೂರು ಭಾಗದಲ್ಲಿನ ಜನರನ್ನು ಕೇಳಿದರೆ ಅಣ್ಣಾಮಲೈ ಕಾರ್ಯವೈಖರಿ ತಿಳಿಯುತ್ತದೆ. ಒಳಗೊಂದು
ಹೊರಗೊಂದೆಂಬ ಗೊಂದಲ ಅಣ್ಣಾಮಲೈಗಿಲ್ಲ. ತಾನು ಮಾಡುವ ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟಾಗಿ ಸಾಕ್ಷಿಗಳ ಸಮೇತ ಮಾಡುವ ಶೈಲಿ ಅವರದ್ದು.

ಹೇಳಬೇಕಾಗಿದ್ದನ್ನು ನೇರವಾಗಿ ಹೇಳುವ ಜಾಯಮಾನ ಅವರದ್ದು. ಸಾಯುವವರೆಗೂ ರಾಜಕಾರಣ ಮಾಡುವ ಇರಾದೆ
ಅಣ್ಣಾಮಲೈಗಿಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನನ್ನೂ ಪ್ರೀತಿಯಿಂದ ಮಾತನಾಡಿಸುವ ಅಣ್ಣಾಮಲೈ ಅಂದು ಕೊಂಡಿ
ದ್ದನ್ನು ಮಾಡಿ ತೀರುವ ನಾಯಕ. ಕೆಲಸ ಮಾಡದೆ ಇಲ್ಲ ಸಲ್ಲದ ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಅಸೆ ಅಣ್ಣಾಮಲೈಗಿಲ್ಲ. ದ್ರಾವಿಡ ಚಳವಳಿಯ ಹೆಸರಿನಲ್ಲಿ ಹುಟ್ಟಿಕೊಂಡ ಪಕ್ಷಗಳು ತಮಿಳುನಾಡಿನ ಜನರ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿರುವ ಇತಿಹಾಸವನ್ನು ಜನರ ಮುಂದಿಡಲು ಪೊಲೀಸ್ ಅಧಿಕಾರಿಯೇ ಬರಬೇಕಾಯಿತು.

ತಮಿಳುನಾಡಿನಲ್ಲಿ ಜನಿಸಿ,ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ವಾಪಾಸ್ ತಮಿಳುನಾಡಿನ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು ಅಣ್ಣಾ ಮಲೈ. ಅಲ್ಲಿನ ಪ್ರಾದೇಶಿಕ ಪಕ್ಷಗಳು ಹಾಳು ಮಾಡಿರುವ ಸಂಸ್ಕೃತಿಯನ್ನು ಪುನಃ ವಾಪಸು ತರುವ ದೊಡ್ಡದೊಂದು
ಜವಾಬ್ದಾರಿಯೂ ಅಣ್ಣಾಮಲೈ ಮೇಲಿದೆ. ಶತಮಾನಗಳ ಕಾಲ ಕ್ರಿಶ್ಚಿಯನ್ ಮಿಷನರಿಗಳು ತಮಿಳುನಾಡನ್ನು ಮತಾಂತರದ ಬಲೆಯಲ್ಲಿ ಸಿಲುಕಿಸಿ, ಹಿಂದೂ ಧರ್ಮದ ಆಚರಣೆ ಗಳನ್ನು ನಾಮಾವಶೇಷ ಮಾಡಿವೆ. ಇವೆಲ್ಲವನ್ನೂ ಪುನರ್ ನಿರ್ಮಾಣ ಮಾಡಬೇಕಿದೆ. ಬಹುತೇಕ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿರುತ್ತವೆ, ರಾಜಕೀಯವನ್ನೇ ಹಣದ ಮೂಲ ಮಾಡಿಕೊಳ್ಳುವ ಈ ಪಕ್ಷಗಳು ತಮ್ಮ ಕುಟುಂಬದ ಏಳಿಗೆಗಾಗಿ ದುಡಿಯುತ್ತವೆಯೇ ಹೊರತು ನಾಡಿನ ಜನರ ಒಳಿತಿಗಾಗಿ ಅಲ್ಲ.

ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷದ ಬೇರುಗಳೇ ಇರಲಿಲ್ಲ. ಅಂತಹ ರಾಜ್ಯದಲ್ಲಿ ಪಕ್ಷ ಸಂಘಟಿಸುವುದು ಸುಲಭದ ಮಾತಲ್ಲ. ತಮಿಳುನಾಡಿನ ಯುವಕರ ನೆಚ್ಚಿನ ನಾಯಕನಾಗಿ ಅಣ್ಣಾಮಲೈ ಹೊರಹೊಮ್ಮಿದ್ದಾರೆ. ಭಾಷೆಯ ವಿಚಾರದಲ್ಲಿ
ತಮಿಳರನ್ನು ಹಿಂದಿಯೆಡೆಗೆ ಕೈ ತೋರಿಸಿ ರಾಜಕೀಯ ಮಾಡಲಾಗುತ್ತಿತ್ತು. ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು
ಡಿಎಂಕೆ ಹಿಂದಿ ಹೇರಿಕೆಯೆಂಬ ಭಾವನಾತ್ಮಕ ವಿಷಯವನ್ನು ಮುನ್ನೆಲೆಗೆ ತಂದು ರಾಜಕೀಯ ಮಾಡುತ್ತಿತ್ತು. ಮೋದಿಯ
ವರು ತಮಿಳುನಾಡಿಗೆ ಬರುವ ಸಂದರ್ಭದಲ್ಲಿ ‘ಗೋ ಬ್ಯಾಕ್ ಮೋದಿ’ಎಂಬ ಟ್ವಿಟ್ಟರ್ ಟ್ರೆಂಡ್ ಮಾಡುತ್ತಿತ್ತು.

ಆದರೀಗ ಕಾಲ ಬದಲಾಗಿದೆ, ಅಣ್ಣಾಮಲೈ ತಮಿಳುನಾಡಿನ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಮೇಲೆ ‘ವನಕ್ಕಮ್ ಮೋದಿ’
ಟ್ರೆಂಡ್ ಶುರುವಾಗಿದೆ, ‘ತಮಿಳುನಾಡು ವೆಲ್ಕಮ್ ಮೋದಿ’ ಟ್ರೆಂಡ್ ಶುರುವಾಗಿದೆ. ನಿಧಾನವಾಗಿ ತಮಿಳುನಾಡಿನ ಜನರು ಪ್ರಾದೇಶಿಕ ಪಕ್ಷದ ಬಲೆಯಿಂದ ಹೊರಬರುತ್ತಿದ್ದಾರೆ,ಅಲ್ಲಿನ ಜನರಿಗೆ ತಮಗಾದಂತಹ ಮೋಸದ ಅರಿವಾಗುತ್ತಿದೆ.

ಅಣ್ಣಾಮಲೈ ತಮ್ಮ ಫೈಲ್ಸ್ ಮೂಲಕ ಡಿಎಂಕೆಯ ಬುಡಕ್ಕೆ ಬೆಂಕಿ ಹಚ್ಚಿದ್ದಾರೆ. ಹನುಮಂತನ ಬಾಲಕ್ಕೆ ಬಿದ್ದ ಬೆಂಕಿ ಇಡೀ ಲಂಕೆಯನ್ನೇ ಸುಟ್ಟಿತ್ತು. ಈಗ ಸ್ಟಾಲಿನ್ ಬುಡಕ್ಕೆ ಬಿದ್ದಿರುವ ಬೆಂಕಿ ಯಾರನ್ನು ಸುಡುತ್ತದೆಯೋ ಕಾದು ನೋಡಬೇಕು.