Saturday, 23rd November 2024

ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತ: 3,500 ಜನರ ರಕ್ಷಣೆ

ಗ್ಯಾಂಗ್‌ಟಾಕ್‌: ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 3,500 ಜನರನ್ನು ರಕ್ಷಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ.

ಉತ್ತರ ಸಿಕ್ಕಿಂನ ಚುಂಗ್‌ಥಾಂಗ್‌ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ ದಿಂದಾಗಿ 3,500 ಜನರು ಪ್ರವಾಸಿ ತಾಣಗಳು, ಗಿರಿ ಪ್ರದೇಶಗಳಲ್ಲಿ ಸಿಲುಕಿದ್ದರು. ಜೂನ್‌ 16ರಿಂದಲೇ ಸಾವಿರಾರು ಜನ ಸಿಲುಕಿದ್ದರು. ಭಾರಿ ಮಳೆಯಿಂದಾಗಿ ಸೇತುವೆ ಕುಸಿದ ಕಾರಣ ಯಾವ ಕಡೆಯೂ ತೆರಳದೆ, ಸಂಪರ್ಕ ಕಡಿದುಕೊಂಡು ಅಪಾಯಕ್ಕೆ ಸಿಲುಕಿದ್ದರು. ಆದರೆ, ದೇಶದ ಯೋಧರು ಇವರೆಲ್ಲರನ್ನೂ ರಕ್ಷಿಸುವ ಮೂಲಕ ಶೌರ್ಯ ಮೆರೆದಿದ್ದಾರೆ.

ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಗೊತ್ತಾಗುತ್ತಲೇ ಭಾರತೀಯ ಸೇನೆ, ತ್ರಿಶಕ್ತಿ ಕಾರ್ಪ್ಸ್‌ ಸಿಬ್ಬಂದಿ, ಗಡಿ ರಸ್ತೆಗಳ ಸಂಘಟನೆಯ ಸಿಬ್ಬಂದಿಯು ರಾತ್ರೋರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜೂನ್‌ 16ರ ರಾತ್ರಿ ಭಾರಿ ಮಳೆಯ ಮಧ್ಯೆಯೂ ಜನ ಇಕ್ಕೆಲಗಳಿಂದ ಹೊರಗೆ ಬರಲಿ ಎಂದು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ, ಗುಂಪು ಗುಂಪಾಗಿ ಜನರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ.

ನೂರಾರು ಸೈನಿಕರು ಗುಂಪು ಗುಂಪಾಗಿ ತೆರಳಿ, ಜನರ ರಕ್ಷಣೆಗಾಗಿ ಸಣ್ಣ ಸಣ್ಣ ಮರಗಳನ್ನು ಕಡಿದು, ಊಟ, ತಿಂಡಿ, ನೀರು ಸರಬರಾಜು ಮಾಡಿ, ಕೊನೆಗೆ ಅವರನ್ನು ರಕ್ಷಿಸಿದ್ದಾರೆ. ಯೋಧರು ಎಡೆಬಿಡದೆ ಕಾರ್ಯಾಚರಣೆ ಕೈಗೊಂಡು ಯೋಧರನ್ನು ರಕ್ಷಿಸಿದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹಾಗೆಯೇ, ಸಾವಿರಾರು ಜನರನ್ನು ರಕ್ಷಿಸಿದ ಯೋಧರ ಶ್ರಮ ಹಾಗೂ ಬದ್ಧತೆ ಕುರಿತು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.