Sunday, 24th November 2024

ಶಕ್ತಿ ಯೋಜನೆಯಡಿ ಪಯಣಿಸಿದವಳೇ ಜಾಣೆ !

ಅಶ್ವತ್ಥಕಟ್ಟೆ

ranjith.hoskere@gmail.com

ಸದ್ಯ ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಚರ್ಚೆಯಲ್ಲಿರುವ ಏಕಮೇವ ವಿಷಯವೆಂದರೆ, ‘ಪಂಚ ಗ್ಯಾರಂಟಿ’ ಯೋಜನೆಗಳದ್ದು. ‘ನಂಗೂ ಫ್ರೀ.. ನಿಂಗೂ ಫ್ರೀ’ ಎಂದು ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ತಿಂಗಳು ಕಳೆಯೋದರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಘೋಷಣೆ ಮಾಡಿದೆ. ಐದು ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಅನುಷ್ಠಾನದ ನಾನಾ ಹಂತದಲ್ಲಿದ್ದರೆ, ಮಹಿಳೆಯರಿಗೆ ಉಚಿತ ಸರಕಾರಿ ಬಸ್ ವ್ಯವಸ್ಥೆ ಈಗಾಗಲೇ ಅನುಷ್ಠಾನಗೊಂಡಿದೆ.

ಉಚಿತ ಬಸ್ ಪ್ರಯಾಣ ಅನುಷ್ಠಾನಗೊಂಡ ವಾರ ಕಳೆಯುವಲ್ಲಿ ೩.೬೩ ಕೋಟಿ ಮಹಿಳೆಯರು ರಾಜ್ಯದ ಒಂದು ಮೂಲೆಯಿಂದ ಇನ್ನೊಂದೆಡೆಗೆ ಓಡಾಡುವ ಅತ್ಯುತ್ಸಾಹದಲ್ಲಿದ್ದಾರೆ. ಉಚಿತ ಬಸ್ ಪ್ರಯಾಣದ ಘೋಷಣೆ ದಿನದಿಂದ ರಾಜ್ಯದ ಮೂಲೆಮೂಲೆಗಳಿಂದ ಮಹಿಳೆಯರು ತೀರ್ಥಯಾತ್ರೆ ಆರಂಭಿಸಿದ್ದಾರೆ. ಯಾರು, ಎಲ್ಲಿಂದ, ಎಲ್ಲಿಗೆ, ಯಾಕಾಗಿ ಹೋಗು ತ್ತಿದ್ದಾರೆ ಎನ್ನುವುದೇ ತಿಳಿಯದ ರೀತಿಯಲ್ಲಿ ಸಂಚಾರ ಆರಂಭವಾಗಿದೆ. ಇದು ಹಿಂದುತ್ವದ ಉಳಿವಿಗೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲ ಎನ್ನುವ ಮಾತನ್ನು ಕಾಂಗ್ರೆಸಿಗರು ಹೇಳುತ್ತಿರಬಹುದು.

ಆದರೆ, ಈ ರೀತಿ ಓಡಾಡುತ್ತಿರುವವರ ಪೈಕಿ ಶೇ.೫೦ರಷ್ಟು ಮಂದಿ ಮೊದಲಿನಿಂದಲೂ ಸರಕಾರಿ ಸಾರಿಗೆ ವ್ಯವಸ್ಥೆಯನ್ನು
ಬಳಸುವವರಿದ್ದರು. ಇನ್ನುಳಿದ ೫೦ಮಂದಿ, ‘ಬಿಟ್ಟಿ ಯೋಜನೆ’ ಬಳಸೋಣ ಅಥವಾ ಹೇಗಿರುತ್ತೆ ಅಂತಾ ನೋಡೋಣ ಎಂಬ ಮನೋಭಾವದಲ್ಲಿ ಓಡಾಡುತ್ತಿದ್ದಾರೆಂಬುದು ಸ್ವತಃ ಸಾರಿಗೆ ಸಿಬ್ಬಂದಿಯ ಅಭಿಪ್ರಾಯವಾಗಿದೆ. ಇದೇ ರೀತಿಯಲ್ಲಿ ಓಡಾಟ ಹೆಚ್ಚಾಗುತ್ತ ಸಾಗಿದರೆ, ಮುಂದೊಂದು ದಿನ ಬಸ್ ಕಂಡಕ್ಟರ್, ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ಕಾದಾಟಗಳು ನಡೆದರೂ ಅಚ್ಚರಿಯಿಲ್ಲ.

ಹಾಗೇ ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಈ ಪಂಚ ಗ್ಯಾರಂಟಿ ಯೋಜನೆ ಗಳಾದ ಉಚಿತ ವಿದ್ಯುತ್, ಉಚಿತ ಸಾರಿಗೆ, ಮಹಿಳೆಯರಿಗೆ ಎರಡು ಸಾವಿರ ಮಾಸಿಕ ಸಹಾಯಧನ, ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ಸಹಾಯಧನ, ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್‌ನ ಪ್ರತಿಯೊಬ್ಬರಿಗೂ ೧೦ ಕೆ.ಜಿ. ಅಕ್ಕಿ ನೀಡುವುದು…ಇವುಗಳನ್ನು ಜಾರಿಗೊಳಿಸುತ್ತಿರುವುದರ ಉದ್ದೇಶ ಬಡವರ ಅಥವಾ ಕೈಲಾಗದವರಿಗೆ ಸಹಾಯ ಮಾಡುವುದು. ಈ ಯೋಜನೆಗಳು ಅದೇ ಮಾದರಿಯಲ್ಲಿ ಇದಿದ್ದರೆ, ಈ ಪ್ರಮಾಣದಲ್ಲಿ ಸಮಸ್ಯೆಯೂ ಆಗುತ್ತಿರಲಿಲ್ಲ.

ಆದರೆ, ಚುನಾವಣೆಯ ಗೆಲುವನ್ನು ನೋಡಿಕೊಂಡು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ಎನ್ನುವ ಘೋಷಣೆ ಮಾಡಿತ್ತು. ಇದೀಗ ಸ್ವತಃ ಸರಕಾರಕ್ಕೂ ಈ ಎಲ್ಲ ಯೋಜನೆಗಳ ಅನುಷ್ಠಾನ ಸವಾಲಿನ ಕೆಲಸವಾಗಿದೆ. ಈ ಎಲ್ಲ ಯೋಜನೆ ಗಳನ್ನು ಅನುಷ್ಠಾನಗೊಳಿಸುವ ಮಾತನ್ನು ಸಿದ್ದರಾಮಯ್ಯ ಆಡುತ್ತಿದ್ದಂತೆ, ಹಲವರು ಸ್ವಯಂ ಪ್ರೇರಿತರಾಗಿ ನಾವು ಉಚಿತ ಯೋಜನೆಗಳನ್ನು ಪಡೆಯುವುದಿಲ್ಲ. ತೆರಿಗೆ ಪಾವತಿಸುವ ನಾವು, ನಮ್ಮ ಹಣದಲ್ಲಿಯೇ ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತೇವೆ ಎನ್ನುವ ಮಾತನ್ನು ಹೇಳಿದ್ದರು.

ಶಕ್ತಿ ಯೋಜನೆ ಜಾರಿಯಾದ ಬಳಿಕವೂ, ಹಲವು ಮಹಿಳೆಯರು ಶಕ್ತಿ ಟಿಕೆಟ್ ಬದಲು, ಸಾಮಾನ್ಯ ಟಿಕೆಟ್ ಪಡೆದು ಹಣಕೊಟ್ಟು ಪ್ರಯಾಣಿಸುತ್ತಿದ್ದಾರೆ. ಅಂಥವರನ್ನು ಅನ್ಯಗ್ರಹ ಜೀವಿಗಳಂತೆ ನೋಡುತ್ತಿದ್ದಾರೆ ಎನ್ನುವುದು ವಿಪರ್ಯಾಸ. ನೈಜವಾಗಿ ಈ ರೀತಿಯ ಮನಃಸ್ಥಿತಿಯಿರುವವರ ಸಂಖ್ಯೆ ಹೆಚ್ಚಾಗಬೇಕಿದೆ. ರಾಜ್ಯ ಸರಕಾರ ಜಾರಿಗೊಳಿಸಿರುವ ಉಚಿತ ಬಸ್ ಪ್ರಯಾಣವನ್ನು ಗಾರ್ಮೆಂಟ್ಸ್‌ನಲ್ಲಿ ಎಂಟು ಸಾವಿರಕ್ಕೆ ಕೆಲಸ ಮಾಡುವ ಮಹಿಳೆಯೋ, ಮನೆಗೆಲಸ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಿರುವ ತಾಯಿಯೋ ಅಥವಾ ಕಡುಬಡತನದಲ್ಲಿ ದಿನಕ್ಕೆ ಮೂರು ಹೊತ್ತು ಊಟ ಹೊಂದಿಸಲು ಕೂಲಿ ಮಾಡುವ ಮಹಿಳೆ ತನ್ನ ಕೆಲಸಕ್ಕಾಗಿ ಈ ಹಿಂದೆ ಬಸ್ ನಲ್ಲಿ ಓಡಾಡಲು ತಗೆದಿಡುತ್ತಿದ್ದ ೨೦೦ ರು. ಅನ್ನು ‘ಶಕ್ತಿ ಯೋಜನೆ’ ಉಳಿಸಿದರೆ ಅದಕ್ಕೊಂದು ಅರ್ಥವಿದೆ.

ಆಗ ಯೋಜನೆಯ ಸಾರ್ಥಕತೆಯೂ ಇರುತ್ತದೆ. ಆದರೆ ಅದನ್ನು ಬಿಟ್ಟು ಐಟಿ ಕಂಪನಿಗಳನ್ನು ಲಕ್ಷಗಟ್ಟಲೆ ಸಂಬಳ ಪಡೆದು,
ವರ್ಷಕ್ಕೆ ಲಕ್ಷಗಟ್ಟಲೆ ತೆರಿಗೆ ಪಾವತಿಸುವ ಅಥವಾ ಸರಕಾರಿ ಇಲಾಖೆಯಲ್ಲಿ ೫೦ರಿಂದ ೬೦ ಸಾವಿರ ಮಾಸಿಕ ವೇತನ
ಪಡೆಯುವ ಮಹಿಳೆಗೆ ಈ ಯೋಜನೆಗಳ ಅಗತ್ಯವಿರಲಿಲ್ಲ. ಭಾರತದಂಥ ದೇಶದಲ್ಲಿ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುವುದು, ಸರಕಾರದ ಎಲ್ಲ ಉಚಿತ ಯೋಜನೆಗಳು ಎಲ್ಲರಿಗೂ ತಲುಪಬೇಕು ಎನ್ನುವುದು ಕೆಲವೊಮ್ಮೆ ಬಹು
ದೊಡ್ಡ ಸಮಸ್ಯೆಗೆ ಆಹ್ವಾನ ನೀಡಿದಂತಾಗುತ್ತದೆ.

ಒಂದು ವೇಳೆ ಆ ರೀತಿ ಉಚಿತವಾಗಿ ನೀಡಲೇಬೇಕು ಎನ್ನುವುದಿದ್ದರೆ ಎಲ್ಲರಿಗೂ ಉಚಿತ ಆರೋಗ್ಯ ಹಾಗೂ ಶಿಕ್ಷಣವನ್ನು ನೀಡಬಹುದಾಗಿತ್ತು. ಇನ್ನು ಒಂದು ವೇಳೆ ಎಲ್ಲರಿಗೂ ಉಚಿತ ಬಸ್ ಪ್ರಯಾಣ ನೀಡಲೇಬೇಕು ಎನ್ನುವ ಗಟ್ಟಿ ನಿರ್ಧಾರವನ್ನು ಸರಕಾರ ಮಾಡಿದ್ದೇ ಆಗಿದ್ದರೆ, ಅದಕ್ಕೆ ಕೆಲ ಮಾರ್ಗಸೂಚಿಗಳನ್ನಾದರೂ ಸಿದ್ಧಪಡಿಸಬೇಕಿತ್ತು. ನಿತ್ಯ ಬೆಳಗಾವಿಯಿಂದ ಬೆಂಗ
ಳೂರಿಗೆ ಅಥವಾ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಅವಶ್ಯಕತೆ ಯಾರಿಗೂ ಇರುವುದಿಲ್ಲ. ಯಾವುದೇ ಮಹಿಳೆ ಈ ಪ್ರಮಾಣದಲ್ಲಿ ಪ್ರಯಾಣವನ್ನು ಮಾಡುವುದಿಲ್ಲ. ಉಚಿತ ಯೋಜನೆ ನೀಡುವುದೇ ಆಗಿದ್ದರೆ, ಮಹಿಳೆಯ ಒಂದು ಸ್ಥಳದಿಂದ ಇನ್ನೊಂದು ಅಥವಾ ಎರಡು ಸ್ಥಳಗಳಿಗೆ ಸಂಚರಿಸುವ ಅವಕಾಶವನ್ನೋ, ನಿಗದಿತ ದೂರದ ಮಿತಿಯನ್ನೋ ನೀಡಬೇಕಿತ್ತು. ಅಥವಾ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಉಚಿತ ಸಂಚಾರಕ್ಕೆ ಅವಕಾಶಕ್ಕೆ ಅವಕಾಶವನ್ನು ಕಲ್ಪಿಸಬಹುದಾಗಿತ್ತು. ಇದ್ಯಾ
ವುದೂ ಮಾಡದೇ ಎಲ್ಲರಿಗೂ, ಎಲ್ಲಿಂದ ಎಲ್ಲಿಗಾದರೂ ಉಚಿತ ಪ್ರಯಾಣ ಎನ್ನುವ ಘೋಷಣೆಯೇ ಈಗಾಗುತ್ತಿರುವ ಗೊಂದಲ, ಗೋಜಲಿಗೆ ಕಾರಣವಾಗಿದೆ.

ಇದೇ ರೀತಿಯ ಉಚಿತ ಪ್ರಯಾಣದ ಅವಕಾಶವನ್ನು ನೀಡಿ, ತಮಿಳುನಾಡಿನಲ್ಲಿ ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸದ ಸ್ಥಿತಿ ಕರ್ನಾಟಕದಲ್ಲಿ ಮುಂದೊಂದು ದಿನ ಬಂದರೂ ಅಚ್ಚರಿಯಿಲ್ಲ. ಉಚಿತ ಪ್ರಯಾಣದ ಅವಕಾಶ ನೀಡಿರುವುದರಿಂದ ಈಗಾಗಲೇ ನಾಲ್ಕು ನಿಗಮಗಳಿಂದ ಸೇರಿ ೮೦ ಕೋಟಿ ರು. ಹೆಚ್ಚು ನಷ್ಟವಾಗಿದೆ. ಇದು ಮಹಿಳೆಯರು ಸಂಚರಿಸಿರುವ ವೆಚ್ಚ. ಇದನ್ನು ಮೀರಿ, ಸಾರಿಗೆ ಇಲಾಖೆಯ ವೋಲ್ವೋ, ಸ್ಲೀಪರ್, ರಾಜಹಂಸಗಳ ಬಸ್‌ಗಳಿಗೆ ಆಗಿರುವ ನಷ್ಟ ಮತ್ತೊಂದು ಲಿಸ್ಟ್ ಸಿಗಲಿದೆ. ಈ ಎರಡನ್ನು ಮೀರಿ, ಬಸ್ ಗಳಿಗೆ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹುದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಸೀಟ್ ಸಿಗುವುದು ಹೋಗಲಿ, ಬಸ್ ಳನ್ನು ನಿಲ್ಲಿಸದೇ ಹೋಗುತ್ತಿರುವ ಘಟನೆಗಳು ವರದಿಯಾ
ಗುತ್ತಿದೆ.

ಸರಕಾರ ಈ ಯೋಜನೆಯನ್ನು ನೀಡಿದ್ದು, ‘ಅಗತ್ಯ ಬಿದ್ದಾಗ ಬಳಸಲಿ’ ಎಂದೇ ಹೊರತು, ಉಚಿತ ಪ್ರಯಾಣ ಮಾಡುವುದೇ ನಿಮ್ಮ ಕೆಲಸವಾಗಿರಲಿ ಎನ್ನುವುದಕ್ಕಾಗಿ ಅಲ್ಲ ಎನ್ನುವುದನ್ನು ಮಹಿಳಾ ಪ್ರಯಾಣಿಕರು ಅರ್ಥೈಸಿಕೊಳ್ಳಬೇಕಿದೆ. ಹಾಗೇ ನೋಡಿದರೆ, ದುಂದು ವೆಚ್ಚವಾಗುವುದನ್ನು ತಡೆಯಲು ಗೃಹಜ್ಯೋತಿ ಯೋಜನೆಯಲ್ಲಿ ಸರಕಾರ ಸರಿಯಾದ ಸಿದ್ಧತೆ ನಡೆಸಿಕೊಂಡಿದೆ. ಸರಾಸರಿ ಬಳಕೆಯನ್ನೇ ಮುಂದಿಟ್ಟು ಕೊಂಡು ಉಚಿತ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಅನ್ನಭಾಗ್ಯದಲ್ಲಿ ಪ್ರತಿಯೊಬ್ಬರಿಗೂ ೧೦ ಕೆ.ಜಿ. ಆಹಾರಧಾನ್ಯ ನೀಡುವುದು ಮುಂದೊಂದು ದಿನ ಕಾಳಸಂತೆಯಲ್ಲಿ ಆಹಾರಧಾನ್ಯಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುವುದಕ್ಕೆ ದಾರಿ ಮಾಡಿಕೊಡುವ ಆತಂಕವಿದೆ.

ಒಂದು ಮನೆಯಲ್ಲಿ ಐದು ಮಂದಿಯಿದ್ದರೆ, ೫೦ ಕೆ.ಜಿ. ಅಕ್ಕಿ ಅಥವಾ ೪೦ ಕೆ.ಜಿ. ಅಕ್ಕಿ, ೧೦ ಕೆ.ಜಿ. ರಾಗಿ ಅಥವಾ ಜೋಳವನ್ನು ಸಿಗುತ್ತದೆ. ಆದರೆ ತಿಂಗಳಲ್ಲಿ ಈ ಪ್ರಮಾಣದಲ್ಲಿ ಈ ಕುಟುಂಬ ಆಹಾರ ಸೇವಿಸುತ್ತದೆಯೇ ಎನ್ನುವುದು ಅನೇಕರಲ್ಲಿರುವ ಪ್ರಶ್ನೆಯಾಗಿದೆ. ಭಾರತದ ಬಹುಪಾಲು ಜನರಲ್ಲಿ ಈ ರೀತಿಯ ಉಚಿತ ಯೋಜನೆಗಳಿಂದ ಆಗಬಹುದಾದ ಭವಿಷ್ಯದ ಸಮಸ್ಯೆಗಳ ಬಗ್ಗೆ ಅರಿವಿನ ಕೊರತೆಯಿದೆ.

ತಮ್ಮ ಮನೆಯ ಆರ್ಥಿಕತೆಯನ್ನು ಉತ್ತಮ ರೀತಿಯಲ್ಲಿ ಲೆಕ್ಕ ಹಾಕುವ ನಮ್ಮವರಿಗೆ, ದೇಶದ, ರಾಜ್ಯದ ಆರ್ಥಿಕತೆಯ ಬಗ್ಗೆ ಆಲೋಚಿಸುವ ಮನಸ್ಥಿತಿಯಿಲ್ಲ. ಆದ್ದರಿಂದಲೇ ಸರಕಾರದಿಂದ ‘ಉಚಿತ’ವೆಂದು ಏನೇ ಘೋಷಣೆಯಾದರೂ, ಮೊದಲು
ನಮ್ಮ ಮನೆಗೆ ಬರಲಿ ಎನ್ನುವ ತರಾತುರಿಯಲ್ಲಿರುತ್ತಾರೆ. ಇದರಿಂದ ಅರ್ಹರಿಗೆ ಸಿಗುವುದಿಲ್ಲವೆಂದೋ ಅಥವಾ
ಮುಂದೊಂದು ದಿನ ಯಾವುದಾದರೂ ಒಂದು ರೂಪದಲ್ಲಿ ಪುನಃ ನಾವೇ ಈ ಹಣವನ್ನು ಚುಕ್ತ ಮಾಡಬೇಕು ಎನ್ನುವ
ಯೋಚನೆಯನ್ನು ಮಾಡುವುದಿಲ್ಲ.

ಬಡವರ, ನಿರ್ಗತಿಕರ ಪರವಾಗಿ ನಿಲ್ಲಲೇಬೇಕು ಎನ್ನುವುದಿದ್ದರೆ ರಾಜ್ಯ ಸರಕಾರ ಮೊದಲಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯದ ವ್ಯವಸ್ಥೆಯನ್ನು ಮಾಡಬಹುದಾಗಿತ್ತು. ಈ ಕ್ಷೇತ್ರಗಳ ಉಚಿತ ಯೋಜನೆಗಳನ್ನು ಬೇಕಿದ್ದರೆ, ಯಾವುದೇ
ಸಮುದಾಯದ ಭೇದ-ಭಾವವಿಲ್ಲದೇ ಎಲ್ಲರಿಗೂ ಸಿಗುವಂತೆ ಮಾಡಲಿ. ಶಿಕ್ಷಣ ಸಿಕ್ಕರೆ ಭವಿಷ್ಯದಲ್ಲಿ ರಾಜ್ಯ ಆರೋಗ್ಯ ಸುಭಿಕ್ಷ ವಾಗಿರುತ್ತದೆ. ಉಚಿತ ಆರೋಗ್ಯ ಸಿಕ್ಕರೆ ಈಗಿನ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದು ಸತ್ಯ.

ಇದೇ ರೀತಿ ನಿಜಕ್ಕೂ ಅಗತ್ಯವಿರುವ ಮಂದಿಗೆ ಉಚಿತ ಸಾರಿಗೆ, ವಿದ್ಯುತ್, ಮಾಸಿಕ ಸಹಾಯಧನ ನೀಡುವುದರಲ್ಲಿ
ತಪ್ಪಿಲ್ಲ. ಇನ್ನು ಜನರೂ ಸರಕಾರ ಕೊಡುತ್ತಿದೆ ಎನ್ನುವ ಮಾತ್ರಕ್ಕೆ, ಎಲ್ಲ ಉಚಿತಗಳು ಅಗತ್ಯವಿರದಿದ್ದರೂ ಬಳಸಿಕೊ
ಳ್ಳಬೇಕು ಎನ್ನುವ ನಿಯಮವೇನು ಇಲ್ಲ. ಈ ಉಚಿತ ಯೋಜನೆಗಳನ್ನು ಪಡೆಯದೇ ಉತ್ತಮ ಜೀವನ ಸಾಗಿಸಬಹುದಾದ ‘ಸ್ಥಿತಿ’ ವಂತರು ಸ್ವಯಂ ಪ್ರೇರಿತವಾಗಿ ಯೋಜನೆಯ ಸೌಲಭ್ಯ ಪಡೆಯದೇ ಇರಬಹುದು.

ರಾಜ್ಯ ಸರಕಾರದ ಪಂಚ ಯೋಜನೆಯಲ್ಲಿ ಶಕ್ತಿ ಹೊರತು ಇನ್ಯಾವ ಯೋಜನೆಗಳು ಆರಂಭವಾಗಿಲ್ಲ. ಶಕ್ತಿ ಯೋಜ
ನೆಯೂ ಸೇರಿದಂತೆ ಎಲ್ಲ ಯೋಜನೆಗಳಿಗೆ ಅರ್ಜಿ ಸ್ವೀಕರಿಸುವ ಕಾರ್ಯ ಸಾಗಿದೆ. ಈ ಯೋಜನೆಯಿಂದ ಆಗಬಹುದಾದ ಹೊರೆಯನ್ನು ಆಲೋಚಿಸಿ, ಜನರೇ ಅರ್ಜಿ ಸಲ್ಲಿಸದೇ ಇದ್ದರೆ ನೈಜ ಅರ್ಹರಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರ ಕೊಡುತ್ತಿದೆ ಎನ್ನುವ ಮಾತ್ರಕ್ಕೆ, ಪಡೆಯೋಣ ಎನ್ನುವ ಬದಲು ನಿಜಕ್ಕೂ ಈ ಯೋಜನೆ ಪಡೆಯಲು ಅರ್ಹರೇ ಎನ್ನುವುದನ್ನು ಯೋಚಿಸಿ ತೀರ್ಮಾನಿಸಿದರೆ ಪಂಚ ಯೋಜನೆಗಳಿಗೆ ಖರ್ಚಾಗುವ ಶೇ.೪೦ರಷ್ಟು ಅನುದಾನದ
ಹೊರೆತಗ್ಗುವುದರಲ್ಲಿ ಅನುಮಾನವಿಲ್ಲ. ಆದರೆ ನಮ್ಮವರು ಈ ರೀತಿ ಯೋಚಿಸುವರೇ? ಕಾದು ನೋಡಬೇಕಿದೆ.